Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ರಿಸರ್ವ್ ಬ್ಯಾಂಕಿನ ಬೆಳವಣಿಗೆ ಪೂರಕ ನಿಲುವು

ಪ್ರೊ.ಆರ್.ಎಂ.ಚಿಂತಾಮಣಿ

ಹಣದುಬ್ಬರ ನಿಯಂತ್ರಣದ ತನ್ನ ಪ್ರಾಥಮಿಕ ಜವಾಬ್ದಾರಿಯನ್ನು ನಿಭಾಯಿಸುವುದರೊಂದಿಗೆ ಬೆಳವಣಿಗೆಗೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿರುವ ಸಂದಿಗ್ಧ ಸ್ಥಿತಿಯಲ್ಲಿ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿಯ ತ್ರೈಮಾಸಿಕ ಸಭೆಯು ಕಳೆದ ವಾರ ನಡೆಯಿತು. ಸದ್ಯ ಹಣದುಬ್ಬರ ಶೇ.೬.೦ಕ್ಕಿಂತ ಮೇಲೆಯೇ ಮುಂದುವರಿಯುತ್ತಿರುವುದರಿಂದ ಮತ್ತು ಆಹಾರ ಪದಾರ್ಥಗಳ ಬೆಲೆಗಳು ಏರುಮುಖವಾಗಿಯೇ ಇರುವುದರಿಂದ ನೀತಿ ಬಡ್ಡಿ ದರಗಳನ್ನು ಹೆಚ್ಚಿಸಲೇಬೇಕಾದ ಅನಿವಾರ್ಯತೆ ಇತ್ತು. ಅದೇ ರೀತಿ ಉತ್ಪಾದಕ ಚಟುವಟಿಕೆಗಳಿಗೆ ಬಂಡವಾಳದ ಕೊರತೆಯಾಗದಂತೆ ಅರ್ಥ ವ್ಯವಸ್ಥೆಗೆ ನಗದು (ಹಣಕಾಸು Liquidity) ಹರಿವು (ಸಾಲಗಳು) ಅವಶ್ಯಕತೆ ಇರುವಷ್ಟು ಮುಂದುವರಿಯುವ ಅವಶ್ಯಕತೆಯೂ ಇತ್ತು.

ನಿರೀಕ್ಷೆಯಂತೆ ರಿಸರ್ವ್ ಬ್ಯಾಂಕ್ ಹಿಂದಿಗಿಂತ ಕಡಿಮೆ ಶೇ.೦.೩೫ರಷ್ಟು ರೆಪೊ ದರವನ್ನು (ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳಿಗೆ ತಾತ್ಕಾಲಿಕವಾಗಿ ಅವಕಾಶವಿದ್ದಾಗ ತಾನು ಅವುಗಳಿಗೆ ಒದಗಿಸುವ ಅಲ್ಪಾವಧಿ ಸಾಲಗಳ ಮೇಲಿನ ಬಡ್ಡಿ ದರ) ಹೆಚ್ಚಿಸಿದೆ. ಇದರಿಂದ ರೆಪೊ ದರ ಶೇ.೬.೨೫ಕ್ಕೆ ನಿಲ್ಲುತ್ತದೆ. ಇದೇ ಪ್ರಮಾಣದಲ್ಲಿ ಹೆಚ್ಚಾಗಿ ವಿಶೇಷ ಠೇವಣಿ ಬಡ್ಡಿದರ (ಬ್ಯಾಂಕುಗಳು ಇಡುವ ಅಲ್ಪಾವಽ ತಾತ್ಕಾಲಿಕ ಠೇವಣಿಗಳ ಮೇಲೆ ಕೊಡುವ ಬಡ್ಡಿದರ) ಶೇ.೬.೦೦ಗೆ ಹೆಚ್ಚುವುದು ಮತ್ತು ಅಂತಿಮ ಧಣಿಯಾಗಿ ಬ್ಯಾಂಕುಗಳಿಗೆ ಆಪತ್ಕಾಲದಲ್ಲ್ಲಿ ಕೊಡುವ ಸಾಲಗಳ ಮೇಲೆ ಆಕರಿಸುವ ಬ್ಯಾಂಕ್ ರೇಟ್ ಶೇ.೬.೫೦ಗೆ ಏರುತ್ತದೆ. ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಾಗಲಿದೆ.

