ಭಾರತ ವಿವಿಧತೆಯಲ್ಲಿ ಏಕತೆ ಸಾಧಿಸಿರುವ ರಾಷ್ಟ್ರ. ಬ್ರಿಟಿಷರ ಆಡಳಿತದಿಂದ ಮುಕ್ತಿ ಪಡೆದ ನಂತರ ಭಾರತದ ಆಡಳಿತ ವ್ಯವಸ್ಥೆಗೆ ಒಂದು ಹೊಸ ಚೌಕಟ್ಟನ್ನು ಕಟ್ಟಲು ಸಂವಿಧಾನದ ರಚನೆಗೆ ಮುನ್ನುಡಿ ಬರೆಯಲಾಯಿತು. ಡಾ. ಬಿ. ಆರ್. ಅಂಬೇಡ್ಕರ್‌ರವರ ನೇತೃತ್ವದಲ್ಲಿ ಸುಮಾರು ೨ ವರ್ಷ, ೧೧ ತಿಂಗಳು ೧೮ ದಿನಗಳ ಅವಧಿಯಲ್ಲಿ ಬೃಹತ್ ಸಂವಿಧಾನವನ್ನು ರಚಿಸಿ ೧೯೪೯ರ ನವೆಂಬರ್ ೨೬ರಂದು ಅಂಗೀಕರಿಸಲಾಯಿತು.
ಪ್ರಜಾಸತ್ತಾತ್ಮಕ, ಆಡಳಿತಾತ್ಮಕ, ಜಾತ್ಯತೀತ, ಸಮಾನತೆಯನ್ನು ಸಾರುವ ಹಾಗೂ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳ ಮೂಲಕ ದೇಶವನ್ನು ಸುಭದ್ರಗೊಳಿಸಿರುವ ಸಂವಿಧಾನವನ್ನು ಓದಿ ಅದರ ಮಹತ್ವ ಅರಿಯಬೇಕಾದದ್ದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ.
ಜಾತಿ-ಧರ್ಮಗಳನ್ನು ಒಗ್ಗೂಡಿಸಿ, ಸಾಮಾಜಿಕ ಅಸಮಾನತೆಯನ್ನು ದೂರಾಗಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುವ ಆಶಯವನ್ನು ಹೊತ್ತ ಸಂವಿಧಾನವು ದೇಶದ ಬುಡಕಟ್ಟು ಸಮುದಾಯಗಳು, ಶೋಷಿತ ಹಾಗೂ ನೊಂದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಸಹಕಾರಿಯಾಗಿದೆ. ಇಂತಹ ಸಂವಿಧಾನವನ್ನು ಅಂಗೀಕಾರ ಮಾಡಿದ ಈ ದಿನವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸುವ ಮೂಲಕ ಸಂವಿಧಾನದ ಕುರಿತು ಜಾಗೃತಿ ಮೂಡಿಸಬೇಕಿದೆ.
-ಪಿ. ಸಿ. ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು.