ಬೆಂಗಳೂರಿನ ಮಹಿಳಾ ಪಿಜಿಯೊಂದಕ್ಕೆ ವ್ಯಕ್ತಿಯೊಬ್ಬ ಅಕ್ರಮವಾಗಿ ಪ್ರವೇಶಿಸಿದ್ದಲ್ಲದೇ ಮಹಿಳೆಯೊಬ್ಬರನ್ನು ಕೊಲೆ ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಘಟನೆ ಪಿಜಿಗಳಲ್ಲಿ ಉಳಿದುಕೊಂಡು ಉದ್ಯೋಗ ಮತ್ತು ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಣುಮಕ್ಕಳಲ್ಲಿ ಆತಂಕ ಸೃಷ್ಟಿಸಿದ್ದು, ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇದೆಯೇ? ಎಂಬ ಪ್ರಶ್ನೆ ಮೂಡಿಸಿದೆ. ಬೆಂಗಳೂರಿನ ಸಾಕಷ್ಟು ಮಹಿಳಾ ಪಿಜಿಗಳಲ್ಲಿ ವಿದ್ಯಾರ್ಥಿನಿಯರು, ಮಹಿಳಾ ಉದ್ಯೋಗಿಗಳು ಉಳಿದುಕೊಂಡಿದ್ದಾರೆ.
ಇವರಲ್ಲಿ ಅನೇಕರು ಗ್ರಾಮಾಂತರ ಭಾಗಗಳಿಂದ ಬಂದವರಾಗಿದ್ದಾರೆ. ಇಂತಹ
ಪಿಜಿಗಳಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕಾದದ್ದು ಪಿಜಿ ಮಾಲೀಕರ ಜವಾಬ್ದಾರಿ. ಆದರೆ ಇಲ್ಲಿ ಪಿಜಿಯೊಳಗೆ ವ್ಯಕ್ತಿಯೊಬ್ಬ ನುಗ್ಗಿ ಕೊಲೆ ಮಾಡಿಹೋಗಿದ್ದಾನೆ ಎಂದರೆ ಈ ಪಿಜಿಯಲ್ಲಿ ಭದ್ರತಾ ಲೋಪ ಇದೆ ಎಂದೇ ಅರ್ಥ, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಪಿಜಿ ಮಾಲೀಕರ ವಿರುದ್ಧವೂ ಕ್ರಮಕೈಗೊಳ್ಳುವ ಜತೆಗೆ ಅನುಮತಿ ಇಲ್ಲದೆ ನಡೆಸುತ್ತಿರುವ ಪಿಜಿಗಳನ್ನು ಮುಚ್ಚಿಸಬೇಕಿದೆ. ನಗರ ಪ್ರದೇಶಗಳಲ್ಲಿ ಪಿಜಿ ನಡೆಸುವವರು ಕಡ್ಡಾಯವಾಗಿ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು ಹಾಗೂ ಸೆಕ್ಯೂರಿಟಿಗಳನ್ನು ನಿಯೋಜಿಸುವಂತೆ
ಸೂಚಿಸಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.