Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಗೆ ಹಲವು ತೊಡಕು

ದೆಹಲಿ ಕಣ್ಣೋಟ; ಶಿವಾಜಿ ಗಣೇಶನ್

ಮೂರು ದಶಕಗಳಿಂದ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ನಲುಗಿ ಹೋಗಿರುವ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ನಡೆದ ಎರಡನೇ ಹಂತದ ಚುನಾವಣೆ ಶಾಂತಿಯುತವಾಗಿ ಮುಗಿದಿದೆ. ಮೊದಲ ಹಂತದ ಚುನಾವಣೆಯಲ್ಲಿ ಶೇ. ೬೦ರಷ್ಟು ಮಂದಿ ಮತದಾರರು ಮತದಾನ ಮಾಡಿ ಅಚ್ಚರಿ ಮೂಡಿಸಿದ್ದರು. ಎರಡನೇ ಹಂತದ ಚುನಾವಣೆಯಲ್ಲಿ ಶೇ. ೫೭. ೩೧ರಷ್ಟು ಮತದಾನವಾಗಿದೆ. ಅಕ್ರೋಬರ್ ೧ರಂದು ಮೂರನೇ ಹಂತದ ಮತದಾನ ನಡೆಯಬೇಕಿದೆ. ಹಲವು ದಶಕಗಳ ನಂತರ ಈ ಕಣಿವೆ ರಾಜ್ಯದಲ್ಲಿ ಯಾವುದೇ ಗದ್ದಲ, ಗಲಾಟೆ ಮತ್ತು ಬಂದೂಕಿನ ಸದ್ದು ಇಲ್ಲದೆ ಶಾಂತಿಯುತವಾಗಿ ಮತದಾನ ನಡೆದಿರುವುದು ಒಳ್ಳೆಯ ಬೆಳವಣಿಗೆ.

ಈಗ ರಾಷ್ಟ್ರದ ಗಮನ ಸೆಳೆದಿರುವ ದೆಹಲಿಗೆ ಹೊಂದಿಕೊಂಡಂತಿರುವ ಹರಿಯಾಣದ ೯೦ ವಿಧಾನಸಭಾ ಕ್ಷೇತ್ರಗಳಿಗೆ ಅಕ್ರೋಬರ್ ೫ರಂದು ಮತದಾನ ನಡೆಯಲಿದ್ದು, ಹಲವು ಪಕ್ಷಗಳು ಕಣದಲ್ಲಿದ್ದರೂ ನೇರ ಚುನಾವಣೆ ಸಮರ ನಡೆದಿರುವುದು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಎನ್ನುವುದು ಬೆಳಕಿನಷ್ಟೇ ನಿಚ್ಚಳ. ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಈ ಬಾರಿಯ ಚುನಾವಣೆ ನೀರು ಕುಡಿದಷ್ಟು ಸುಲಭವಲ್ಲ. ಈಗ ೨೦೧೯ರ ಪರಿಸ್ಥಿತಿ ಇಲ್ಲ. ೨೦೧೯ರಲ್ಲಿ ಬಿಜೆಪಿಯು ರಾಜ್ಯದ ಒಟ್ಟು ೯೦ ಕ್ಷೇತ್ರಗಳ ಪೈಕಿ ೭೯ ಕ್ಷೇತ್ರಗಳನ್ನು ಗೆದ್ದು ಅಚ್ಚರಿಯ ಸಾಧನೆ ಮಾಡಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮನೋಹರ್ ಲಾಲ್ ಖಟ್ಟರ್ ಅವರನ್ನು ಅಽಕಾರದಿಂದ ಕೆಳಗಿಸಿ ಅವರ ಸ್ಥಾನಕ್ಕೆ ರಾಜಕಾರಣದಲ್ಲಿ ಅಷ್ಟೇನೂ ಪ್ರಭಾವಿ ಇಲ್ಲದ ನಯಬ್ ಸಿಂಗ್ ಸೈನಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಆದರೂ ಪಕ್ಷದ ನಿರೀಕ್ಷೆಯಂತೆ ಅವರು ಕೆಲಸ ಮಾಡಲು ಆಗಿಲ್ಲ. ಒಂದು ಕಡೆ ಖಟ್ಟರ್ ಅವರನ್ನು ಅಽಕಾರದಿಂದ ಕೆಳಗಿಳಿಸಿದ್ದು ಮತ್ತು ಅವರ ಸ್ಥಾನಕ್ಕೆ ಸೈನಿ ಅವರನ್ನು ತಂದ್ದದ್ದು ಬಿಜೆಪಿಗೆ ಭಾರೀ ಹೊಡೆತ ನೀಡಿರುವುದಾಗಿ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಮತದಾರರೂ ಬಿಜೆಪಿ ಸರ್ಕಾರದ ಕಳಪೆ ಸಾಧನೆಯ ಬಗೆಗೆ ಅತೃಪ್ತಿ ಹೊಂದಿರುವುದು ಈ ಚುನಾವಣೆಯಲ್ಲಿ ಸ್ಷಷ್ಟವಾಗಿ ಗೋಚರಿಸುತ್ತಿದೆ. ಹಾಗಾಗಿ ಬಿಜೆಪಿ ಈಗ ಆಡಳಿತ ವಿರೋಽ ಅಲೆಯನ್ನು ಎದುರಿಸುತ್ತಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಆಂತರಿಕ ಕಚ್ಚಾಟ ಮತ್ತು ಭಿನ್ನಾಭಿಪ್ರಾಯ ಬಹಿರಂಗಗೊಂಡಿದೆ. ಹಾಗಾಗಿ ಈ ಭಿನ್ನಮತ ಆಯಾ ಪಕ್ಷಗಳಿಗೇ ಆಂತರಿಕವಾಗಿ ತೊಡರುಗಾಲು ಹಾಕಿದೆ. ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಹತ್ತು ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ೨೦೨೩ರ ಚುನಾವಣೆಯಲ್ಲಿ ೫ ಸ್ಥಾನಗಳನ್ನು ಪಡೆಯುವ ಮೂಲಕ ಅರ್ಧ ಕ್ಷೇತ್ರಗಳನ್ನು ಕಳೆದುಕೊಂಡಿತು. ಕಾಂಗ್ರೆಸ್ ಐದು ಕ್ಷೇತ್ರಗಳನ್ನು ಗಳಿಸುವ ಮೂಲಕ ಹರಿಯಾಣದಲ್ಲಿ ಚೇತರಿಸಿಕೊಂಡಿತು. ಈಗ ಇದೇ ಚುನಾವಣಾ ಹವಾ ಮುಂದುವರಿದಿದೆ ಎಂದೇ ರಾಜಕೀಯ ಲೆಕ್ಕಾಚಾರಗಳು ಹೇಳುತ್ತಿವೆ.

