ನಾ ದಿವಾಕರ
ತನ್ನ ೭೫ನೆಯ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿರುವ ನವ ಭಾರತ ತನ್ನ ಭವಿಷ್ಯದ ಹಾದಿಗಳನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ವಿಭಿನ್ನ ಸ್ತರಗಳ ಚಿಂತನ-ಮಂಥನ ನಡೆಸಬೇಕಿತ್ತು. ಚಾರಿತ್ರಿಕವಾಗಿ, ಪಾರಂಪರಿಕವಾಗಿ ಶತಮಾನಗಳಿಂದ ನಡೆದು ಬಂದ ಹಾದಿಯ ಅವಲೋಕನದೊಂದಿಗೇ ಭಾರತದ ಶ್ರೇಣೀಕೃತ ಸಮಾಜ, ಸಾಂಪ್ರದಾಯಿಕ ಸಮಾಜ ಮತ್ತು ಜಾತಿ-ಧರ್ಮಗಳ ವಿಭಿನ್ನ ನೆಲೆಗಳು ಹಾದು ಬಂದಿರುವ ಕಠಿಣ ಮಾರ್ಗಗಳನ್ನು ವಸ್ತುನಿಷ್ಠ ಪರಾಮರ್ಶೆಗೊಳಪಡಿಸುವ ಮೂಲಕ, ೨೧ನೆಯ ಶತಮಾನದ ಆಧುನಿಕ ಭಾರತ ತನ್ನ ಭವಿಷ್ಯದ ಹೆಜ್ಜೆಗಳನ್ನು ನಿರ್ಧರಿಸಬೇಕಿತ್ತು. ಮುನ್ನೋಟದಲ್ಲಿ ಗೋಚರಿಸುವ ಭ್ರಮಾಧೀನ ಜಗತ್ತು ಹಿನ್ನೋಟದಲ್ಲಿ ಕಾಣಬಹುದಾದ ಸುಡು ವಾಸ್ತವಗಳನ್ನು ಮರೆಮಾಚಿದಷ್ಟೂ, ನಮ್ಮ ಭವಿಷ್ಯದ ಹೆಜ್ಜೆಗಳು ಅಸ್ಪಷ್ಟವಾಗುತ್ತಲೇ ಹೋಗುತ್ತವೆ.
ಇಂದು ಭಾರತದಲ್ಲಿ ನಾವು ಕಾಣುತ್ತಿರುವ ರಾಜಕೀಯ ನಿರ್ವಚನೆಗಳು ಮತ್ತು ಚಾರಿತ್ರಿಕ ಸಂಕಥನಗಳು ಸಮಾಜವನ್ನು ಭವಿಷ್ಯದತ್ತ ಯೋಚಿಸುವಂತೆ ಮಾಡುವ ಯಾವುದೇ ಲಕ್ಷಣಗಳನ್ನು ಹೊಂದಿಲ್ಲ. ಆದ್ದರಿಂದಲೇ ನವಉದಾರವಾದದ ಅಭಿವೃದ್ಧಿಯ ವ್ಯಾಖ್ಯಾನಗಳು ಮಾನವ ಕೇಂದ್ರಿತವಾಗಿರುವುದರ ಬದಲು ಬಂಡವಾಳ ಮತ್ತು ಸಂಪತ್ತು ಕೇಂದ್ರಿತವಾಗಿರುತ್ತವೆ. ಹಾಗಾಗಿ ನೈಸರ್ಗಿಕ ಸಂಪನ್ಮೂಲಗಳು ಮಾರುಕಟ್ಟೆಯ ಸರಕುಗಳಂತಾಗಿ, ನಮ್ಮ ಸುತ್ತಲಿನ ಪರಿಸರವೂ ಸಹ ಮಾರುಕಟ್ಟೆಯ ಅನಿವಾರ್ಯತೆಗಳಿಗನುಗುಣವಾಗಿ ಮಾಲಿನ್ಯಕ್ಕೊಳಗಾಗುತ್ತಾ, ನಾಶವಾಗುತ್ತಾ ಹೋಗುತ್ತದೆ. ಬಂಡವಾಳದ ಕ್ರೋಢೀಕರಣ ಮತ್ತು ಮಾರುಕಟ್ಟೆಯ ಬೆಳವಣಿಗೆಯನ್ನೇ ದೇಶ ಮತ್ತು ದೇಶಾಭಿಮಾನದೊಡನೆ ಸಮೀಕರಿಸುವುದರೊಂದಿಗೆ, ಸರ್ಕಾರಗಳು ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳನ್ನು ರಕ್ಷಿಸುವ ಸಾಂಸ್ಥಿಕ ನೆಲೆಗಳಾಗಿ ತಮ್ಮ ಕಾರ್ಯನಿರ್ವಹಿಸುತ್ತವೆ. ಹಾಗಾಗಿಯೇ ಕಾರ್ಪೋರೇಟ್ ಹಿತಾಸಕ್ತಿಗೆ ಧಕ್ಕೆ ಬರುವಂತಹ ಯಾವುದೇ ಜನಾಭಿಪ್ರಾಯಗಳನ್ನು, ಪ್ರಗತಿ ವಿರೋಧಿ ಅಥವಾ ದೇಶದ್ರೋಹಿ ಎಂದೇ ಕಾಣಲಾಗುತ್ತದೆ.
ಈ ಸಂದಿಗ್ಧ ಪರಿಸ್ಥಿತಿಗಳ ನಡುವೆಯೇ ಇಂದು ಭಾರತ ವಿಭಿನ್ನ ಸ್ವರೂಪಗಳ, ವಿಭಿನ್ನ ಆಯಾಮಗಳ ಮತ್ತು ವಿಭಿನ್ನ ಸ್ತರಗಳ ಜನಾಂದೋಲನಗಳಿಗೆ ಸಾಕ್ಷಿಯಾಗಿದೆ. ಸಾಮಾಜಿಕ ಅಸ್ತಿತ್ವಕ್ಕಾಗಿ, ಸಾಂಸ್ಕೃತಿಕ ಅಸ್ಮಿತೆಗಾಗಿ, ಆರ್ಥಿಕ ಸದೃಢತೆಗಾಗಿ, ಸಾಮುದಾಯಿಕ ಯೋಗಕ್ಷೇಮಕ್ಕಾಗಿ ನಡೆಯುತ್ತಿರುವ ನೂರಾರು ಹೋರಾಟಗಳು ಸರ್ಕಾರಗಳಿಂದ ಎಷ್ಟೇ ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದರೂ, ತಳಸ್ತರದಲ್ಲಿ ನೋವು ಮತ್ತು ಅನ್ಯಾಯಗಳ ವಿರುದ್ಧ ಮೂಡುತ್ತಿರುವ ಜನಪರ ಧ್ವನಿ ಗಟ್ಟಿಯಾಗುತ್ತಲೇ ಇದೆ. ಈ ಹೋರಾಟಗಳು ಬಿಂಬಿಸುವ ದುರಂತ ವಾಸ್ತವಗಳನ್ನು ಮರೆಮಾಚಲೆಂದೇ ಆಳುವ ವರ್ಗಗಳು ಇತಿಹಾಸದ ಘಟನೆಗಳನ್ನು, ವ್ಯಕ್ತಿಗಳನ್ನು ಮತ್ತು ಚರಿತ್ರೆಯ ಹೆಜ್ಜೆಗಳನ್ನು ಹೆಕ್ಕಿ ತೆಗೆಯುತ್ತಾ, ಜನಸಮುದಾಯಗಳ ನಡುವೆ ವಿಭಜನೆಯ ಗೋಡೆಗಳನ್ನು ಸೃಷ್ಟಿಸುತ್ತವೆ.
