Mysore
25
light rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಸೈರಸ್ ಮಿಸ್ತ್ರಿ ಸಾವಿಗಿರುವ ಬೆಲೆ ಜನಸಾಮಾನ್ಯರಿಗೇಕಿಲ್ಲ.. ?

ಕಾರುಗಳಲ್ಲಿ ಸುರಕ್ಷತೆಗೆ ಆತುರ ತೋರುವ ಸರಕಾರಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಅನಾದರವೇಕೆ ?

ಲೋಕೇಶ್‌ ಕಾಯರ್ಗ

ಕಾರುಗಳಲ್ಲಿ ಹಿಂಬದಿಯ ಪ್ರಯಾಣಿಕರಿಗೂ ಸೀಟು ಬೆಲ್ಟ್ ಕಡ್ಡಾಯಗೊಳಿಸುವಂತೆ ರಾಜ್ಯಗಳಿಗೆ ಕೇಂದ್ರ ಸರಕಾರ ನಿರ್ದೇಶನ ನೀಡಿದೆ. ಇದಕ್ಕೆ ಕಾರಣವಾಗಿದ್ದು ಟಾಟಾ ಸನ್ಸ್ ಕಂಪನಿಯ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಾವು. ಮುಂಬೈ ಸಮೀಪ ಸೆಪ್ಟೆಂಬರ್ ಮೊದಲ ವಾರ ತಾವು ಸಂಚರಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಅಪಘಾತಕ್ಕೀಡಾದಾಗ ಮಿಸ್ತ್ರಿ ಹಿಂಬದಿ ಸೀಟಿನಲ್ಲಿದ್ದರು. ಸೀಟು ಬೆಲ್ಟ್ ಧರಿಸಿದ್ದರೆ ಅವರು ಬದುಕಿರುತ್ತಿದ್ದರು ಎನ್ನುವುದು ಪರಿಣಿತರ ವಾದ. ಮುಂದಾಲೋಚನೆಯಿಂದ ಕಾನೂನು,ನಿಯಮಗಳನ್ನು ರೂಪಿಸದ ನಾವು ಘಟನೋತ್ತರ ತನಿಖೆ, ಆದೇಶ, ಕ್ರಮ ಜರುಗಿಸುವುದರಲ್ಲಿ ಮಹಾ ಪ್ರವೀಣರು.
ಮಿಸ್ತ್ರಿ ಅವರು ಮೃತ್ಯುಗೀಡಾದ ಕೆಲವೇ ದಿನಗಳಲ್ಲಿ ಸಿಕಂದರಾಬಾದಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಶೋ ರೂಮ್ ಬೆಂಕಿಗಾಹುತಿಯಾಗಿ ಎಳು ಜನ ನೌಕರರು ಸುಟ್ಟು ಕರಕಲಾದರು. ಸೈರಸ್ ಮಿಸ್ತ್ರಿ ಸಾವನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ಗಳ ಸುರಕ್ಷತೆ ಪ್ರಶ್ನೆ ಗಂಭೀರವಾಗಿ ಕಂಡಿಲ್ಲ.