ತನ್ನ ನಿಲುವಿನ ಬಗ್ಗೆ ರಿಸರ್ವ್ ಬ್ಯಾಂಕ್ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದೆ. ‘ಉದಾರ ನಿಲುವನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ’ ಎಂದಿದ್ದರೂ ಬೆಲೆಗಳು ಆರ್ಥಿಕ ಚಟುವಟಿಕೆಗಳು ಮತ್ತು ಬೆಳವಣಿಗೆಯ ಗತಿಯ ಮೇಲೆ ಕಣ್ಣಲ್ಲಿ ಕಣ್ಣಿಟ್ಟು ಪ್ರತಿಕ್ಷಣವೂ (ಅರ್ಜುನನ ಕೇಂದ್ರೀಕೃತ ದೃಷ್ಟಿಯಂತೆ) ಗಮನಿಸಲಾಗುವುದು. ಸ್ವಲ್ಪ ಹೆಚ್ಚು ಕಡಿಮೆಯಾದರೂ ತಕ್ಷಣ ಬೆಲೆಗಳ ಸ್ಥಿರತೆಗಾಗಿ ಮತ್ತು ಬೆಳವಣಿಗೆ ಸುಸ್ಥಿರತೆಯ ಕಡೆಗೆ ಮುನ್ನಡೆಯುವಂತೆ ಕೇಂದ್ರೀಯ ಬ್ಯಾಂಕಿನ ಮಿತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು’ ಇದಿಷ್ಟು ಭರವಸೆ ಸಾಕಲ್ಲವೇ? ಈಗ ಚೆಂಡು ಸರ್ಕಾರದ ಅಂಗಳದಲ್ಲಿದೆ ಬಜೆಟ್ ಮಂಡನೆಯ ದಿನಕ್ಕಾಗಿ ಕಾಯಬೇಕು.

ಹಣದುಬ್ಬರ ಈ ಹಣಕಾಸು ವರ್ಷದ ಕೊನೆಯವರೆಗೆ ಶೇ.೬.೦ರ ಆಸುಪಾಸಿನಲ್ಲೇ ಮುಂದುವರಿಯಲಿದೆ ಎಂದು, ೨೦೨೩-೨೪ರ ಮಧ್ಯಭಾಗದಲ್ಲಿ ಶೇ.೫.೦ಗೆ ಇಳಿದು ವರ್ಷಾಂತ್ಯಕ್ಕೆ ಶೇ.೪.೦ಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಒಟ್ಟಾದಾಯ (ಜಿಡಿಪಿ) ಅಂದಾಜನ್ನು ಶೇ.೭.೦ರಿಂದ ಕಡಿಮೆ ಮಾಡಿ ಈ ವರ್ಷ ಶೇ.೬.೮ರಷ್ಟು ಬೆಳವಣಿಗೆ ಕಾಣಲಿದೆ ಎನ್ನಲಾಗಿದೆ.

ಭಾಗಶಃ ಹೆಚ್ಚುತ್ತಿರುವ ಬೇಡಿಕೆ

ಇತ್ತೀಚಿನ ವರದಿಗಳ ಪ್ರಕಾರ ಆಟೋಮೊಬೈಲ್ ಎಲೆಕ್ಟ್ರಾನಿಕ್ಸ್ ಮುಂತಾದ ಉದ್ದಿಮೆಗಳ ಉತ್ಪನ್ನಗಳಲ್ಲಿ ಹೆಚ್ಚಿನ ಬೆಲೆಯು ಉತ್ಪನ್ನಗಳಿಗೆ(High End) ಹೆಚ್ಚು ಬೇಡಿಕೆ ಇದೆ ಮತ್ತು ಅವುಗಳ ಮಾರಾಟದಿಂದಲೇ ಆದಾಯ ಹೆಚ್ಚಾಗಿದೆ ಎಂದು ಕಂಪೆನಿಗಳ ತ್ರೈಮಾಸಿಕ ಹಣಕಾಸು ಪ್ರಕಟಣೆಗಳಿಂದ ತಿಳಿಯುತ್ತದೆ. ಅಂದರೆ ಬಹುಸಂಖ್ಯೆಯ ಸಾಮಾನ್ಯ ಜನರು ಖರೀದಿಸುವ ಕೆಳಮಟ್ಟದ (ಕಡಿಮೆ ಬೆಲೆಯ) ಸರಕುಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚುತ್ತಿಲ್ಲವೆಂದರ್ಥ. ಈ ಹಿಂದೆಯೇ ತೀವ್ರ ಮಾರಾಟವಾಗುವ ಗ್ರಾಹಕ ಸರಕುಗಳ (Fast moving consumer goods) ಕಂಪೆನಿಗಳು ಇಂಥದೇ ಸ್ಥಿತಿಯ ಬಗ್ಗೆ ವರದಿ ಮಾಡಿದ್ದವು. ಗ್ರಾಮೀಣ ಪ್ರದೇಶಗಳಲ್ಲಿ ಫ್ಯಾಕ್ಟರಿ ಉತ್ಪನ್ನಗಳಿಗೆ ಬೇಡಿಕೆ ಇನ್ನೂ ಕೆಳಮಟ್ಟದಲ್ಲಿಯೇ ಇದೆ.

ಇಂದಿನ ಹಣದುಬ್ಬರ ಮತ್ತು ನಾಳಿನ ಹಣದುಬ್ಬರದ ನಿರೀಕ್ಷೆ ಎರಡೂ ಕಾರಣಗಳಿಂದ ಕಡಿಮೆ ಆದಾಯದವರು ಆಹಾರ ಪದಾರ್ಥಗಳು ಮತ್ತು ಇನ್ನಿತರ ಅನಿವಾರ್ಯ ಸರಕುಗಳನ್ನು ಮಾತ್ರ ಖರೀದಿಸುತ್ತಾರೆ. ನಾಳಿನ ಅವಶ್ಯಕತೆಗಳಿಗಾಗಿ ಕೈಯಲ್ಲಿರುವ ಉಳಿತಾಯವನ್ನು ರಕ್ಷಿಸಿಕೊಳ್ಳುತ್ತಾರೆ. ಬೇಡಿಕೆ ಹೆಚ್ಚಬೇಕಾದರೆ ಜನರ ಕೈಯಲ್ಲಿ ದುಡ್ಡಿರಬೇಕು, ಕೊಳ್ಳುವ ಶಕ್ತಿ ಇರಬೇಕು, ಹಳ್ಳಿಗಳಲ್ಲಿ ಮುಂಗಾರು ಸುಗ್ಗಿ ಹಂಗಾಮ ಮುಗಿದಿದ್ದು, ಹಿಂಗಾರು ಸುಗ್ಗಿ ಇನ್ನೂ ಆರಂಭವಾಗಬೇಕು.

ರೆಪೊ ದರ ಹೆಚ್ಚಿರುವುದರಿಂದ ಬ್ಯಾಂಕು ಸಾಲಗಳು ಇನ್ನೂ ತುಟ್ಟಿಯಾಗಲಿವೆ. ಬ್ಯಾಂಕುಗಳು ಮತ್ತು ಹಣಕಾಸು ಕಂಪೆನಿಗಳ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಕೂಡಲೇ ಅದೇ ಪ್ರಮಾಣದಲ್ಲಿ ಹೆಚ್ಚಿಸಬೇಕು. ಅಂದರೆ ಬಡ್ಡಿ ಆದಾಯವನ್ನೇ ನಂಬಿಕೊಂಡಿರುವ ಮಹಿಳೆಯರು ಮತ್ತು ನಿವೃತ್ತರಿಗೆ ಅನುಕೂಲವಾಗುವುದಲ್ಲದೇ ಬ್ಯಾಂಕ್ ಠೇವಣಿಗಳೂ ಹೆಚ್ಚಾಗುತ್ತವೆ. ಸಮಾಧಾನದ ವಿಷಯವೆಂದರೆ ಹಿಂದಿನ ದಿನಗಳಿಗಿಂತ ಕಡಿಮೆ ದರದಲ್ಲಿ ಬ್ಯಾಂಕ್ ಸಾಲಗಳು ತುಟ್ಟಿಯಾಗುತ್ತವೆ. ಕಳೆದ ಮೇ ತಿಂಗಳಿಂದ ಅಕ್ಟೋಬರ್‌ವರೆಗೆ ರೆಪೊ ದರ ಶೇ.೧.೯೦ ಹೆಚ್ಚಾಗಿದ್ದು, ಬ್ಯಾಂಕ್ ಸಾಲಗಳ ಬಡ್ಡಿ ಭಾರ ಹೆಚ್ಚಾಗುತ್ತಿದ್ದರೂ ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ ಬ್ಯಾಂಕ್ ಸಾಲಗಳು ಶೇ.೬.೮ರಷ್ಟು ಮಾತ್ರ ಬೆಳೆದಿದ್ದರೆ, ಈ ಅಕ್ಟೋಬರ್‌ನಲ್ಲಿ ಶೇ.೧೭.೯ ರಷ್ಟು ಹೆಚ್ಚಾಗಿವೆ. ಇದರಲ್ಲಿ ಸೇವಾ ವಲಯದ ಕಂಪೆನಿಗಳಿಗೆ ಸಿಂಹಪಾಲು ಹೋಗಿದ್ದರೆ, ಗ್ರಾಹಕ ಸಾಲಗಳು ಮತ್ತು ಕೃಷಿ ಸಾಲಗಳು ಕಡಿಮೆ ಪ್ರಮಾಣದಲ್ಲಿ ಹೆಚ್ಚಿವೆ. ಇನ್ನು ಮುಂದೆ ಗ್ರಾಹಕ ಮತ್ತು ಸಣ್ಣ ವಾಹನ ಸಾಲಗಳು ಹೆಚ್ಚಾಗುವುದಾದರೆ ಎಲ್ಲ ವಲಯಗಳಲ್ಲಿಯೂ ಬೇಡಿಕೆ ಹೆಚ್ಚಾದೀತು.

