Mysore
26
broken clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಎಚ್‌ಐವಿ ಪಾಸಿಟಿವ್ ಮಕ್ಕಳ ಮಂಗಳಾ ತಾಯ್

  • ಪಂಜು ಗಂಗೊಳ್ಳಿ

2001 ರ ಮಾರ್ಚ್ ತಿಂಗಳ ಒಂದು ದಿನ ಮಂಗಳಾ ಅರುಣ್ ಶಾ ಮತ್ತು ಅವರ ಮಗಳು ಡಿಂಪಲ್ ಮಹಾರಾಷ್ಟ್ರದ ಪಂಡರಾಪುರದಲ್ಲಿ ವೇಶ್ಯಯರಿಗೆ ಎಚ್‌ಐವಿ ಅಥವಾ ಏಡ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಆಗ ಯಾರೋ ಒಬ್ಬರು ಅವರ ಬಳಿ ಬಂದು ಹತ್ತಿರದ ಹಳ್ಳಿಯಲ್ಲಿ ಚಿಕ್ಕ ಮಕ್ಕಳಿಬ್ಬರನ್ನು ಯಾರೋ ದನದ ಕೊಟ್ಟಿಗೆಯಲ್ಲಿ ಅನಾಥವಾಗಿ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದರು. ಅದನ್ನು ಕೇಳಿ ಮಂಗಳಾ ಅರುಣ್ ಶಾ ಮತ್ತು ಡಿಂಪಲ್ ಆ ಹಳ್ಳಿಗೆ ಹೋಗಿ ಹಟ್ಟಿಯಲ್ಲಿ ನೋಡಿದಾಗ ಸುಮಾರು ಎರಡೂವರೆ ಮತ್ತು ಒಂದೂವರೆ ವರ್ಷ ಪ್ರಾಯದ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಕರುಣಾಜನಕ ಸ್ಥಿತಿಯಲ್ಲಿ ಇರುವುದು ಕಾಣಿಸಿತು. ಆಚೀಚೆಯ ವರನ್ನು ವಿಚಾರಿಸಿದಾಗ ಅವರಿಗೆ ತಿಳಿದು ಬಂದದ್ದು ಇಷ್ಟು- ಆ ಮಕ್ಕಳ ತಂದೆ ತಾಯಿ ಏಡ್ಸ್‌ ತಗುಲಿ ತೀರಿಕೊಂಡಿದ್ದಾರೆ. ಆ ಮಕ್ಕಳಿಗೂ ಎಚ್‌ಐವಿ ಸೋಂಕು ತಗುಲಿತ್ತು. ಅವರ ಸಂಬಂಧಿಕರು ಆ ಮಕ್ಕಳು ಮನೆಗೆ ಕಳಂಕ ತರುತ್ತಾರೆ ಮತ್ತು ಇತರರಿಗೂ ಸೋಂಕು ಹರಡುತ್ತಾರೆ ಎಂದು ಹೇಳಿ, ಆ ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದರು. ಹಾಗಾಗಿ ಆ ಮಕ್ಕಳು ಆ ಹಟ್ಟಿಯಲ್ಲಿ ಇದ್ದಾರೆ.

