೧೯೬೬ರ ಫೆಬ್ರವರಿ ೨೫ ರಂದು ಕೇರಳದ ಮಲಪ್ಪುರಂನ ವೆಲ್ಲಾಲಿಕ್ಕಾಡ್ ಎಂಬಲ್ಲಿ ಹುಟ್ಟಿದ ಕೆ. ವಿ. ರಬಿಯಾ ೧೪ ವರ್ಷದವರಿದ್ದಾಗ ಅವರಿಗೆ ಪೋಲಿಯೋ ತಗುಲಿತು. ಅವರದ್ದು ಮಾಪಿಳ್ಳೆ ಸಮುದಾಯದ ಒಂದು ಬಡ ಕುಟುಂಬ. ತಂದೆ ಒಂದು ಚಿಕ್ಕ ರೇಶನ್ ಅಂಗಡಿ ನಡೆಸಿ ಕುಟುಂಬ ನಡೆಸುತ್ತಿದ್ದರು. ರಬಿಯಾರಿಗೆ ತುಂಬಾ ಓದಬೇಕೆಂಬ ಆಸೆ ಇತ್ತಾದರೂ ಪೋಲಿಯೋದಿಂದಾಗಿ ೧೦ನೇ ತರಗತಿ ಮುಂದೆ ಓದಲಾಗಲಿಲ್ಲ. ಶಾಲೆ ನಿಲ್ಲಿಸಿದರೂ ಮನೆಯಲ್ಲಿಯೇ ನಿರಂತರವಾಗಿ ಪುಸ್ತಕಗಳನ್ನು ಓದಿದರು. ನಂತರ, ಮನೆಯಲ್ಲೇ ಮಕ್ಕಳಿಗೆ ಟ್ಯೂಷನ್ ಪ್ರಾರಂಭಿಸಿದರು. ಅನುಕೂಲಸ್ಥ ಮಕ್ಕಳಿಂದ ಸಣ್ಣ ಫೀಸು ತೆಗೆದುಕೊಂಡು ಬಡ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಟ್ಯೂಷನ್ ಕೊಡುತ್ತಿದ್ದರು. ಆ ಕಾರಣಕ್ಕಾಗಿ ಬಹಳ ದೂರದೂರುಗಳಿಂದಲೂ ಮಕ್ಕಳು ಅವರ ಟ್ಯೂಷನ್ ತರಗತಿಗಳಿಗೆ ಬರುತ್ತಿದ್ದರು.
೧೯೮೦ರಲ್ಲಿ ಆಗಿನ ಕೇರಳ ಸರ್ಕಾರ ಶಿಕ್ಷಣ ಆಂದೋಲನವನ್ನು ಪ್ರಾರಂಭಿಸಿದಾಗ ರಬಿಯಾ ತನ್ನ ನೆರೆಹೊರೆಯ ವಯಸ್ಕರಿಗೆ ಕಲಿಸಲು ಮುಂದಾದರು. ಆದರೆ, ಕಾಲೇಜು ಶಿಕ್ಷಣ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆ ಇರುವವರು ಮಾತ್ರ ಕಲಿಸಬಹುದು ಎಂಬ ಸರ್ಕಾರಿ ನಿಯಮದ ಕಾರಣ ಅದು ಸಾಧ್ಯವಾಗಲಿಲ್ಲ. ಒಂದು ದಿನ, ವಯಸ್ಕರಿಗೆ ಕಲಿಸುತ್ತಿದ್ದ ಸುಬೇರ್ ಎಂಬ ಕಾಲೇಜು ವಿದ್ಯಾರ್ಥಿಗೆ ಪರೀಕ್ಷೆ ಶುರುವಾದುದರಿಂದ ಅವನು ತನ್ನ ಸ್ಥಾನದಲ್ಲಿ ಕಲಿಸಲು ರಬಿಯಾರನ್ನು ಕೇಳಿಕೊಂಡನು. ಹೀಗೆ ರಬಿಯಾ ವಯಸ್ಕರ ಶಿಕ್ಷಣ ಆಂದೋಲನದಲ್ಲಿ ಭಾಗಿಯಾದರು.
೧೯೯೦ರ ಜೂನ್ ೧೭ರಂದು ರಬಿಯಾ ತಮ್ಮ ತರಗತಿಯನ್ನು ಶುರು ಮಾಡಿದಾಗ ಕೇವಲ ಏಳು ವಿದ್ಯಾರ್ಥಿಗಳಿದ್ದರು. ಆದರೆ, ರಬಿಯಾ ಕಲಿಸುವಿಕೆಗೆ ತಮ್ಮನ್ನು ಎಷ್ಟು ತೀವ್ರವಾಗಿ ಅರ್ಪಿಸಿಕೊಂಡರೆಂದರೆ, ಆರು ತಿಂಗಳಲ್ಲಿ ತಿರುರಂಗಡಿಯ ಎಲ್ಲಾ ಅನಕ್ಷರಸ್ಥರು ಅವರ ತರಗತಿಗೆ ಬಂದು ಕಲಿಯತೊಡಗಿದರು. ಅವರ ತರಗತಿಯಲ್ಲಿ ಎಂಟು ವರ್ಷ ಪ್ರಾಯದ ಮಗುವಿನಿಂದ ಹಿಡಿದು ೮೦ ವರ್ಷ ಪ್ರಾಯದ ಅಜ್ಜಿಯಂದಿರವರೆಗೆ ಒಟ್ಟಿಗೆ ಕಲಿಯುತ್ತಿದ್ದರು. ೬೦-೮೦ ವರ್ಷ ಪ್ರಾಯದ ಅಜ್ಜಿಯಂದಿರು ಸ್ಲೇಟು, ಪುಸ್ತಕ ಹಿಡಿದುಕೊಂಡು ತರಗತಿಗೆ ಬರುವಾಗ ರಬಿಯಾ ಏನೋ ಒಂದು ಬಗೆಯ ಸಾರ್ಥಕತೆಯನ್ನು ಅನುಭವಿಸುತ್ತಿದ್ದರು. ತರಗತಿಯಲ್ಲಿ ಅವರ ಖಾಸಾ ಅಜ್ಜಿ ಅವರನ್ನು ಟೀಚರ್ ಎಂದು ಕರೆಯುವಾಗಲಂತೂ ರಬಿಯಾರ ಸಂತೋಷ ಹೇಳತೀರದು.
ರಬಿಯಾ ತಮ್ಮ ವಿದ್ಯಾರ್ಥಿಗಳನ್ನು ಹೇಗೆ ತಯಾರು ಮಾಡಿದರೆಂದರೆ, ಅವರೆಲ್ಲರ ಕೈ ಬರಹಗಳು ಸುಂದರವಾಗಿ, ಚೊಕ್ಕವಾಗಿ ಹಾಗೂ ಹೆಚ್ಚೂ ಕಡಿಮೆ ಒಂದೇ ರೀತಿ ಇರುತ್ತಿದ್ದವು. ಅದನ್ನು ನೋಡಿ ಪರೀಕ್ಷಕರು ಆಶ್ಚರ್ಯ ಪಡುತ್ತಿದ್ದರು. ೧೯೯೨ರ ಜೂನ್ ತಿಂಗಳಲ್ಲಿ ಕುರುವಿಲ್ಲಾ ಜಾನ್ ಎಂಬ ಒಬ್ಬ ಐಎಎಸ್ ಅಧಿಕಾರಿ ಅವರ ತರಗತಿಗೆ ಬಂದಾಗ ರಬಿಯಾ ಅವರಿಗೆ ಸುಮಾರು ಇನ್ನೂರು ಮನೆಗಳಿರುವ ತಮ್ಮ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಜನ ಪ್ರತಿದಿನ ಪಡುವ ಕಷ್ಟದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ರಬಿಯಾರ ಮನವಿಗೆ ಸ್ಪಂದಿಸಿದ ಕುರುವಿಲ್ಲಾ ಜಾನ್ ಅವರ ಗ್ರಾಮಕ್ಕೆ ಒಂದು ರಸ್ತೆ, ನೀರು, ವಿದ್ಯುತ್ ದೀಪ ಮತ್ತು ಟೆಲಿಫೋನ್ ಸಂಪರ್ಕವನ್ನು ಮಾಡಿಸಿಕೊಟ್ಟರು. ಒಂದೂವರೆ ಕಿ. ಮೀ. ಉದ್ದದ ಆ ರಸ್ತೆಗೆ ‘ಅಕ್ಷರ ರಸ್ತೆ’ ಎಂದು ನಾಮಕರಣ ಮಾಡಲಾಯಿತು.