ಚರಿತ್ರೆಯಲ್ಲಿ ಆಗಿ ಹೋದ ವ್ಯಕ್ತಿಗಳನ್ನು ಚಾರಿತ್ರಿಕ ಪ್ರತಿಮೆಗಳನ್ನಾಗಿಸಿ, ಆ ಪ್ರತಿಮೆಗಳ ಸುತ್ತಲೂ ಜಾತಿ-ಧರ್ಮಗಳ ಅಸ್ಮಿತೆಗಳನ್ನು ನಿರ್ಮಿಸಿ, ಜನಸಾಮಾನ್ಯರನ್ನು ಈ ಅಸ್ಮಿತೆಯ ಗೋಡೆಗಳ ನಡುವೆ ಬಂಧಿಸುವ ಒಂದು ಪ್ರಕ್ರಿಯೆ ಪಾರಂಪರಿಕವಾಗಿ ನಡೆದುಬಂದಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಇಂದಿಗೂ ಜಾತಿ ಶ್ರೇಷ್ಠತೆ ಮತ್ತು ಪಾರಮ್ಯವನ್ನು ಕಾಪಾಡುವಲ್ಲಿ ಹಾಗೂ ಜಾತಿ ತಾರತಮ್ಯಗಳನ್ನು ಸಹ್ಯವಾಗಿಸುವಲ್ಲಿ ಈ ಪ್ರತಿಮಾ ರಾಜಕಾರಣ ನೆರವಾಗುತ್ತಿದೆ.
ಹಾಗಾಗಿಯೇ ನಮಗೆ ಜಂಗಮ ಸ್ವರೂಪಿಯಾಗಿರಬೇಕಾದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಫುಲೆ, ನಾರಾಯಣಗುರು, ಪೆರಿಯಾರ್ ಮುಂತಾದವರೂ ಸಹ ಸ್ಥಾವರಗಳ ರೂಪದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ, ಸಮ ಸಮಾಜದ ಕನಸು ಕಂಡ ಈ ಚಾರಿತ್ರಿಕ ವ್ಯಕ್ತಿಗಳು ನಮ್ಮ ಚಿಂತನ-ಮಂಥನದ ಮೂಸೆಯಲ್ಲಿ ಜಂಗಮ ಸ್ವರೂಪಿಗಳಾಗಿ ಹೊಸ ಚೈತನ್ಯವನ್ನು ಮೂಡಿಸುವ ಶಕ್ತಿಗಳಾಗಬೇಕಿದೆ.
ಮಾನವನ ಚೇತನ ‘ಅನಿಕೇತನ’ವಾಗಿರಬೇಕೆಂಬ ರಾಷ್ಟ್ರಕವಿ ಕುವೆಂಪು ಅವರ ಆಶಯವೂ ಸಹ ಇದೇ ಆಗಿದೆ. ಆಧುನಿಕ ಬದುಕಿಗೆ ಚೈತನ್ಯ ಒದಗಿಸುವ ಈ ಚಾರಿತ್ರಿಕ ಚೇತನಗಳೂ ಸಹ ನಮ್ಮ ನಡುವೆ ‘ಅನಿಕೇತನ’ರಾಗಿಯೇ ಇರಬೇಕಾಗುತ್ತದೆ. ಆದರೆ ಭಾರತದ ಅಧಿಕಾರ ರಾಜಕಾರಣವು, ಪುರಾಣ, ಮಿಥ್ಯೆಗಳನ್ನೂ ಒಳಗೊಂಡಂತೆ ಸಮಗ್ರ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಕೆಲವೇ ಪ್ರತಿಮೆಗಳಲ್ಲಿ ಹಿಡಿದಿಡುವ ಮೂಲಕ ಪ್ರತಿಯೊಂದು ಚಾರಿತ್ರಿಕ ಪ್ರತಿಮೆಯನ್ನೂ ವರ್ತಮಾನ ಕಾಲಘಟ್ಟದ ಅಸ್ಮಿತೆಗಳಿಗೆ ಅನ್ವಯಿಸುವ ಮೂಲಕ ಜನಸಾಮಾನ್ಯರ ನಡುವೆ ಶಾಶ್ವತ ಗೋಡೆಗಳನ್ನು ನಿರ್ಮಿಸಲೆತ್ನಿಸುತ್ತಿದೆ.
ಹಾಗಾಗಿಯೇ ಇಂದು ಸ್ವಾತಂತ್ರ್ಯ ಸಂಗ್ರಾಮಿಗಳೂ, ಚರಿತ್ರೆಯ ವಿವಿಧ ಕಾಲಘಟ್ಟಗಳಲ್ಲಿ ತಮ್ಮ ಸಂಸ್ಥಾನಗಳ ರಕ್ಷಣೆಗಾಗಿ ಹೋರಾಡಿ ಮಡಿದ ವೀರ ಸೇನಾನಿಗಳೂ ಸಹ ನಿರ್ದಿಷ್ಟ ಜಾತಿಯ ನೆಲೆಗಳಲ್ಲಿ ವಿಂಗಡಿಸಲ್ಪಟ್ಟು, ಪ್ರತ್ಯೇಕ ಜಾತಿ ಸಮುದಾಯಗಳ ಸ್ಥಾವರರೂಪದ ಆಸ್ತಿಗಳಾಗಿ ಪರಿಣಮಿಸಿದ್ದಾರೆ. ಮಂಗಲ್‌ಪಾಂಡೆ, ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ, ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ರಾಣಿ ಅಬ್ಬಕ್ಕ ಹೀಗೆ ಹಲವು ವೀರ ಸೇನಾನಿಗಳನ್ನು ಗತ ಚರಿತ್ರೆಯ ವಿಶಾಲ ಹಂದರದಿಂದ ಬೇರ್ಪಡಿಸಿ ವರ್ತಮಾನದ ಜಾತಿ-ಧರ್ಮದ ಸಂಕೋಲೆಗಳಲ್ಲಿ ಬಂಧಿಸುವ ಒಂದು ರಾಜಕೀಯ-ಸಾಂಸ್ಕೃತಿಕ ಪ್ರಕ್ರಿಯೆಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಬೆಂಗಳೂರಿನ ನಿರ್ಮಾತೃ ಎಂದೇ ಹೆಸರಾದ ಕೆಂಪೇಗೌಡರು ಸಹ ಇದೀಗ ಪ್ರತಿಮೆಯ ರೂಪದಲ್ಲಿ ಜಾತಿ ಮತ್ತು ಅಧಿಕಾರ ರಾಜಕಾರಣದ ದಾಳವಾಗಿರುವುದು ಕಣ್ಣೆದುರಿನ ದುರಂತ. ಕೆಂಪೇಗೌಡರ ಕನಸಿನ ಬೆಂಗಳೂರನ್ನು ಸಾಕಾರಗೊಳಿಸುವ ರಾಜಕೀಯ ಘೋಷಣೆ ಎಷ್ಟು ಬಾಲಿಶವಾದದ್ದು ಎನ್ನುವುದಕ್ಕೆ ಇವತ್ತಿನ ಬೆಂಗಳೂರು ನಗರಿಯೇ ಸಾಕ್ಷಿ ಅಲ್ಲವೇ?
ಎರಡು ಶತಮಾನಗಳ ವಸಾಹತು ಆಳ್ವಿಕೆಯಿಂದ ವಿಮೋಚನೆ ಪಡೆಯಲು ಭಾರತೀಯರು ನಡೆಸಿದ ವಿಭಿನ್ನ ಸ್ವರೂಪಗಳ ಹೋರಾಟಗಳು ಸಾಕಾರಗೊಳ್ಳುವ ವೇಳೆಗೆ ಭಾರತ ಎರಡು ಹೋಳಾಗಿದ್ದು ಈಗ ಇತಿಹಾಸ. ಆದರೆ ಸ್ವಾತಂತ್ರ್ಯೋತ್ತರ ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ, ಸಾಮಾಜಿಕಾರ್ಥಿಕ ಸಮಾನತೆ ಮತ್ತು ಸಾಂಸ್ಕೃತಿಕ ಸಮನ್ವಯತೆಯ ರಾಷ್ಟ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸ್ಪಷ್ಟ ನೀಲನಕ್ಷೆಯನ್ನು ನೀಡಿದ್ದ ಡಾ ಬಿ ಆರ್ ಅಂಬೇಡ್ಕರ್ ತಮ್ಮ ಕನಸಿನ ಭಾರತದಲ್ಲಿ ಯಾವುದೇ ರೀತಿಯ ಅಸಮಾನತೆಗಳು ಇರಕೂಡದು ಎಂದು ಬಯಸಿಯೇ ಸಂವಿಧಾನಕ್ಕೆ ಕಾಯಕಲ್ಪ ನೀಡಿದ್ದರು. ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ಎಲ್ಲ ತಾರತಮ್ಯಗಳನ್ನೂ ಹೋಗಲಾಡಿಸಿ, ಎಲ್ಲ ರೀತಿಯ ಜಾತೀಯ, ಧರ್ಮೀಯ, ಮತೀಯ ದೌರ್ಜನ್ಯಗಳನ್ನು ಹಿಮ್ಮೆಟ್ಟಿಸಿ, ಸಮಸ್ತ ಭಾರತೀಯರೂ ಗೌರವ, ಘನತೆಯೊಂದಿಗೆ, ಸಮಾನ ಶಿಕ್ಷಣ ಮತ್ತು ಆರೋಗ್ಯದೊಂದಿಗೆ ಬದುಕುವ ಕನಸನ್ನು ಹೊತ್ತವರಲ್ಲಿ ಅಂಬೇಡ್ಕರ್ ಅವರೊಡನೆ ರವೀಂದ್ರನಾಥ ಠಾಗೋರ್, ಗಾಂಧಿ, ಸುಭಾಷ್ ಬೋಸ್, ವಿವೇಕಾನಂದ, ಸರ್ದಾರ್ ಪಟೇಲ್, ಜವಹರಲಾಲ್ ನೆಹರೂ ಮೊದಲಾದವರೂ ಸೇರುತ್ತಾರೆ.
ಈ ಮಹನೀಯರ ಆಶಯಗಳನ್ನು ಸಾಕಾರಗೊಳಿಸುವ ಹಾದಿಯಲ್ಲಿ ನಾವು ಈ ಎಲ್ಲ ದಾರ್ಶನಿಕರ ತತ್ವಾದರ್ಶಗಳೊಡನೆ ಅನುಸಂಧಾನ ನಡೆಸುತ್ತಾ, ಪರಸ್ಪರ ಮುಖಾಮುಖಿಯಾಗಿಸುತ್ತಾ, ಇಟ್ಟ ತಪ್ಪು ಹೆಜ್ಜೆಗಳನ್ನು ಸರಿಪಡಿಸಿಕೊಳ್ಳುತ್ತಾ, ಸಮಸ್ತ ಭಾರತೀಯ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯಬೇಕಿದೆ. ಆದರೆ ನಾವು ಮಾಡುತ್ತಿರುವುದಾದರೂ ಏನು ? ಈ ಮಹನೀಯರ ಹೆಜ್ಜೆ ಗುರುತುಗಳನ್ನೂ ಗುರುತಿಸಲಾರದ ಮಟ್ಟಿಗೆ ಎಲ್ಲರನ್ನು ಪ್ರತಿಮೆಗಳಲ್ಲಿ ಬಂಧಿಸಿಟ್ಟು, ಅವರ ಜಂಗಮವಾಣಿಗಳು ಸ್ಥಾವರ ರೂಪದಲ್ಲಿ ಜಡಗಟ್ಟುವಂತೆ ಮಾಡಿಬಿಟ್ಟಿದ್ದೇವೆ. ಸಾಮಾಜಿಕ ಪರಿವರ್ತನೆಗಾಗಿ, ಸಾಂಸ್ಕೃತಿಕ ಮನ್ವಂತರಕ್ಕಾಗಿ, ಸಮಾನತೆ, ಗೌರವ, ಘನತೆ ಮತ್ತು ಆರ್ಥಿಕ ಸ್ಥಿರತೆಗಾಗಿ ನಡೆಯುತ್ತಿರುವ ಜನಪರ ಅಥವಾ ಪ್ರಗತಿಪರ ಎನ್ನಬಹುದಾದ ಹೋರಾಟಗಳೂ ಸಹ ಪ್ರತಿಮಾ ರಾಜಕಾರಣದ ಒಂದು ಭಾಗವಾಗಿದ್ದು, ಪ್ರತಿಮೆಗಳ ಸುತ್ತ ನಿರ್ಮಾಣವಾಗುವ ಅಸ್ಮಿತೆಗಳು ನಮ್ಮ ಆಯ್ಕೆ, ಆದ್ಯತೆ ಮತ್ತು ಕಾರ್ಯಸೂಚಿಗಳನ್ನು ನಿರ್ಧರಿಸುತ್ತಿದೆ.
