Mysore
18
broken clouds

Social Media

ಸೋಮವಾರ, 16 ಫೆಬ್ರವರಿ 2026
Light
Dark

ಪಕ್ಷಗಳಲ್ಲಿ ಹೆಚ್ಚುತ್ತಿರುವ ಅಂತರ; ಘಟಿಸಲಿದೆಯೇ ನವ ಮನ್ವಂತರ?

ಕರ್ನಾಟಕದಲ್ಲಿ ಹೊಸ ರಾಜಕೀಯ ಶಕ್ತಿ ಮೇಲೆದ್ದು ನಿಲ್ಲಲಿದೆಯೇ? ಹಾಗೆಂಬುದೊಂದು ಪ್ರಶ್ನೆ ಈಗ ರಾಜಕೀಯ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇವತ್ತು ಈ ಪ್ರಶ್ನೆಗೆ ನಿಖರ ಉತ್ತರ ನೀಡುವುದು ಕಷ್ಟವಾದರೂ ಹೊಸ ರಾಜಕೀಯ ಶಕ್ತಿಯೊಂದರ ಹುಟ್ಟಿಗೆ ಅಗತ್ಯವಾದ ಒತ್ತಡವಂತೂ ರೂಪುಗೊಳ್ಳುತ್ತಿದೆ. ರಾಜಕಾರಣದಲ್ಲಿ ರೂಪುಗೊಳ್ಳುವ ಒತ್ತಡ ಹೊಸ ರಾಜಕೀಯ ಶಕ್ತಿಗಳ ಹುಟ್ಟಿಗೆ ಕಾರಣವಾಗುವುದು ಸಹಜ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ವಿಭಜನೆಯಾದ ಪರಿಣಾಮವಾಗಿ ಕರ್ನಾಟಕದ ನೆಲೆಯಲ್ಲಿ ಸಂಸ್ಥಾ ಕಾಂಗ್ರೆಸ್ ತಲೆ ಎತ್ತಿ ನಿಂತಿತು. ಮುಂದೆ ಅದು ಹಲವು ರೂಪಗಳನ್ನು ಪಡೆದು ಕರ್ನಾಟಕದ ರಾಜಕೀಯ ಚಿತ್ರವನ್ನು ಬದಲಿಸಿತು. ಇದೇ ರೀತಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ೧೯೯೨ರಲ್ಲಿ ಅಧಿಕಾರ ಕಳೆದುಕೊಂಡ ನಂತರ ಕಾಂಗ್ರೆಸ್ ವರಿಷ್ಠರ ವಿರುದ್ಧ ಸಿಡಿದೆದ್ದರು. ಕೆಸಿಪಿ ಎಂಬ ಪಕ್ಷ ಕಟ್ಟಿ ೧೯೯೪ರ ಚುನಾವಣೆಯಲ್ಲಿ ಅಬ್ಬರಿಸಿದರು. ಅವತ್ತು ಅವರ ನೇತೃತ್ವದ ಕೆಸಿಪಿ ಹತ್ತು ಸ್ಥಾನಗಳನ್ನಷ್ಟೇ ಪಡೆಯಿತಾದರೂ ಕಾಂಗ್ರೆಸ್ ಪಕ್ಷದ ದಯನೀಯ ಸೋಲಿಗೆ ಕಾರಣವಾಯಿತು.

೨೦೦೮ರಲ್ಲಿ ಬಿಜೆಪಿ ಅಽಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾದ ಯಡಿಯೂರಪ್ಪ ೨೦೧೧ರಲ್ಲಿ ಪದಚ್ಯುತರಾದರು. ಹೀಗೆ ತಾವು ಪದಚ್ಯುತರಾಗಲು ಪಕ್ಷದ ನಾಯಕರೇ ಕಾರಣ ಅಂತ ಕುದಿಯತೊಡಗಿದ ಯಡಿಯೂರಪ್ಪ ೨೦೧೩ರಲ್ಲಿ ಪಕ್ಷ ತೊರೆದರು. ಅಷ್ಟೊತ್ತಿಗಾಗಲೇ ನಿಶ್ಶಕ್ತವಾಗಿದ್ದ ಜನತಾಪಕ್ಷವನ್ನು ಹೆಗಲ ಮೇಲೆ ಹೊತ್ತುಕೊಂಡು ಹೊಸ ಶಕ್ತಿ ತುಂಬಿದರು. ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಜನತಾಪಕ್ಷ ದೊಡ್ಡ ಸಾಧನೆ ಮಾಡಲಿಲ್ಲವಾದರೂ ಬಿಜೆಪಿ ನಲವತ್ತು ಸ್ಥಾನಗಳಿಗೆ ಕುಸಿಯುವಂತೆ ನೋಡಿಕೊಂಡರು.

ಹೀಗೆ ಹೊಸ ರಾಜಕೀಯ ಶಕ್ತಿಗಳು ತಲೆ ಎತ್ತಿ ನಿಲ್ಲಲು ಸನ್ನಿವೇಶದ ಒತ್ತಡಗಳೇ ಕಾರಣವೆಂಬುದು ನಿರ್ವಿವಾದ.

ಇವತ್ತು ಕೂಡ ಕರ್ನಾಟಕದ ನೆಲೆಯಲ್ಲಿ ಇದಕ್ಕಿಂತ ಪ್ರಬಲವಾದ ಒತ್ತಡ ರೂಪುಗೊಳ್ಳುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿ. ಅಂದ ಹಾಗೆ ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳನ್ನೇ ನೋಡಿ. ಅಲ್ಲೀಗ ಸಿದ್ದರಾಮಯ್ಯ ಕೆಳಗಿಳಿಯಲಿ ಅಂತ ಹಲವರು ಕಾಯುತ್ತಿದ್ದಾರೆ. ಮುಡಾ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರದ ಜಾರಿ ನಿರ್ದೇಶನಾಲಯ, ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ ಹದಿನಾಲ್ಕು ನಿವೇಶನಗಳನ್ನು ನೀಡುವುದರ ಹಿಂದೆ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂದು ಹೇಳಿದೆ.

ಅದು ಹೀಗೆ ಹೇಳುತ್ತಿದ್ದಂತೆಯೇ ಉಪಮುಮಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು, ಪಕ್ಷ ಅಽಕಾರಕ್ಕೆ ಬಂದ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಪಟ್ಟಂತೆ ಕೆಲ ಒಪ್ಪಂದಗಳಾಗಿವೆ. ಈ ಹಂತದಲ್ಲಿ ಅದರ ಬಗ್ಗೆ ಮಾತನಾಡುವುದಿಲ್ಲ. ಸೂಕ್ತ ಕಾಲದಲ್ಲಿ ಅದನ್ನು ಬಹಿರಂಗಪಡಿಸುತ್ತೇನೆ ಎಂದರು.