ಮಂಗಳಾ ಆ ಮಕ್ಕಳ ಪರಿಸ್ಥಿತಿ ನೋಡಿ ದುಃಖಗೊಂಡು, ಅವರನ್ನು ವಾಪಸ್ ಮನೆಗೆ ಕರೆದುಕೊಳ್ಳಿ ಎಂದು ಎಷ್ಟು ಬೇಡಿಕೊಂಡರೂ ಆ ಮಕ್ಕಳ ಸಂಬಂಧಿಕರಾಗಲೀ, ಗ್ರಾಮಸ್ಥರಾಗಲೀ ಒಪ್ಪಲಿಲ್ಲ. ಆಗ ಮಂಗಳಾ ಮತ್ತು ಡಿಂಪಲ್ ಆ ಮಕ್ಕಳನ್ನು ತಮ್ಮೊಂದಿಗೆ ಮನೆಗೆ ಕರೆ ತಂದರು. ಮನೆಯಲ್ಲಿ ಅವರಿಗೆ ಸ್ನಾನ ಮಾಡಿಸಿ, ಬೇರೆ ಬಟ್ಟೆ ಉಡಿಸಿದರು, ಉಣ್ಣಿಸಿದರು. ಕೆಲವು ದಿನಗಳ ನಂತರ ಆ ಮಕ್ಕಳಿಗೆ ಖಾಯಂ ಆಶ್ರಯ ಕೊಡಿಸುವ ಸಲುವಾಗಿ, ಮೊದಲಿಗೆ, ಸೋಲಾಪುರ ಜಿಲ್ಲೆ, ನಂತರ ಇಡೀ ಮಹಾರಾಷ್ಟ್ರದ ಸರ್ಕಾರೇತರ, ಸಾಮಾಜಿಕ ಸಂಸ್ಥೆಗಳನ್ನು ಕೇಳಿಕೊಂಡರೂ ಎಲ್ಲರೂ ನಿರಾಕರಿಸಿದರು. ಆಗ ಮಂಗಳಾ ಆ ಎಳೆಯ ಮಕ್ಕಳನ್ನು ದಾರಿ ಮೇಲೆ ಬಿಡಲು ಮನಸ್ಸು ಬಾರದೆ ತಾವೇ ಸಾಕಿ ಬೆಳೆಸಲು ನಿರ್ಧರಿಸಿದರು. ಮಂಗಳಾರ ಗಂಡ ಮತ್ತು ಮಕ್ಕಳು ಎಚ್‌ಐವಿ ಸೋಂಕು ತಗುಲಿರುವ ಮಕ್ಕಳನ್ನು ಮನೆಯಲ್ಲಿಟ್ಟು ಸಾಕುವುದರ ಬಗ್ಗೆ ಆಚೀಚಿನವರು ಏನು ಹೇಳಬಹುದು ಎಂದು ಮೊದಲಿಗೆ ತುಸು ಅಧೈರ್ಯಗೊಂಡರೂ ನಂತರ ಮಂಗಳಾರ ತೀರ್ಮಾನವನ್ನು ಸ್ವಾಗತಿಸಿ ಅವರೊಂದಿಗೆ ನಿಂತರು.

72 ವರ್ಷ ಪ್ರಾಯದ ಮಂಗಳಾ ಸೋಲಾಪುರದ ಬಾರ್ಶಿ ಜಿಲ್ಲೆಯ ಒಂದು ಸಾಧಾರಣ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದವರು. ಅವರಿಗೆ 16 ವರ್ಷವಾದಾಗ ಮದುವೆ ಮಾಡಲಾಯಿತು. ತನ್ನ ತಾಯಿಯಿಂದ ಓದುವ ಅಭ್ಯಾಸ ಬೆಳೆಸಿಕೊಂಡಿದ್ದ ಮಂಗಳಾ ಬಾಲ್ಯದಿಂದಲೂ ಸ್ವಾಮಿ ವಿವೇಕಾನಂದ, ಬಾಬಾ ಅಮೈ, ಮದರ್ ಥೆರೇಸಾ ಮೊದಲಾದವರ ಜೀವನ ಕತೆಗಳನ್ನು ಓದಿ ಪ್ರಭಾವಿತರಾದವರು. ತಾನು ಮದುವೆಯಾದ ವರ್ಷದಿಂದಲೇ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ಸೋಲಾಪುರದಲ್ಲಿ ಅನಾಥಾಶ್ರಮಗಳಿಗೆ ಹೋಗಿ ಕೆಲಸ ಮಾಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ನರ್ಸ್ ಆಗಿ ರೋಗಿಗಳ ಸೇವೆ ಮಾಡಿದರು. ಕುಷ್ಟ ರೋಗಿಗಳ ಆರೈಕೆ ಮಾಡಿದರು. ಏಡ್ಸ್ ಅಥವಾ ಎಚ್‌ಐವಿ ಸೋಂಕಿತರಿಗೆ ಸಹಾಯ ಮಾಡಿದರು. ಅನಾಥ ಮಹಿಳೆಯರಿಗಾಗಿ ಅಡುಗೆ ಮನೆ ತೆರೆದರು. ಸೋಲಾಪುರದ ರೆಡ್ ಲೈಟ್ ಪ್ರದೇಶಗಳಿಗೆ ಹೋಗಿ ವೇಶ್ಯಯರಿಗೆ ಏಡ್ಸ್ ಅಥವಾ ಎಚ್‌ಐವಿ ಬಗ್ಗೆ ಅರಿವು ಮೂಡಿಸಿದರು. ಮುಂದೆ ಡಿಂಪಲ್ ಹುಟ್ಟಿ ಅವಳಿಗೆ ಹತ್ತು ವರ್ಷ ತುಂಬಿದಾಗ ಅವಳನ್ನೂ ತನ್ನ ಜೊತೆ ಸಾಮಾಜಿಕ ಕೆಲಸಗಳಿಗೆ ಕರೆದುಕೊಂಡು ಹೋಗುತ್ತಿದ್ದರು.