ಕಾಂಗ್ರೆಸ್ಸಿನಲ್ಲಿ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಸಿರ್ಸಾ ಮೀಸಲು ಕ್ಷೇತ್ರದ ಲೋಕಸಭೆ ಸದಸ್ಯೆಯಾಗಿರುವ ಕುಮಾರಿ ಶೆಲ್ಜಾ ಪಕ್ಷ ಅಽಕಾರಕ್ಕೆ ಬಂದರೆ ತಾವೇ ಮುಖ್ಯಮಂತ್ರಿ ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ. ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ತಮ್ಮನ್ನು ಕಡೆಗಣಿಸಲಾಯಿತೆಂದು ಮೊನ್ನೆಯವರೆಗೂ ಪ್ರಚಾರದಿಂದ ದೂರ ಉಳಿದಿದ್ದ ಶೆಲ್ಜಾ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಈಗ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ಸಿನ ಅವಕೃಪೆಗೆ ಒಳಗಾಗಿರುವ ಶೆಲ್ಜಾ ಬಿಜೆಪಿಗೆ ಸೇರಲಿದ್ದಾರೆ ಎಂದು ಬಿಜೆಪಿಯ ನಾಯಕ ಮನೋಹರ್ ಲಾಲ್ ಖಟ್ಟರ್ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಶೆಲ್ಜಾ ಅವರನ್ನು ಸಮಾಧಾನ ಮಾಡಿ ಪ್ರಚಾರಕ್ಕೆ ಇಳಿಸಿದೆ. ನಮ್ಮದು ಕಾಂಗ್ರೆಸ್ ಕುಟುಂಬ. ನಮ್ಮ ತಂದೆಯ ಕಾಲದಿಂದಲೂ ಕಾಂಗ್ರೆಸ್, ಈಗಲೂ ಕಾಂಗ್ರೆಸ್ ಎಂದಿರುವ ಅವರು, ಸಾಯುವವರೆಗೂ ತಾವು ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದಾಗಿ ಮನೋಹರ್ ಲಾಲ್ ಖಟ್ಟರ್ ಅವರ ಹೇಳಿಕೆಗೆ ಸ್ಪಷ್ಟನೆ ನೀಡಿದ ಮೇಲೆ ಅವರ ಬೆಂಬಲಿಗರೂ ಈಗ ಚುನಾವಣಾ ಕಣದಲ್ಲಿ ಚುರುಕಾಗಿ ಪಕ್ಷದ ಗೆಲುವಿಗಾಗಿ ತೊಡಗಿಸಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿರುವ ಶೆಲ್ಜಾ ತಾವೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿರುವ ಬಗೆಗೆ ಹಲವು ರಾಜಕಾರಣಿಗಳು ‘ಶೆಲ್ಜಾ ದಿಲ್ಲಿ ಬೇಬಿ’, ಹರಿಯಾಣ ಮುಖ್ಯವಾಗಿ ಅವರು ಮೂರು ದಶಕಗಳಿಂದ ಪ್ರತಿನಿಽಸುವ ಸಿರ್ಸಾ ಲೋಕಸಭೆ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನು ಎಂದು ಗೇಲಿ ಮಾಡುತ್ತಿದ್ದಾರೆ.

ಈ ಮಧ್ಯೆ ಬಿಜೆಪಿ ಮತ್ತೆ ತನ್ನ ಅಽಕಾರ ಉಳಿಸಿಕೊಂಡು ಮೂರನೇ ಅವಽಗೆ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ವ್ಯಕ್ತಪಡಿಸಿದ್ದರೂ, ಸದಾ ವಿವಾದದಲ್ಲಿಯೇ ಮುಂಚೂಣಿಯಲ್ಲಿರುವ ನಟಿ ಮತ್ತು ಮಂಡಿ ಲೋಕಸಭೆಯ ಸದಸ್ಯೆ ಕಂಗನಾ ರಣೌತ್ ತಮಗೆ ಸಂಬಂಧವಿಲ್ಲದಿದ್ದರೂ ರೈತರ ಬಗೆಗೆ ನೀಡಿದ ಹೇಳಿಕೆ ಗೊಂದಲ ಉಂಟು ಮಾಡಿದೆ. ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ರೈತರ ಪ್ರತಿಭಟನೆಗೆ ಕಾರಣವಾದ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನೂ ಮತ್ತೆ ತರಲಾಗುವುದು ಎನ್ನುವ ಅವರ ಹೇಳಿಕೆ ಬಿಜೆಪಿಯ ರಾಜಕೀಯ ಭವಿಷ್ಯವನ್ನೇ ತಲ್ಲಣಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರೈತ ಚಳವಳಿಗೆ ಹೆದರಿದಂತೆ ಕಂಡ ಮೇಲೆ ವಿವಾದಿತ ಮೂರು ಕಾಯ್ದೆಗಳನ್ನೂ ಹಿಂತೆಗೆದುಕೊಳ್ಳುವುದಾಗಿ ಭರವಸೆ ನೀಡಿ ಅದರಂತೆ ಅವುಗಳನ್ನು ಹಿಂತೆಗೆದುಕೊಂಡರು. ಆದರೆ ಕಂಗನಾ ಅವರ ಹೇಳಿಕೆಯು ಬಿಜೆಪಿಗೆ ಮುಜುಗರ ಉಂಟುಮಾಡಿದೆ. ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ಕಂಗನಾ ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು. ಆದರೂ ಪಕ್ಷದ ಒತ್ತಡದ ಮೇಲೆ ಕಂಗನಾ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿರುವುದಾಗಿ ಸ್ಷಷ್ಟನೆ ನೀಡಿ ಪರಿಸ್ಥಿತಿಯನ್ನು ತಣ್ಣಗೆ ಮಾಡಿದ್ದಾರೆ. ಕಂಗನಾ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಗೆಗೆ ಪ್ರಧಾನಿ ಮೋದಿ ಅವರೇ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದರು.

ಬಿಜೆಪಿಯು ಕಂಗನಾ ಮೂಲಕ ಇಂತಹ ಹೇಳಿಕೆಗಳನ್ನು ಆಗಿಂದಾಗ್ಗೆ ಹೇಳಿಸುತ್ತಿದೆ. ಬಿಜೆಪಿ ನಿಲುವು ಬೇರೆಯೇ ಆಗಿದ್ದರೆ ಕಂಗನಾ ವಿರುದ್ಧ ಕ್ರಮಕೈಗೊಳ್ಳಬೇಕು ಎನ್ನುವುದು ಹರಿಯಾಣದ ಹಲವು ಕಾಂಗ್ರೆಸ್ ನಾಯಕರ ಆಗ್ರಹ. ಈ ಮಧ್ಯೆ ಕಾಂಗ್ರೆಸ್ ಬಿಜೆಪಿಯ ಬ್ರಿಜ್ ಭೂಷಣ್ ಸಿಂಗ್ ಅವರಿಂದ ಅವಮಾನಕ್ಕೊಳಗಾಗಿದ್ದ ಕ್ರೀಡಾಪಟು ವಿನೇಶ್ ಫೋಗಟ್ ಅವರನ್ನು ಜುಲ್ನಾ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಸಿ ಚುನಾವಣೆಯ ಕಾವನ್ನು ಹೆಚ್ಚಿಸಿದೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ವೇಳೆ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷವು ಹರಿಯಾಣದಲ್ಲೂ ಏಳು ಗ್ರಾರಂಟಿಗಳನ್ನು ನೀಡಿದೆ. ಇತ್ತ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಟೀಕಿಸುತ್ತಾ ಬಂದ ಬಿಜೆಪಿಯೂ ತಾನು ಮೂರನೇ ಬಾರಿಗೆ ಅಽಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ೨,೦೦೦ ರೂಪಾಯಿ, ಅಡುಗೆ ಸಿಲಿಂಡರನ್ನು ೫೦೦ ರೂಪಾಯಿಗೆ ನೀಡುವುದು ಮತ್ತು ಯುವಕರಿಗೆ ಎರಡು ಲಕ್ಷ ಉದ್ಯೋಗಗಳನ್ನು ಒದಗಿಸುವ ಭರವಸೆ ನೀಡಿದೆ.

