ಎಚ್. ಡಿ. ಕೋಟೆ ತಾಲ್ಲೂಕಿನ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಎಸ್‌ಬಿಐ ಬ್ಯಾಂಕಿನ ಎಟಿಎಂ ದಿನದ ಬಹುತೇಕ ಸಮಯದಲ್ಲಿ ಮುಚ್ಚಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಹ್ಯಾಂಡ್‌ಪೋಸ್ಟ್ ಎಚ್. ಡಿ. ಕೋಟೆ ಮತ್ತು ಸರಗೂರು ತಾಲ್ಲೂಕುಗಳಿಗೆ ಕೇಂದ್ರ ಬಿಂದುವಾ ಗಿದ್ದು, ಎರಡೂ ತಾಲ್ಲೂಕುಗಳ ಜನರು ಸೇರಿದಂತೆ ನೆರೆಯ ಕೇರಳ ರಾಜ್ಯದಿಂದಲೂ ಇಲ್ಲಿಗೆ ವ್ಯವಹಾರ ಉದ್ದೇಶಕ್ಕಾಗಿ ಜನರು ಬಂದು ಹೋಗುತ್ತಾರೆ. ಜತೆಗೆ ಎಚ್. ಡಿ. ಕೋಟೆ ಈಗ ಪ್ರವಾಸೋದ್ಯಮ ಕೇಂದ್ರವಾಗಿಯೂ ರೂಪುಗೊಳ್ಳುತ್ತಿದ್ದು, ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಎಟಿಎಂಗಳು ದಿನದ ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ.
ಆದರೆ ಸರ್ಕಲ್ ಸಮೀಪದಲ್ಲೇ ಇರುವ ಎಸ್‌ಬಿಐ ಬ್ಯಾಂಕಿನ ಎಟಿಎಂ ದಿನದ ಬಹುತೇಕ ಸಮಯದಲ್ಲಿ ಮುಚ್ಚೇ ಇರುತ್ತದೆ. ಕೆಲ ದಿನಗಳಂತೂ ತಾಂತ್ರಿಕ ಸಮಸ್ಯೆಯಿಂದಾಗಿಯೂ ಎಟಿಎಂಗೆ ಬೀಗ ಹಾಕಲಾಗಿರುತ್ತದೆ. ಇದರಿಂದಾಗಿ ಸಾರ್ವಜನಿಕರು ಹಣ ಪಡೆದುಕೊಳ್ಳಲು ಖಾಸಗಿ ಬ್ಯಾಂಕುಗಳ ಎಟಿಎಂ ಮೊರೆ ಹೋಗಬೇಕಾಗಿದ್ದು, ಅಧಿಕ ಶುಲ್ಕ ಪಾವತಿಸಿ ಹಣ ವಿತ್‌ಡ್ರಾ ಮಾಡಬೇಕಾಗಿದೆ. ಆದ್ದರಿಂದ ಹ್ಯಾಂಡ್‌ಪೋಸ್ಟ್‌ನ ಎಸ್‌ಬಿಎಂ ಬ್ಯಾಂಕ್ ವ್ಯವಸ್ಥಾಪಕರು ಈ ಬಗ್ಗೆ ಗಮನಹರಿಸಿ ದಿನದ ೨೪ ಗಂಟೆಗಳ ಕಾಲವೂ ಎಟಿಎಂ ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್. ಡಿ. ಕೋಟೆ ತಾ.