ಅಂದು ಆಎರಡು ಎಚ್‌ಐವಿ ಮಕ್ಕಳನ್ನು ಮನೆಗೆ ಕರೆತಂದು ಸಾಕ ತೊಡಗಿದ ಮಂಗಳಾ ಇಂದು ಆ ಮಕ್ಕಳಂತೆಯೇ ಎಚ್‌ ಐವಿ ಸೋಂಕಿತರಾದ 125 ಮಕ್ಕಳನ್ನು ಸಾಕುತ್ತಿದ್ದಾರೆ. ಆ ಮಕ್ಕಳನ್ನು ಸಾಕುವ ಸಲುವಾಗಿಯೇ ಪಂಡರಾಪುರದ ಹತ್ತಿರದ ಟ್ಯಾಕ್ಸಿ ಎಂಬಲ್ಲಿ ‘ಪಾಲವಿ’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಕಟ್ಟಿ ನಡೆಸುತ್ತಿದ್ದಾರೆ. ಪಾಲವಿ ಮಹಾರಾಷ್ಟ್ರದಲ್ಲಿ ಎಚ್‌ ಐವಿ ಪಾಸಿಟಿವ್ ಮಕ್ಕಳಿಗಾಗಿ ತೆರೆದ ಮೊತ್ತ ಮೊದಲ ಸಂಸ್ಥೆ, ಮಂಗಳಾ ಅರುಣ್ ಶಾ ಈಗ ಆ ಮಕ್ಕಳಿಗೆ ಪ್ರೀತಿಯ ಮಂಗಳಾ ತಾಯ್ (ಮರಾಠಿಯಲ್ಲಿ ತಾಯ್ ಅಂದರೆ ಅಕ್ಕ).

ಪಾಲವಿಯನ್ನು ಶುರು ಮಾಡಲು ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಅವರು ಎಚ್‌ಐವಿ ಸೋಂಕಿತ ಮಕ್ಕಳನ್ನು ಇಟ್ಟುಕೊಂಡು ಸಾಕುವುದನ್ನು ತಿಳಿದಾಗ ಅಕ್ಕಪಕ್ಕದವರು ಮತ್ತು ಅವರ ಸಮುದಾಯದವರು ಮಂಗಳಾರಿಗೆ ಬಹಿಷ್ಠಾರ ಹಾಕಿದರು. ಕೆಲವರು ಪ್ರತಿಭಟಿಸಿದರು. ಹಲವರು ಅವರ ಎದುರಿಗೇ ಬೈದರು. ಹಲವು ಬಾರಿ ಅವರ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಆದರೆ, ಮಂಗಳಾ ತಾಮ್ ಅದ್ಯಾವುದರಿಂದಲೂ ಧೃತಿಗೆಡದೆ ಮುನ್ನಡೆದರು. 2001 ರಿಂದ 2004ರವರೆಗೆ ಚಿಕ್ಕದೊಂದು ಬಾಡಿಗೆ ಜಾಗದಲ್ಲಿ ಪಾಲವಿಯನ್ನು ನಡೆಸಿದರು. ಆಗ ಅವರು ಎಂಟು ಎಚ್‌ಐವಿ ಸೋಂಕಿತ ಮಕ್ಕಳನ್ನು ಸಾಕುತ್ತಿದ್ದರು. ಮುಂದೆ, ಮಕ್ಕಳ ಸಂಖ್ಯೆ ಹೆಚ್ಚಿದಾಗ ಸ್ವಂತದ್ದೊಂದು ಜಾಗ ಖರೀದಿಸಿ, ಅದರಲ್ಲಿ ಆಶ್ರಮ ಕಟ್ಟಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಈ ಮಕ್ಕಳು 4 ರಿಂದ 21 ವರ್ಷ ಪ್ರಾಯದೊಳಗಿನವರು. ಪ್ರಾರಂಭದಲ್ಲಿ ಮಂಗಳಾ ತಾಯ್‌ಯನ್ನು ವಿರೋಧಿಸುತ್ತಿದ್ದ ಹಳ್ಳಿಗರು ನಂತರ ಅವರ ನಿಸ್ವಾರ್ಥ ಸೇವೆಯನ್ನು ನೋಡಿ ನಿಧಾನಕ್ಕೆ ಅವರ ಸಹಾಯಕ್ಕೆ ಬರತೊಡಗಿದರು. ಸ್ಥಳೀಯ ಸರ್ಕಾರಿ ಆಸ್ಪತ್ರೆಗಳು ಈ ಎಚ್‌ಐವಿ ಸೋಂಕಿತ ಮಕ್ಕಳಿಗೆ ವೈದ್ಯಕೀಯ ಸೇವೆ ನೀಡಲು ಮುಂದೆ ಬಂದವು. ಮಗಳು ಡಿಂಪಲ್ ಘಾಡೇ ತನ್ನದೇ ಒಂದು ತಂಡ ಕಟ್ಟಿಕೊಂಡು ಬೀದಿ ನಾಟಕಗಳನ್ನಾಡಿ ಪಾಲವಿಗೆ ಹಣ ಸಂಗ್ರಹಿಸಿದರು. ಕೆಲವು ದಾನಿಗಳೂ ಧನ ಸಹಾಯ ಮಾಡ ತೊಡಗಿದರು.

