- ಆರ್.ಟಿ ವಿಠ್ಠಲಮೂರ್ತಿ
ವ್ಯವಸ್ತೆಯನ್ನು ಸಮತೋಲನದಲ್ಲಿಡಲು ಸಹಾಯಕವಾಗುವ ಸಾಮಾಜಿಕ ನ್ಯಾಯಕ್ಕೆ ಅಡಿಪಾಯ ಹಾಕಬೇಕು. ಆದರೆ ರೆಕ್ಕೆ ಕಟ್ಟಬಾರದು. ಒಂದು ವೇಳೆ ರೆಕ್ಕೆ ಕಟ್ಟಿದರೆ ಅದು ಸಾಮಾಜಿಕ ನ್ಯಾಯದ ಮೂಲೋದ್ದೇಶವನ್ನು ಮರೆತು ಶ್ವೇಚ್‌ಚಾರಕ್ಕೆ ದಾರಿ ಮಾಡಿಕೊಡಬಹುದು. ಇತ್ತೀಚಿನ ದಿನಗಳಲ್ಲಿ ಇಂತಹ ಮಾತು ಸಿದ್ದರಾಮಯ್ಯ ಸರ್ಕಾರಕ್ಕೆ ಹೆಚ್ಚೆಚ್ಚು ಮನದಟ್ಟಾಗುತ್ತಿದೆ. ಮೊನ್ನೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಸಚಿವರಾಡಿದ ಮಾತುಗಳು ಇದನ್ನೇ ಕೆದಕಿ ಹೇಳಿದಂತಿವೆ. ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲಗುಬಗೆಯಿಂದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತು. ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಗೃಹಿಣಿಯರಿಗೆ ಮಾಸಿಕ ಎರಡು ಸಾವಿರ ರೂಪಾಯಿ ನೀಡುವುದು, ಗೃಹಜ್ಯೋತಿ ಯೋಜನೆಯಡಿ ಇನ್ನೂರು ಮೆಗಾವ್ಯಾಟ್ ವರೆಗೆ ಜನರಿಗೆ ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆಯಡಿ ಹತ್ತು ಕೆಜಿ ಅಕ್ಕಿ ಯುವನಿಧಿಯಡಿ ನಿರುದ್ಯೋಗ ಭತ್ಯೆ ನೀಡುವುದೂ ಸೇರಿದಂತೆ ಅದು ಜಾರಿಗೊಳಿಸಿದ ಐದು ಗ್ಯಾರಂಟಿ ಯೋಜ ನೆಗಳು ಸಾಮಾಜಿಕ ನ್ಯಾಯದ ಉದ್ದೇಶಕ್ಕೆ ಪೂರಕವಾಗಿದ್ದವು ಎಂಬುದು ನಿಜ.
ಇದೇ ರೀತಿ ಈ ಗ್ಯಾರಂಟಿ ಯೋಜನೆಗಳು ಜಾರಿಗೊಂಡ ನಂತರ ನಾಡಿನ ಬಹಳಷ್ಟು ಜನರಿಗೆ ಆರ್ಥಿಕ ಭದ್ರತೆ ದಕ್ಕಿದ್ದು ನಿಜ. ಆದರೆ ಒಂದು ವರ್ಷದ ನಂತರ ಪರಿಸ್ಥಿತಿ ಏನಾಗಿದೆ ಎಂದರೆ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ಬಸವಳಿದಿದೆ. ಸಮಸ್ಯೆ ಎಂದರೆ ಇಂತಹ ಗ್ಯಾರಂಟಿ ಯೋಜನೆಗಳಿಂದ ಆಗಿರುವ ಅನು ಕೂಲವನ್ನಷ್ಟೇ ಪರಿಗಣಿಸುತ್ತಿರುವಕಾಂಗ್ರೆಸ್ ವರಿಷ್ಠರು ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಮಾತೂ ಆಡಬೇಡಿ ಎನ್ನುತ್ತಿದ್ದಾರೆ.
