ಚಿತ್ರ ನಟ ಯಶ್ ಅಭಿನಯದ ಟ್ಯಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾದ ಬಳಿಕ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಆಕ್ಷೇಪಾರ್ಹ ಹಸಿ ಬಿಸಿ ದೃಶ್ಯಗಳು ಅವರ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.
ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಅದಕ್ಕೆ ಯಾವುದೇ ತಡೆ ನಿಯಮವಿಲ್ಲ. ವೃದ್ಧರಿಂದ ಹಿಡಿದು ಮಕ್ಕಳವರೆಗೆ ಯೂಟ್ಯೂಬ್ ಬಳಕೆದಾರರು ಇರುವುದರಿಂದ ಟೀಸರ್ ನಲ್ಲಿರುವ ದೃಶ್ಯಗಳು ಅಪ್ರಾಪ್ತರ ಮನಸ್ಸಿನ ಮೇಲೆ ಪರಿಣಾಮ ಬೀರುವ ಆತಂಕವಿದೆ.
ಅಲ್ಲದೆ ಟೀಸರ್ ನಲ್ಲಿರುವ ಅಶ್ಲೀಲ ದೃಶ್ಯಗಳು ನಮ್ಮ ಕನ್ನಡದ ಸಾಂಸ್ಕೃತಿಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತವೆ. ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಸಿನಿಮಾದ ಟೀಸರ್ ಸಾಮಾಜಿಕ ನೈತಿಕತೆಯ ಮಿತಿಯನ್ನು ಮೀರಿದೆ. ಇಷ್ಟಕ್ಕೂ ಸಿನಿಮಾಗಳಿಗೆ ನೀಡುವ ಅನುಮತಿ ಟೀಸರ್, ಟ್ರೇಲರ್ ಗಳಿಗೆ ಏಕಿಲ್ಲ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಹೀಗಾಗಿ ಟೀಸರನ್ನು ಈ ಕೂಡಲೇ ರದ್ದುಗೊಳಿಸಿ ಸೋಶಿಯಲ್ ಮೀಡಿಯಾದಿಂದ ತೆಗೆದುಹಾಕಿ, ಇನ್ಮುಂದೆ ಟೀಸರ್, ಟ್ರೇಲರ್ ಗಳಿಗೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಅನುಮತಿ ಹಾಗೂ ಸ್ಪಷ್ಟ ಮಾರ್ಗಸೂಚನೆಯನ್ನು ತರುವ ಅವಶ್ಯಕತೆ ಇದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ





