ದೇಶದ ಸ್ವಚ್ಛನಗರಿಯಾಗಿ ಸತತ ಎರಡು ಬಾರಿ ಪ್ರಶಸ್ತಿ ಗಳಿಸಿದ್ದ ಸಾಂಸ್ಕೃತಿಕ ನಗರಿ ಮೈಸೂರು, ನಂತರ ಆ ಸ್ಥಾನವನ್ನು ಪಡೆಯಲು ಗಂಭೀರವಾಗಿ ಪ್ರಯತ್ನ ಮಾಡಿದಂತೆ ಕಾಣುತ್ತಿಲ್ಲ. ಇದೇ ಫೆ. ೧೫ರಿಂದ ಸ್ವಚ್ಛ ಸರ್ವೇಕ್ಷಣೆ ಆರಂಭ ವಾಗಲಿದೆ ಎಂಬ ಸುದ್ದಿ ಇದೆ. ಈ ಬಾರಿ ಮಹಾನಗರ ಪಾಲಿಕೆ ಮೈಸೂರು ಸ್ವಚ್ಛನಗರಿಯಾಗಿ ಹೊರ ಹೊಮ್ಮುವುದಕ್ಕೆ ತೀವ್ರ ರೀತಿಯಲ್ಲಿ ಪ್ರಯತ್ನ ಮಾಡಬೇಕು.
ಮುಖ್ಯವಾಗಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆಗೆ ನಗರಪಾಲಿಕೆ ಗಂಭೀರ ಯತ್ನ ಮಾಡಬೇಕು. ಏಕೆಂದರೆ ಹಿಂದಿನ ವರ್ಷ ಸಾರ್ವಜನಿಕರ ಒಳಗೊಳ್ಳುವಿಕೆ ಸಂಬಂಧ ಸರಿಯಾದ ಕ್ರಮವಹಿಸಲಿಲ್ಲ ಎಂಬ ದೂರು ಕೇಳಿಬಂದಿತ್ತು. ಜನರು ತಮ್ಮ ಅಭಿಪ್ರಾಯವನ್ನು ಹೇಗೆ, ಎಲ್ಲಿ ದಾಖಲಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ನಗರಪಾಲಿಕೆ ಅಧಿಕಾರಿಗಳು ಕಾರ್ಯತತ್ಪರರಾಗಬೇಕು. -ಜಿ. ವಿ. ಶ್ರೀನಿವಾಸ್, ಗೋಕುಲಂ, ಮೈಸೂರು.





