Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಸುಪ್ರೀಂ ಆದೇಶ ವಿಶ್ವಾಸಾರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ಗಮನಾರ್ಹ

Darshan

ರೇಣುಕಸ್ವಾಮಿ ಕೊಲೆ ಆರೋಪಿಯಾಗಿರುವ ನಟ ದರ್ಶನ್ ಹೈಕೋರ್ಟ್‌ನಲ್ಲಿ ಜಾಮೀನು ಪಡೆದಿದ್ದರು. ಚಲನಚಿತ್ರ ವೊಂದರ ಚಿತ್ರೀಕರಣಕ್ಕಾಗಿ ವಿದೇಶಕ್ಕೂ ಹೋಗಿಬಂದರು. ಆದರೆ, ಸುಪ್ರೀಂಕೋರ್ಟ್ ದರ್ಶನ್ ಜಾಮೀನನ್ನು ರದ್ದುಪಡಿಸಿದೆ. ಹಾಗಾಗಿ ಅವರು ಮತ್ತೆ ಜೈಲು ಸೇರಿದ್ದಾರೆ. ಈ ಪ್ರಕರಣದ ಎಲ್ಲ ಆರೋಪಿಗಳ ಜಾಮೀನನ್ನೂ ಸುಪ್ರೀಂ ಕೋರ್ಟ್ ರದ್ದುಮಾಡಿದೆ. ಆ ಮೂಲಕ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಲ್ಲಿ ವಿಶ್ವಾಸಾರ್ಹತೆ ಹೆಚ್ಚಾಗುವಂತೆ ನಡೆದುಕೊಂಡಿದೆ.

೨೦೨೪ರ ಜೂನ್ ತಿಂಗಳಲ್ಲಿ ನಡೆದಿದ್ದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ೧೭ ಮಂದಿಯನ್ನು
ಪೊಲೀಸರು ಬಂಧಿಸಿದ್ದರು. ಜೈಲಿನಲ್ಲಿ ದರ್ಶನ್ ರೌಡಿಗಳೊಡನೆ ಹರಟೆ ಹೊಡೆಯುತ್ತಾ ಸಿಗರೇಟು ಸೇವನೆ ಮಾಡಿದ್ದು, ಹೊರಗಿನವರೊಂದಿಗೆ ವಾಟ್ಸಾಪ್ ಕರೆಯಲ್ಲಿ ಮಾತನಾಡಿದ್ದು ಕೋಲಾಹಲಕ್ಕೆ ಕಾರಣವಾಗಿದ್ದವು. ಕಾರಾಗೃಹದಲ್ಲಿ ಎಲ್ಲವೂ ಸಿಗುತ್ತವೆ ಎಂಬ ಮಾತುಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ಅ ವರನ್ನು ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಹಲವು ತಿಂಗಳುಗಳ ನಂತರ ಹೈಕೋರ್ಟ್‌ನಲ್ಲಿ ಅವರಿಗೆ
ಜಾಮೀನು ಲಭಿಸಿತ್ತು.

ಬೆನ್ನುಹುರಿಯಲ್ಲಿ ನೋವು, ಶಸ್ತ್ರಚಿಕಿತ್ಸೆ ಮಾಡಿಸಬೇಕುಎಂಬುದಾಗಿ ವೈದ್ಯಕೀಯ ಪ್ರಮಾಣ ಪತ್ರ ಪಡೆಯಲಾಗಿ ಕೆಲ ತಿಂಗಳು ತಾತ್ಕಾಲಿಕವಾಗಿ ದರ್ಶನ್ ಅವರಿಗೆ ಜಾಮೀನು ನೀಡಲಾಗಿತ್ತು. ನಂತರ ಪೂರ್ಣ ಪ್ರಮಾಣದ ಜಾಮೀನು ಲಭಿಸಿತ್ತು. ಆದರೆ, ದರ್ಶನ್ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಲ್ಲಿ ಉತ್ಸಾಹ ತೋರಿಸಿ  ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದನ್ನು ಮರೆತೇಬಿಟ್ಟರು. ಏತನ್ಮಧ್ಯೆ ಅವರಿಗೆ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳುವುದಕ್ಕೂ ಅನುಮತಿ ದೊರೆತಿತ್ತು. ಆದರೆ, ದರ್ಶನ್‌ಗೆ ಹೈಕೋರ್ಟ್ ಜಾಮೀನು ನೀಡಿದ್ದರ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತ್ತು. ಇತ್ತ ದರ್ಶನ್ ಮತ್ತು ಅವರ ಕುಟುಂಬದವರು
ಪ್ರತಿದಿನ ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ಕಳವಳದಿಂದಲೇ ಕಾಲ ಕಳೆದರು.

