ರೈಲ್ವೆ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಕನ್ನಡದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ನಿರಾಕರಿಸುವುದಾಗಿ ಆದೇಶಿಸಿರುವುದು ಕನ್ನಡಿಗರಿಗೆ ಮಾಡಿದ ಅಪಮಾನವಾಗಿದೆ.
ರೈಲ್ವೆ ಇಲಾಖೆಯ ಎಲ್ಲ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ನಡೆಸಲು ರೈಲ್ವೆ ಇಲಾಖೆ ತಯಾರಿ ಮಾಡಿಕೊಳ್ಳುತ್ತಿದೆ. ಅಲ್ಲದೆ ಪ್ರಾದೇಶಿಕ ಹುದ್ದೆಗಳ ನೇಮಕಾತಿಯಲ್ಲಿಯೂ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದಿದೆ. ಇಷ್ಟಿದ್ದರೂ ನೈಋತ್ಯ ರೈಲ್ವೆ ವಲಯದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕನ್ನಡದಲ್ಲಿ ಅರ್ಜಿಸಲ್ಲಿಸಿದರೆ ಅವುಗಳನ್ನು ತಿರಸ್ಕರಿಸುವುದಾಗಿ ರೈಲ್ವೆ ಅಧಿಕಾರಿಗಳು ಆದೇಶಿಸಿದ್ದು, ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿರುವುದು ನಿಜಕ್ಕೂ ಖಂಡನೀಯ.
ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ರೈಲ್ವೆ ಇಲಾಖೆಯ ಎಲ್ಲ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ನೀಡಲಾಗುವುದು ಎನ್ನುವುದರ ಜತೆಗೆ ಎಲ್ಲ ಅಧಿಕಾರಿಗಳೂ ಆದಷ್ಟು ಬೇಗ ಕನ್ನಡ ಕಲಿತು ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದು ಸೂಚಿಸಿದ್ದರು. ಆದರೆ ಕನ್ನಡದಲ್ಲಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸುವ ಮೂಲಕ ಕನ್ನಡ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಸರಿಯಲ್ಲ. ವಿ.ಸೋಮಣ್ಣನವರು ಈ ಬಗ್ಗೆ ಗಮನಹರಿಸಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಿದೆ.
-ಮಗು ಸದಾನಂದಯ್ಯ, ಅಧ್ಯಕ್ಷರು, ಕನ್ನಡ ಕ್ರಿಯಾ ಸಮಿತಿ ಹಾಗೂ ಶರಣ ಸಾಹಿತ್ಯ ಪರಿಷತ್, ಮೈಸೂರು ನಗರ ಘಟಕ.