ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯು ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಗಿದ್ದ ೯ ವಿಶ್ವವಿದ್ಯಾನಿಲಯಗಳನ್ನು ಮತ್ತೆ ಹಳೇ ವಿವಿಗಳ ಜೊತೆಗೆ ವಿಲೀನಗೊಳಿಸಲು ಮುಂದಾಗಿರು ವುದು ಶೈಕ್ಷಣಿಕ ಪ್ರಗತಿ ಮತ್ತು ಸಂಶೋಧನೆಗಳಿಗೆ ಪೂರಕವಾಗಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಸರ್ಕಾರ ಹೊಸ ವಿಶ್ವವಿದ್ಯಾನಿಲಯಗಳನ್ನು ಘೋಷಣೆ ಮಾಡಿದ್ದನ್ನು ಬಿಟ್ಟರೆ ಆ ವಿವಿಗಳಿಗೆ ಬೇಕಾದ ಅಗತ್ಯ ಮೂಲ ಸೌಕರ್ಯಗಳು ಮತ್ತು ಅನುದಾನವನ್ನು ಒದಗಿಸಲಿಲ್ಲ.
ಇದರಿಂದಾಗಿ ಗುಣಮಟ್ಟದ ಸಂಶೋಧನೆ ಮತ್ತು ವಿಶ್ವವಿದ್ಯಾನಿಲಯಗಳ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ‘ದೇಶ ಸುತ್ತು ಕೋಶ ಓದು’ ಎಂಬ ನಾಣ್ಣುಡಿಯಂತೆ ವಿಶ್ವವಿದ್ಯಾನಿಲಯಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಬೌದ್ಧಿಕ ವಿಕಸನ ಮತ್ತು ಸಾಂಸ್ಕೃತಿಕ ವಿನಿಮಯದ ಕೇಂದ್ರವಾಗಿರುವುದರಿಂದ ವಿವಿಗಳ ಅಭಿವೃದ್ಧಿ ಮುಖ್ಯ. ಈ ನಿಟ್ಟಿನಲ್ಲಿ ಡಿಕೆಶಿಯವರು ತೆಗೆದುಕೊಂಡಿರುವ ತೀರ್ಮಾನ ಅಭಿವೃದ್ಧಿಗೆ ಪೂರಕವಾಗಲಿದೆ. ಜಿಲ್ಲೆಗೊಂದು ವಿವಿಗಳು ಸ್ಥಾಪನೆಯಾದರೆ ಹಳೆಯ ಮತ್ತು ಹೊಸ ವಿವಿಗಳೆರಡರಲ್ಲೂ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಇಳಿಮುಖವಾಗುತ್ತದೆ. ಅಲ್ಲದೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಕಷ್ಟವಾಗುತ್ತದೆ. ಈಗಿರುವ ವಿವಿಗಳಲ್ಲಿಯೇ ಬೋಧಕರ ಮತ್ತು ಸಂಶೋಧನೆಯ ಕೊರತೆ ಎದ್ದುಕಾಣುತ್ತಿರುವ ಈ ಸಂದರ್ಭದಲ್ಲಿ ಇರುವ ಎಲ್ಲ ವಿವಿಗಳನ್ನೂ ಬಲಪಡಿಸುವಲ್ಲಿ ಸರ್ಕಾರ ಅಗತ್ಯಕ್ರಮ ವಹಿಸಿ ವಿವಿಗಳ ಘನತೆಯನ್ನು ಕಾಪಾಡಿಕೊಳ್ಳುವುದು ಔಚಿತ್ಯಪೂರ್ಣ. -ಡಾ. ಡಿ. ಶ್ರೀನಿವಾಸ ಮಣಗಳ್ಳಿ, ಸಹಾಯಕ ಪ್ರಾಧ್ಯಾಪಕರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯ, ಕಲಬುರಗಿ.