ನಿರುದ್ಯೋಗ ಹೆಚ್ಚುತ್ತಿದೆ

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಸಾಪ್ತಾಹಿಕ ಮಾನವ ಸಂಪನ್ಮೂಲ ಪೇಟೆಯ ವರದಿಯ ಪ್ರಕಾರ, ಭಾರತದಲ್ಲಿ ಇದೇ ನವೆಂಬರ್ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಶೇ.೮.೦ಕ್ಕೆ ಹೆಚ್ಚಾಗಿತ್ತು. ಇದು ಅಕ್ಟೋಬರ್‌ನಲ್ಲಿ ಶೇ.೭.೭ ಇತ್ತು. ನಗರ ಪ್ರದೇಶಗಳಲ್ಲಿ ನಿರುದ್ಯೋಗ ಗಂಭೀರ ಎನ್ನಬಹುದಾದ ಮಟ್ಟಕ್ಕೆ ಈ ಒಂದು ತಿಂಗಳಲ್ಲಿ ಹೆಚ್ಚಾಗಿದೆ. ಅಕ್ಟೋಬರ್‌ನಲ್ಲಿ ಶೇ.೭.೨೧ ಇದ್ದಿದ್ದು, ನವೆಂಬರ್‌ನಲ್ಲಿ ಶೇ.೮.೯೬ಕ್ಕೆ ಏರಿದೆ. ಆದರೆ ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೇ.೮.೦೪ ರಿಂದ ಶೇ.೭.೫ಕ್ಕೆ ಇಳಿದಿದೆ.

ನವೆಂಬರ್ ತಿಂಗಳ ನಿರುದ್ಯೋಗ ಮಟ್ಟವು ಈ ಹಣಕಾಸು ವರ್ಷದಲ್ಲೇ ಎರಡನೇ ಅತಿ ಹೆಚ್ಚು. ಆಗಸ್ಟ್ ತಿಂಗಳಲ್ಲಿ ಶೇ.೮.೨ಕ್ಕೆ ತಲುಪಿತ್ತು. ಹಳ್ಳಿಗಳಲ್ಲಿ ವರದಿಯಾಗಿರುವಂತೆ ನರೇಗಾ ಉದ್ಯೋಗ ಭರವಸೆ ಯೋಜನೆಯ ಅಡಿಯಲ್ಲಿ ಹೆಚ್ಚು ಜನ ನೋಂದಾಯಿಸಿಕೊಳ್ಳುವುದನ್ನು ಗಮನಿಸಿದರೆ ಅಲ್ಲಿಯೂ ಪರಿಸ್ಥಿತಿ ಅಷ್ಟೇನೂ ತೃಪ್ತಿಕರ ಇಲ್ಲವೆಂದು ಗೊತ್ತಾಗುತ್ತದೆ. ನಗರಗಳಲ್ಲಿ ಕೋವಿಡ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡವರಲ್ಲಿ ಅನೇಕರಿಗೆ ಇನ್ನೂ ಸೂಕ್ತ ಕೆಲಸ ಸಿಗದೆ ಭದ್ರತೆ ಇಲ್ಲದೆ ಸಿಕ್ಕ ಕೆಲಸಗಳನ್ನು ಕೈ ಸೇರುವಷ್ಟು ಸಂಬಳಕ್ಕಾಗಿ ತಾತ್ಕಾಲಿಕವಾಗಿ ಮಾಡುತ್ತಿರುವವರೇ ಹೆಚ್ಚು. ಇದನ್ನು ಮುಸುಕಿನಲ್ಲಿಯ ನಿರುದ್ಯೋಗ ಎನ್ನಬಹುದು. ಈಗ ಇದನ್ನು ಸರಿಪಡಿಸಿ ಮಾನವ ಸಂಪನ್ಮೂಲದ ಸಮರ್ಥ ಬಳಕೆಯಾಗಿ ಉತ್ಪಾದನೆ ಹೆಚ್ಚುವಂತೆ ನೋಡಿಕೊಳ್ಳಬೇಕಾಗಿದೆ.