ಅವರ ಚಿಂತೆ ಎಂದರೆ ಇಂತಹ ಗ್ಯಾರಂಟಿ ಯೋಜನೆಗಳನ್ನು ಒಂದು ಪ್ರಮಾಣದಲ್ಲಿ ಕಡಿತ ಮಾಡಿದರೆ ಅದರಿಂದ ದೇಶದ ಜನರಿಗೆ ಹೋಗುವ ಸಂದೇಶವಾದರೂ ಏನು ಎಂಬುದು. ಮಹಾರಾಷ್ಟ್ರ ಸೇರಿದಂತೆ ಕೆಲ ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರವಾಗಿರುವ ಸಂದರ್ಭದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ಕಡಿತ ಮಾಡಿದೆ. ಎಂಬ ಸಂದೇಶ ರವಾನೆಯಾದರೆ ಅಲ್ಲಿನ ಮತದಾರರು ಕಾಂಗ್ರೆಸ್ ಪಕ್ಷವನ್ನು ನಂಬುವುದಿಲ್ಲ ಎಂಬುದು ಕಾಂಗ್ರೆಸ್
ನಾಯಕರ ಚಿಂತೆ.
ಆದರೆ ಇಂತಹ ಗ್ಯಾರಂಟಿಗಳನ್ನು ಘೋಷಿಸಿ ಕರ್ನಾಟಕದಲ್ಲಿ ಜಾರಿಗೆ ತಂದ ನಂತರ ನೆರೆಯ ತೆಲಂಗಾಣ ರಾಜ್ಯದಲ್ಲೂ ಅದರ ಪರಿಣಾಮ ಕಾಣಿಸಿಕೊಂಡಿತು. ಅರ್ಥಾತ್, ತೆಲಂಗಾಣದಲ್ಲಿ ರೇವಂತ್ ರೆಡ್ಡಿನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು. ಹೀಗಾಗಿ ಮಹಾರಾಷ್ಟ್ರ ಮತ್ತಿತರ ರಾಜ್ಯಗಳ ವಿಧಾನಸಭಾ ಚುನಾವಣೆ ಯನ್ನು ಎದುರಿಗಿಟ್ಟುಕೊಂಡು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಕಡಿತ ಹಾಕುವುದು ಬೇಡ ಎಂಬುದು ಕಾಂಗ್ರೆಸ್ ವರಿಷ್ಠರ ಸೂಚನೆ. ಆದರೆ ವಾಸ್ತವ ಎಂದರೆ ಇತ್ತೀಚೆಗೆ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಪರದಾಡತೊಡಗಿದೆ. ಅಷ್ಟೇ ಅಲ್ಲ, ಇದಕ್ಕೆ ಅಗತ್ಯವಾದ ಹಣಕಾಸನ್ನು ಹೊಂದಿಸುವ ಮಾರ್ಗ ತಿಳಿಯದೆ ಕಕ್ಕಾಬಿಕ್ಕಿಯಾಗಿದೆ. ಇದರ ಪರಿಣಾಮ ಏನಾಗಿದೆ ಎಂದರೆ ತೆಲಂಗಾಣದಲ್ಲಿ ಸರ್ಕಾರದ ಬಗ್ಗೆ ಭ್ರಮ ನಿರಸನ ಮೂಡತೊಡಗಿದೆ. ಇಂತಹ ಸನ್ನಿವೇಶವನ್ನು ಬಿಜೆಪಿಯ ವರಿಷ್ಠರು ಬಳಸಿಕೊಳ್ಳದೆ ಇರುತ್ತಾರೆಯೇ?
ಅಂದ ಹಾಗೆ ದೆಹಲಿಯ ಅಬಕಾರಿ ನೀತಿಯ ಹಗರಣದಲ್ಲಿ ಬಿಎಸ್‌ಆರ್ ಪಕ್ಷದ ನಾಯಕ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರ ಪುತ್ರಿಯ ಬಂಧನವಾಗಿದೆ. ಈ ಹಗರಣದಿಂದ ತಮ್ಮ ಪುತ್ರಿಯನ್ನು ಹೊರತರಲು ಕೆ.ಚಂದ್ರಶೇಖರರಾವ್ ಹರಸಾಹಸ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ಹೀಗೆ ತಮ್ಮ ಪುತ್ರಿಯನ್ನು ಅಬಕಾರಿ ಹಗರಣದಿಂದ ಹೊರತರಲು ಕೆ. ಚಂದ್ರಶೇಖರರಾವ್ ಅವರಿಗಿರುವ ಮಾರ್ಗ ಎಂದರೆ ಬಿಜೆಪಿ ಜತೆ ಕೈ ಜೋಡಿ ಸುವುದು. ಸದ್ಯದ ಸ್ಥಿತಿಯಲ್ಲಿ ಅವರ ಪಕ್ಷ ಅಧಿಕಾರದಲ್ಲೂ ಇಲ್ಲ. ಹೀಗಾಗಿ ಅವರು ಮುಂದಿನ ಒಂದೆರಡು ತಿಂಗಳಲ್ಲಿ ಬಿಜೆಪಿ ಜತೆ ಅಧಿಕೃತವಾಗಿ ಕೈ ಜೋಡಿಸುವ ಸಾಧ್ಯತೆ ಇದೆ. ಒಂದು ವೇಳೆ ಇದು ಸಾಧ್ಯವಾದರೆ ತಕ್ಷಣವೇ ಸಮಸ್ಯೆ ಎದು ರಾಗುವುದು ತೆಲಂಗಾಣದ ಕಾಂಗ್ರೆಸ್ ಸರ್ಕಾರಕ್ಕೆ ಅಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿರುವುದು ಹೌದಾದರೂ ಭರ್ಜರಿ ಬಹುಮತದಿಂದೇನೂ ಅದು ನೆಲೆಯಾ ಗಿಲ್ಲ. ಈಗಿರುವ ಸ್ಥಿತಿಯಲ್ಲಿ ಕೆಲವೇ ಮಂದಿ ಶಾಸಕರನ್ನು ಹೊರಗೆಳೆದರೂ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಉರುಳುತ್ತದೆ. ಬಿಜೆಪಿ, ಬಿಎಸ್‌ಆರ್ ಮತ್ತು ಕಾಂಗ್ರೆಸ್‌ನಿಂದ ಹೊರಬಂದ ಶಾಸಕರು ಸೇರಿ ಪರ್ಯಾಯ ಸರ್ಕಾರ ರಚನೆ ಮಾಡಬಹುದಾಗಿದೆ. ಇದು ತೆಲಂಗಾಣದ ಸದ್ಯದ ಸ್ಥಿತಿ.
ಮೊದಲನೆಯದಾಗಿ ಇಂತಹ ಪರಿಸ್ಥಿತಿ ಎದುರಾದರೆ ತೆಲಂಗಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತದೆ ಎನ್ನುವುದು ಕಷ್ಟ ಏಕೆಂದರೆ ಚುನಾವಣೆಯ ಸಂದರ್ಭದಲ್ಲಿ ತಾನು ನೀಡಿದ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಅಲ್ಲಿನ ಕಾಂಗ್ರೆಸ್ ಸರ್ಕಾರ ಪರದಾಡುತ್ತಿದೆ. ಆ ಮೂಲಕ ಜನರಲ್ಲಿ ಭ್ರಮ ನಿರಸನ ಉಂಟುಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅದರ ಪರಿಸ್ಥಿತಿ ಕಷ್ಟವಿದೆ.
ತೆಲಂಗಾಣದ ಈ ಬೆಳವಣಿಗೆಯನ್ನು ಏಕೆ ಗಮನಿಸಬೇಕೆಂದರೆ ಮುಂದಿನ ದಿನಗಳಲ್ಲಿ ಕರ್ನಾಟಕದ ಸ್ಥಿತಿಯೂ ಹೀಗಾಗಬಾರದು ಎಂಬ ಕಾರಣಕ್ಕಾಗಿ
ಸದ್ಯದ ಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಸ್ವತಃ ಆರ್ಥಿಕ ತಜ್ಞರಾಗಿರುವುದರಿಂದ ಸನ್ನಿವೇಶವನ್ನು ತೂಗಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಜಿಎಸ್‌ಟಿ ಪದ್ಧತಿ ಜಾರಿಗೆ ಬಂದ ನಂತರರಾಜ್ಯ ಸರ್ಕಾರದ ಆದಾಯ ಮೂಲಗಳು ಕುಸಿದಿದ್ದು, ಜಿಎಸ್‌ಟಿ ಸಂಗ್ರಹಿಸುವ ಕೇಂದ್ರ ಸರ್ಕಾರ ಅದರಲ್ಲಿ ನೀಡುವ ಪಾಲು ಸೇರಿದಂತೆ ಸೀಮಿತ ಸಂಪನ್ಮೂಲಗಳಿಂದ ಅದು ಸುಸ್ತಾಗಿ ಕುಳಿತಿದೆ. ಹೀಗಾಗಿ ಹಲವು ಮೂಲಗಳಿಂದ ಅದು ಹೆಚ್ಚುವರಿ ತೆರಿಗೆ ಸಂಗ್ರಹಿಸುವ ಯತ್ನ ಮಾಡುತ್ತಿದೆಯಾದರೂ ಪರಿಸ್ಥಿತಿಯನ್ನು ಸರಿಹೊಂದಿಸುವುದು ಕಷ್ಟವಾಗು ತ್ತಿದೆ. ಇವತ್ತು ಐದು ಗ್ಯಾರಂಟಿ ಯೋಜನೆಗಳಿಗೆ ಅದು ಅರವತೈದು ಸಾವಿರ ಕೋಟಿ ರೂಪಾಯಿ ಒದಗಿಸಬೇಕು. ಈ ಮಧ್ಯೆ ಸರ್ಕಾರದ ಯೋಜನೇತರ ವೆಚ್ಚಗಳಿಗಾಗಿ ಒಂದೂವರೆ ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣ ಹೊಂದಿಸಬೇಕು. ಹೀಗೆ ಸರ್ಕಾರದ ವೆಚ್ಚಗಳು ಒಂದೇ ಸಮನೆ ಏರುತ್ತಿದ್ದರೆ, ಅಭಿವೃದ್ಧಿ ಕೆಲಸಗಳಿಗೆ ಅದು ಎಲ್ಲಿಂದ ಹಣ ಕೊಡಲು ಸಾಧ್ಯ?
ವಸ್ತುಸ್ಥಿತಿ ಎಂದರೆ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಪ್ರತಿ ಸಭೆಯಲ್ಲೂ ಶಾಸಕರು ದಂಗೆಯ ಮನಃಸ್ಥಿತಿಯನ್ನು ತೋರಿಸಿದ್ದಾರೆ. ತಾವು ಪ್ರತಿನಿಧಿಸಿರುವ ಕ್ಷೇತ್ರಗಳಿಗೆ ಅಗತ್ಯದ ಅನುದಾನ ಸಿಗುತ್ತಿಲ್ಲ ಎಂಬುದು ಅವರ ಅಸಮಾಧಾನಕ್ಕೆ ಕಾರಣ. ಅಂದಹಾಗೆ ಶಾಸಕರಾದರೂ ಅನುದಾನ ಸಿಗದೆ ಇದ್ದರೆ ಏನು ಮಾಡಬೇಕು? ಅವರನ್ನು ಆಯ್ಕೆ ಮಾಡಿದ ಕ್ಷೇತ್ರದ ಜನ ಗ್ಯಾರಂಟಿ ಯೋಜನೆಗಳ ಲಾಭ ಪಡೆದಿದ್ದಾರೆ ಎಂಬ ಕಾರಣಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಲು ಸಾಧ್ಯವಿಲ್ಲವಲ್ಲ. ಕನಿಷ್ಠ ಪಕ್ಷ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರಿನಂತಹ ಸಮಸ್ಯೆಗಳನ್ನು ಪರಿಹರಿಸಲೂ ದುಡ್ಡಿಲ್ಲ ಎಂದರೆ ಶಾಸಕರಾದವರು ಏನು ಮಾಡಬೇಕು? ಇದನ್ನೇ ಪಕ್ಷದಶಾಸಕಾಂಗಸಭೆಯಲ್ಲಿ ಅವರು ಹೇಳತೊಡಗಿದರು. ಕನಿಷ್ಠ ಪಕ್ಷ ಇಂತಹ ಅಗತ್ಯಗಳಿಗೂ ಸ್ಪಂದಿಸದ ಹಲವು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸತೊಡಗಿದರು. ಹಿಂದಿದ್ದ ಬಿಜೆಪಿ ಸರ್ಕಾರ ಬೊಕ್ಕಸ ಖಾಲಿ ಮಾಡಿಹೋಗಿರುವುದರಿಂದ ಒಂದು ವರ್ಷದ ಮಟ್ಟಿಗೆ ಸಮಾಧಾನ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿಗಳು ಶಾಸಕರಿಗೇನೋ ಹೇಳಿದರು.
