Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕನ್ನಡ ಭಾಷೆ : ಇತಿಹಾಸ ಮತ್ತು ಶ್ರೀಮಂತಿಕೆ

the history of kannada

ದ್ರಾವಿಡ ಭಾಷೆಯಿಂದ ಕವಲೊಡೆದು ಸ್ವತಂತ್ರವಾಗಿ ಬೆಳೆದ ಭಾಷೆ

ಪ್ರೊ. ಎನ್. ಎಂ. ತಳವಾರ

ಭಾರತ ಬಹುಭಾಷೆ, ಬಹು ಧರ್ಮ, ಬಹು ಸಮುದಾಯಗಳ ನಾಡು. ಬಹುತ್ವದಲ್ಲಿಯೇ ಅದರ ಸತ್ವ ಸೌಂದರ್ಯಗಳಿವೆ. ಐತಿಹಾಸಿಕವಾಗಿ ನೋಡುವುದಾದರೆ ಕ್ರಿಸ್ತ ಪೂರ್ವದಿಂದಲೂ ಕನ್ನಡ ಭಾಷೆ ಅಸ್ತಿತ್ವದಲ್ಲಿತ್ತು ಎಂದು ಭಾಷಾವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಮಹಾಭಾರತದ ಭೀಷ್ಮ ಪರ್ವ ಮತ್ತು ಸಭಾಪರ್ವಗಳಲ್ಲಿ ಸಂಸ್ಕೃತದ ಮೃಚ್ಛಕಟಿಕ ನಾಟಕ, ಮಾರ್ಕಾಂಡೇಯ ಪುರಾಣ, ಪದ್ಮಪುರಾಣ, ತಮಿಳಿನ ಶಿಲಪ್ಪದಿ ಗಾರಂ ಇತ್ಯಾದಿ ಕಡೆಗಳಲ್ಲಿ ಕನ್ನಡ, ಕರ್ನಾಟಕದ ಉಲ್ಲೇಖಗಳು ದೊರೆಯುತ್ತವೆ.

ಕ್ರಿಸ್ತಶಕ ಮೂರನೆಯ ಶತಮಾನದಲ್ಲಿ ಭಾರತದ ಪ್ರವಾಸ ಕೈಗೊಂಡಿದ್ದ ಚೀನಾದ ಟಾಲೆಮಿ ಎಂಬ ಪ್ರವಾಸಿಯು ಕನ್ನಡ ನಾಡಿನ ಇಂಡಿ, ಹೂವಿನ ಹಿಪ್ಪರಗಿ, ಮುದಗಲ್ಲು, ಸವಡಿ, ಬಾದಾಮಿ, ಬನವಾಸಿ ಮುಂತಾದ ಕನ್ನಡದ ಸ್ಥಳನಾಮಗಳನ್ನು ತನ್ನ ಬರೆಹದಲ್ಲಿ ಉಲ್ಲೇಖಿಸಿದ್ದಾನೆ.

ಕುಂತಲ ನಾಡಿನ ಪರಮೇಶ್ವರನೆಂದೇ ಪ್ರಖ್ಯಾತನಾಗಿದ್ದ ಶಾತವಾಹನ ವಂಶದ ದೊರೆ ಹಾಲರಾಜನು ಸಂಗ್ರಹಿಸಿದ ‘ಗತಾಸಪ್ತಶತಿ’ ಎಂಬ (ಕ್ರಿಸ್ತಶಕ ಒಂದನೇ ಶತಮಾನ) ಕಾವ್ಯ ದಲ್ಲಿ ತುಪ್ಪ, ಪೊಟ್ಟ(ಹೊಟ್ಟೆ), ರೊಟ್ಟಿ, ಊರೋ (ಊರು) ಮುಂತಾದ ಕನ್ನಡ ಪದಗಳನ್ನು ನೋಡ ಬಹುದಾಗಿದೆ.

ಕ್ರಿಸ್ತಶಕ ಒಂದನೆಯ ಶತಮಾನದ ತಮಿಳು ಬ್ರಾಹ್ಮಿ ಲಿಪಿಯಲ್ಲಿರುವ ಏಳಾಪಟ್ಟಂ ಗುಹಾ ಶಾಸನದಲ್ಲಿ ಕುವಡಿ (ಗೌಡಿ), ಪೊಶಿಲ್ (ಹೊಸ್ತಿಲು) ಮುಂತಾದ ಪದಗಳು ದೊರೆತಿವೆ. ತಮಿಳುನಾಡು ಹಾಗೂ ಕರ್ನಾಟಕದಲ್ಲಿ ದೊರೆತ ಪ್ರಾಚೀನ ಶಿಲಾ ಶಾಸನಗಳನ್ನು ಆಧರಿಸಿ ಕನ್ನಡ ನಾಡು ನುಡಿಗಳು ಕಾವೇರಿ ನದಿಯ ಆಚೆಗೂ ಕ್ರಿಸ್ತಶಕ ಒಂದರಿಂದ ನಾಲ್ಕನೆಯ ಶತಮಾನದಷ್ಟು ಹಿಂದೆಯೇ ಇದ್ದವೆಂದು ಐರಾವತಂ ಮಹಾದೇವನ್ ಮತ್ತು ಷ. ಶೆಟ್ಟರ್ ಮುಂತಾದ ವಿದ್ವಾಂಸರು ಆಧಾರ ಸಹಿತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಕ್ರಿಸ್ತಶಕ ಸುಮಾರು ಮೂರನೇ ಶತಮಾನದ ವೇಳೆಗಾಗಲೇ ಕನ್ನಡ ಭಾಷೆ ಸ್ವತಂತ್ರ ಅಸ್ತಿತ್ವ ಹೊಂದಿತ್ತು ಎಂದು ಭಾಷಾವಿಜ್ಞಾನಿಗಳು, ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಕ್ರಿಸ್ತಶಕ ೪೫೦ರ ಕನ್ನಡದ ಪ್ರಪ್ರಥಮ ಹಲ್ಮಿಡಿ ಶಿಲಾ ಶಾಸನವನ್ನು ಗಮನಿಸಿದರೆ ಈ ವೇಳೆಗಾಗಲೇ ಕನ್ನಡ ಲಿಪಿಯು ಕೂಡ ಬರಹ ರೂಪ ತಲುಪಿದ್ದಾಗಿ ತಿಳಿದು ಬರುತ್ತದೆ. ನಂತರ ಅಂದರೆ ಕ್ರಿಸ್ತಶಕ ೮೫೦ರಲ್ಲಿ ಕನ್ನಡದ ಮೊದಲ ಉಪಲಬ್ಧ ಕೃತಿ ಕವಿರಾಜಮಾರ್ಗ ಪ್ರಕಟವಾಯಿತು. ಅಲ್ಲಿಂದ ಆಧುನಿಕ ಕನ್ನಡದವರೆಗೂ ಕನ್ನಡ ಸಾಹಿತ್ಯ ಪರಂಪರೆ ಅವಿಚ್ಛಿನ್ನವಾಗಿ ಮುಂದು ವರಿದುಕೊಂಡು ಬಂದಿದೆ. ಅದರಲ್ಲಿ ರಾಮಾಯಣ, ಮಹಾಭಾರತಗಳಂತಹ ರಾಷ್ಟ್ರೀಯ ಮಹಾಕಾವ್ಯಗಳಿಂದ, ಜೈನ ತೀರ್ಥಂಕರರಿಂದ, ವೀರಶೈವ ಶಿವಶರಣ ಶರಣೆ ಯರ ದೈವೀಜೀವನ ಕಥನಗಳಿಂದ, ಭಾಗವತ ಸಂಪ್ರದಾಯದ ಕಥನಗಳಿಂದ ಕಾವ್ಯ ಪರಂಪರೆ ಸಮೃದ್ಧವಾಗಿ ವರ್ಣರಂಜಿತವಾಗಿ ಬೆಳೆದುಬಂದಿದೆ. ೧೨ನೆಯ ಶತಮಾನದ ವಚನ ಸಾಹಿತ್ಯ ಅತ್ಯಂತ ಅಪರೂಪವಾಗಿದ್ದು ವಿಶ್ವಸಾಹಿತ್ಯದಲ್ಲಿಯೇ ವಿಶಿಷ್ಟವಾದುದಾಗಿದೆ. ಸಂಗೀತ ಸಮಾನ್ವಿತವಾದ ದಾಸರ ಕೀರ್ತನೆಗಳು ಕನ್ನಡದ ಕಣಜ ತುಂಬಿವೆ.

ಅಷ್ಟು ಮತ್ರವಲ್ಲದೇ ಅಲಂಕಾರ, ವ್ಯಾಕರಣ, ಛಂದಸ್ಸು ಮುಂತಾಗಿ ಸಾಹಿತ್ಯ ಸಂಬಂಽ ಶಾಸ್ತ್ರಗ್ರಂಥ ಗಳಲ್ಲದೆ; ಆಯುರ್ವೇದ, ಗಣಿತ, ಜ್ಯೋತಿಷ, ಹಯ-ಗಜ ಶಾಸ್ತ್ರ, ಕಾಮಶಾಸ್ತ್ರ, ಸೂಪಶಾಸ್ತ್ರ ಮುಂತಾದ ಲೋಕೋಪ ಯೋಗಿ ಶಾಸ್ತ್ರಗಳು ಕನ್ನಡದಲ್ಲಿ ಬೆಳೆದುಬಂದಿದ್ದು ಕನ್ನಡ ಸಾಹಿತ್ಯ ಪರಂಪರೆ ಸಮೃದ್ಧವೂ, ಶ್ರೀಮಂತವೂ ಆಗಿ ಬೆಳೆದಿದೆ. ಇದಲ್ಲದೆ ಕನ್ನಡ ಶಾಸನಗಳ ಸಂಪತ್ತು ಅಗಾಧವಾಗಿದೆ. ಲಕ್ಷಾಂತರ ಹಸ್ತಪ್ರತಿಗಳಿವೆ. ಕೇವಲ ಹಳಗನ್ನಡ, ನಡುಗನ್ನಡ ಮಾತ್ರವಲ್ಲ ಆಧುನಿಕ ಕನ್ನಡ ಕೂಡ ಸಮೃದ್ಧವಾಗಿ ಬೆಳೆದಿದ್ದು ವಿಶ್ವಮಟ್ಟದಲ್ಲಿ ಕನ್ನಡ ರಾರಾಜಿಸುವಂತಾಗಿದೆ. ಕ್ರಿಸ್ತಶಕ ೪೫೦ರ ಹಲ್ಮಿಡಿ ಶಾಸನ ಕನ್ನಡದ ಪ್ರಥಮ ಶಿಲಾಶಾಸನ.

ಕ್ರಿಸ್ತಶಕ ೮೫೦ರಲ್ಲಿ ಬರೆಯಲ್ಪಟ್ಟ ಶ್ರೀವಿಜ ಯನ ಕವಿರಾಜಮಾರ್ಗ ಕನ್ನಡದಲ್ಲಿ ಉಪಲಬ್ಧವಾದ ಪ್ರಥಮ ಗ್ರಂಥ. ಇದರಲ್ಲಿಯೇ ಕವಿರಾಜಮಾರ್ಗ ಪೂರ್ವದ ಕನ್ನಡದ ಗದ್ಯ ಹಾಗೂ ಪದ್ಯ ಕವಿಗಳ ಉಲ್ಲೇಖವಿರುವುದನ್ನು ಗಮನಿಸಬೇಕು. ಕನ್ನಡದಲ್ಲಿ ಹೀಗೆ ಕೃತಿ ರಚನೆ ಆರಂಭವಾಗುವ ವೇಳೆಗೆ ಇಂಗ್ಲಿಷನ್ನೂ ಒಳಗೊಂಡು ಪ್ರಪಂಚದ ಇಂದಿನ ಮುಂದುವರಿದ ಬಹುಪಾಲು ಭಾಷೆಗಳು ಅಂಬೆಗಾಲನ್ನೂ ಇಡುತ್ತಿರಲಿಲ್ಲ ಎಂದರೆ ಕನ್ನಡ ಭಾಷೆಯ ಗುಣಾತ್ಮಕತೆ ಮತ್ತು ಪ್ರಾಚೀನತೆ ಸ್ಪಷ್ಟವಾಗುತ್ತದೆ.

ಈ ಎಲ್ಲಾ ಐತಿಹಾಸಿಕ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕನಿಷ್ಠ ಕ್ರಿಸ್ತಶಕ ಪ್ರಾರಂಭದಿಂದಲೂ ಕನ್ನಡ ಭಾಷೆ ಅಸ್ತಿತ್ವದಲ್ಲಿತ್ತು ಎಂಬುದು ವಿಽತವಾಗುತ್ತದೆ. ಮತ್ತು ಈ ವಿವರಗಳು ಕನ್ನಡದ ಪ್ರಾಚೀನತೆಯನ್ನು ಸ್ಪಷ್ಟಪಡಿಸುತ್ತವೆ. ಇಲ್ಲಿ ಕನ್ನಡ ಭಾಷೆಯು ಮಧ್ಯ ದ್ರಾವಿಡ ಭಾಷೆಯಿಂದ ಕವಲೊಡೆದು ಸ್ವತಂತ್ರ ಭಾಷೆಯಾಗಿ ಬೆಳೆಯಿತೆಂದು ಹೇಳಲಾಗಿದೆಯೇ ಹೊರತು; ಕನ್ನಡವು ತಮಿಳು ಮೂಲದಿಂದ ಬಂದ ಭಾಷೆ ಎಂದು ಹೇಳಿಲ್ಲ. ಹೀಗಿರುವಾಗ ನಟ ಕಮಲ್ ಹಾಸನ್ ಅವರ, ಕನ್ನಡ ತಮಿಳು ಮೂಲದಿಂದ ಬಂದಿದೆ ಎಂಬ ಅಭಿಪ್ರಾಯವನ್ನು ಒಪ್ಪಲು ಯಾವ ಆಧಾರಗಳೂ ಇಲ್ಲ.

(ಲೇಖಕರು ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರು)

Tags:
error: Content is protected !!