Mysore
25
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆ ಹೆಚ್ಚಿಸಿದ ತೀರ್ಪು

high court

ತಮ್ಮ ಮನೆಕೆಲಸದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಿತಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾ ಲಯದ ಈ ತೀರ್ಪು ಜನರ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳುವ ಮೈಲಿಗಲ್ಲಾಗಿದೆ.

ಸುಮಾರು ಒಂದು ವರ್ಷದ ಹಿಂದೆ ಲೋಕಸಭಾ ಚುನಾವಣೆಯ ಮತದಾನ ದಿನಕ್ಕೆ ಕೆಲವೇ ದಿನಗಳ ಮುಂಚೆ ಅತ್ಯಂತ ಅಸಹ್ಯ, ಅಶ್ಲೀಲ ದೃಶ್ಯಗಳ ವಿಡಿಯೋ ಹಂಚಿಕೆಯಾಗಿತ್ತು. ಅದರಲ್ಲಿ ಪ್ರಜ್ವಲ್ ರೇವಣ್ಣ ಅವರ ಪೈಶಾಚಿಕ ಕೃತ್ಯ ಬಹಿರಂಗಗೊಂಡಿತ್ತು. ಈತನ ದುರಾಚಾರಕ್ಕೆ ಒಳಗಾದ ಆ ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡಿ, ಕುಟುಂಬದವರ ಜೀವತೆಗೆಯುವ ಬೆದರಿಕೆಯೊಡ್ಡಿ ಬಾಯಿ ಮುಚ್ಚಿಸ ಲಾಗಿತ್ತು. ಸಂತ್ರಸ್ತ ಮಹಿಳೆ ತಮ್ಮ ಮನೆಯಿಂದ ಕಾಣೆಯಾಗಿದ್ದರು. ಆಕೆಯ ಪುತ್ರ ೨೦೨೪ರ ಮೇ ೨ರಂದು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ, ತನ್ನ ತಾಯಿಯನ್ನು ಪ್ರಜ್ವಲ್ ತಂದೆ ಮತ್ತು ತಾಯಿ ಸೇರಿ ಮೂವರು ಅಪಹರಿಸಿದ್ದಾರೆ ಎಂಬುದಾಗಿ ದೂರು ನೀಡಿದ್ದರು.

ಕ್ರಿಮಿನಲ್ ದೂರು ದಾಖಲಿಸಿಕೊಂಡ ಎಸ್‌ಐಟಿ (ವಿಶೇಷ ತನಿಖಾ ತಂಡ) ಪೊಲೀಸರು ಸಂತ್ರಸ್ತ ಮಹಿಳೆಯನ್ನು ಪತ್ತೆ ಹಚ್ಚಿದ್ದರು. ವಿಚಾರಣೆ ವೇಳೆ ಆ ಮಹಿಳೆಯು, ಪ್ರಜ್ವಲ್ ತಮ್ಮ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅತ್ತ ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಿದ್ದರು.

ರಾಜಕೀಯ ಪ್ರಭಾವ ಇರುವ ಮನೆತನದ ವ್ಯಕ್ತಿಯಾಗಿದ್ದರಿಂದ ಪ್ರಕರಣ ಮುಚ್ಚಿಹೋಗುತ್ತದೆ ಎಂಬ ಮಾತುಗಳ ಬೆನ್ನಲ್ಲೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ನನ್ನು ಪೊಲೀಸರು ಕಾನೂನು ಅಸ ಬಳಸಿಯೇ ವಾಪಸ್ ಬರುವಂತೆ ಮಾಡಿ ದ್ದಲ್ಲದೆ, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಆತನನ್ನು ವಶಕ್ಕೆ ಪಡೆದಿದ್ದರು. ಪ್ರಜ್ವಲ್ ಇದೆಲ್ಲ ಕುತಂತ್ರ ಎಂದು ಪ್ರತಿಪಾದಿಸಿದರೂ ಪ್ರಯೋಜನ ವಾಗಲಿಲ್ಲ.