ಸರ್ಕಾರದ ತುರ್ತು ಕ್ರಮಗಳ ಅವಶ್ಯಕತೆ

ಮೊದಲು ಸರ್ಕಾರ ಉತ್ಪಾದಕ ಕೈಗಾರಿಕೆಗಳ ಸಮಸ್ಯೆಗಳತ್ತ ಗಮನ ಹರಿಸಬೇಕು. ಅವುಗಳು ಬೆಳೆದರೆ ನಿರುದ್ಯೋಗ ಸಮಸ್ಯೆಯು ಪರಿಹಾರವಾದೀತು. ಆಮದು ಮತ್ತು ರಫ್ತು ಸುಂಕಗಳಲ್ಲಿ ಸುಧಾರಣೆ ಮಾಡಿ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಉತ್ತೇಜಕಗಳನ್ನು ಹೆಚ್ಚು ಉದ್ದಿಮಿಗಳಿಗೆ ವಿಸ್ತರಿಸಬೇಕು. ಪಿಎಲ್‌ಐ ಯೋಜನೆ ನಿರೀಕ್ಷಿಸಿದಷ್ಟು ಫಲ ಕೊಡುತ್ತಿಲ್ಲ. ಅದನ್ನು ಇನ್ನಷ್ಟು ಕೈಗಾರಿಕಾ ಸ್ನೇಹಿಯಾಗಿ ಪರಿವರ್ತಿಸಬೇಕು.

ಸರ್ಕಾರದ ಬತ್ತಳಿಕೆಯಲ್ಲಿರುವ ‘ಮೂಲ ಸೌಲಭ್ಯಗಳ ಪೈಪ್‌ಲೈನ್’ನ್ನು ದೊಡ್ಡ ಪ್ರಮಾಣದಲ್ಲಿ ಈಗಲೇ ಜಾರಿಗೊಳಿಸಬೇಕು. ಕೈ ಬಿಟ್ಟ ಬಂಡವಾಳ ವೆಚ್ಚಗಳನ್ನು ಹೆಚ್ಚಿಸಬೇಕು. ಆಗ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ತೆರಿಗೆ ವ್ಯಾಜ್ಯಗಳಿಗೆ ಅವಕಾಶವಿಲ್ಲದಂತೆ ತೆರಿಗೆ ಆಡಳಿತ ಸುಧಾರಿಸಬೇಕು. ಸ್ಥಳೀಯ ಉದ್ಯಮಗಳಿಗೆ ಹೆಚ್ಚು ಉತ್ತೇಜನ ಕೊಟ್ಟು ಸಂಪನ್ಮೂಲಗಳ ಉತ್ಪಾದಕತೆ ಹೆಚ್ಚುವಂತೆ ನೋಡಿಕೊಂಡರೆ ವಿದೇಶಿ ನೇರ ಬಂಡವಾಳ ತಾನೇ ಹರಿದು ಬರುತ್ತದೆ. ‘ಸನ್ ರೈಜ್’ ಉದ್ಯಮಗಳು ಬೆಳೆಯಲು ಪೂರಕ ವಾತಾವರಣ ನಿರ್ಮಿಸಬೇಕು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