ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ಐದು ಸಾವಿರ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ವಜಾ ಮಾಡಲು ಸರ್ಕಾರ ಮುಂದಾಗಿದೆ ಎಂಬುದಾಗಿ ವರದಿಯಾಗಿದೆ.
ಸರ್ಕಾರಿ ಶಾಲಾ-ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರರನ್ನು ನೇಮಿಸಿ ಕೊಳ್ಳುವುದು ಇಂದು ನಿನ್ನೆಯ ಬೆಳವಣಿಯಲ್ಲ. ಕಳೆದ 3-4 ದಶಕ ಗಳಿಂದಲೂ ಅರೆಕಾಲಿಕ, ತಾತ್ಕಾಲಿಕ ಹಾಗೂ ಅತಿಥಿ ಉಪನ್ಯಾಸಕ ಎಂದು ವಿವಿಧ ಹೆಸರುಗಳಲ್ಲಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿದೆ.
ಖಾಯಂ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುತ್ತಾ ಬಂದಿದೆ. ಹೀಗೆ ಅನೇಕ ವರ್ಷಗಳಿಂದ ಕಡಿಮೆ ಗೌರವಧನಕ್ಕೆ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರನ್ನು ಈಗ ಏಕಾಏಕಿ ಕೆಲಸದಿಂದ ವಜಾ ಮಾಡುತ್ತೇವೆ ಎಂದರೆ ಆ ಉಪನ್ಯಾಸಕರ ಬದುಕು ಏನಾಗಬೇಡ? ಸರ್ಕಾರ ಯಾವುದೇ ಸೌಲಭ್ಯಗಳನ್ನೂ ನೀಡದೆ, ಹುದ್ದೆಗೆ ಭದ್ರತೆಯನ್ನೂ ನೀಡದೆ ಹತ್ತಾರು ವರ್ಷಗಳ ಕಾಲ ದುಡಿಸಿಕೊಂಡು ಈಗ ಏಕಾಏಕಿ ಕೆಲಸದಿಂದ ತೆಗೆದುಹಾಕುವುದು ನ್ಯಾಯವೇ? ಸರ್ಕಾರ ಈ ಬಗ್ಗೆ ಚಿಂತಿಸಿ ಮೊದಲು ಅತಿಥಿ ಉಪನ್ಯಾಸಕರಿಗೆ ಕೆಲಸದ ಭದ್ರತೆ ಒದಗಿಸಲಿ.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ.