ಈ ಪ್ರತಿಮಾ ರಾಜಕಾರಣದ ಛಾಯೆ ಇಡೀ ಸಮಾಜವನ್ನು ಆವರಿಸಿರುವುದರಿಂದಲೇ ಸಂಘಟನಾತ್ಮಕ ಹೋರಾಟಗಳೂ ಸಹ ತಮ್ಮೊಳಗಿನ ಪ್ರಗತಿಪರತೆಯನ್ನು ಸಾಪೇಕ್ಷಗೊಳಿಸಿ, ಯಾವುದೋ ಒಂದು ಅಸ್ಮಿತೆಯ ಚೌಕಟ್ಟಿನಲ್ಲಿ ಸಿಲುಕಿ ತಮ್ಮ ಸಾರ್ವತ್ರಿಕತೆ ಮತ್ತು ಪ್ರಸ್ತುತತೆಯನ್ನೂ ಕಳೆದುಕೊಳ್ಳುತ್ತಿವೆ. ಹಾಗಾಗಿಯೇ ನಮ್ಮ ನಡುವೆ ಅತ್ಯಾಚಾರ, ಅಸ್ಪೃಶ್ಯತೆ, ಜಾತಿ ಶೋಷಣೆ, ಮತದ್ವೇಷ, ನಾಗರಿಕ ಹತ್ಯೆ, ಮಹಿಳಾ ದೌರ್ಜನ್ಯ, ಸಾಮಾಜಿಕ ಕ್ಷೋಭೆ ಹೆಚ್ಚಾಗುತ್ತಲೇ ಇದ್ದರೂ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುವ ಒಂದು ಬೃಹತ್ ಜನಸಮೂಹವನ್ನು ನಾವು ಸೃಷ್ಟಿಸಿಕೊಂಡಿದ್ದೇವೆ. ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡುವ ರೀತಿಯಲ್ಲಿ ಶಿಕ್ಷಣ ನೀತಿಗಳು ಜಾರಿಯಾಗುತ್ತಿದ್ದರೂ, ಲಕ್ಷಾಂತರ ಜನರು ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯ ಸೌಕರ್ಯಗಳಿಂದಲೇ ವಂಚಿತರಾಗುತ್ತಿದ್ದರೂ, ಮಹಿಳಾ ಸಮೂಹ ನಿತ್ಯ ದೌರ್ಜನ್ಯ, ಅತ್ಯಾಚಾರಕ್ಕೊಳಗಾಗುತ್ತಿದ್ದರೂ, ನಮ್ಮ ನಡುವಿನ ಅಂಬೇಡ್ಕರ್ ಅಥವಾ ಗಾಂಧಿ ನಮ್ಮನ್ನು ಜಾಗೃತಗೊಳಿಸುತ್ತಿಲ್ಲ. ಈ ಜಡತ್ವ ಮತ್ತು ನಿಷ್ಕ್ರಿಯತೆಗೆ ಮೂಲ ಕಾರಣವೇ ಅಧಿಕಾರ ರಾಜಕಾರಣದ ಲೋಭ, ವ್ಯಾಮೋಹ ಮತ್ತು ಇದನ್ನು ಪೋಷಿಸಲೆಂದೇ ನಿರ್ಮಿಸಲಾಗಿರುವ ಅಸ್ಮಿತೆಗಳ ಭದ್ರಕೋಟೆಗಳು. ಪ್ರತಿಮಾ ರಾಜಕಾರಣ ಈ ಭದ್ರಕೋಟೆಗಳನ್ನು ಸಂರಕ್ಷಿಸುವ ಪ್ರಬಲ ಅಸ್ತ್ರಗಳಾಗಿ ಬಳಕೆಯಾದಷ್ಟೂ ತಳಮಟ್ಟದಲ್ಲಿ ಹಸಿವು, ನಿರುದ್ಯೋಗ, ಅನಿಶ್ಚಿತ ಬದುಕಿನಿಂದ ನಿರ್ಗತಿಕತೆಯತ್ತ ನೂಕಲ್ಪಡುತ್ತಿರುವ ಬಹುಸಂಖ್ಯೆಯ ಜನರು ನಿರ್ಲಕ್ಷಿತರಾಗಿಯೇ ಮುಂದುವರೆಯುತ್ತಾರೆ. ಪ್ರಗತಿಪರ ಎನ್ನಲಾಗುವ ನೂರಾರು ಹೋರಾಟಗಳು ತಾರ್ಕಿಕ ಅಂತ್ಯಗಾಣದೆ ವಿಫಲವಾಗುತ್ತಿರುವುದಕ್ಕೂ ಇದೇ ಕಾರಣವಾಗಿದೆ.
ಜಾತಿ ಮುಕ್ತ ಭಾರತದ ಕನಸು ಕಂಡ ಬುದ್ಧ, ಬಸವ, ಸಮ ಸಮಾಜ ಮತ್ತು ಸಮೃದ್ಧ ಭಾರತದ ಕನಸು ಕಂಡ ಡಾ ಅಂಬೇಡ್ಕರ್, ಸ್ವಾವಲಂಬಿ ಭಾರತದ ಕನಸು ಕಂಡ ಮಹಾತ್ಮ ಗಾಂಧಿ, ಆಧ್ಯಾತ್ಮಿಕ ನೆಲೆಯಲ್ಲಿ ಮಾನವೀಯ ಭಾರತದ ಕನಸು ಕಂಡ ವಿವೇಕಾನಂದ-ಠಾಗೋರ್-ನಾರಾಯಣಗುರು ಮುಂತಾದ ದಾರ್ಶನಿಕರ ಕನಸು ಸಾಕಾರಗೊಳ್ಳಬೇಕಾದರೆ, ನಾವೂ ಕನಿಷ್ಠ ಈ ಮಹನೀಯರನ್ನಾದರೂ ಪ್ರತಿಮಾ ರಾಜಕಾರಣದಿಂದ ಮುಕ್ತಗೊಳಿಸಿ, ಅವರನ್ನು ಸ್ಥಾವರಗಳ ಸಂಕೋಲೆಗಳಿಂದ ಬಿಡಿಸಿ, ಅವರ ಚಿಂತನೆಗಳ ಜಂಗಮ ಸ್ವರೂಪವನ್ನು ಜೀವಂತಗೊಳಿಸಬೇಕಿದೆ. ಈ ಹಾದಿಯಲ್ಲಿ ನಮಗೆ ತೊಡಕಾಗಬಹುದಾದ ಎಲ್ಲ ರೀತಿಯ ಜಾತಿ-ಧರ್ಮ ಮತ್ತು ಸಾಮುದಾಯಿಕ ತಡೆಗೋಡೆಗಳನ್ನೂ ನಿವಾರಿಸಿಕೊಂಡು, ಸಮಾಜದ ಕಟ್ಟಕಡೆಯ ಮನುಷ್ಯನೊಡನೆ ಸಂಪರ್ಕ ಸಾಧಿಸುವುದು ನಮ್ಮ ಆಯ್ಕೆ ಮತ್ತು ಆದ್ಯತೆಯಾಗಬೇಕಿದೆ. ಪ್ರಜಾಸತ್ತಾತ್ಮಕ, ಪ್ರಗತಿಪರ ಮತ್ತು ಎಡಪಂಥೀಯ ಹೋರಾಟಗಳ ಭವಿಷ್ಯ ಮತ್ತು ಸಹಜವಾಗಿಯೇ ಅಂಬೇಡ್ಕರ್ ಕನಸಿನ ಭಾರತದ ಭವಿಷ್ಯ ಈ ಹಾದಿಯಲ್ಲೇ ಅಡಗಿದೆ.