ಆದರೆ ಒಂದು ವರ್ಷ ಕಳೆದರೂ ಪರಿಸ್ಥಿತಿ ಬದಲಾಗಿಲ್ಲ. ಪರಿಣಾಮ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಪಕ್ಷಾಂತರಕ್ಕೆ ಅಣಿಯಾಗುತ್ತಿದ್ದಾರೆ. ಸೂಕ್ತ ಕಾಲದಲ್ಲಿ ಅವರಿಗೆ ಬಿಜೆಪಿ ವರಿಷ್ಠರ ಸೂಚನೆ ಸಿಕ್ಕರೆ ಆ ಕಡೆ ವಾಲಲು ಅವರು ತಯಾರಾಗಿದ್ದಾರೆ. ಯಥಾಪ್ರಕಾರ ಇದಕ್ಕೆ ದುಡ್ಡಿನ ಸಮಸ್ಯೆಯೇ ಕಾರಣ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಏನು ಮಾಡಬಹುದು? ತನ್ನ ಗ್ಯಾರಂಟಿಗಳನ್ನು ಒಂದು ಮಟ್ಟದಲ್ಲಿ ಪರಿಷ್ಕರಿಸಲು ಅದು ಮುಂದಾಗಲೇಬೇಕು. ಅಂದ ಹಾಗೆ ಗೃಹಲಕ್ಷ್ಮಿ, ಗೃಹಜ್ಯೋತಿ ಅನ್ನಭಾಗ್ಯದಂತಹ ಯೋಜನೆಗಳನ್ನೇ ತೆಗೆದುಕೊಳ್ಳಿ. ಇವು ಸಾರ್ವತ್ರಿಕವಾಗಿ ಎಲ್ಲರಿಗೂ ಲಭ್ಯವಾಗುತ್ತಿರುವ ಯೋಜನೆಗಳು. ಇವನ್ನು ಅಶಕ್ತರಷ್ಟೇ ಅಲ್ಲ, ಶಕ್ತರೂ ಪಡೆಯುತ್ತಿದ್ದಾರೆ. ಹೀಗೆ ಸರ್ಕಾರದ ಯೋಜನೆಗಳನ್ನು ಅಶಕ್ತರ ಜತೆ ಶಕ್ತರೂ ಪಡೆಯುತ್ತಿರುವುದು ಎಂದರೆ ಸಾಮಾಜಿಕ ನ್ಯಾಯಕ್ಕೆ ರೆಕ್ಕೆ ಕಟ್ಟುವ ಕೆಲಸವಾಗಿದೆ ಎಂದೇ ಅರ್ಥ, ಸರ್ಕಾರ ಮನದಟ್ಟು ಮಾಡಿಕೊಳ್ಳಬೇಕಾದ ಅಂಶ ಎಂದರೆ ಮನುಷ್ಯನಲ್ಲಿರುವ ಸಂಗ್ರಹದ ಗುಣ ಯಾವ ಮಟ್ಟಕ್ಕಿದೆ ಎಂದರೆ, ಉಳ್ಳ ಮಗೂ ಇಂತಹ ಯೋಜನೆಗಳ ಮೂಲಕ ನಾಲೈದು ಸಾವಿರ ರೂ. ದೊರೆಯುತ್ತದೆ ಎಂದರೆ ಅವನ್ನು ಸಂಗ್ರಹಮಾಡಿಟ್ಟುಕೊಳ್ಳುವ ಗುಣವನ್ನು ಬಳಸಿಕೊಳ್ಳುತ್ತಾರೆ.
ಇವತ್ತಿನ ಸ್ಥಿತಿಯಲ್ಲಿ ಇದನ್ನು ತಪ್ಪು ಎನ್ನಲು ಸಾಧ್ಯವಿಲ್ಲ. ಏಕೆಂದರೆ ಸರ್ಕಾರ ತಾನಾಗಿಯೇ ಕೊಟ್ಟರೆ ನಾವೇಕೆ ಬೇಡ ಎನ್ನೋಣ ಎಂಬ ಮನಸ್ಥಿತಿ ಬಹುತೇಕ ಉಳ್ಳವರಲ್ಲೂ ಇರುತ್ತದೆ. ಹೀಗಾಗಿ ಸಾಮಾಜಿಕ ನ್ಯಾಯವೇ ಸರ್ಕಾರದ ಉದ್ದೇಶವಾದರೆ ಗ್ಯಾರಂಟಿ ಯೋಜನೆಗಳನ್ನು ದುರ್ಬಲರಿಗೆ ನೀಡುವ ಕೆಲಸವನ್ನು ಮಾಡಬೇಕು. ಹಾಗೆ ಮಾಡದಿದ್ದರೆ ಉಳ್ಳವರ ಜತೆಗೆ ಇಲ್ಲದಿರುವವರನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶವೇನಿದೆ ಅದೇ ಹಾಸ್ಯಾಸ್ಪದವಾಗುತ್ತದೆ. ಈಗ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸಬೇಕು ಎಂಬ ಮಾತುಗಳೇನಿವೆ ಅದರ ಆಶಯವೇ ಇದು.