ಈ ಗ್ರಾರಂಟಿ ಯೋಜನೆಗಳ ಜಾರಿಯಿಂದ ಕರ್ನಾಟಕದಲ್ಲಿ ಅಭಿವೃದ್ಧಿಗೆ ಆದ್ಯತೆ ಕಡಿಮೆ ಆಗಿದೆ ಎನ್ನುವ ಕೂಗು ಹೆಚ್ಚುತ್ತಿರುವಾಗಲೇ ಕಾಂಗ್ರೆಸ್ ಹರಿಯಾಣದ ಮತದಾರರಿಗೆ ಭರಪೂರ ಭರವಸೆಗಳನ್ನು ನೀಡಿದೆ. ಪ್ರತಿಯೊಂದು ಮನೆಗೂ ೩೦೦ ಯುನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬಕ್ಕೆ ೨೫ ಲಕ್ಷ ರೂ. ವರೆಗೆ ಉಚಿತ ಆರೋಗ್ಯ ಸೇವೆ ಮತ್ತು ಜಾತಿ ಜನಗಣತಿ ಸೇರಿದಂತೆ ಏಳು ಪ್ರಮುಖ ಭರವಸೆಗಳನ್ನು ನೀಡಿದೆ.

ಇದೇನೇ ಇದ್ದರೂ ಈ ಚುನಾವಣೆಯಲ್ಲಿ ಶೇ. ೨೦ರಷ್ಟು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಜಾತಿ ಮತದಾರರನ್ನು ಓಲೈಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿಗೆ ಬಿದ್ದಿವೆ. ರಾಜ್ಯದಲ್ಲಿ ಜಾಟ್ ಮತ್ತು ಪರಿಶಿಷ್ಟ ಜಾತಿಯ ಪ್ರಾಬಲ್ಯ ಇದ್ದು ಈ ಎರಡೂ ಜಾತಿಗಳ ಹೆಚ್ಚು ಮತದಾರರು ಯಾವ ಕಡೆ ಒಲವು ತೋರುತ್ತಾರೋ ಆ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಎನ್ನುವುದು ರಾಜಕೀಯ ಲೆಕ್ಕಾಚಾರ. ಕಾಂಗ್ರೆಸ್ ಅಽಕಾರದಲ್ಲಿರುವ ರಾಜ್ಯಗಳ ಆಡಳಿತದ ದೋಷ, ಭ್ರಷ್ಟಾಚಾರ ಮತ್ತು ಭೂ ಹಗರಣಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಬಂದಿರುವ ಮುಡಾ ನಿವೇಶನ ಹಗರಣ ಆರೋಪವನ್ನು ಮತ್ತು ರಾಹುಲ್ ಗಾಂಽ ಅಮೆರಿಕಾದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತಪಡಿಸಿದ ಮೀಸಲಾತಿಯ ವಿಚಾರವನ್ನು ಮೋದಿ ಅವರು ಉಲ್ಲೇಖಿಸುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರ ಪರ ಮತ್ತು ಮೀಸಲಾತಿಯ ವಿರೋಽ ಎಂದು ಬಿಂಬಿಸತೊಡಗಿದ್ದಾರೆ. ಇಂತಹ ಆರೋಪಗಳು ಹರಿಯಾಣದ ಮತದಾರರ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಲಿವೆ ಎನ್ನುವುದನ್ನು ಚುನಾವಣೆಯ ಫಲಿತಾಂಶವೇ ಹೇಳಬೇಕಿದೆ.

 

Tags: