ಚುನಾವಣೆ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆಯೂ ಜಾರಿಗೆ ಬರುತ್ತದೆ. ಅಂದಿನಿಂದ ಮತದಾರರನ್ನು ಆಕರ್ಷಣೆಗೊಳಪಡಿಸುವಂತಹ ಅಥವಾ ಮತಬೇಟೆಗಾಗಿ ಆಮಿಷ ಒಡ್ಡುವ ಯಾವುದೇ ಬೆಳವಣಿಗೆಗೂ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಆದರೆ ನಮ್ಮ ಚಾಣಾಕ್ಷ ರಾಜಕಾರಣಿಗಳು ಅಲ್ಲಿಯವರೆಗೂ ಕಾಯುವುದೇಕೆ ಎಂದು ಈಗಿನಿಂದಲೇ ಮತದಾರರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇಂತಹ ಮತಬೇಟೆಗಳಲ್ಲಿ ಸದ್ಯಕ್ಕೆ ಹೆಚ್ಚು ಸದ್ದು ಮಾಡುತ್ತಿರುವ ಬೆಳವಣಿಗೆ ಎಂದರೆ ಮತದಾರರನ್ನು ಧರ್ಮಸ್ಥಳ, ಮಹದೇಶ್ವರ ಬೆಟ್ಟ, ತಿರುಪತಿ ಮುಂತಾದ ಯಾತ್ರಾ ಸ್ಥಳಗಳಿಗೆ ಕರೆದೊಯ್ಯುವುದು. ಆ ಮೂಲಕ ನಿಮ್ಮ ಓಟು ನಮಗೇ ಮೀಸಲಿರಲಿ ಎಂಬ ಸಂದೇಶ ನೀಡುವುದು ಇದರ ಆಂತರ್ಧ ಯುದ್ದ ಧ್ವನಿ.
ಅದು ಈಗ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆ ಎನ್ನಬಹುದು. ಮತದಾರರನ್ನು ಧಾರ್ಮಿಕ ಕ್ಷೇತ್ರಗಳಿಗೆ ಕರೆದೊಯ್ಯವ ಮೂಲಕ ಭಾವನಾತ್ಮಕವಾಗಿ ಅವರ ಮನಸ್ಸನ್ನು ಗೆಲ್ಲುವ ಕಸರತ್ತಿಗೆ ಮುಂದಿನ ಚುನಾವಣಾ ಟಿಕೆಟ್ ಆಕಾಂಕ್ಷಿಗಳು ಇಳಿದಿದ್ದಾರೆ. ಧಾರ್ಮಿಕ ಯಾತ್ರೆ ಇದೀಗ ಚುನಾವಣಾ ಯಾತ್ರಾರ್ಥಿ ಪರಿವರ್ತನೆಗೊಂಡಿದೆ.
ಅಸಲಿಗೆ ಚುನಾವಣಾ ನೀತಿ ಸಂಹಿತೆಯ ಪ್ರಕಾರ ಇದು ಮತದಾರರಿಗೆ ಆಮಿಷ ಒಡ್ಡುವ ಪ್ರಯತ್ನವೇ. ಆದರೂ ಈಗ ನೀತಿ ಸಂಹಿತೆ ಜಾರಿಯಲ್ಲಿ ಇಲ್ಲದಿರುವುದರಿಂದ ಇದು ಅಪರಾಧವಲ್ಲ. ಇದು ಇವತ್ತಿನ ರಾಜಕಾರಣಿಗಳ ಮನಸ್ಥಿತಿ. ಮಂಡ್ಯ ವಿಧಾನಸಭಾ ಕ್ಷೇತ್ರದ ಪಕ್ಷವೊಂದರ ಟಕೆಟ್ ಆಕಾಂಕ್ಷಿಯೊಬ್ಬರು ಇದೇ ಪ್ರಥಮ ಬಾರಿಗೆ ಶ್ರೀಧರ್ಮಸ್ಥಳ ಯಾತ್ರೆಗೆ ಚಾಲನೆ ನೀಡಿದ್ದಾರೆ ಎನ್ನಲಾಗಿದೆ.