ರಬಿಯಾ ಮುಂದೆ ವೆಲ್ಲಾಲಿಕ್ಕಾಡ್‌ನಲ್ಲಿ ಒಂದು ಗ್ರಂಥಾಲಯವನ್ನು ಕಟ್ಟಿಸಿದರು. ಅದರಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಒಂದು ಓದುವ ಕೋಣೆಯನ್ನು ಕಟ್ಟಿಸಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಓದುವುದರಲ್ಲಿ ಆಸಕ್ತಿ ತಳೆಯುವಂತೆ ಮಾಡಿದರು. ಶಿಶುಗಳ ಅಕಾಲಿಕ ಮರಣ, ಗ್ರಾಹಕ ಹಕ್ಕು ಮೊದಲಾದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಹುಟ್ಟಿಸಲು ‘ಮಹಿಳಾ ಸಂಘಂ’ ಎಂಬ ಒಂದು ಸಂಘಟನೆಯನ್ನು ಕಟ್ಟಿದರು. ಅದರೊಂದಿಗೆ, ಅವರು ಸರ್ಕಾರದ ಯೋಜನೆಯಾದ ‘ಅಕ್ಷರ ಸಂಘಂ’ ಎಂಬ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸಿದರು. ‘ಚಲನಂ’ ಎಂಬ ತಮ್ಮದೇ ಆದ ಒಂದು ಸಾಮಾಜಿಕ ಸಂಘಟನೆಯನ್ನು ಹುಟ್ಟು ಹಾಕಿ, ಅದರ ಮೂಲಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುವ ವಿಶೇಷಚೇತನ ವ್ಯಕ್ತಿಗಳ ಏಳಿಗೆಗಾಗಿ ದುಡಿದರು. ವಿಶೇಷ ಚೇತನ ಮಕ್ಕಳಿಗಾಗಿ ಆರು ಶಾಲೆಗಳನ್ನು ತೆರೆದರು. ಚಲನಂ ಮೂಲಕ ಅವರು ಜನರಲ್ಲಿ ಕುಡಿತದ ದುಷ್ಪರಿಣಾಮ, ವರದಕ್ಷಿಣೆಯ ಪಿಡುಗು, ಅಂಧಶ್ರದ್ಧೆ ಮತ್ತು ಕೋಮುವಾದ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಜಾಗೃತಿ ಹುಟ್ಟಿಸಿದರು. ‘ಅಕ್ಷಯ: ಬ್ರಿಜ್ಜಿಂಗ್ ದಿ ಡಿಜಿಟಲ್ ಡಿವೈಡ್’ ಎಂಬ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಮಲಪ್ಪುರಂ ಜಿಲ್ಲೆಯನ್ನು ಭಾರತದ ಮೊತ್ತ ಮೊದಲ ‘ಇ-ಲಿಟರೆಟ್’ ಜಿಲ್ಲೆಯನ್ನಾಗಿಸಿದರು.
