ಹಳೇ ಜಿಲ್ಲಾ ಆಸ್ಪತ್ರೆ ಪುನಾರಂಭ ಸೂಕ್ತ; ಬೋಧನಾ ಆಸ್ಪತ್ರೆ ಪಾಡು ಕೇಳುವವರಾರು?
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಇರುವ ಹಳೇ ಜಿಲ್ಲಾ ಆಸ್ಪತ್ರೆಯಲ್ಲಿ ಸೆ.೧೨ ರಿಂದ ಹೊರ ರೋಗಿಗಳ ಸೇವೆ ಪುನಾರಂಭವಾಗಿದೆ. ಸಂಘ ಸಂಸ್ಥೆಗಳ ಒತ್ತಾಯ, ಮಾಧ್ಯಮಗಳ ವರದಿ, ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಆರಂಭಿಸಲಾಗಿದೆ. ನಗರದ ಹಾಗೂ ಸುತ್ತಲಿನ ಗ್ರಾಮಗಳ ಜನರ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ.
ನೆಗಡಿ, ಜ್ವರ, ಕೆಮ್ಮು, ತಲೆನೋವು, ಮೈಕೈ ನೋವು ಹೀಗೆ ಸಣ್ಣ ಪುಟ್ಟ ಆರೋಗ್ಯ ತೊಂದರೆ ಸರಿಪಡಿಸಿಕೊಳ್ಳಲು ನಗರದಿಂದ ೮ ಕಿ.ಮೀ. ದೂರದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ಬೋಧನಾ ಆಸ್ಪತ್ರೆಗೆ ಅಲೆದಾಡಬೇಕಿತ್ತು. ಆಸ್ಪತ್ರೆ ಹೊರವಲಯಲ್ಲಿದ್ದ ಕಾರಣ ಅಲ್ಲಿಗೆ ಜನರು ಹೋಗಲಾರದೆ ಖಾಸಗಿ ಕ್ಲಿನಿಕ್‌ಗಳಿಗೆ ತೆರಳಿ ದುಬಾರಿ ಚಿಕಿತ್ಸಾ ವೆಚ್ಚ ನೀಡುತ್ತಿದ್ದರು. ಗಂಭೀರ ಆರೋಗ್ಯ ಸಮಸ್ಯೆಯಿದ್ದರೆ ಆಟೋ ಹಿಡಿದು ೧೦೦-೨೦೦ ನೀಡಿ ಹೋಗಬೇಕಿತ್ತು. ಸದ್ಯಕ್ಕೆ ಈ ಸಮಸ್ಯೆ ತಪ್ಪಿದಂತಾಗಿದೆ. ಇದು ಒಂದು ಮುಖವಾದರೆ ಸ್ಥಳಾಂತರದ ಬೇರೆಯದೆ ಇನ್ನೊಂದು ಮುಖವಿದೆ.
೨೦೧೬ರಲ್ಲಿ ಯಡಬೆಟ್ಟದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸರ್ಕಾರಿ ವೈದ್ಯಕೀಯ ಕಾಲೇಜು) ಆರಂಭವಾಯಿತು. ಈ ಕಾಲೇಜು ನಡೆಯಬೇಕಾದರೆ ೪೭೫ ಹಾಸಿಗೆಗೆಳ ಸುಸಜ್ಜಿತ ಬೋಧನಾ ಆಸ್ಪತ್ರೆ ಅಗತ್ಯವಿತ್ತು. ೧೧೮ ಕೋಟಿ ರೂ.ಗಳಲ್ಲಿ ಬೋಧನಾ ಆಸ್ಪತ್ರೆಯನ್ನು ನಿರ್ಮಿಸಿ ೨೦೨೧ರ ಅಕ್ಟೋಬರ್‌ನಲ್ಲಿ ಉದ್ಘಾಟನೆ ಮಾಡಲಾಯಿತು. ಕಾಲೇಜಿಗೆ ಹೊಸದಾಗಿ ಅಗತ್ಯವಿರುವಷ್ಟು ಬೋಧನಾ ಸಿಬ್ಬಂದಿಯನ್ನು ಮಾತ್ರ ನೇಮಿಸಲಾಯಿತು. ಆದರೆ, ಬೋಧನಾ ಆಸ್ಪತ್ರೆಗೆ ಹೊಸದಾಗಿ ವಿವಿಧ ತಂತ್ರಜ್ಞರು, ಸಫಾಯಿ ಕರ್ಮಚಾರಿಗಳು, ಭದ್ರತಾ ಸಿಬ್ಬಂದಿ, ಸಹಾಯಕರನ್ನು ನೇಮಿಸಲಿಲ್ಲ. ಬದಲಿಗೆ ಹಳೇ ಜಿಲ್ಲಾ ಆಸ್ಪತ್ರೆಯಲ್ಲಿದ್ದ ವೈದ್ಯರು ಹಾಗೂ ವೈದ್ಯೇತರ ಸಿಬ್ಬಂದಿಯನ್ನು ಹೊಸ ಬೋಧನಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಹಳೇ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ವಿಭಾಗ, ಸ್ಕಾ ್ಯನಿಂಗ್ ಸೆಂಟರ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಯಿತು.
ಬೋಧನಾ ಆಸ್ಪತ್ರೆಗೆ ಬೇಕಾಗಿರುವ ೩೨೮ ತಂತ್ರಜ್ಞರು, ಸಫಾಯಿ ಕರ್ಮಚಾರಿಗಳು, ಭದ್ರತಾ ಸಿಬ್ಬಂದಿ, ಸಹಾಯಕರನ್ನು ಸರ್ಕಾರ ಇನ್ನು ನೇಮಕ ಮಾಡಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಶದಲ್ಲಿದ್ದ ಹಳೇ ಜಿಲ್ಲಾ ಆಸ್ಪತ್ರೆಯ ೨೭ ವೈದ್ಯರು ಹಾಗೂ ಸಿಬ್ಬಂದಿಯನ್ನು ಬೋಧನಾ ಆಸ್ಪತ್ರೆಗೆ ಸ್ಥಳಾಂತರಿಸಿ ಕಾಲೇಜಿನ ಬೋಧಕರೂ ಆಗಿರುವ ವೈದ್ಯರು ಹಾಗೂ ಸಿಬ್ಬಂದಿ ಜೊತೆಯಾಗಿ ಆರೋಗ್ಯ ಸೇವೆ ನಡೆಸಿಕೊಂಡು ಹೋಗುತ್ತಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಜಿಲ್ಲಾ ಆಸ್ಪತ್ರೆಯನ್ನು ಬೋಧನಾ ಆಸ್ಪತ್ರೆ ಜೊತೆ ವಿಲೀನ ಮಾಡಿರಲಿಲ್ಲ ಎಂಬುದು ಗಮನಾರ್ಹ ಸಂಗತಿ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಈ ಕೆಲಸ ಮಾತ್ರ ನನೆಗುದಿಗೆ ಬಿದ್ದಿದೆ.
ಬೋಧನಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಮತ್ತು ವೈದ್ಯರ ಕೊರತೆ ಆಗಬಾರದು ಎಂಬ ಕಾರಣಕ್ಕೆ ಎರಡು ಜೊತೆಗೂಡಿ ಸೇವೆ ಸಲ್ಲಿಸಲು ಉದ್ದೇಶಿಸಲಾಗಿತ್ತು. ಆದರೆ, ಅಲ್ಲಿಯೂ ಸರಿಯಾಗಿ ಆರೋಗ್ಯ ಸೇವೆ ಸಿಗುತ್ತಿಲ್ಲ. ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಆರಾಮವಾಗಿ ಓಡಾಡಿಕೊಂಡಿದ್ದಾರೆ. ನಗರದಲ್ಲಿದ್ದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಇದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರ ಗಮನಕ್ಕೂ ಬಂದಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡ ಸಚಿವರು ಬೋಧನಾ ಆಸ್ಪತ್ರೆಯ ಜೊತೆಯಲ್ಲಿದ್ದ ಹಳೇ ಜಿಲ್ಲಾ ಆಸ್ಪತ್ರೆಯನ್ನು ನಗರದಲ್ಲಿಯೇ ಪುನಾರಂಭಿಸಲು ಕ್ರಮ ಕೈಗೊಂಡರು. ಸೆ.೧೨ ರಿಂದ ಹೊರ ರೋಗಿಗಳ ಸೇವೆ ಆರಂಭವಾಗಿದೆ. ಸದ್ಯವೇ ತುರ್ತು ಚಿಕಿತ್ಸಾ ವಿಭಾಗವೂ ಬರಲಿದೆ.
ಸಚಿವರು ಹಳೇ ಆಸ್ಪತ್ರೆಯನ್ನು ಪುನಾರಂಭಿಸಲು ತೋರಿದ ಉತ್ಸಾಹವನ್ನು ಬೋಧನಾ ಆಸ್ಪತ್ರೆಗೆ ೩೨೮ ಸಿಬ್ಬಂದಿಯನ್ನು ನೇಮಕ ಮಾಡಿಸುವಲ್ಲಿ ತೋರಬೇಕಿತ್ತು. ಇದಲ್ಲದೆ ಬೋಧನಾ ಆಸ್ಪತ್ರೆ ಜೊತೆ ಹಳೇ ಜಿಲ್ಲಾ ಆಸ್ಪತ್ರೆಯನ್ನು ಏಕೆ ವಿಲೀನ ಮಾಡಿಸಲಿಲ್ಲ. ಅದು ಸಚಿವರ ಗಮನಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆ ಕೇಳಿಬಂದಿದೆ.
ಸಿಮ್ಸ್ ಬೋಧನಾ ಆಸ್ಪತ್ರೆಯಲ್ಲಿ ವೈದ್ಯೇತರ ಸಿಬ್ಬಂದಿಯ ಕೊರತೆ ಎದುರಾಗುತ್ತದೆ. ತಕ್ಷಣಕ್ಕೆ ಈ ಸಮಸ್ಯೆಯನ್ನು ನಿಭಾಯಿಸುವುದು ಹೇಗೆ? ಬೊಧನಾ ಆಸ್ಪತ್ರೆ ಆಧುನಿಕವಾಗಿ ಸುಸಜ್ಜಿತವಾಗಿದ್ದು, ಅಗತ್ಯ ಮೂಲ ಸೌಲಭ್ಯಗಳಿವೆ. ಆದರೆ, ಹಳೇ ಜಿಲ್ಲಾ ಆಸ್ಪತ್ರೆಯಲ್ಲಿ ಮೂಲ ಸೌಲಭ್ಯಗಳ ಕೊರತೆಯಿದೆ. ಬೋಧನಾ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರು ಕೇಳಿಬಂದಾಗ ಸಂಬಂಧಪಟ್ಟವರ ಜೊತೆ ಸಭೆ ನಡೆಸಿ, ಇಲ್ಲವೇ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಉತ್ತಮ ಆರೋಗ್ಯ ಸೇವೆ ನೀಡುವಂತೆ ಎಚ್ಚರಿಕೆ ನೀಡಬಹುದು. ಸರಿ ಹೋಗದಿದ್ದರೆ ನಿರ್ದಾಕ್ಷಿಣ್ಯ ಕ್ರಮ ವಹಿಸಲು ಅವಕಾಶವಿತ್ತು. ಆಸ್ಪತ್ರೆಗೆ ಹೋಗಿ ಬರಲು ಜನರಿಗೆ ಸಾರಿಗೆ ಬಸ್ ಸೌಲಭ್ಯವಿದೆ. ಇದನ್ನು ಮತ್ತಷ್ಟು ಹೆಚ್ಚಿಸಬಹುದಿತ್ತು. ಆದರೆ, ಇದಾವುದನ್ನು ಗಮನಿಸಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಬೋಧನಾ ಆಸ್ಪತ್ರೆಗೆ ಸಾಕಷ್ಟು ಸಿಬ್ಬಂದಿ ಇದ್ದರೆ ಹಳೇ ಜಿಲ್ಲಾ ಆಸ್ಪತ್ರೆಯನ್ನು ಪ್ರಾರಂಭಿಸುವುದು ಸರಿ. ಆದರೆ, ಸಿಬ್ಬಂದಿಯ ಕೊರತೆ ಇರುವಾಗ ಇಂತಹ ಕ್ರಮ ಸರಿಯೇ ಎಂಬುದು ಮುಖ್ಯ ಪ್ರಶ್ನೆ.





