ರಾಜ್ಯದಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಅನೇಕ ಕಡೆಗಳಲ್ಲಿ ಮನೆಗಳು ಕುಸಿದು ಬಿದ್ದು, ಆಸ್ತಿ-ಪಾಸ್ತಿ, ಜೀವ ಹಾನಿಗಳಾಗಿವೆ.
ಭಾರೀ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳ ಜಲಾಶಯಗಳು ತುಂಬಿ ಹರಿಯುತ್ತಿದ್ದು, ಅನೇಕ ಗ್ರಾಮಗಳು ಜಲಾವೃತಗೊಂಡಿವೆ.ಅಪಾರ ಪ್ರಮಾಣದ ಫಸಲು ನೀರುಪಾಲಾಗಿದ್ದು, ಮನೆಗಳು ಕುಸಿದು ಬಿದ್ದಿವೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸರ್ಕಾರದಿಂದ ಬೆಳೆ ಹಾನಿ ಹಾಗೂ ಕುಸಿದುಬಿದ್ದ ಮನೆಗಳ ಮರುನಿರ್ಮಾಣಕ್ಕಾಗಿ ಪರಿಹಾರ ಧನವನ್ನು ಕೊಡಲಾಗುತ್ತಿದೆ. ಆದರೆ ಈ ಪರಿಹಾರದ ಮೊತ್ತ ಫಲಾನುಭವಿಗಳ ಕೈ ಸೇರುವಷ್ಟರಲ್ಲಿ ವರ್ಷವೇ ಆಗುತ್ತಿದ್ದು, ಅಲ್ಲಿಯವರೆಗೂ ಮುರಿದುಬಿದ್ದ ಮನೆಗಳಲ್ಲಿಯೇ ವಾಸಿಸಬೇಕಾಗಿದೆ. ಈ ಪರಿಹಾರದ ಮೊತ್ತವೂ ಹಂತ ಹಂತವಾಗಿ ಕಂತುಗಳ ರೂಪದಲ್ಲಿ ಫಲಾನುಭವಿಗಳ ಕೈ ಸೇರುವುದರಿಂದ ಮನೆಯನ್ನು ಪರಿಪೂರ್ಣವಾಗಿ ನಿರ್ಮಿಸಲು ಒಂದೆರಡು ವರ್ಷಗಳಾದರೂ ಬೇಕು. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಿ ಮನೆ ಕಳೆದುಕೊಂಡವರಿಗೆ ಶೀಘ್ರವಾಗಿಯೇ ಪೂರ್ಣ ಪ್ರಮಾಣದ ಪರಿಹಾರಧನ ನೀಡಲು ಕ್ರಮವಹಿಸಬೇಕು.
-ಮಹೇಶ್, ಅಂತರಸಂತೆ, ಎಚ್.ಡಿ.ಕೋಟೆ ತಾ.





