ರಾಜ್ಯದಲ್ಲಿ ಇತ್ತೀಚೆಗೆ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದ್ದು, ಮೆಟ್ರೋ, ಬಸ್ ಪ್ರಯಾಣ ದರ, ಆಟೋ ಪ್ರಯಾಣ ದರ ಏರಿಕೆಯಿಂದಾಗಿ ಜನರು ಕಂಗಾಲಾಗಿರುವ ಬೆನ್ನಲ್ಲೇ ಮೈಸೂರಿಗರಿಗೆ ವಿದ್ಯುತ್, ಹಾಲಿನ ದರದ ಜತೆಗೆ ನೀರಿನ ದರ ಏರಿಕೆಯ ಚಿಂತೆಯೂ ಶುರುವಾಗಿದೆ.
ಮೈಸೂರು ಮಹಾನಗರ ಪಾಲಿಕೆಯು ರಾಜ್ಯ ಸರ್ಕಾರಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ ಅನಿಸುತ್ತೆ. ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದರೆ, ಇತ್ತ ಮಹಾನಗರ ಪಾಲಿಕೆಯು ನೀರಿನ ತೆರಿಗೆಯನ್ನು ಹೆಚ್ಚಿಸಿದ್ದು, ಈ ಹಿಂದೆ ೧೬೪ ರೂ. ಗಳಿದ್ದ ನೀರಿನ ಶುಲ್ಕವನ್ನು ೨೫೦ ರೂ. ಗಳಿಗೆ ಏರಿಸಿದೆ. ಒಳಚರಂಡಿ ಶುಲ್ಕವನ್ನು ೩೮ ರೂ. ಗಳಿಂದ ೭೫ ರೂ. ಗಳಿಗೆ ಏರಿಸಿದೆ. ಇನ್ನು ಸೇವಾ ಶುಲ್ಕವನ್ನು ೧ ರೂ. ಇದಿದ್ದನ್ನು ೨ ರೂ. ಗಳಿಗೆ ಏರಿಸಲಾಗಿದೆ.
ಆ ಮೂಲಕ ನೀರಿನ ತೆರಿಗೆಯನ್ನು ೩೨೭ ರೂ. ಗಳಿಗೆ ಏರಿಸಲಾಗಿದ್ದು, ಶೇ. ೧೦೦ಕ್ಕೂ ಅಧಿಕ ಪ್ರಮಾಣದಲ್ಲಿ ಏರಿಕೆ ಕಂಡಂತಾಗಿದೆ. ತಮ್ಮದು ಜನಪರ ಸರ್ಕಾರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ತಮ್ಮ ತವರು ಜಿಲ್ಲೆಯಲ್ಲಿ ದರ ಏರಿಕೆ ಪ್ರಹಾರಕ್ಕೆ ಜನರು ಕಂಗಾಲಾಗಿದ್ದರೂ ಇತ್ತ ಗಮನಹರಿಸದಿರುವುದು ಬೇಸರದ ಸಂಗತಿ. ಕೂಡಲೇ ಸಿದ್ದರಾಮಯ್ಯನವರು ಈ ಬಗ್ಗೆ ಗಮನಹರಿಸಿ ನೀರಿನ ದರ ಇಳಿಸುವಂತೆ ಪಾಲಿಕೆಗೆ ಸೂಚಿಸಬೇಕಿದೆ. -ವಿಜಯ್ ಹೆಮ್ಮಿಗೆ, ವಿಜಯನಗರ ರೈಲ್ವೆ ಬಡಾವಣೆ, ಮೈಸೂರು.





