ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಇನ್ನು ಎರಡು ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಯುದ್ಧ ಅಂತ್ಯವಾಗಬಹುದೆಂಬ ಆಶಾಭಾವನೆ ಉಕ್ರೇನ್ ಅಂತೆಯೇ ರಷ್ಯಾಕ್ಕೆ ಇದ್ದಂತೆ ಕಾಣುತ್ತಿದೆ. ಉಕ್ರೇನ್ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ವಾಪಸ್ ಪಡೆಯಲು ರಷ್ಯಾ ಯತ್ನಿಸುತ್ತಿರುವಂತೆಯೇ ರಷ್ಯಾ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ವಾಪಸ್ ಪಡೆಯಲು ಉಕ್ರೇನ್ ಯತ್ನಿಸುತ್ತಿದೆ. ಉಕ್ರೇನ್ ಯುದ್ಧ ಆರಂಭವಾಗಿ ಈ ಮಂಗಳವಾರಕ್ಕೆ ಒಂದು ಸಾವಿರ ದಿನ ಮುಗಿದಿದ್ದು, ಎರಡೂ ದೇಶಗಳ ನಾಯಕರು ಉದ್ವೇಗದಿಂದ ಮಾತನಾಡತೊಡಗಿದ್ದಾರೆ. ಯುದ್ಧದ ಬಿರುಸು ಹೆಚ್ಚಿದೆ.
ರಷ್ಯಾದ ಮೇಲೆ ದೂರಗಾಮಿ ಕ್ಷಿಪಣಿಗಳನ್ನು ಬಳಸಲು ಉಕ್ರೇನ್‌ಗೆ ಇದುವರೆಗೆ ಅನುಮತಿ ನೀಡದಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಈಗ ಆಶ್ಚರ್ಯ ಎನ್ನುವಂತೆ ಅನುಮತಿ ನೀಡಿದ್ದಾರೆ. ರಷ್ಯಾ ತನ್ನ ಉತ್ತರದ ಗಡಿ ರಕ್ಷಣೆಗೆ ಉತ್ತರ ಕೊರಿಯಾ ಸೈನಿಕರ ನೆರವು ಪಡೆಯುತ್ತಿರುವ ಅಂಶ ಬೆಳಕಿಗೆ ಬರುತ್ತಿರುವಂತೆ ಬೈಡನ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಅನುಮತಿ ದೊರೆತ ಕೆಲವೇ ಗಂಟೆಗಳಲ್ಲಿ ಉಕ್ರೇನ್ ದೂರಗಾಮಿ ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಉಕ್ರೇನ್ ಇಂಥ ಒಂದು ತಪ್ಪು ಹೆಜ್ಜೆ ಇಡಲಿ ಎಂದು ಕಾಯುತ್ತಿದ್ದ ರಷ್ಯಾ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ. ರಷ್ಯಾ ಬಳಸಿರುವುದು ಹೊಸದಾಗಿ ತಯಾರಿಸಿರುವ ಖಂಡಾಂತರ (ಪರಮಾಣು ಅಸ್ತ್ರ ಇಲ್ಲದ) ಕ್ಷಿಪಣಿ ಎಂದು ಗೊತ್ತಾಗಿ ಎಲ್ಲರೂ ನಿಟ್ಟುಸಿರು ಬಿಟ್ಟರು. ಆದರೆ ಪರಮಾಣು ಸಜ್ಜಿತ ಖಂಡಾಂತರ ಕ್ಷಿಪಣಿ ಬಳಸುವ ಬೆದರಿಕೆ ಮಾತ್ರ ಇನ್ನೂ ಇದೆ. ಪರಮಾಣು ಅಸ್ತ್ರ ಇಲ್ಲದ ದೇಶದ ಮೇಲೆ ಪರಮಾಣು ಅಸ್ತ್ರ ಬಳಸಬಾರದೆಂಬ ನಿಯಮ ಇದೆ. ಆದರೆ ಪರಮಾಣು ಅಸ್ತ್ರ ಇಲ್ಲದ ದೇಶ ಪರಮಾಣು ಅಸ್ತ್ರ ಇರುವ ದೇಶದ ನೆರವು ಪಡೆದು ದೂರಗಾಮಿ ಮತ್ತು ಅತ್ಯಾಧುನಿಕ ಕ್ಷಿಪಣಿಗಳನ್ನು ಪ್ರಯೋಗಿಸಿದರೆ ಅದು ನಿಯಮದ ಉಲ್ಲಂಘನೆ ಎಂದೇ ರಷ್ಯಾ ಹೇಳುತ್ತಿದೆ. ರಷ್ಯಾ ಸುಮ್ಮನೆ ಕೂರುವುದಿಲ್ಲ, ಪರಮಾಣು ಅಸ್ತ್ರ ಬಳಸುವುದು ಅನಿವಾರ್ಯವಾಗುತ್ತದೆ ಎಂದು ಪುಟಿನ್ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಈ ಬೆದರಿಕೆಯ ನಡುವೆಯೇ ಬೈಡನ್ ಉಕ್ರೇನ್‌ಗೆ ಮತ್ತಷ್ಟು ಮಿಲಿಟರಿ ನೆರವನ್ನು ಘೋಷಿಸಿದ್ದಾರೆ.
ಟ್ರಂಪ್ ಅವಧಿಯಲ್ಲಿ ಯುದ್ಧ ನಿಲ್ಲಬಹುದೆಂಬ ಆಶಾಭಾವನೆಯನ್ನು ಉಕ್ರೇನ್ ಅಧ್ಯಕ್ಷ ಜಲನಸ್ಕಿ ವ್ಯಕ್ತಮಾಡಿದ್ದಾರೆ. ಟ್ರಂಪ್ ಅವರು ಮಿಲಿಟರಿ ನೆರವು ನಿಲ್ಲಿಸಿದರೆ ಉಕ್ರೇನ್ ಸೋತಂತೆಯೆ. ಆದರೆ ರಷ್ಯಾಕ್ಕೆ ಉಕ್ರೇನ್ ಶರಣಾಗುವುದಿಲ್ಲ. ತಮ್ಮ ದೇಶದಲ್ಲಿ ತಯಾರಾಗುವ ಶಸ್ತ್ರಗಳಿಂದಲೇ ಹೋರಾಟ ಮುಂದುವರಿಸುವುದಾಗಿ ಜಲನಸ್ಕಿ ಘೋಷಿಸಿದ್ದಾರೆ. ಅವರ ಈ ಮಾತುಗಳು ಅವರ ಹತಾಶ ಸ್ಥಿತಿಯನ್ನು ಬಯಲು ಮಾಡುತ್ತವೆ. ಈ ಮಧ್ಯೆ ಯೂರೋಪ್ ಒಕ್ಕೂಟದ ನಾಯಕರ ಸಭೆ ನಡೆದಿದೆ. ಅವರೆಲ್ಲ ಉಕ್ರೇನ್‌ಗೆ ಬೆಂಬಲ ವ್ಯಕ್ತಮಾಡಿದ್ದಾರೆ. ಆದರೆ ಎಷ್ಟು ಕಾಲ ಉಕ್ರೇನ್‌ಗೆ ನೆರವು ನೀಡಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಈ ವಿಷಯವನ್ನು ಮುಂದೂಡಲಾಗಿದೆ. ಟ್ರಂಪ್ ಅವರು ನ್ಯಾಟೋ ವಿರೋಧಿಯಾಗಿದ್ದು, ಉಕ್ರೇನ್‌ಗೆ ರಕ್ಷಣೆ ನೀಡುವ ವಿಚಾರದಲ್ಲಿ ಸಮಸ್ಯೆ ಉಂಟಾಗಬಹುದು ಎಂದು ಯೂರೋಪ್ ಒಕ್ಕೂಟದ ನಾಯಕರು ಭಾವಿಸಿದ್ದಾರೆ. ಉಕ್ರೇನ್ ವಿಚಾರವಾಗಿ ಟ್ರಂಪ್ ತಲೆಯಲ್ಲಿ ಏನಿದೆ? ಯಾವ ರೀತಿಯ ರಾಜಿ ಸೂತ್ರವನ್ನು ಅವರು ಮುಂದಿಡುತ್ತಾರೆ? ಎಂಬುದರ ಆಧಾರದ ಮೇಲೆ ಮುಂದಿನ ಬೆಳವಣಿಗೆಗಳು ಆಗಲಿವೆ.