ರಬಿಯಾ ಗಾಲಿಕುರ್ಚಿಯಲ್ಲಿ ಕುಳಿತೇ ಇದೆಲ್ಲವನ್ನು ಮಾಡುತ್ತಿದ್ದರು. ಆಗ ಇನ್ನೊಂದು ದುರಂತ ಅವರ ಮೇಲೆರುಗಿತು. ೨೦೦೦ ದಲ್ಲಿ ೩೨ ವರ್ಷ ಪ್ರಾಯದವರಾಗಿದ್ದಾಗ ಅವರಿಗೆ ಸ್ತನ ಕ್ಯಾನ್ಸರ್ ತಗಲಿತು. ಆದಕ್ಕಾಗಿ ಅವರು ಸರ್ಜರಿ, ಕೀಮೊಥೆರಪಿ ಹಾಗೂ ರೇಡಿಯೇಷನ್ ಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ಆಸ್ಪತ್ರೆಯಲ್ಲಿದ್ದಾಗಲೂ ಅವರು ತಮ್ಮ ಅಕ್ಕಪಕ್ಕದ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು. ೨೦೦೨ರಲ್ಲಿ ಅವರು ತಾನು ಕನಸು ಕಾಣುತ್ತಿದ್ದ ಹಜ್ ಯಾತ್ರೆ ಮಾಡಿ ಬಂದು, ೨೦೦೪ರಲ್ಲಿ ಅವರು ತಮ್ಮ ಕೆಲಸಕ್ಕೆ ಹಿಂದಿರುಗಿದರು. ಆಗ ಮತ್ತೊಂದು ದುರಂತ ಅವರನ್ನು ಅಪ್ಪಳಿಸಿತು. ಸ್ನಾನದ ಮನೆಯಲ್ಲಿ ಜಾರಿ ಬಿದ್ದು, ಅವರ ಕುತ್ತಿಗೆ ಕೆಳಗಿನ ಶರೀರ ಸಂಪೂರ್ಣವಾಗಿ ನಿಸ್ತೇಜವಾಯಿತು. ಆಗ ಅವರಿಗೆ ೩೮ ವರ್ಷ ಪ್ರಾಯ. ಅಷ್ಟೆಲ್ಲ ದುರಂತಗಳು ಎದುರಾದರೂ ಅವರು ‘ಚಲನಂ’ ಸಂಸ್ಥೆಯ ಮೂಲಕ ತಮ್ಮ ಸಾಮಾಜಿಕ ಕೆಲಸಗಳನ್ನು ಮುಂದುವರಿಸಿ, ನೂರು ಜನ ಸ್ವಯಂ ಸೇವಕರ ಮೂಲಕ, ೨೫೦ಕ್ಕೂ ಹೆಚ್ಚು ಮಹಿಳೆಯರ ಬದುಕಿಗೆ ಖಾಯಂ ಗಳಿಕೆಯ ವ್ಯವಸ್ಥೆ ಮಾಡಿದರು.
‘ಮಲಗಿದ್ದಾಗ ನಾನು ಹಾಸಿಗೆ ಹಿಡಿದ ವ್ಯಕ್ತಿ. ಆದರೆ, ಗಾಲಿಕುರ್ಚಿಯಲ್ಲಿದ್ದಾಗ ನಾನೊಬ್ಬಳು ಸಮಾಜ ಸೇವಕಿ. ನಿಮ್ಮ ಒಂದು ಕಾಲು ಹೋದರೆ ನೀವು ಇನ್ನೊಂದು ಕಾಲಿನ ಮೇಲೆ ನಿಂತುಕೊಳ್ಳಿ. ನಿಮ್ಮ ಎರಡೂ ಕಾಲುಗಳು ಹೋದರೆ ನಿಮ್ಮ ಕೈಗಳ ಮೇಲೆ ನಡೆಯಿರಿ. ನಿಮ್ಮ ಕೈಗಳೂ ಹೋದರೆ ನಿಮ್ಮ ಮಿದುಳಿನ ಶಕ್ತಿಯ ಮೇಲೆ ನಿಲ್ಲಿ‘ ಎಂಬ ಮಾತುಗಳಲ್ಲಿ ರಬಿಯಾರ ಉತ್ಸಾಹ ಎಂತಹದು ಎಂಬುದರ ಪರಿಚಯವಾಗುತ್ತದೆ.