ಇನ್ನೊಂದೆಡೆ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ಭಾರತೀಯ ದಂಡ ಸಂಹಿತೆ- ೧೮೬೦ರ ಕಲಂ ೩೭೬(೨), ೩೭೬ (೨) (ಎನ್), ೩೫೪ (ಎ) (ಬಿ) (ಸಿ), ೫೦೬, ೨೧೦ ಹಾಗೂ ಮಾಹಿತಿ ತಂತ್ರಜನ ಕಾಯ್ದೆ- ೨೦೦೮ರ ಕಲಂ ೬೬ (ಇ) ಅಡಿ ಎಫ್ಐಆರ್ ದಾಖಲು ಮಾಡಲಾಗಿತ್ತು.

ಈಗ ನ್ಯಾಯಾಲಯ ಅತ್ಯಾಚಾರದ ಅಪರಾಧಿಗೆ ದೊಡ್ಡ ಪ್ರಮಾಣದ ಶಿಕ್ಷೆಯನ್ನೇ ಪ್ರಕಟಿಸಿದೆ. ಇಲ್ಲಿ ಪೊಲೀಸರ ಕರ್ತವ್ಯ ನಿರ್ವಹಣೆಯೂ ಪ್ರಶಂಸಾರ್ಹ. ಪ್ರಬಲ ರಾಜಕೀಯ ಕುಟುಂಬದಿಂದ ಬಂದಿರುವ ಪ್ರಜ್ವಲ್ ಸ್ವತಃ ಸಂಸತ್ ಸದಸ್ಯನಾಗಿದ್ದುದು, ಪೊಲೀಸರ ಮೇಲೆ ಒತ್ತಡ ಉಂಟು ಮಾಡಬಹುದು ಎಂಬುದು ಸಾರ್ವಜನಿಕ ವಲಯದಲ್ಲಿ ಬಿರುಸಿನ ಚರ್ಚೆಗೆ ಅವಕಾಶ ಕಲ್ಪಿಸಿತ್ತು. ಆದರೆ, ಪೊಲೀಸರು ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಿ ಕೊಡುವಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿರುವುದು ಎದ್ದುಕಾಣುತ್ತದೆ.

ಪ್ರಜ್ವಲ್ ಬಹುಶಃ ಪ್ರಕರಣದ ಆರಂಭದಲ್ಲಿ ಇದೆಲ್ಲ ಯಾವ ಮಹಾ ಎಂಬಂತಹ ಮನೋಭಾವ ತಳೆದಿರಬಹುದು. ಕರ್ನಾಟಕ, ದೇಶದ ರಾಜಕಾರಣದಲ್ಲಿ ನಮ್ಮ ಕುಟುಂಬಕ್ಕೆ ತನ್ನದೇ ಆದ ವರ್ಚಸ್ಸು ಇದೆ. ಎಷ್ಟೇ ದೊಡ್ಡ ಪ್ರಮಾಣದ ಅನ್ಯಾಯ ಮಾಡಿದರೂ ಗೆದ್ದುಕೊಳ್ಳಬಹುದು ಎಂಬ ಉಮೇದು ಇದ್ದಿರಬಹುದು. ಹಾಗಾಗಿಯೇ ಸಾವಿರಾರು ಅಶ್ಲೀಲ ವಿಡಿಯೋಗಳನ್ನು ಇಟ್ಟುಕೊಂಡಿದ್ದಿರಬಹುದು. ಆದರೆ, ಶುಕ್ರವಾರ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದಾಗ, ಪ್ರಜ್ವಲ್ ಸುರಿಸಿದ ಕಣ್ಣೀರು ಹಲವು ಮಹಿಳೆಯರ ಬಾಳಿನೊಂದಿಗೆ ಚೆಲ್ಲಾಟವಾಡಿದ್ದಕ್ಕೆ ಪ್ರಾಯಶ್ಚಿತ್ತವಾಗಿರಬಹುದು. ಪ್ರಸ್ತುತ ಆತನಿಗೆ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ನ್ಯಾಯಾಲಯ ಶಿಕ್ಷೆ ನೀಡಿದೆ.