ಅಲ್ಲಿಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ಪ್ರಯತ್ನಗಳು ಜಾರಿಯಲ್ಲಿವೆ ಎಂಬುದು ಸ್ಪಷ್ಟವಾಯಿತು. ವಸ್ತುಸ್ಥಿತಿ ಎಂದರೆ ಇಂತಹ ಬೆಳವಣಿಗೆಗಳನ್ನು ಊಹಿಸಿದ್ದ ಸಿದ್ದರಾಮಯ್ಯ ಹಾಸನದಲ್ಲಿ ಅಹಿಂದ ಶಕ್ತಿಯ ಬಲಪ್ರದರ್ಶನಕ್ಕೆ ವೇದಿಕೆ ಸಜ್ಜಗೊಳಿಸಿಕೊಂಡಿದ್ದರು. ಆದರೆ ಇದು ಸಿದ್ದರಾಮಯ್ಯ ಅವರು ಪಕ್ಷ ತೊರೆಯುವ ಮುನ್ನಿನ ಸ್ಥಿತಿ ಎಂದು ಭಾವಿಸಿದ ಕೆಲ ನಾಯಕರು ಪಕ್ಷದ ವರಿಷ್ಠರ ಕಿವಿ ಕಚ್ಚಿ, ಹಾಸನದ ಶಕ್ತಿ ಪ್ರದರ್ಶನ ಜನ ಕಲ್ಯಾಣ ಕಾರ್ಯಕ್ರಮವಾಗಿ ಕಾಂಗ್ರೆಸ್ ಪಕ್ಷದ ಹಿಡಿತಕ್ಕೆ ಸಿಲುಕುವಂತೆ ಮಾಡಿದರು. ಯಥಾ ಪ್ರಕಾರ ಈ ಬೆಳವಣಿಗೆಯಿಂದಲೂ ಸಿದ್ದರಾಮಯ್ಯ ಕೆರಳಿದ್ದಾರೆ. ಒಂದು ವೇಳೆ ಕೇಂದ್ರದ ಜಾರಿ ನಿರ್ದೇಶನಾಲಯ ತಮಗೆ ಇಕ್ಕಳ ಹಾಕಿದರೆ, ಅದರ ಬೆನ್ನಲ್ಲೇ ಕಾಂಗ್ರೆಸ್ ವರಿಷ್ಠರು ಅವರನ್ನು ಇಳಿಸಲು ಮುಂದಾದರೆ ನಿಶ್ಚಿತವಾಗಿ ಅವರು ಸಿಡಿದೇಳಲಿದ್ದಾರೆ. ಹೀಗಾಗಿ ಇವತ್ತು ಅವರ ಸುತ್ತ ರೂಪುಗೊಳ್ಳುತ್ತಿರುವ ಒತ್ತಡ ಏನಿದೆ ಅದು ಹೊಸ ಪಕ್ಷವನ್ನು ಕಟ್ಟಲು ಅವರಿಗೆ ಪ್ರೇರೇಪಣೆ ನೀಡಬಹುದು ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಇನ್ನು ಪ್ರತಿಪಕ್ಷ ಬಿಜೆಪಿ ಪಾಳೆಯವನ್ನು ಹೊಕ್ಕು ನೋಡಿದರೆ ಅಲ್ಲೂ ಇಂತಹದ್ದೇ ಒತ್ತಡ ರೂಪುಗೊಳ್ಳುತ್ತಿದೆ. ಅದರ ಬಿರುಸಿಗೆ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅವರ ಪುತ್ರ ಬಿ. ವೈ. ವಿಜಯೇಂದ್ರ ಕಾಣಲಿದ್ದಾರೆ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಅವರನ್ನು ವ್ಯವಸ್ಥಿತವಾಗಿ ವಿರೋಽಸುತ್ತಿರುವ ಒಂದು ಗುಂಪು ಬಸನಗೌಡ ಪಾಟೀಲ್ ಯತ್ನಾಳ್ ಮತ್ತವರ ಟೀಮಿಗೆ ಒತ್ತಾಸೆ ನೀಡುತ್ತಿದೆ. ಕಾರಣ ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿ ಮುಂದುವರಿದರೆ, ಅವರ ನೇತೃತ್ವದಲ್ಲೇ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸುವಂತಾದರೆ ನಿಸ್ಸಂಶಯವಾಗಿ ಅವರೇ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿರುತ್ತಾರೆ ಎಂಬುದು ಇಂತಹವರ ಆತಂಕ. ಹೀಗಾಗಿ ವಿಜಯೇಂದ್ರ ಅವರನ್ನು ಕೆಳಗಿಳಿಸಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ವಿ. ಸೋಮಣ್ಣ ಅವರ ಪೈಕಿ ಒಬ್ಬರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕು ಎಂದವರು ಹಾತೊರೆಯುತ್ತಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ ಯತ್ನಾಳ್ ಮತ್ತವರ ಟೀಮು ವಿಜಯೇಂದ್ರ ವಿರುದ್ಧ ಎಷ್ಟಾದರೂ ದಾಳಿ ಮಾಡಲಿ, ಅದರೆ ಅವರ ವಿರುದ್ದ ವರಿಷ್ಠರು ಶಿಸ್ತುಕ್ರಮ ಕೈಗೊಳ್ಳುತ್ತಿಲ್ಲ. ಇದಕ್ಕೆ ಏನರ್ಥ? ಹೈಕಮಾಂಡ್ ಮಟ್ಟದಲ್ಲಿ ಯತ್ನಾಳ್ ಅಂಡ್ ಟೀಮನ್ನು ಪೋಷಿಸುವ ಶಕ್ತಿಗಳಿವೆ. ಅವು ವಿಜಯೇಂದ್ರ ಅವರನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ ಅಂತ ತಾನೇ?

ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ವಿಜಯೇಂದ್ರ ಅವರನ್ನು ಹಣಿಯುವ ಈ ಶಕ್ತಿಗಳ ಪ್ರಯತ್ನ ವ್ಯವಸ್ಥಿತವಾಗಿ ಮುಂದುವರಿಯಲಿದೆ ಎಂದಲ್ಲವೇ? ಹೀಗಾಗಿ ಯಡಿಯೂರಪ್ಪ ಅವರ ಆಪ್ತರು ಪರ್ಯಾಯ ರಾಜಕೀಯ ಶಕ್ತಿ ಮೇಲೇಳಲಿ ಅಂತ ಬಯಸುತ್ತಿದ್ದಾರೆ. ಇವತ್ತು ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳನ್ನು ನೋಡಿದರೆ ಸಿದ್ದರಾಮಯ್ಯ ಕೂಡ ಪಕ್ಷ ತೊರೆಯುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಹಾಗಾ ದಾಗ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಪರಸ್ಪರ ಕೈಗೂಡಿಸಿದರೆ ಡೆಡ್ಲಿ ಶಕ್ತಿಯೊಂದು ಉದ್ಭವವಾಗುತ್ತದೆ. ಅದು ಲಿಂಗಾಯತ ಪ್ಲಸ್ ಕುರುಬ ಶಕ್ತಿಯೊಂದಿಗೆ ಜಾತ್ಯತೀತ ನೆಲೆಗಟ್ಟಿನ ಮತಗಳನ್ನು ಪಡೆಯುವುದು ಅಸಂಭವವೇನಲ್ಲ. ಹಾಗಾದಾಗ ಸ್ವಯಂ ಶಕ್ತಿಯ ಮೂಲಕ ಅದು ಅಧಿಕಾರಕ್ಕೆ ಬರುತ್ತದೆ. ಒಂದು ವೇಳೆ ಇದು ಸಾಧ್ಯವಾ ಗದಿದ್ದರೂ ಈ ಶಕ್ತಿಯನ್ನು ಅವಲಂಬಿಸದೆ ಯಾರೂ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂಬುದು ಇಂತಹವರ ಅಭಿಪ್ರಾಯ.

ಅಂದ ಹಾಗೆ ಇದು ಸಾಧ್ಯವಾಗಿಬಿಡುತ್ತದೆ ಅಂತ ಈಗಲೇ ಹೇಳು ವುದು ಕಷ್ಟ. ಆದರೆ ಕರ್ನಾಟಕದ ನೆಲೆಯಲ್ಲಿ ಹೊಸಶಕ್ತಿಯೊಂದರ ಹುಟ್ಟಿಗೆ ಅಗತ್ಯವಾದ ಒತ್ತಡ ರೂಪುಗೊಂಡಿರುವುದು ಮಾತ್ರ ನಿಜ.

 

Tags:
error: Content is protected !!