ವರ್ಷದ ಹಿಂದೆ ನೀವು ದ್ವಿಚಕ್ರ ವಾಹನ ಖರೀದಿಸಲು ಮನಸ್ಸು ಮಾಡಿದ್ದರೆ ಆಯ್ಕೆ ಬಹಳ ಸುಲಭವಿತ್ತು. ಬೈಕೋ, ಸ್ಕೂಟರೋ, ಯಾವ ಕಂಪನಿ, ಯಾವ ಮಾಡೆಲ್.. ಇವಿಷ್ಟು ನಿರ್ಧಾರವಾದರೆ ದಿನಸಿ ಖರೀದಿಸಿದಂತೆ ದ್ವಿಚಕ್ರ ವಾಹನ ಮನೆಗೆ ತರಬಹುದಿತ್ತು. ಆದರೆ ಎಲೆಕ್ಟ್ರಿಕ್ ಸ್ಕೂಟರ್ ಜಮಾನಾ ಶುರುವಾಗುತ್ತಿದ್ದಂತೆಯೇ ಆಯ್ಕೆ ಕ್ಲಿಷ್ಟವಾಗಿದೆ. ಇದಕ್ಕೆ ಕಾರಣ ಒಂದಲ್ಲ, ಹಲವು. ಈಗ ಮಾರುಕಟ್ಟೆಯಲ್ಲಿ 80ಕ್ಕೂ ಹೆಚ್ಚು ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್ಗಳಿವೆ. ಒಂದಷ್ಟು ಬ್ರಾಂಡೆಡ್ ಕಂಪನಿಗಳನ್ನು ಹೊರತುಪಡಿಸಿ ಉಳಿದ ಕಂಪನಿಗಳೆಲ್ಲವೂ ಸ್ಟಾರ್ಟ್ ಆಪ್ಗಳಾಗಿ ಬಂದಿವೆ. ಇವುಗಳಲ್ಲಿ ಯಾವ ಕಂಪನಿಯ ಸ್ಕೂಟರ್ ಉತ್ತಮ, ಯಾವುದು ಹೆಚ್ಚು ಸುರಕ್ಷಿತ, ಯಾವ ಸ್ಕೂಟರ್ ಹೆಚ್ಚು ಬಾಳಿಕೆ ಬರಬಹುದು, ಯಾವುದಕ್ಕೆ ಉತ್ತಮ ಸರ್ವಿಸ್ ಸಿಗಬಹುದು ಎಂದು ಯೋಚಿಸಿದರೆ ಸುಲಭದಲ್ಲಿ ಉತ್ತರ ಸಿಗದು. ಎಲ್ಲ ಕಂಪನಿಗಳಿಗೂ ಈ ಉತ್ಪನ್ನ ಹೊಸದು. ಇನ್ನೊಂದಷ್ಟು ವರ್ಷ ರಸ್ತೆಯಲ್ಲಿ ರಿಯಲ್ ಡ್ರೈವ್ ಆದ ಬಳಿಕವೇ ಸ್ಕೂಟರ್ ಅಥವಾ ಬೈಕ್ನ ಗುಣಮಟ್ಟ ಮತ್ತು ಸುರಕ್ಷತೆಯ ಖಾತರಿ ತಿಳಿಯಬಹುದು.

ಆದರೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ಮುಗಿಬಿದ್ದು ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಖರೀದಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕಡಿಮೆ ಪವರ್ ಹೊಂದಿರುವ ಸ್ಕೂಟರ್ ಗಳಿಗೆ ಚಾಲನಾ ಪರವಾನಗಿ, ನಂಬರ್ ಪ್ಲೇಟ್, ನೋಂದಣಿ ಬೇಕಿಲ್ಲ ಎಂಬ ನಿಯಮ 18ರೊಳಗಿನ ವಿದ್ಯಾರ್ಥಿ ಸಮೂಹಕ್ಕೆ ಹೆಚ್ಚು ಆಪ್ತವಾಗಿ ಕಂಡಿದೆ. ಒಂದರಿಂದ ಒಂದೂವರೆ ಲಕ್ಷ ರೂ. ತೆತ್ತು ಪಾಲಕರೂ ತಮ್ಮ ಮಕ್ಕಳಿಗೆ ಈ ಸ್ಕೂಟರ್ ಕೊಡಿಸುತ್ತಿದ್ದಾರೆ. ಇದರ ನಡುವೆ ಈ ಸ್ಕೂಟರ್ ಗಳ ಸುರಕ್ಷತೆ, ಚಾಲನೆಯ ವೇಳೆ ಪಾಲಿಸಬೇಕಾದ ನಿಯಮಗಳೆಲ್ಲವೂ ಗೌಣವಾಗಿವೆ. ಕಂಪನಿಯೊಂದು ಮಾರಾಟ ನಂತರದ ಸೇವೆಗಾಗಿ ಸರ್ವಿಸ್ ಸೆಂಟರ್ಗಳನ್ನೇ ತೆರೆದಿಲ್ಲ. ಆ್ಯಪ್ ಮೂಲಕ ದೂರು ನೀಡಿದರೆ ಮನೆಗೆ ಬಂದು ಸೇವೆ ನೀಡುತ್ತೇವೆ ಎನ್ನುವುದು ವಾಹನ ಸೇವೆಯಲ್ಲಿರುವ ಈ ಕಂಪನಿಯ ಭರವಸೆ. ವಾಹನಗಳ ಜತೆ ಬರುತ್ತಿದ್ದ ಪ್ರಿಂಟೆಡ್ ಮ್ಯಾನ್ಯುಯಲ್ ಗಳು ಈಗ ಮಾಯವಾಗಿವೆ. ಕೇಳಿದರೆ ವೆಬ್ಸೈಟ್ಗಳ ಪಟ್ಟಿ ಕೊಡುತ್ತಾರೆ.

ಹೊಸ ಜಮಾನಾದ ಇ-ಸ್ಕೂಟರ್, ಇ-ಬೈಕ್ಗಳನ್ನು ರಸ್ತೆಗೆ ಬಿಡುವ ಮುನ್ನ ಸುರಕ್ಷತಾ ಮಾನದಂಡಗಳನ್ನು ರೂಪಿಸಬೇಕಿದ್ದ ಸರಕಾರ, ಇಕೋ ಫ್ರೆಂಡ್ಲಿ, ಗ್ರೀನ್ ಎನರ್ಜಿ ಹೆಸರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹಿಂದು ಮುಂದು ನೋಡದೇ ಅನುಮತಿ ನೀಡಿತು. ಇವು ರಸ್ತೆಗೆ ಇಳಿದ ತಕ್ಷಣವೇ ಸಾಲು, ಸಾಲು ಅವಘಡಗಳು ವರದಿಯಾದವು. ಸ್ಕೂಟರ್ಗಳು ಹೊತ್ತಿ ಉರಿಯುವ ದೃಶ್ಯಗಳು ವೈರಲ್ ಆದವು. ಆಂಧ್ರಪ್ರದೇಶ, ತಮಿಳುನಾಡು, ಉತ್ತರಪ್ರದೇಶ ಮತ್ತು ತೆಲಂಗಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳ ಜತೆ ನಾಲ್ವರ ಜೀವ ಸುಟ್ಟು ಕರಕಲಾಯಿತು. ಇದಾದ ಬೆನ್ನಿಗೇ ಬೆಂಗಳೂರು ಮೂಲದ ಓಲಾ, ಪ್ಯೂರ್ ಇವಿ, ತಮಿಳುನಾಡಿನಲ್ಲಿ ಘಟಕ ಹೊಂದಿರುವ ಒಕಿನಾವ ತಮ್ಮ ಒಂದಷ್ಟು ವಾಹನಗಳನ್ನು ಮಾರುಕಟ್ಟೆಯಿಂದ ಹಿಂಪಡೆದವು. ಇಷ್ಟಾದರೂ ಸರಕಾರ ಕಣ್ಮುಚ್ಚಿ ಕುಳಿತಿತ್ತು.
ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಲೀಥಿಯಂ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ತಾಪಮಾನ ನಿರ್ವಹಣೆ ಬಹಳ ಮುಖ್ಯ. ಬ್ಯಾಟರಿ ಕೋಶಗಳ ಬಳಕೆ, ವಿನ್ಯಾಸ, ನಿರ್ವಹಣಾ ವ್ಯವಸ್ಥೆ, ಕೇಬಲ್ಗಳ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸದೇ ಹೋದರೆ ಶಾರ್ಟ್ ಸರ್ಕೀಟ್ ಆಗುವ ಸಾಧ್ಯತೆ ಹೆಚ್ಚು. ಸರಕಾರ ಇ-ಸ್ಕೂಟರ್ ಬಿಡುಗಡೆಗೆ ಮುನ್ನವೇ ಮಾನದಂಡಗಳನ್ನು ರೂಪಿಸಬೇಕಿತ್ತು. ಆದರೆ ಲಕ್ಷಾಂತರ ಸ್ಕೂಟರ್ಗಳು ಮಾರುಕಟ್ಟೆಗೆ ಬಿಡುಗಡೆಯಾದ ಬಳಿಕ ಸರಕಾರ ಈ ನಿಟ್ಟಿನಲ್ಲಿ ಯೋಚನೆ ಮಾಡಲು ಹೊರಟಿದೆ.

ಅಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್ಎಐ) ನಮ್ಮ ದೇಶದಲ್ಲಿ ಬ್ಯಾಟರಿ ಪ್ಯಾಕ್ಗಳಿಗೆ ಸುರಕ್ಷತಾ ರೇಟಿಂಗ್ಗಳನ್ನು ನೀಡುವ ಸಂಸ್ಥೆ. ಎಆರ್ಎಐ ಪ್ರಕಾರ ಎಐಎಸ್ (ಅಐಖ) 156 ರೇಟಿಂಗ್ ಇರುವ ಬ್ಯಾಟರಿ ಹೆಚ್ಚು ಸುರಕ್ಷಿತ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಇತ್ತೀಚೆಗೆ ಎಆರ್ಎಐ ಮಾನದಂಡಕ್ಕನುಗುಣವಾಗಿ ‘ಕನ್ಫರ್ಮಿಟಿ ಆಫ್ ಪ್ರೊಡಕ್ಷನ್’ (ಸಿಒಪಿ) ನಿಯಮಗಳನ್ನು ರೂಪಿಸಿದೆ. ತಕ್ಷಣದಿಂದಲೇ ಈ ನಿಯಮಗಳನ್ನು ಪಾಲಿಸುವಂತೆ ಅಟೊಮೊಬೈಲ್ ಕಂಪನಿಗಳಿಗೆ ಸೂಚನೆ ನೀಡಬೇಕಿತ್ತು. ಆದರೆ ಮುಂದಿನ ವರ್ಷ ಏಪ್ರಿಲ್ನಿಂದ ವಿದ್ಯುತ್ಚಾಲಿತ ವಾಹನಗಳಿಗೆ ಸುರಕ್ಷತೆಯ ರೇಟಿಂಗ್ ನೀಡುವುದಾಗಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಇದು ಸುರಕ್ಷತೆಯ ವಿಚಾರ. ಇನ್ನು ಕಾನೂನು ನಿಯಮಗಳ ವಿಚಾರದಲ್ಲಿ ಪೊಲೀಸರು, ಸಾರಿಗೆ ಅಧಿಕಾರಿಗಳು, ವಾಹನ ಮಾರಾಟ ಡೀಲರ್ಗಳು ಒಂದೊಂದು ನಿಯಮವನ್ನು ಉಲ್ಲೇಖಿಸುತ್ತಿದ್ದಾರೆ. ಮೈಸೂರಿನ ಪ್ರಸಿದ್ಧ ಇ -ಸ್ಕೂಟರ್ ಡೀಲರ್ ಪ್ರಕಾರ 40 ಕಿ.ಮೀ ಒಳಗಿನ ವೇಗಮಿತಿಯುಳ್ಳ ಇ ಸ್ಕೂಟರ್ ಗಳಿಗೆ ಡ್ರೈವಿಂಗ್ ಲೈಸೆನ್ಸ್ ಬೇಕಾಗಿಲ್ಲ. ಆದರೆ ಆರ್ಟಿಒ ಅಧಿಕಾರಿಗಳ ಪ್ರಕಾರ 250 ವ್ಯಾಟ್ಸ್ ಒಳಗಿನ ಬ್ಯಾಟರಿ ಸಾಮರ್ಥ್ಯ, 60 ಕಿಲೋ ಒಳಗಿನ ತೂಕ ಮತ್ತು 25 ಕಿ.ಮೀ ಒಳಗಿನ ವೇಗ ಮಿತಿ ಹೊಂದಿರುವ ವಿದ್ಯುತ್ ಸ್ಕೂಟರ್ಗಳಿಗೆ ಮಾತ್ರ ಲೈಸೆನ್ಸ್ ಮತ್ತು ನೋಂದಣಿ ಅಗತ್ಯವಿಲ್ಲ. ಇದಕ್ಕಿಂತ ಮೇಲಿನ ಸಾಮರ್ಥ್ಯದ ಇ -ಸ್ಕೂಟರ್ಗಳಿಗೆ ಉಳಿದ ವಾಹನಗಳಂತೆ ನೋಂದಣಿ ಮತ್ತು ಚಾಲನಾ ಪರವಾನಗಿ ಕಡ್ಡಾಯ. ಆದರೆ ದೇಶದಲ್ಲಿ 80ಕ್ಕೂ ಹೆಚ್ಚು ಕಂಪನಿಗಳ ವಿದ್ಯುತ್ ಸ್ಕೂಟರ್ಗಳು ರಸ್ತೆಗಿಳಿದಿವೆ. ಈ ವರ್ಷ ಮುಗಿಯುವುದರೊಳಗೆ ಈ ಸಂಖ್ಯೆ ನೂರು ದಾಟಬಹುದು. ಇವುಗಳಲ್ಲಿ ಯಾವುದರ ಸಾಮರ್ಥ್ಯ ಎಷ್ಟು ಎಂದು ಪೊಲೀಸರು ತಲೆ ಕೆರೆದುಕೊಳ್ಳುವಷ್ಟರಲ್ಲಿ ಸ್ಕೂಟರ್ ಭರ್ರನೇ ಮುಂದಕ್ಕೆ ಸಾಗಿರುತ್ತದೆ. ನಂಬರ್ ಪ್ಲೇಟ್ ಅವಶ್ಯವಿಲ್ಲದಿರುವುದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವು ಸವಾರರು ಟ್ರಾಫಿಕ್ ಸಿಗ್ನಲ್ ನಿಯಮಗಳನ್ನು ಪಾಲಿಸುತ್ತಿಲ್ಲ. ಇನ್ನು ಅಪಘಾತ ವಿಮೆ ಅಗತ್ಯವಿಲ್ಲದ ಇ-ಸ್ಕೂಟರ್ಗಳು ಅಪಘಾತಕ್ಕೀಡಾದರೆ ಅಥವಾ ಅಪಘಾತ ಎಸಗಿದರೆ ನಷ್ಟಕ್ಕೆ ಚಾಲಕನೇ ಹೊಣೆಯಾಗಬೇಕು.

ಮೈಸೂರು ನಗರವೊಂದರಲ್ಲೇ 10 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ಗಳು ರಸ್ತೆಗಿಳಿದಿವೆ. ಇವುಗಳಲ್ಲಿ ನಂಬರ್ಪ್ಲೇಟ್ ರಹಿತ ಇ-ಸ್ಕೂಟರ್ಗಳೂ 40 ಕಿ.ಮೀ. ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವುದನ್ನು ಕಾಣಬಹುದು. ನಗರದ ಹೈಸ್ಕೂಲ್ ಮತ್ತು ಪಿಯು ಕಾಲೇಜುಗಳ ಮುಂದೆ ಈಗ ಸೈಕಲ್ಗಳಿಗಿಂತ ಇ-ಸ್ಕೂಟರ್ಗಳೇ ಹೆಚ್ಚು ಕಾಣಿಸಿಕೊಳ್ಳುತ್ತಿವೆ. 18 ವರ್ಷದೊಳಗಿನ ಈ ವಿದ್ಯಾರ್ಥಿಗಳನ್ನು ನಿಯಂತ್ರಿಸುವ ಸಂಚಾರಿ ನಿಯಮಗಳೂ ಇಲ್ಲ. ಜಾಗೃತಿ ಮೂಡಿಸುವವರೂ ಇಲ್ಲ. ತಮ್ಮ ಸಾಧನೆಗಳನ್ನು ಕೊಚ್ಚಿಕೊಳ್ಳಲು ಪುಟಗಟ್ಟಲೆ ಜಾಹೀರಾತು ನೀಡುವ ಸರಕಾರ, ಇ ಸ್ಕೂಟರ್ ಗಳ ಸುರಕ್ಷತೆ, ನಿರ್ವಹಣೆ, ಬಳಕೆ ವಿಚಾರದಲ್ಲೂ ತಿಳಿವಳಿಕೆ ನೀಡುವ ಜಾಹೀರಾತು ನೀಡಬೇಕಿತ್ತು. ಆದರೆ ಸೈರಸ್ ಮಿಸ್ತ್ರಿ ಸಾವಿನ ಬಗ್ಗೆ ಕಾಳಜಿ ತೋರುವ ಸರಕಾರಕ್ಕೆ ಶ್ರೀಸಾಮಾನ್ಯರ ಸಾವಿನ ಬಗ್ಗೆ ಆದರವೂ ಇಲ್ಲ. ಕಾಳಜಿಯೂ ಇಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