ಆದರೆ, ಆ ದುರಂತಗಳ ಸರಮಾಲೆ ರಬಿಯಾರ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಅಡಿಮೇಲು ಮಾಡಿತು. ತಮ್ಮ ವೈದ್ಯಕೀಯ ಖರ್ಚುಗಳಿಗೆ ಹಣ ಹೊಂದಿಸುವ ಸಲುವಾಗಿ ಅವರು ಹಾಸಿಗೆಯಲ್ಲಿ ಮಲಗಿಕೊಂಡೇ ೨೦೦೬ರಲ್ಲಿ ‘ಮೌನ ನೊಂಬರಂಗಳ್ (ಮೌನ ಕಣ್ಣೀರು)’ ಎಂಬ ಹೆಸರಿನಲ್ಲಿ ತಮ್ಮ ನೆನಪುಗಳ ಒಂದು ಪುಸ್ತಕವನ್ನು ಬರೆದರು. ಅದನ್ನು ಆಗಿನ ಕೇರಳ ಮುಖ್ಯಮಂತ್ರಿ ವಿ. ಎಸ್. ಅಚ್ಚುತಾನಂದನ್ ಬಿಡುಗಡೆ ಮಾಡಿದರು. ಅದರ ನಂತರ ೨೦೦೯ರಲ್ಲಿ ‘ಸ್ವಪ್ನಂಗಳ್ಕು ಚಿರಕುಕಳುಂಡು (ಸ್ವಪ್ನಗಳಿಗೂ ರೆಕ್ಕೆಗಳಿವೆ)’ ಎಂಬ ತಮ್ಮ ಆತ್ಮಚರಿತ್ರೆಯನ್ನು ಬರೆದರು. ನಂತರ, ಇನ್ನೂ ಮೂರು ಪುಸ್ತಕಗಳನ್ನು ಬರೆದರು. ಅವರ ಜೀವನಗಾಥೆ ಕಲ್ಲಿಕೋಟೆ ವಿಶ್ವವಿದ್ಯಾಲಯದ ಎಂಎ ವಿದ್ಯಾರ್ಥಿಗಳಿಗೆ ಪಠ್ಯವಾಯಿತು. ಅಲಿ ಅಕ್ಬರ್ ಎಂಬ ಮಲಯಾಳಂ ನಿರ್ದೇಶಕರು ‘ರಬಿಯಾ ಮೂವ್ಸ್’ ಎಂಬ ಒಂದು ಸಿನಿಮಾ ಮಾಡಿದರು.
೧೯೯೪ರಲ್ಲಿ ಭಾರತ ಸರ್ಕಾರ ‘ನ್ಯಾಷನಲ್ ಯೂತ್ ಅವಾರ್ಡ್’ ನೀಡಿ ಗೌರವಿಸಿದ ನಂತರ ರಬಿಯಾ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟರು. ಅವರು ಮಹಿಳಾ ಸಬಲೀಕರಣಕ್ಕೆ ನೀಡಿದ ಸೇವೆಗಾಗಿ ೨೦೦೦ರಲ್ಲಿ ‘ಕನ್ನಗಿ ಸ್ತ್ರೀ ಶಕ್ತಿ ಪುರಸ್ಕಾರ್’ ಪಡೆದರು. ೨೦೨೨ರಲ್ಲಿ ದೇಶದ ನಾಲ್ಕನೇ ಅತಿ ದೊಡ್ಡ ಪುರಸ್ಕಾರವಾದ ಪದ್ಮಶ್ರೀ ಪಡೆದರು. ಇಷ್ಟೇ ಅಲ್ಲದೆ, ಜಮ್ನಾಲಾಲ್ ಬಜಾಜ್ ಪ್ರಶಸ್ತಿ, ಯುನೆಸ್ಕೋ ಪ್ರಶಸ್ತಿ ಮೊದಲಾದ ಗೌರವಗಳು ಅವರನ್ನು ಹುಡುಕಿಕೊಂಡು ಬಂದವು. ಕೆ. ವಿ. ರಬಿಯಾ ಈಗಿಲ್ಲ. ಅವರು ಮೇ ೪ರಂದು ತಮ್ಮ ೫೯ನೇ ವರ್ಷ ಪ್ರಾಯದಲ್ಲಿ ತೀರಿಕೊಂಡರು.