ಈ ಯಾತ್ರೆಗೆ ಕ್ಷೇತ್ರದ ಜನರಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಟ್ರೆಂಡ್‌ನ್ನು ಸೃಷ್ಟಿ ಮಾಡಿತು. ಈಗಾಗಲೇ ಒಬ್ಬ ಆಕಾಂಕ್ಷಿ ೪೦ ಬಸ್‌ಗಳಲ್ಲಿ ಕ್ಷೇತ್ರದ ಮತದಾರರನ್ನು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ ಗಣೇಶನ ದರ್ಶನ ಮಾಡಿಸಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥನ ಯಾತ್ರೆಗೆ ನಗರ ಸೇರಿದಂತೆ ಗ್ರಾಮೀಣ ಜನರು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗಿದ್ದಾರೆ. ಈ ಧಾರ್ಮಿಕ ಯಾತ್ರೆ ಚುನಾವಣಾ ತಂತ್ರಗಾರಿಕೆಯ ಒಂದು ಭಾಗವಲ್ಲದೆ ಮತ್ತೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಕೂಡ ಮತದಾರರನ್ನು ಧರ್ಮಸ್ಥಳ ಯಾತ್ರೆಗೆ ಕಳುಹಿಸಿದ್ದಾರೆ. ಈಗಾಗಲೇ ಒಮ್ಮೆ, ಒಂದೇ ದಿನ ಹತ್ತು ಬಸ್‌ಗಳು ಹಾಗೂ ಏಳು ಕಾರುಗಳಲ್ಲಿ ಮತದಾರರನ್ನು ಯಾತ್ರೆಗೆ ಕರೆದೊಯ್ದಿದ್ದ ಇವರು, ಇತ್ತೀಚೆಗೆ ಮತ್ತೆ ೧೦ ಬಸ್ಸುಗಳಲ್ಲಿ ೬೦೦ ಮಂದಿಯನ್ನು ಕರೆದೊಯ್ದಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರವೊಂದರಲ್ಲೇ ಹೆಚ್ಚು ಮತದಾರರನ್ನು ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ. ಪ್ರಾದೇಶಿಕ ಪಕ್ಷವೊಂದರ ಟಿಕೆಟ್ ಆಕಾಂಕ್ಷಿಗಳು ಕೂಡ ಮತದಾರರ ಮನವೊಲಿಕೆಗೆ ಇದೇ ಮಾರ್ಗ ಅನುಸರಿಸಿದ್ದಾರೆ. ಈಗಾಗಲೇ ರಾಷ್ಟ್ರೀಯ ಪಕ್ಷವೊಂದರ ಆಕಾಂಕ್ಷಿ ಕ್ಷೇತ್ರದ ಎಲ್ಲ ಮತದಾರರ ಮನೆಗಳಿಗೆ ೨೦ ಲೀ.ಸಾಮರ್ಥ್ಯದ ಒಂದೊಂದು ಬಿಳಿ ಕ್ಯಾನ್ ವಿತರಿಸುವ ಮೂಲಕ ನಿಮ್ಮೆಲ್ಲರ ಬೆಂಬಲ ನನಗಿರಲಿ ಎಂದು ಬಸ್ ಸೀಟ್‌ನಲ್ಲಿ ಟವೆಲ್ ಹಾಕಿದ್ದಾರೆ.
ಒಂದು ಬಾರಿ ಯಾತ್ರ್ರೆಗೆ ಕನಿಷ್ಠ ೧೦ ಸಾವಿರ ರೂ. ಖರ್ಚಾಗುತ್ತದೆ. ಯಾವುದೇ ಖರ್ಚಿಲ್ಲದೆ, ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಟ್ಟು ಮನೆ ಬಾಗಿಲಿಗೆ ಬಂದು ಧಾರ್ಮಿಕ ಯಾತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದರೆ ಯಾರು ತಾನೇ ಬೇಡ ಎನ್ನುತ್ತಾರೆ. ನಾ ಮುಂದು ತಾ ಮುಂದು ಎಂದು ಯಾತ್ರೆಗೆ ಜನರು ಮುಗಿಬೀಳುತ್ತಿದ್ದಾರೆ. ಇದರಿಂದ ಪ್ರವಾಸಿ ಬಸ್‌ಗಳಿಗೆ ಸುಗ್ಗಿ ಕಾಲವಾಗಿದ್ದು, ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ.
ಮತದಾರರಿಗೆ ಆಮಿಷ ಒಡ್ಡುವ ಮತ್ತೊಂದು ಪ್ರಕ್ರಿಯೆ ಎಂದರೆ ಮುಂದಿನ ದಿನಗಳಲ್ಲಿ ನಗರಸಭೆ ಸದಸ್ಯರಿಗೆ ಪ್ರತ್ಯೇಕವಾಗಿ ಗೋವಾ ಯಾತ್ರೆಗೆ ಕರೆದುಕೊಂಡು ಹೋಗುವುದು ಎನ್ನಲಾಗಿದೆ. ನಗರದ ೩೫ ವಾರ್ಡ್‌ನ ಸದಸ್ಯರನ್ನು ಕರೆದುಕೊಂಡು ಹೋಗಿ ಜಾಲಿಯಾಗಿ ಸುತ್ತಾಡಿಸಿಕೊಂಡು ಬರುವುದರೊಂದಿಗೆ ಅವರೆಲ್ಲರನ್ನೂ ಚುನಾವಣೆಯಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಮಾಡಿಕೊಳ್ಳುವುದಕ್ಕೆ ತಾಯಾರಿ ನಡೆಸುತ್ತಿದ್ದಾರಂತೆ. ಇದು ಹೀಗೇ ಮುಂದುವರಿದರೆ ಚುನಾವಣಾ ರಾಜಕಾರಣ ಎಲ್ಲಿಗೆ ಹೋಗಿ ಮುಟ್ಟುತ್ತದೋ ಎಂಬ ಕಳವಳ ಸಹಜ. ಮುಂದೆ ನಮ್ಮ ನೈತಿಕ ಮೌಲ್ಯಗಳು ಎತ್ತ ಸಾಗಬಹುದು ಎಂಬ ಆತಂಕ ಕಾಡದೇ ಇರದು.