ಇನ್ನೊಂದು ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇಂತಹದೇ ಇನ್ನೂ ಎರಡು ಪ್ರಕರಣಗಳು ಬಾಕಿ ಇವೆ. ಪುರುಷನ ಜೀವನದಲ್ಲಿ ತಾಯಿ, ಅಕ್ಕ, ತಂಗಿ, ಪತ್ನಿ ಸೇರಿದಂತೆ ಹಲವು ಪಾತ್ರಗಳನ್ನು ನಿರ್ವಹಿಸುವ ಮಹಿಳೆಯರನ್ನು ಕೇವಲ ಭೋಗದ ವಸ್ತುವಾಗಿ ಪರಿಗಣಿಸುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಅದರಲ್ಲಿಯೂ ಸಿರಿವಂತರು, ರಾಜಕಾರಣಿಗಳ ಕುಟುಂಬದ ಗಂಡುಮಕ್ಕಳ ಪೈಕಿ ಕೆಲವರು ಇಂತಹ ದುರ್ನಡತೆಯನ್ನು ಉದ್ದೇಶ ಪೂರ್ವಕವಾಗಿ ರೂಢಿಸಿಕೊಳ್ಳುತ್ತಾರೆ ಎಂಬ ಆರೋಪಗಳು ಇವೆ. ಅದರಲ್ಲಿಯೂ ಸ್ವತಃ ಅವರಿಗೆ ರಾಜಕೀಯ ಅಧಿಕಾರ ಸಿಕ್ಕಿಬಿಟ್ಟರೆ ಮುಗಿಯಿತು. ಅದಕ್ಕೆ ತಾಜ ಉದಾಹರಣೆ ೩೪ರ ಹರೆಯದ ಪ್ರಜ್ವಲ್.

ತಮ್ಮ ಬಳಿಗೆ ಕೆಲಸಕ್ಕಾಗಿ ಅಥವಾ ವಿದ್ಯಾಭ್ಯಾಸಕ್ಕಾಗಿ ಶಿ-ರಸು ಬಯಸಿ ಬರುವ ಅಮಾಯಕ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಳ್ಳುತ್ತಾರೆ. ಆದರೆ, ಈ ಪ್ರಜ್ವಲ್ ಪ್ರಕರಣವು ಇನ್ನೂ ವಿಚಿತ್ರ ಎನ್ನ ಬಹುದು. ತನಗಿಂತ ಹಿರಿಯ ಮಹಿಳೆ ಯನ್ನೂ ಬಿಡದಷ್ಟು ಲೈಂಗಿಕ ವಾಂಛೆ ಪ್ರಜ್ವಲ್‌ನನ್ನು ಈಗ ಕಾರಾಗೃಹ ವಾಸಕ್ಕೆ ದೂಡಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಪ್ರಜ್ವಲ್ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಆದರೆ, ಸಂತ್ರಸ್ತ ಮಹಿಳೆ ಮತ್ತು ಅವರ ಕುಟುಂಬದ ನೋವು, ಸಂಕಟಗಳನ್ನು ಊಹಿಸುವುದು ಕಷ್ಟ. ನ್ಯಾಯಾಲಯದ ತೀರ್ಪು ಸಂತ್ರಸ್ತ ಮಹಿಳೆಗೆ ಆತ್ಮಸ್ಥೈರ್ಯ ತುಂಬಿದೆ. ಅದರ ಜೊತೆಗೆ ಪ್ರಜ್ವಲ್ ಕಡೆಯವರಿಂದ ತೊಂದರೆ ಎದುರಾದರೆ ಎಂಬಂತಹ ಭೀತಿಯನ್ನೂ ಉಂಟು ಮಾಡಿರುತ್ತದೆ. ಈ ಬಗ್ಗೆ ಪೊಲೀಸರು ಜಾಗ್ರತೆ ವಹಿಸಬೇಕು.

” ಪ್ರಬಲ ರಾಜಕೀಯ ಕುಟುಂಬದಿಂದ ಬಂದಿರುವ ಪ್ರಜ್ವಲ್ ಸ್ವತಃ ಸಂಸತ್ ಸದಸ್ಯರಾಗಿದ್ದುದು, ಪೊಲೀಸರ ಮೇಲೆ ಒತ್ತಡ ಉಂಟುಮಾಡಬಹುದು ಎಂಬುದು ಸಾರ್ವಜನಿಕ ವಲಯದಲ್ಲಿ ಬಿರುಸಿನ ಚರ್ಚೆಗೆ ಅವಕಾಶ ಕಲ್ಪಿಸಿತ್ತು.ಆದರೆ, ಪೊಲೀಸರು ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಿ ಕೊಡುವಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿರುವುದು ಸ್ಪಷ್ಟವಾಗಿದೆ.”

 

Tags:
error: Content is protected !!