ರಷ್ಯಾ ಮತ್ತು ಉಕ್ರೇನ್ ನಡುವಣ ವಿವಾದದ ಪ್ರದೇಶವನ್ನು ಯಾರಿಗೂ ಸೇರದ ಪ್ರದೇಶ ಎಂದು ಗುರುತು ಮಾಡಿ ಯುದ್ಧ ನಿಲ್ಲಿಸುವುದು ಟ್ರಂಪ್ ಉದ್ದೇಶ ಎಂದು ಅವರ ಸಮೀಪವರ್ತಿಗಳು ಹೇಳುತ್ತಿದ್ದಾರೆ. ಟ್ರಂಪ್ ಅವರು ಪುಟಿನ್ ಅವರ ಸ್ನೇಹ ಉಳಿಸಿಕೊಳ್ಳಲು ಯತ್ನಿಸುವ ಸಾಧ್ಯತೆಯೇ ಹೆಚ್ಚು ಎಂದು ಅವರು ಹೇಳುತ್ತಾರೆ. ಹೀಗೆ ಮಾಡಿದರೆ ಯೂರೋಪ್ ಒಕ್ಕೂಟ ಸೇರುವ ಉಕ್ರೇನ್ ಅಧ್ಯಕ್ಷ ಜಲನಸ್ಕಿ ಅವರ ಲೆಕ್ಕಾಚಾರ ತಲೆಕೆಳಗು ಆಗಬಹುದಾದ ಸಾಧ್ಯತೆ ಇದೆ. ನ್ಯಾಟೋ ನಿರ್ವಹಣೆಯ ವೆಚ್ಚಕ್ಕೆ ಅಮೆರಿಕ ನೀಡುತ್ತಿರುವ ಪಾಲು ದೊಡ್ಡದು. ಹಾಗೆಯೇ ಉಕ್ರೇನ್ ರಕ್ಷಣೆಗೆ ಮಾಡುತ್ತಿರುವ ವೆಚ್ಚವೂ ಅಧ್ಯಕ್ಷ. ಈ ಎರಡೂ ವೆಚ್ಚಗಳು ಸಮರ್ಥನೀಯ ಅಲ್ಲ. ಯುದ್ಧ ನಿಲ್ಲಿಸಿದರೆ ಮತ್ತು ನ್ಯಾಟೋದಿಂದ ಹೊರಬಂದರೆ ಅಪಾರ ಹಣ ಉಳಿತಾಯವಾಗುತ್ತದೆ ಎನ್ನುವುದು ಟ್ರಂಪ್ ಲೆಕ್ಕಾಚಾರ. ಬೇರೆ ದೇಶಗಳ ರಕ್ಷಣೆಗೆ ಅಮೆರಿಕ ಏಕೆ ಖರ್ಚು ಮಾಡಬೇಕು ಎನ್ನುವ ಪ್ರಶ್ನೆಯನ್ನು ಟ್ರಂಪ್ ಈಗಾಗಲೇ ಕೇಳಿದ್ದಾರೆ. ಬಹುಶಃ ಎರಡೂ ವೆಚ್ಚ ಕಡಿತ ಮಾಡುವ ವಿಚಾರದಲ್ಲಿ ಅವರು ರಾಜಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ.
