Mysore
20
overcast clouds
Light
Dark

ಸಂಪಾದಕೀಯ : ತೆಂಗು ಬೆಲೆ ಕುಸಿತ; ತ್ವರಿತ ಬೆಂಬಲ ಬೆಲೆಯೋಜನೆ ಅನುಷ್ಠಾನಗೊಳಿಸಿ

ಪ್ರಸ್ತುತ ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ಬೆಲೆ ಕುಸಿದಿದ್ದು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ತಿಂಗಳ ಹಿಂದೆ ಕೆ.ಜಿ.ತೆಂಗಿನಕಾಯಿ ಬೆಲೆ ೨೦-೨೧ ರೂ.ಗೆ ಕುಸಿದಿದ್ದು, ಇನ್ನು ಚೇತರಿಕೆ ಕಂಡಿಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ ಕೆ.ಜಿ. ತೆಂಗಿನ ಕಾಯಿ ಬೆಲೆ ೪೧ ರೂ.ಗಳಿತ್ತು. ಈ ವರ್ಷ ಅರ್ಧದಷ್ಟು ದರ ಕುಸಿತ ಕಂಡಿದೆ. ತೆಂಗು ಬೆಳೆಯಲು, ಕೊಯ್ಲು ಮಾಡಲು, ಸಿಪ್ಪೆ ಸುಲಿದು ಮಾರುಕಟ್ಟೆಗೆ ಸಾಗಿಸಲು ವೆಚ್ಚ ಹೆಚ್ಚಾಗಿದೆ. ಕಾಯಿ ಕೀಳುವ ಮತ್ತು ಸಿಪ್ಪೆ ಸುಲಿಯುವ ಕಾರ್ಮಿಕರು ಸಿಗುತ್ತಿಲ್ಲ. ಲಭ್ಯವಿರುವವರಿಗೆ ಕೇಳಿದಷ್ಟು ಕೂಲಿ ನೀಡಬೇಕು. ಈಗಿರುವ ೨೦-೨೧ ರೂ.ಬೆಲೆಯಿಂದ ರೈತರಿಗೆ ನಷ್ಟವಾಗುತ್ತಿದೆ. ಹಿಂದೆಲ್ಲ ಸುಲಿದ ತೆಂಗಿನ ಸಿಪ್ಪೆಯನ್ನು ನೀರು ಕಾಯಿಸಲು ನಗರ, ಪಟ್ಟಣ ಹಾಗೂ ಗ್ರಾಮೀಣ ಜನರು ಹಣ ನೀಡಿ ಖರೀದಿಸುತ್ತಿದ್ದರು. ಸೋರ್ಲಾ ಬಂದ ನಂತರ ತೆಂಗಿನ ಸಿಪ್ಪೆಯನ್ನು ಕೇಳುವವರಿಲ್ಲ.

ಕೇಂದ್ರ ಸರ್ಕಾರವು ಕ್ವಿಂಟಲ್ ತೆಂಗಿನ ಕಾಯಿಗೆ ಕನಿಷ್ಠ ಬೆಂಬಲ ಬೆಲೆ ೨೮೬೦ ರೂ. ಘೋಷಿಸಿದೆ. ಆದರೆ ಇನ್ನು ಅನುಷ್ಠಾನಗೊಳಿಸದೆ ಮೀನಮಿಷ ಎಣಿಸುತ್ತಿದೆ. ಬೇಗ ಖರೀದಿ ಕೇಂದ್ರ ತೆರೆದು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಬೇಕಿದೆ. ಆ ಮೂಲಕ ನಷ್ಟ ಅನುಭವಿಸುತ್ತಿರುವ ತೆಂಗು ಬೆಳೆಗಾರರ ನೆರವಿಗೆ ನಿಲ್ಲಬೇಕಾಗಿದೆ.
ತೆಂಗಿನಕಾಯಿಯ ಬೆಲೆ ಕುಸಿದಿರುವ ಬಗ್ಗೆ ಚಾಮರಾಜನಗರ ಜಿಲ್ಲಾಡಳಿತವು ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಕುರಿತು ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೆ ಬೆಂಬಲ ಬೆಲೆಯಲ್ಲಿ ಖರೀದಿಗೆ ಚಾಲನೆ ಸಿಗಲಿದೆ. ಬೆಂಬಲ ಬೆಲೆ ಘೋಷಿಸಿ ಸುಮ್ಮನೆ ಕೂರುವುದರಿಂದ ಪ್ರಯೋಜನವಿಲ್ಲ. ಬೇಗ ಅನುಷ್ಠಾನಗೊಳಿಸಿ ಕೆ.ಜಿ. ತೆಂಗಿನ ಕಾಯಿಯನ್ನು ೩೦-೩೫ ರೂ.ಗಳಿಗೆ ಖರೀದಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
೨೦೧೨-೧೩ನೇ ಸಾಲಿನಲ್ಲಿ ಕಾಯಿಯ ಬೆಲೆ ರೂ.ಗೆ ಕುಸಿದಿತ್ತು. ಆಗ ರಾಜ್ಯ ಸರ್ಕಾರ ೧೪ ರೂ. ಕನಿಷ್ಠ ಬೆಲೆಗೆ ಖರೀದಿಸಿತ್ತು. ೨೦೧೬-೧೭ನೇ ಸಾಲಿನಲ್ಲೂ ಬೆಲೆ ಕುಸಿತ ಕಂಡಾಗ ೧೬ ರೂ.ಗೆ ಖರೀದಿ ಮಾಡಿ ರೈತರ ನೆರವಿಗೆ ಧಾವಿಸಿತ್ತು. ಅದೇ ಮಾದರಿ ಅನುಸರಿಸಬೇಕು ಎಂಬುದು ತೆಂಗು ಬೆಳೆಗಾರರ ಒತ್ತಾಯವಾಗಿದೆ.

ಜಿಲ್ಲೆಯಲ್ಲಿ ೧೩೦೭೦ ಹೆಕ್ಟೇರ್‌ನಲ್ಲಿ ತೆಂಗು ಫಸಲು ಬೆಳೆ ಬೆಳೆಯಲಾಗುತ್ತಿದೆ. ಚಾ.ನಗರ ತಾಲ್ಲೂಕಿನಲ್ಲಿ ೮೪೦೭, ಗುಂಡ್ಲುಪೇಟೆ ತಾ.ನಲ್ಲಿ ೨೨೦೦ ಹೆ., ಕೊಳ್ಳೇಗಾಲ ತಾ.ನಲ್ಲಿ ೯೦೩೩ ಹೆ., ಹನೂರು ತಾ.ನಲ್ಲಿ ೬೦೭ ಹೆ., ಯಳಂದೂರು ತಾ.ನಲ್ಲಿ ೯೫೩ ಹೆ.
ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ.
ತೆಂಗಿನ ಮರಕ್ಕೆ ಇರುವ ಬಿಳಿಚಿಟ್ಟೆ, ದುಂಬಿ, ಇಲಿ, ಕೋತಿಗಳ ಕಾಟ ತಪ್ಪಿಸಬೇಕಿದೆ. ಕೊಟ್ಟಿಗೆ, ಸಾವಯವ, ರಾಸಾಯನಿಕ ಗೊಬ್ಬರ ಬಳಸಬೇಕು. ಆಗಾಗ ತೆಂಗಿನ ತೋಟವನ್ನು ಉಳುಮೆ ಮಾಡಬೇಕು. ಇಷ್ಟೆಲ್ಲ ಶ್ರಮ ವಹಿಸಿ ತೆಂಗಿನ ಕಾಯಿ ಬೆಳೆದರೂ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಒಮ್ಮೆ ದರ ಏರಿದರೆ ಮತ್ತೊಮ್ಮೆ ಪಾತಾಳಕ್ಕೆ ಕುಸಿಯುತ್ತದೆ. ದರ ತೀರಾ ಕೆಳಮಟ್ಟಕ್ಕೆ ಕುಸಿದಾಗಲಾದರೂ ಸರ್ಕಾರಗಳು ತೆಂಗು ಬೆಳೆಗಾರರ ನೆರವಿಗೆ ಧಾವಿಸಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು.

ತೆಂಗು ಬೆಳೆಗಾರರ ಕಷ್ಟವನ್ನು ಆಯಾಯ ಭಾಗದ ಶಾಸಕರು, ಸಂಸದರು ಆಲಿಸಿ ಸರ್ಕಾರದ ಗಮನಕ್ಕೆ ತರಬೇಕು. ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ಬೆಂಬಲ ಬೆಲೆಗೆ ಖರೀದಿಸಲು ಮುಂದಾಗಬೇಕಿದೆ. ಆದರೆ, ಅಂತಹ ಕಾಳಜಿಯುಕ್ತ ಪ್ರಯತ್ನ ನಮ್ಮಲ್ಲಿ ನಡೆಯುತ್ತಿಲ್ಲ.
ಜನಪ್ರತಿನಿಧಿಗಳು ಟೀಕೆ, ಟಿಪ್ಪಣಿ, ವೈಯಕ್ತಿಕ ನಿಂದನೆ, ಕ್ಲುಲಕ ವಿಚಾರಕ್ಕೆ ಸಮಯ ಹಾಳು ಮಾಡುತ್ತಾರೆ. ಅದರ ಬದಲು ಜನರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂಬುದು ರೈತರ ಆಗ್ರಹವಾಗಿದೆ.
ತೆಂಗಿಗೆ ಬೆಂಬಲ ಬೆಲೆ ಘೋಷಣೆಯಾಗಿದ್ದರೂ ಇನ್ನು ಅನುಷ್ಠಾನ ಮಾಡಿಲ್ಲ. ರಾಜ್ಯ ಸರ್ಕಾರ ಏನು ಮಾಡುತ್ತಿದೆ. ತಮ್ಮದೆ ಪಕ್ಷದ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ತೆಂಗಿನ ಬೆಲೆ ಕುಸಿತದ ಬಗ್ಗೆ ಮನವರಿಕೆ ಮಾಡಿದರೆ ನೆರವಿಗೆ ಧಾವಿಸುವ ಸಾಧ್ಯತೆಯಿದೆ.
ರೈತ ಸಂಘಟನೆಗಳ ಮುಖಂಡರು ಸರ್ಕಾರಗಳ ವಿರುದ್ಧ ಹೋರಾಟ ಮಾಡುತ್ತಾರೆ, ನೀತಿ ನಿರ್ಧಾರಗಳನ್ನು ದೂಷಿಸುತ್ತಾರೆ ಎಂಬ ಕಾರಣಕ್ಕೆ ವಿಳಂಬ ಮಾಡಲಾಗುತ್ತಿದೆಯೇ ಎಂಬ ಅನುಮಾನವಿದೆ. ಇಂತಹ ಜಿದ್ದು ಇದ್ದರೆ ಮರೆತು ರೈತರ ಪರ ನಿಲ್ಲಬೇಕು.
ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದೆ. ಅದನ್ನು ಅನುಷ್ಠಾನ ಮಾಡಲು ರಾಜ್ಯ ಸರ್ಕಾರಕ್ಕೆ ಏನು ತೊಂದರೆ. ಚುನಾವಣೆ ಸಂದರ್ಭಗಳಲ್ಲಿ ನಾವು ರೈತರ ಪರ ಎಂಬ ಘೋಷಣೆಗಳು ಎಲ್ಲಿ ಹೋದವು. ಅಂತಹವುಗಳೆಲ್ಲ ಜನರನ್ನು ಓಲೈಸುವ ತಂತ್ರವೇ ? ಅದೆಲ್ಲವನ್ನು ಬದಿಗಿಟ್ಟು ಬೆಂಬಲ ಬೆಲೆಯಲ್ಲಿ ತೆಂಗಿನ ಕಾಯಿ ಖರೀದಿಸಬೇಕು.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