ಎಚ್‌ಐವಿ ಸೋಂಕಿತ ಅನೇಕ ಬಾಲಕಿಯರು ತಮ್ಮ ತಂದೆ-ತಾಯಿಯರ ಸಾವಿನ ನಂತರ ಮನೆಗಳಿಂದ ಹೊರ ಹಾಕಲ್ಪಟ್ಟು, ಬೀದಿ ಪಾಲಾಗಿ, ವಿವಿಧ ರೀತಿಯ ಲೈಂಗಿಕ ಶೋಷಣೆಗಳಿಗೆ ಒಳಗಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಜರ್ಝರಿತರಾಗಿರುತ್ತಾರೆ. ಅವರಲ್ಲಿ ಹೆಚ್ಚಿನವರು ಶಾಲೆಯನ್ನು ಮಧ್ಯದಲ್ಲೇ ಬಿಟ್ಟಿರುತ್ತಾರೆ ಅಥವಾ ಸರಿಯಾಗಿಶಾಲೆಗೇ ಹೋಗಿರುವುದಿಲ್ಲ. ತಂದೆ-ತಾಯಿಗಳ ಕಾಯಿಲೆ ಅಥವಾ ಸಾವಿನಿಂದಾಗಿ ಆ ಮಕ್ಕಳಿಗೆ ಒಂದು ಸಾಮಾನ್ಯ ಮಗುವಿಗೆ ಸಿಗಬೇಕಾದ ಎಲ್ಲ ರೀತಿಯ ಪ್ರೀತಿ, ಮಮತೆ, ರಕ್ಷಣೆ ಯಾವುದೂ ಸಿಕ್ಕಿರುವುದಿಲ್ಲ. ಈ ಮಕ್ಕಳೆಲ್ಲಾ ಬಡತನದ ಕುಟುಂಬಗಳಿಂದ ಬಂದವರಾಗಿರುತ್ತಾರೆ. ಆದರೆ, ಒಮ್ಮೆ ಈ ಮಕ್ಕಳು ಪಾಲವಿಯೊಳಕ್ಕೆ ಬಂದರೆಂದರೆ ಅವರ ಬದುಕಿನ ದಿಕ್ಕೇ ಬದಲಾಗುತ್ತದೆ.