ಒಂದು ಹಂತದಲ್ಲಿ ಸುಪ್ರೀಂ ಕೋರ್ಟ್, ದರ್ಶನ್ ಮತ್ತು ಅವರ ಸಹಚರರಿಗೆ ಜಾಮೀನು ನೀಡಿದ ಹೈಕೋರ್ಟ್ ವಿರುದ್ಧ ಕೆಂಡಾಮಂಡಲ ಆಗಿಬಿಟ್ಟಿತ್ತು. ನೇರ, ನಿಷ್ಠೂರ ಮಾತುಗಳಿಂದ ದರ್ಶನ್‌ಗೆ ಜಾಮೀನು ನೀಡಿದ್ದ ಹೈಕೋರ್ಟ್ ನಿಲುವನ್ನು ಖಂಡಿಸಿತ್ತು. ದರ್ಶನ್ ಅವರಿಗೆ ಜಾಮೀನು ನೀಡಿರುವುದನ್ನು ಗಮನಿಸಿದರೆ,  ಮುಂದೆ ಈ ಪ್ರಕರಣದಿಂದ ಅವರನ್ನು ಖುಲಾಸೆ ಮಾಡುವ ಲಕ್ಷಣಗಳು ಗೋಚರಿಸಿವೆ ಎಂದು ಖಾರವಾಗಿ ಅಭಿಪ್ರಾಯಪಟ್ಟಿತ್ತು.

ಸುಪ್ರೀಂ ಕೋರ್ಟ್ ನಡೆಯು ದರ್ಶನ್ ಅವರ ಜಾಮೀನು ರದ್ದಾಗುವುದನ್ನು ಖಚಿತಪಡಿಸಿದಂತೆಯೇ ಇತ್ತು.ರೇಣುಕಸ್ವಾಮಿ ಅವರ ಪೋಷಕರಲ್ಲಿ ತಮಗೆ ನ್ಯಾಯ ಸಿಗುವ ಭರವಸೆಯ ಬೆಳ್ಳಿಕಿರಣ ಮೂಡಿತ್ತು. ಸುಪ್ರೀಂ ಕೋರ್ಟ್ ರೇಣುಕಸ್ವಾಮಿ ಪ್ರಕರಣವನ್ನು ಶೀಘ್ರವಾಗಿ ಮುಕ್ತಾಯಗೊಳಿಸುವಂತೆಯೂ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ. ಸದ್ಯದ ಪರಿಸ್ಥಿತಿಯಲ್ಲಿ ದರ್ಶನ್ ಅವರು ಜಾಮೀನಿಗೆ ಅರ್ಜಿ ಸಲ್ಲಿಸುವ ಅವಕಾಶ ಇಲ್ಲ. ಕನಿಷ್ಠ ೬ ತಿಂಗಳ ನಂತರ ಜಾಮೀನು ನೀಡುವಂತೆ ಸುಪ್ರೀಂ ಕೋರ್ಟ್‌ನ್ನೇ ಕೋರಬೇಕು. ದರ್ಶನ್ ಅವರು ಕಡುಕಷ್ಟದಲ್ಲೇ ಚಿತ್ರರಂಗದಲ್ಲಿ ಬೆಳೆದು ಬಂದವರು. ದರ್ಶನ್ ಅವರ ಮುಂದಿನ ಜೀವನವನ್ನು ಈ ಪ್ರಕರಣ ಮುಳುಗಿಸುತ್ತದೋ  ತೇಲಿಸುತ್ತದೋ ಕಾದು ನೋಡಬೇಕಾಗಿದೆ.

ರೇಣುಕಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದರ್ಶನ್ ಮತ್ತಿತರ ಆರೋಪಿಗಳ ಜಾಮೀನನ್ನು ರದ್ದು ಪಡಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ನಂಬಿಕೆಯನ್ನು ಹೆಚ್ಚಿಸಿದೆ.

Tags:
error: Content is protected !!