– ರಹಮತ್ ತರೀಕೆರೆ
ಪುರುಷಾಹಂಕಾರದಿಂದಲೂ ಬಾಲ್ಯದಿಂದ ಜಾಡಿಗೆ ಬಿದ್ದಿರುವ ರೂಢಿಯಿಂದಲೂ, ನನ್ನ ಅಶಿಸ್ತಿಗೆ ತಾತ್ವಿಕ ಚೌಕಟ್ಟು ಕೊಟ್ಟು ಸಮರ್ಥಿಸಿಕೊಳ್ಳಲು ಯತ್ನಿಸುತ್ತೇನೆ.
ಮದುವೆಯಾದ ಬಳಿಕ ನನ್ನ ಮತ್ತು ಬಾನುವಿನ ಹೊಸಬಾಳು ಅಖಂಡ ಸುಖದಿಂದಲೂ ಆಲೋಚನ ಸಂಘರ್ಷಗಳಿಂದಲೂ ಶುರುವಾಯಿತು. ನನ್ನ ಜೀವನ ಸಂಗಾತಿಯಾದವಳು, ಲೇಖಕನೂ ಭಾವಜೀವಿಯೂ ಆದ ನನ್ನ ಭಾವನೆಗಳಿಗೆ ಪೂರಕವಾಗಿ ಸ್ಪಂದಿಸುವವಳಾಗಿರಬೇಕು ಎಂದು ನಿರೀಕ್ಷಿಸಿದ್ದೆ. ಆದರೆ ಬಾನು, ಸಂಪತ್ತಿಗೆ ಸವಾಲ್ ಸಿನಿಮಾದ ಮಂಜುಳೆಯಂತೆ, ಗಂಡ ತನ್ನ ನಿಗರಾಣಿಯಲ್ಲಿ ಇರಬೇಕು, ಹೇಳಿದಂತೆ ಕೇಳಬೇಕೆಂದು ಬಯಸುತ್ತಿದ್ದಳು. ಮೊದಲ ವಾರದಲ್ಲೆ ಭಿನ್ನಮತಗಳು ಆಸ್ಪೋಟಿಸಿದವು. ನಾವು ಮಧುಚಂದ್ರಕ್ಕೆ ಊರಬದಿಗಿರುವ ಬಡವರ ಊಟಿ ಕೆಮ್ಮಣ್ಣುಗುಂಡಿಗೆ ಹೋದೆವು. ಅಲ್ಲೇನು ಸಮಸ್ಯೆಯಾಗಲಿಲ್ಲ. ಬಳಿಕ ಬಂಡೀಪುರಕ್ಕೆ ಹೋದೆವು. ಕಾಡಿನ ಏಕಾಂತದಲ್ಲಿ ಎರಡು ದಿನವಿರಲೆಂದು ಅರಣ್ಯ ಇಲಾಖೆಯಿಂದ ಒಂದು ಸ್ಯೂಟ್ ಬುಕ್ ಮಾಡಿದ್ದೆವು. ಸಿನಿಮಾ ತಾರೆಯರು ಕಾಶ್ಮೀರದಲ್ಲಿ ಹಿಮದೆಸೆದಾಟ ಮಾಡುವ ದೃಶ್ಯಗಳಿಂದ ಸ್ಫೂರ್ತನಾಗಿದ್ದ ನನಗೆ, ಬಂಡಿಪುರದ ದಟ್ಟಾರಣ್ಯದಲ್ಲಿ ಹೆಂಡತಿ ಕೈಹಿಡಿದು ಓಡಾಡುವ ಆಸೆಯಿತ್ತು. ಆದರೆ ಅರಣ್ಯ ಇಲಾಖೆಯವರು ಆನೆಗಳು ಸೀಳುನಾಯಿಗಳು ಇವೆ. ಅತಿಥಿಗೃಹ ಬಿಟ್ಟು ಕಾಡೊಳಗೆ ಹೋಗಬೇಡಿ ಎಂದು ಎಚ್ಚರಿಸಿದರು. ರೂಮಿನಲ್ಲೆ ಬಂಧಿತರಾಗಿದ್ದು ಮುಕ್ತವಾಗಿ ತಿರುಗಾಡುವ ಜಿಂಕೆಗಳನ್ನು ಕಿಟಕಿಯಿಂದ ಅಸೂಯೆಯಿಂದ ನೋಡುತ್ತ, ನಿರ್ಬಂಧಿತ ಏಕಾಂತವನ್ನು ಅನುಭವಿಸುತ್ತ ಇರುವಾಗ, ಮೇಜಿನ ಮೇಲೆ ಮೈಸೂರಿನಿಂದ ಕೊಂಡು ತಂದಿದ್ದ ಮಾವಿನಹಣ್ಣು ಕಂಡವು. ಅವುಗಳನ್ನು ಪರಿಶೀಲಿಸಿ ಇರುವುದರಲ್ಲೇ ಚೆನ್ನಾಗಿ ಮಾಗಿರುವ ದೊಡ್ಡ ಹಣ್ಣನ್ನು ತಿನ್ನಲು ಎತ್ತಿಕೊಂಡೆ. ಕೂಡಲೇ ಬಾನು ಅದನ್ನು ನನ್ನ ಕೈಯಿಂದ ಸರಕ್ಕನೆ ಕಿತ್ತುಕೊಂಡು `ಇದನ್ನು ನಾನು ತಿನ್ನುತ್ತೇನೆ. ನೀನು ಬೇರೆಯದನ್ನು ತಗೊ’ ಎಂದಳು. ಬೇರೆಯವು ಇನ್ನೂ ಮಾಗಿರಲಿಲ್ಲ. ಗಾತ್ರದಲ್ಲಿ ಸಣ್ಣಕ್ಕಿದ್ದವು. ಎಲಾ, ಹೀಗೂ ಉಂಟೇ? ನನ್ನ ಅಕ್ಕಂದಿರು ಮುಂದೆನಿಂತು ಮದುವೆ ಮಾಡಿದ್ದು `ಪ್ರಾಯಕ್ಕೆ ಬಂದ ತಮ್ಮ. ಇಷ್ಟು ಕಾಲ ಒಂಟಿಬಾಳು ಸಾಗಿಸಿದ. ಮುಂದಾದರೂ ಸುಖಜೀವನ ನಡೆಸಲಿ’ ಎಂದೊ, ನವವಧುವಿಗೆ ಒಳ್ಳೊಳ್ಳೆಯ ಹಣ್ಣು ತರಕಾರಿ ಹಾಲು ತುಪ್ಪ ಸರಬರಾಯಿ ಮಾಡಲೆಂದೊ? ಇದೇನು ನಿನ್ನ ವರ್ತನೆ ಎಂದು ಪ್ರಶ್ನಿಸಿದೆ. ಅದಕ್ಕೆ `ನಮ್ಮಣ್ಣ, ಮನೆಗೆ ಹಣ್ಣು ಹೂವು ಸಿಹಿ ಏನೇ ತಂದರೂ ನನ್ನ ಮುಂದಿಟ್ಟು ನಿನಗೆ ಬೇಕಾದಷ್ಟನ್ನು ಆರಿಸಿಕೊ ಎಂದು ಹೇಳಿ, ಬಳಿಕ ಅತ್ತಿಗೆಗೆ ಕೊಡುತ್ತಿದ್ದರು’ ಎಂದು ಜವಾಬು ಸಿಕ್ಕಿತು. ಇದೆಲ್ಲ ತವರುಮನೆಯಲ್ಲಿ ಸರಿಯಿರಬಹುದು. ಆದರೆ ಗಂಡನ ಮನೆಯಲ್ಲಿ? ಅವಳು ಹೇಳಿದಳು: `ಇದು ಗೆಸ್ಟ್‍ಹೌಸು. ಗಂಡನ ಮನೆಯಲ್ಲ’. ನನಗೆ ಇವಳ ಸಮಸ್ಯೆಯ ಮೂಲ ತಿಳಿಯಿತು. ಐದು ಸೋದರರ ಒಬ್ಬಳೇ ತಂಗಿ. ಎಲ್ಲರೂ ಮುದ್ದುಮಾಡಿ ಸುಖದಲ್ಲಿ ಸಾಕಿ ದಡ್ಡಿಯನ್ನಾಗಿ ಮಾತ್ರವಲ್ಲ, ಹಠಮಾರಿಯನ್ನಾಗಿಯೂ ಮಾಡಿದ್ದಾರೆ. ಮಾಡಲಿ. ಆದರೆ ಅವರ ತಪ್ಪಿನ ಫಲ ಅಮಾಯಕನಾದ ನಾನು ಉಣ್ಣಬೇಕೇ? ಬೇಡವೆಂದರೂ ನಾಲ್ಕು ದಿನದ ಟ್ರಿಪ್ಪಿಗೆ ಹನ್ನೆರಡು ಸೀರೆಗಳನ್ನೂ ರಾಶಿಯಷ್ಟು ಶೃಂಗಾರದ ಸಾಧನಗಳನ್ನೂ ತಂದಿದ್ದಳು. ಸೂಟ್‍ಕೇಸು ಕಬ್ಬಿಣದ ಗಟ್ಟಿಯಾಗಿತ್ತು. ಅದನ್ನು ಕೈಯಲ್ಲಿ ಹಿಡಿದು ಸಾಗಿಸಲಾಗದೆ, ಪೀಚಲಾಗಿದ್ದ ನಾನು ಹೆಗಲಮೇಲೆ ಹೊರುತ್ತಿದ್ದೆ. ಪೋರ್ಟರಿನವನಂತೆ ಹಿಂದೆ ಬರುತ್ತಿದ್ದರೆ, ಇವಳು ನನಗಿಂತ ನಾಲ್ಕುಹೆಜ್ಜೆ ಮುಂದೆ ಸೈನಿಕ ಭಂಗಿಯಲ್ಲಿ ನಿಷ್ಕರುಣವಾಗಿ ನಡೆಯುತ್ತಿದ್ದಳು. ನಾನೊ ಸಿಕ್ಕಸಿಕ್ಕ ಹೋಟೆಲುಗಳಲ್ಲಿ ಕಂಡದ್ದನ್ನೆಲ್ಲ ತಿನ್ನುವವನು. ಈಕೆ ಎಲ್ಲೆಲ್ಲೂ ದೋಷ ಕಾಣುವವಳು. ಬಸ್ಸಿನಲ್ಲಿ ಸೀಟಿಲ್ಲದಿದ್ದರೆ ನಿಂತುಹೋಗಲು ನಾನು ಸಿದ್ಧ. ಇವಳಿಗೆ ಹಿಂದಿನ ಸೀಟು ಸಿಕ್ಕರೂ ಸಿಡಿಮಿಡಿ. ಇಬ್ಬರ ಜೀವನದೃಷ್ಟಿಕೋನದಲ್ಲಿ ಬಹಳ ಫರಕಿದೆ, ಜೀವನದ ದೋಣಿ ಸುಗಮವಾಗಿ ಸಾಗುವುದು ಕಷ್ಟವೆಂದು ಬೇಗನೆ ಮನವರಿಕೆಯಾಯಿತು. ಮೊದಲೆರಡು ವರ್ಷಗಳಲ್ಲಿ ನಮ್ಮಿಬ್ಬರ ನಡುವೆ ಎದ್ದ ಕೆಲವು ಗಂಭೀರ ಸೈದ್ಧಾಂತಿಕ ಭಿನ್ನಮತಗಳನ್ನು ಹೀಗೆ ಸಂಗ್ರಹಿಸಬಹುದು:
ಬಾನು ಪ್ರಕಾರ ಅಡುಗೆಯೆಲ್ಲ ಮುಗಿದ ಬಳಿಕ ಒಟ್ಟಿಗೆ ಕೂತು ಊಟಮಾಡಬೇಕು. ನಡುವೆ ಗಂಡ ಅಡುಗೆ ಮನೆಗೆ ಬಂದು ಸಾರಿನ ರುಚಿನೋಡುವುದು, ಅರೆಬೆಂದಿದ್ದನ್ನು ತಿನ್ನುವುದು, ಸಿಕ್ಕತಟ್ಟೆಯಲ್ಲೇ ಹಾಕಿಕೊಂಡು ಎಲ್ಲಿಬೇಕಲ್ಲಿ ಕೂತು ಉಣ್ಣುವುದು ಸಲ್ಲದು. ದಿನವೂ ಸ್ನಾನ ಮಾಡುತ್ತಿರಬೇಕು. ತಲೆಗೂದಲು ಸಣ್ಣಗೆ ಕತ್ತರಿಸಬೇಕು. ದಿನವೂ ಮುಖಕ್ಷೌರ ಮಾಡಬೇಕು. ಯಕ್ಕೂ ತರಹ ಬಿಡದೆ ತಲೆಕೂದಲನ್ನು ಬಾಚಿ ನೀಟಾಗಿ ಕೂರಿಸುತ್ತಿರಬೇಕು. ಶರಟಿನ ಎದೆಗುಂಡಿ ಹಾಕಿರಬೇಕು. ಪಾಂಟು ಇಜಾರ ಲುಂಗಿ ನೆಲ ಗುಡಿಸಬಾರದು. ಮನೆಯಲ್ಲಿ ಅಂಗಿಯಿಲ್ಲದೆ ತಿರುಗಾಡಬಾರದು. ಗಾಜಿನ ಕಿಟಕಿಯಿಂದ ಬೀದಿಯಲ್ಲಿರುವವರಿಗೆ ಕಾಣಬಹುದು. ಚಪ್ಪಲಿ ಶೂ ಒಂದೇದಿಕ್ಕಿನಲ್ಲಿ ಅಕ್ಕಪಕ್ಕದಲ್ಲಿ ಇರುವಂತೆಯೆ ಬಿಡಬೇಕು ಇತ್ಯಾದಿ. `ಹಿತ್ತಲಿಗೆ ಹೋದವನು ಮಣ್ಣಗಾಲಲ್ಲೇ ಒಳಬಂದು ಮಂಚದ ಬೆಡ್‍ಸ್ಪ್ರೆಡನ್ನು ಗಲೀಜುಮಾಡಿದೆ. ಬಾತ್‍ರೂಮಿಗೆ ಹೋದವನು ಕಾಲು ತೊಳೆದೆಯಾ? ರವೆಉಂಡೆಯನ್ನು ಎತ್ತಿಕೊಂಡು ತಿಂದೆಯಲ್ಲಾ, ಕೈತೊಳೆದಿದ್ದೆಯಾ? ವಾರ್ಡ್‍ರೋಬಿನ ಬಾಗಿಲು ತೆಗೆದರೆ ಮತ್ತೆ ಮುಚ್ಚುವುದಿಲ್ಲ. ನೀರುಕುಡಿದ ಲೋಟ ಅಲ್ಲೇ ಇಟ್ಟುಬಿಡ್ತೀಯಾ. ಲೋಟ ಇಟ್ಟುಇಟ್ಟೂ ಕಿಟಕಿ ಕಟ್ಟೆಯ ಮೇಲೆ ಕರೆಕೂತಿದೆ. ಮಂಚ ಟೇಬಲ್ ಮೇಲೆ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಎಷ್ಟೊಂದು ದಿನಗಳಿಂದ ಬಿದ್ದಿವೆ? ಓದಿ ಲೆಕ್ಚರರ್ ಆಗಿದೀಯಾ? ಸಿಟ್ಟಾದಾಗ ಒರಟಾದ ಶಬ್ದ ಬಳಸುವುದಕ್ಕೆ ನಾಚಿಕೆಯಾಗುವುದಿಲ್ಲವೇ? ಮೂಗನ್ನೂ ಲುಂಗಿಯಲ್ಲಿ ಒರೆಸಿಕೊಳ್ಳಬ್ಯಾಡ. ಕೈತೊಳೆದ ಬಳಿಕ ಕೈಯನ್ನು ಪರದೆಗಳಿಗೆ ಒರೆಸುತ್ತೀಯಲ್ಲ, ನ್ಯಾಪಕಿನ್ ಇಟ್ಟಿರುವುದು ಯಾಕೆ? ಇತ್ಯಾದಿ ಪ್ರಶ್ನೆ-ಆಕ್ಷೇಪಗಳ ಪಟ್ಟಿ. ಮೈಲಿಯುದ್ದ.