ಪಾಲವಿಯಲ್ಲಿ ಎಲ್ಲಕ್ಕೂ ಹೆಚ್ಚಾಗಿ ಎಚ್‌ಐವಿ ಸೋಂಕಿತ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತದೆ. ಅವರ ವೈದ್ಯಕೀಯ ಆರೈಕೆಗಾಗಿ ಪಾಲವಿಯಲ್ಲಿ ಒಬ್ಬರು ವೈದ್ಯರು, ಇಬ್ಬರು ನರ್ಸ್‌ಗಳು, ಮೂವರು ಪರಿಚಾರಕರು ಹಾಗೂ ಇಬ್ಬರು ಕೌನ್ಸಿಲರ್‌ಗಳಿದ್ದಾರೆ. ಅವರ ದೇಹಗಳಲ್ಲಿ ವೈರಸ್ಸಿನ ಸೋಂಕಿನಿಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅದನ್ನು ಹೆಚ್ಚಿಸಲು ಹಾಲು, ಹಣ್ಣು, ಕಾಳು ಮೊದಲಾದ ಆರೋಗ್ಯಯುತ ಆಹಾರ ನೀಡಲಾಗುತ್ತದೆ. ಸೂಕ್ತ ಆಹಾರ ಮತ್ತು ವೈದ್ಯಕೀಯ ಆರೈಕೆ ಪಡೆದು ಅವರ ದೇಹ ಆರೋಗ್ಯಗೊಳ್ಳುತ್ತದೆ. ಶಾಲಾ ಶಿಕ್ಷಣ ಪಡೆದು ವಿದ್ಯಾವಂತರೂ, ಬುದ್ಧಿವಂತರೂ ಆಗುತ್ತಾರೆ. ಇವೆಲ್ಲಕ್ಕೂ ಮಿಗಿಲಾಗಿ ಮಂಗಳಾ ತಾಯಿಯ ಪ್ರೀತಿ, ಮಮತೆ ಪಡೆದು ಕಳೆದು ಹೋದ ತಮ್ಮ ಆತ್ಮ ವಿಶ್ವಾಸವನ್ನು ಮರಳಿ ಪಡೆಯುತ್ತಾರೆ. ಪಾಲವಿ ಸೇರಿದ ಅನೇಕ ಎಚ್‌ಐವಿ ಸೋಂಕಿತ ಹೆಣ್ಣು ಮಕ್ಕಳು ಇಂದು ಶಿಕ್ಷಕಿಯರು, ಫ್ಯಾಷನ್ ಡಿಸೈನರ್‌ಗಳು, ಶುಶೂಷಕರು ಮೊದಲಾದವ ರಾಗಿ ಬದಲಾವಣೆಗೊಂಡು ಅರ್ಥಪೂರ್ಣ ಜೀವನ ಸಾಗಿಸುತ್ತಿದ್ದಾರೆ. ಗಂಡು ಮಕ್ಕಳಲ್ಲಿ ಹಲವರು ದಿನಸಿ ಅಂಗಡಿ, ಮೊಬೈಲ್ ಫೋನ್ ರಿಪೇರಿ ಅಂಗಡಿ, ಹಾಲಿನ ಡೇರಿ ಮೊದಲಾದೆಡೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

ಎಚ್‌ಐವಿ ಸೋಂಕಿತ ಮಕ್ಕಳನ್ನು ಸಾಕುವುದು ಬಹುದೊಡ್ಡ ಜವಾಬ್ದಾರಿಯ ಕೆಲಸ ಮಾತ್ರವಲ್ಲ, ಅದು ಕೆಲವೊಮ್ಮೆ ಅತ್ಯಂತ ದುಃಖದ ಕೆಲಸವಾಗಿಯೂ ಪರಿಣಮಿಸುತ್ತದೆ. ವೈರಸಿನಿಂದ ಸಂಪೂರ್ಣವಾಗಿ ಜರ್ಜರಿತಗೊಂಡ ಮಕ್ಕಳು ಮಂಗಳಾ ತಾಯಿಯ ಕಣ್ಣೆದುರೇ ಕೊನೆಯುಸಿರೆಳೆಯುವಾಗ ಅವರು ನಲುಗಿ ಹೋಗುತ್ತಾರೆ. ಆದರೆ, ಬೇರೆ ಮಕ್ಕಳ ರಕ್ಷಣೆಗಾಗಿ ಅವರು ತನ್ನೆಲ್ಲ ಶಕ್ತಿಯನ್ನು ಕ್ರೋಡೀಕರಿಸಿಕೊಂಡು ಆ ದುಖವನ್ನು ಅದುಮಿಟ್ಟು, ಧೈರ್ಯವಾಗಿ ನಿಲ್ಲಬೇಕಾಗುತ್ತದೆ.

Tags:
error: Content is protected !!