ನೆತಾನ್ಯಹು ಬಂಧನ ಸಾಧ್ಯವೆ?: ಗಾಜಾ ಹತ್ಯಾಕಾಂಡಕ್ಕೆ ಸಂಬಂಽಸಿದಂತೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಇಸ್ರೇಲ್ ಪ್ರಧಾನಿ ನೆತಾನ್ಯಹು ಮತ್ತು ಮಾಜಿ ರಕ್ಷಣಾ ಸಚಿವ ಗ್ಯಾಲೆಂಟ್ ಅವರ ಬಂಧನಕ್ಕೆ ಹೊರಡಿಸಿರುವ ಆದೇಶ ಜಾರಿಯಾಗುವ ಸಾಧ್ಯತೆ ಬಗ್ಗೆ ಈಗಾಗಲೇ ಅನುಮಾನಗಳು ವ್ಯಕ್ತವಾಗಿವೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಇಸ್ರೇಲ್‌ನಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮೂವರು ಹಮಾಸ್ ನಾಯಕರ ಬಂಧನಕ್ಕೆ ಕೂಡ ಇದೇ ಕೋರ್ಟ್ ಆದೇಶ ಹೊರಡಿಸಿದೆ. ಆದರೆ ಮೂವರೂ ಹಮಾಸ್ ನಾಯಕರು ಈಗಾಗಲೇ ಇಸ್ರೇಲ್ ದಾಳಿಯಲ್ಲಿ ಸತ್ತಿರುವುದರಿಂದ ಆ ವಾರೆಂಟ್ ನಿರುಪಯುಕ್ತವಾಗಲಿದೆ.
ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಮುಂದೆ ಗಾಜಾ ಹತ್ಯಾಕಾಂಡದ ಪ್ರಶ್ನೆ ಗುರುವಾರ ಮರುಪರಿಶೀಲನೆಗೆ ಬಂದಾಗ ಅದಕ್ಕೆ ಕಾರಣರಾದವರನ್ನು ಬಂಽಸಿ ವಿಚಾರಣೆಗೆ ಒಳಪಡಿಸಲು ತೀರ್ಪುಗಾರರು ನಿರ್ಧರಿಸಿದರು. (ಈ ಹಿಂದೆ ೧೨೪ ರಾಷ್ಟ್ರಗಳು ಕ್ರಿಮಿನಲ್ ಕೋರ್ಟ್ ಸ್ಥಾಪನೆಗೆ ಒಪ್ಪಿಗೆ ನೀಡಿವೆ. ಚೀನಾ, ಇಂಡಿಯಾ, ಇಸ್ರೇಲ್, ರಷ್ಯಾ, ಅಮೆರಿಕ ಒಪ್ಪಿಗೆ ನೀಡಿಲ್ಲ)
ಈ ಪ್ರಕರಣ ಈ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಮೆರಿಕ ವಿರೋಧ ವ್ಯಕ್ತಪಡಿಸಿದೆ. ಈ ಕೋರ್ಟ್ ರಚನೆಗೆ ತಾನು ಸಹಿ ಮಾಡಿಲ್ಲ. ಆದ್ದರಿಂದ ತಮ್ಮ ವಿರುದ್ಧ ವಾರೆಂಟ್ ಹೊರಡಿಸುವ ಅಽಕಾರ ಕೋರ್ಟ್‌ಗೆ ಇಲ್ಲ ಎಂದು ನೆತಾನ್ಯಹು ಪ್ರತಿಕ್ರಿಯೆ ನೀಡಿದ್ದಾರೆ. ಈ ಹತ್ಯಾಕಾಂಡ ನಡೆದಿರುವುದು ಪ್ಯಾಲೆಸ್ಟೇನ್ ಪ್ರದೇಶದಲ್ಲಿ. ಪ್ಯಾಲೆಸ್ಟೇನ್ ಈ ಕೋರ್ಟ್‌ನ ಸದಸ್ಯ ಪ್ರದೇಶ ಎಂದು ಈಗಾಗಲೇ ತಿರ್ಮಾನವಾಗಿದೆ ಎಂದು ಅಂತಾರಾಷ್ಟ್ರೀಯ ಕ್ರ್ರಿಮಿನಲ್ ಕೋರ್ಟ್ ಸ್ಪಷ್ಟನೆ ನೀಡಿದೆ.
ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಹೊರಡಿಸಿರುವ ವಾರೆಂಟ್ ಜಾರಿಯಾಗುವ ಸಾಧ್ಯತೆ ತುಂಬಾ ಕಡಿಮೆ. ಅಪರಾಧಿಗಳು ಸದಸ್ಯ ದೇಶಗಳಿಗೆ ಹೋದಾಗ ಅವರನ್ನು ಆ ದೇಶ ಬಂಧಿಸಬೇಕು. ಬಂಧನ ಭೀತಿಯಿರುವ ದೇಶಗಳಿಗೆ ಆ ಅಪರಾಧ ಆರೋಪ ಹೊತ್ತವರು ಭೇಟಿ ನೀಡುವುದೇ ಇಲ್ಲ. ಅಕಸ್ಮಾತ್ ಭೇಟಿ ನೀಡಬೇಕಾಗಿ ಬಂದರೆ ಅಲ್ಲಿನ ಸರ್ಕಾರಗಳ ರಕ್ಷಣೆ ಪಡೆದೇ ಹೋಗುತ್ತಾರೆ. ಉಕ್ರೇನ್ ಯುದ್ಧ ಅಪರಾಽಯೆಂದು ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಕ್ರಿಮಿನಲ್ ಕೋರ್ಟ್ ವಾರೆಂಟ್‌ಅನ್ನು ಈ ಹಿಂದೆಯೇ ಹೊರಡಿಸಿದೆ. ಕ್ರಿಮಿನಲ್ ಕೋರ್ಟ್‌ನ ಸದಸ್ಯ ದೇಶವಾಗಿರುವ ಮಂಗೋಲಿಯಾಕ್ಕೆ ಪುಟಿನ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಭೇಟಿ ನೀಡಿದ್ದರು. ಅವರನ್ನು ಬಂಽಸುವ ಗೋಜಿಗೆ ಸರ್ಕಾರ ಹೋಗಲಿಲ್ಲ. ಸುಡಾನ್ ಅಧ್ಯಕ್ಷ ಒಮರ್ ಅಲ್ ಬಷೀರ್ ವಿರುದ್ಧವೂ ಧಾರ್‌ಫರ್ ಹತ್ಯಾಕಾಂಡಕ್ಕಾಗಿ ಬಂಧನ ವಾರೆಂಟ್ ಹೊರಡಿಸಲಾಗಿತ್ತು. ಅವರು ಅಽಕೃತವಾಗಿಯೇ ಕ್ರಿಮಿನಲ್ ಕೋರ್ಟ್ ಸದಸ್ಯ ದೇಶವಾಗಿರುವ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ ಉದಾಹರಣೆ ಇದೆ. ಅವರ ಬಂಧನವೇನೂ ಆಗಲಿಲ್ಲ. ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನ ನಿರ್ಧಾರವನ್ನು ತಾನು ಗೌರವಿಸುವುದಾಗಿ ಯೂರೋಪಿಯನ್ ಒಕ್ಕೂಟ ಘೋಷಿಸಿದೆ. ಬಂಧನ ವಾರೆಂಟ್ ಘೋಷಿತ ಯಾವುದೇ ವ್ಯಕ್ತಿ ತಮ್ಮ ದೇಶಕ್ಕೆ ಬಂದರೆ ಅವರನ್ನು ಬಂಽಸುವುದಾಗಿ ನೆದರ್‌ಲ್ಯಾಂಡ್ ಮತ್ತು ಇಟಲಿ ಬಹಿರಂಗವಾಗಿ ಘೋಷಿಸಿವೆ. ಆದರೆ ಐಸಿಸಿಗೆ ತನ್ನದೇ ಆದ ಪೊಲೀಸು ವ್ಯವಸ್ಥೆ ಇಲ್ಲದಿರುವುದರಿಂದ ಅದು ವಾರೆಂಟ್ ಜಾರಿ ಮಾಡಲು ಸದಸ್ಯ ದೇಶಗಳ ನೆರವು ಪಡೆಯಬೇಕಾಗುತ್ತದೆ. ಯಾವುದೇ ದೇಶ ಮತ್ತೊಂದು ದೇಶದ ನಾಯಕರನ್ನು ಬಂಽಸುವ ಕಾರ್ಯಕ್ಕೆ ಮುಂದಾಗುವುದಿಲ್ಲ. ಹೀಗಾಗಿ ವಾರೆಂಟ್‌ಗಳು ನಿಷ್ಪ್ರಯೋಜಕವಾಗುವ ಸಾಧ್ಯತೆಯೇ ಹೆಚ್ಚು.