ನನ್ನ ಪ್ರತಿವಾದವಿದು: `ಇಷ್ಟೊಂದು ಫಾರ್ಮಾಲಿಟಿ ಪಾಲಿಸಲು ಇದೇನೊ ಮನೆಯೊ ಹೋಟೆಲೊ? ನಿಯಮಗಳಿರುವುದು ನಮಗೆ, ನಾವು ಅವಕ್ಕಲ್ಲ. ನಾವು ಯಾರಿಗೊ ಮೆಚ್ಚಿಸಲು ಯಾಕೆ ಬದುಕಬೇಕು? ನಮ್ಮ ಸಂತೋಷ ಮುಖ್ಯ. ನಮಗೆ ಸ್ವಚ್ಛಂದವಾಗಿ ಇರಲಾಗದಿದ್ದರೆ ಅದೆಂತು ನಮ್ಮ ಮನೆ ಆದೀತು? ರೈತಾಪಿ ಕಮ್ಮಾರಿಕೆ ಮನೆತನದಿಂದ ಬಂದವನು ನಾನು. ಈ ಕೆಲಸಗಳಲ್ಲಿ ಕೈಕಾಲು ಮಣ್ಣಾಗುತ್ತೆ. ಮಣ್ಣು ಮಲಿನವಲ್ಲ. ನಮಗೆ ಬೇಕಾದ ಆಹಾರ ಬರುವುದೇ ಮಣ್ಣನಿಂದ. ನೀನೇನು ಹೆಂಡತಿಯೊ ಹೆಲ್ತ್ ಇನ್ಸಪೆಕ್ಟರ್ರೊ? ಇವತ್ತು ಈತ ಏನು ತಪ್ಪು ಮಾಡಬಹುದು ಎಂದು ಕಣ್ಣನ್ನು ಸಿಸಿಟಿವಿ ಕ್ಯಾಮೆರಾ ಮಾಡಿಕೊಂಡು ಪತ್ತೇದಾರಿಕೆ ಮಾಡುವುದನ್ನು ಒಪ್ಪಲಾರೆ. ಅತಿಯಾದ ಶಿಸ್ತಿದ್ದರೆ ಏನನ್ನೂ ಸೃಷ್ಟಿಸುವುದಕ್ಕೆ ಆಗುವುದಿಲ್ಲ. ನೀವೆಲ್ಲ ಇಷ್ಟು ಸ್ವಚ್ಛ ಶಿಸ್ತು ಮಾಡ್ತೀರಲ್ಲ, ಜೀವನದಲ್ಲಿ ಏನು ಸಾಧಿಸಿದಿರಿ? ಲೇಖಕರಿಗೆ ಕೆಲವು ಸೃಜನಶೀಲವಾದ ಚಟ ಅಶಿಸ್ತುಗಳಿರಬೇಕು. ಪೊಲ್ಲಮೆಯೇ ಲೇಸು ನಲ್ಲರ ಮೈಯೊಳ್ ಅಂತ ಜನ್ನ ಹೇಳಿದ್ದಾನೆ. ನಾನು ಸಿಟ್ಟುಬಂದಾಗ ಕೆಟ್ಟಶಬ್ದ ಬಳಸುವುದು ನಿಜ. ಅದು ತಪ್ಪೆಂದೂ ಒಪ್ಪುವೆ. ಆದರೆ ಸಿಟ್ಟಿನಲ್ಲಿ ಅವು ಸಹಜವಾಗಿ ಚಿಮ್ಮಿಬಿಡುತ್ತವೆ. ನಾನು ಬಾಲ್ಯದಲ್ಲಿ ಬೀದಿಯ ಘನಘೋರ ಜಗಳದಲ್ಲಿ ಕಷ್ಟಪಟ್ಟು ಸಂಪಾದಿಸಿ ಪದಕೋಶವದು. ಅದನ್ನು ಬಳಸದಿದ್ದರೆ, ದೊಡ್ಡಮನುಷ್ಯನಾಗಿ ನಮ್ಮನ್ನು ಮರೆತುಬಿಟ್ಟೆಯಾ ಅನಾಥಗೊಳಿಸಿದೆಯಾ ಎನ್ನುತ್ತವೆ’. ಆದರೆ ನನ್ನ ವಗೈರೆ ವಗೈರೆ ಅಡ್ಡಾದಿಡ್ಡಿ ಸಮಜಾಯಿಶಿಯನ್ನು ಅವಳು ಒಪ್ಪುವುದಿಲ್ಲ.
ಒಮ್ಮೆಯಂತೂ ಅವಳು ಮಾಡಿದ ಒಂದು ಹರಕತ್ತಿನಿಂದ ತುಂಬ ಕೋಪ ಬಂದಿತು. ಹಾಲಿನಲ್ಲಿ ಹಿತ್ತಲು ಕಾಣುವ ಹಾಗಿರುವ ಒಂದು ಕಿಟಕಿಯ ಬಳಿ, ಪುಸ್ತಕ ಒಟ್ಟಿಕೊಂಡು ಓದುವುದು ನನ್ನ ಅಭ್ಯಾಸ. ಯಾರೊ ಅತಿಥಿಗಳು ಬರುತ್ತಾರೆಂದು ಪುಸ್ತಕಗಳನ್ನೆಲ್ಲ ಎತ್ತಿ ರ್ಯಾಕಿನಲ್ಲಿ ಖಾಲಿಜಾಗ ಇರುವೆಡೆಯಲ್ಲೆಲ್ಲ ತುರುಕಿಬಿಟ್ಟಳು. ಅವುಗಳಲ್ಲಿ ನಾನು ಲೇಖನ ಬರೆಯಲು ತೆಗೆದ, ಗುರುತು ಮಾಡಿದ, ನೋಟ್ಸ್ ಮಾಡುತ್ತಿದ್ದ ಎಲ್ಲವೂ ಕಲಸಿಹೋದವು. ನಾನು ಕೇಳಿದೆ `ಕಿಚನ್ನಿನಲ್ಲಿ ನೀನು ಜೋಡಿಸಿರುವ ಡಬ್ಬಗಳನ್ನು ಆಚೀಚಿ ಮಾಡಿದರೆ ಸುಮ್ಮನಿರುತ್ತೀಯಾ?’. ಉತ್ತರವಿಲ್ಲ. ಸಮಸ್ಯೆಯೆಂದರೆ, ಅವಳು ನನ್ನ ಓದುಬರೆಹ ಒಂದು ಕೆಲಸವೆಂದೇ ನಂಬಿಲ್ಲ. `ಬೆಳಗಿನಿಂದ ಆರಾಮಾಗಿ ಕೂತಿದ್ದೀಯಾ. ಬಜಾರಿಗೆ ಹೋಗಿ ಮೀನು ತಗೊಂಬಾ’ ಎನ್ನುವಳು. ಮೀನೆಂದರೆ ನನಗಿಷ್ಟ. ಇದಕ್ಕಾಗಿ ಸಮುದ್ರಕ್ಕೆ ಹೋಗೂ ಎಂದರೂ ಹೋದೇನು. ಆದರೆ ಆರಾಮಾಗಿ ಕೂತಿದ್ದೆ ಎಂದರೇನು? ಓದು ಬರೆಹದಿಂದ ತಾನೇ ನಮಗೆ ರೊಟ್ಟಿ ಬಂದಿರುವುದು? ಒಮ್ಮೊಮ್ಮೆ ಅನಿಸುತ್ತಿತ್ತು ಡಾ. ಅನುಪಮಾ ನಿರಂಜನಾ ನವವಿವಾಹಿತರಿಗೆ `ದಾಂಪತ್ಯ ದೀಪಿಕೆ’ ಕೈಪಿಡಿ ಬರೆದಂತೆ, `ದಾಂಪತ್ಯ ಕಿರಿಕಿರಿ’ ಪುಸ್ತಕ ಬರೆಯಲೇ ಎಂದು.
ವಾಸ್ತವವಾಗಿ ಬಾನು ಎತ್ತುವ ಅರ್ಧದಷ್ಟು ಪ್ರಶ್ನೆ ಆಕ್ಷೇಪಗಳಲ್ಲಿ ಸತ್ಯವಿದೆ. ಆದರೆ ಪುರುಷಾಹಂಕಾರದಿಂದಲೂ ಬಾಲ್ಯದಿಂದ ಜಾಡಿಗೆ ಬಿದ್ದಿರುವ ರೂಢಿಯಿಂದಲೂ, ನನ್ನ ಅಶಿಸ್ತಿಗೆ ತಾತ್ವಿಕ ಚೌಕಟ್ಟು ಕೊಟ್ಟು ಸಮರ್ಥಿಸಿಕೊಳ್ಳಲು ಯತ್ನಿಸುತ್ತೇನೆ. `ಮನೆಯನ್ನು ಬಂದವರು ನೋಡಿ ತಲೆದೂಗುವಂತೆ ಚಂದವಾಗಿ ಇಟ್ಟುಕೊಳ್ಳಬೇಕೆಂಬುದು ಒಂದು ವ್ಯಸನ. ಮಧ್ಯಮವರ್ಗದ ಮಹಿಳೆಯರ ಮೇಲೆ ಸಮಾಜ ಹೇರಿರುವ ಒತ್ತಡವಿದು. ಇದವರ ಆಯಸ್ಸನ್ನೆಲ್ಲ ತಿಂದುಹಾಕಿದೆ. ಸಾರ್ವಜನಿಕ ಬದುಕಿನಲ್ಲಿ ತೊಡಗಿಕೊಳ್ಳದಂತೆ ಗಂಡಸರು ಒಡ್ಡಿರುವ ಫಿತೂರಿ. ಸ್ವಚ್ಛತಾ ಅಭಿಯಾನ ಅತಿಯಾದರೆ ಕಾಯಿಲೆ’ ಎಂದೆಲ್ಲ ವಾದಿಸುತ್ತೇನೆ. ನನ್ನ ವಾದಪುಷ್ಟಿಗಾಗಿ ಗೆಳೆಯರೊಬ್ಬರ ಮನೆಯಲ್ಲಿ ಆದ ಅನುಭವ ನೆನಪಿಸುತ್ತೇನೆ. ಅದು ಲಗ್ನವಾದ ಹೊಸತು. ಅತಿಥೇಯರು ಹೋದೊಡನೆ ನಮಗೆ ಚಹ ಕೊಟ್ಟರು. ಕುಡಿದ ಬಳಿಕ ಬಸಿಯನ್ನು ಗಾಜಿನ ಟೀಪಾಯಿಯ ಮೇಲಿಡಲು ಹೋದೆ. ಅವರು ಗಾಬರಿಯಿಂದ `ಗಾಜಿನ ಮೇಲಿಡಬೇಡಿ, ಕರೆಬೀಳುತ್ತದೆ. ಸಾಸರಿನಲ್ಲಿಡಿ’ ಎಂದರು. ಹಿಂದೆ ಯಾರೊ ಚಹದ ಕೆನೆಯನ್ನು ಪಾಲಿಶ್‍ಮಾಡಿದ ತೇಗದ ಕುರ್ಚಿಗೆ ಒರೆಸಿದ ನಿದರ್ಶನವನ್ನೂ ಕೊಟ್ಟರು. ಬಳಿಕ, ಟಿಪಾಯಿಯ ಮೇಲಿನ ಆದಿನದ ಪತ್ರಿಕೆಯ ಮೇಲೆ ಕಣ್ಣಾಡಿಸಿ ಮರಳಿ ಇಟ್ಟೆ. ಇಡುವಾಗ ಕೆಳಗಿದ್ದ ಹಳೆಯ ಪತ್ರಿಕೆಯ ನೇರಕ್ಕಿಡಲಿಲ್ಲ. ಕೊಂಚ ಆಚೀಚೆಯಾಯಿತು. ಅದನ್ನೇ ಗಮನಿಸುತ್ತಿದ್ದ ಅವರ ಸುಪುತ್ರ ತಟ್ಟನೆ ಬಂದು ಪತ್ರಿಕೆಯನ್ನು ಸರಿಮಾಡಿ ಹೋದ- ವಿಂಬಲ್ಡನ್ ಕೋರ್ಟಿನಲ್ಲಿ ಆಚೆಬಿದ್ದ ಬಾಲನ್ನು ಎತ್ತಿಕೊಡುವ ಹುಡುಗರಂತೆ. ಅವರ ಲ್ಯಾಂಡ್‍ಫೋನಿನಿಂದ ನನ್ನ ಕಾಲೇಜಿಗೆ ಕರೆ ಮಾಡಿದೆ. ಹುಡುಗ ಗಾಜು ಒರೆಸುವ ಹಳದಿ ಮೃದುವಸ್ತ್ರ ತಂದು ಫೋನನ್ನು ಇಡಿಯಾಗಿ ಒರೆಸಿದನು. ನನಗನಿಸಿತು ಒಂದೊ ನಾನು ಮಹಾ ಕೊಳಕನಿರಬೇಕು ಇಲ್ಲವೇ ಇವರಿಗೆಲ್ಲ ಸ್ವಚ್ಛತೆಯ ರೋಗ ಅಂಟಿರಬೇಕು.
ಬಾನು ತನ್ನ ಶಿವಪ್ಪನಾಯಕ ಶಿಸ್ತಿಗೆ ನನ್ನನ್ನೂ, ನಾನು ನನ್ನ ಅಷ್ಟಾವಂಕ ಅವ್ಯವಸ್ಥೆಗೆ ಅವಳನ್ನೂ ಹೊಂದಿಸುವುದು ಹೇಗೆ ಎಂದು ಕಸರತ್ತು ಮಾಡುತ್ತಿದ್ದಂತೆ, ಮೂವತ್ತೈದು ವರ್ಷಗಳು ಕಳೆದದ್ದೇ ತಿಳಿಯಲಿಲ್ಲ. ಕ್ರಮೇಣ ಸಂಘರ್ಷ ಭಿನ್ನಮತಗಳು ಕಡಿಮೆಯಾಗುತ್ತ ದಾಂಪತ್ಯ ಮಾವಿನಹಣ್ಣಿನಂತೆ ಮಾಗಿತು. ಒಮ್ಮೆ ನನ್ನನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ, ಆಯೋಜಕರು ನಾವಿಬ್ಬರೂ ಮಾಲೆ ಬದಲಾಯಿಸಿಕೊಳ್ಳುವ ವ್ಯವಸ್ಥೆ ಮಾಡಿದ್ದರು. ಬಾನುವಿಗೆ ನನ್ನ ಬಗ್ಗೆ ಎರಡು ಮಾತಾಡಲು ಹೇಳಿದರು. ಅವರದೇನು ಹಂಚಿಕೆಯಿತ್ತೊ? ಸನ್ಮಾನದಿಂದ ಉಲ್ಲಸಿತನಾಗಿದ್ದ ನನಗೆ ಬೆವರು ಕಿತ್ತುಕೊಂಡಿತು. ಅವಳು ಎರಡಲ್ಲ, ಒಂದು ಮಾತಾಡಿದ್ದರೂ ಬಂಡವಾಳ ಹೊರಬೀಳುತಿತ್ತು. ಮಾತಾಡಲು ಎದ್ದು ನಿಂತಳು. ದೇವರು ದೊಡ್ಡವನು! ಸಭಾಕಂಪನದಿಂದ ಅವಳ ಬಾಯಿ ಒಣಗಿತು. `ನಾವಿಬ್ಬರೂ ಪ್ರೀತಿ ಜಗಳ ಮಾಡತೀವಿ. ಇಷ್ಟೇ ಗೊತ್ತಿರೋದು’ ಎಂದು ಕೂತುಬಿಟ್ಟಳು. ಮರ್ಯಾದೆ ಉಳಿಯಿತು.





