ಡಿಸೆಂಬರ್ ೩೧ರಂದು ಹೊಸ ವರ್ಷದ ಆಚರಣೆಯ ಪ್ರಯುಕ್ತ ಯುವ ಸಮೂಹ ಮದ್ಯದ ಕೂಟದಲ್ಲಿ ಮುಳುಗಿ ಹೋಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಒಂದೇ ದಿನ ಈ ಬಾರಿ ದಾಖಲೆಯ ೩೦೫ ಕೋಟಿ ರೂ. ಮದ್ಯ ಮಾರಾಟವಾಗಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲು ಎನ್ನಲಾಗುತ್ತಿದೆ. ಡಿಸೆಂಬರ್ ೩೧ರ ರಾತ್ರಿ ಮದ್ಯದ ಕೂಟಗಳು ಎಷ್ಟರಮಟ್ಟಿಗೆ ಜರುಗಿದವು ಎಂದರೆ ಜನವರಿ ೧ರಂದು ಯಾವುದೇ ಪಾರ್ಕ್, ಕೆರೆ, ಹಿನ್ನೀರಿನ ಪ್ರದೇಶಗಳನ್ನು ನೋಡಿದರೂ ಮದ್ಯದ ಬಾಟಲಿಗಳೇ ತುಂಬಿ ಹೋಗಿದ್ದವು. ಇನ್ನು ಕೆಲ ರಸ್ತೆ ಬದಿಗಳಲ್ಲಂತೂ ಇಂದಿಗೂ ಕುಡಿದು ಬಿಸಾಡಿದ ಗಾಜಿನ ಬಾಟಲಿಗಳು ಹರಡಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಗಾಜಿನ ಬಾಟಲಿಗಳನ್ನು ಪುನರ್ಬಳಕೆಗೆ ಯಾರೂ ತೆಗೆದುಕೊಳ್ಳದ ಕಾರಣ, ಚಿಂದಿ ಸಂಗ್ರಹಿಸುವವರೂ ಈ ಬಾಟಲಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಗಾಜಿನ ಬಾಟಲಿಗಳು ರಸ್ತೆ ಬದಿಯಲ್ಲಿ, ಪಾರ್ಕ್‌ಗಳಲ್ಲೇ ಬಿದ್ದಿವೆ. ಇದರಿಂದಾಗಿ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದೆ. ಮದ್ಯ ಮಾರಾಟದಿಂದ ಅಽಕ ಆದಾಯ ಪಡೆಯುತ್ತಿರುವ ರಾಜ್ಯ ಸರ್ಕಾರ ಮದ್ಯದ ಬಾಟಲಿಗಳ ಪುನರ್ಬಳಕೆಯ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮದ್ಯದ ಬಾಟಲಿಗಳ ವಿಲೆವಾರಿಯೇ ರಾಜ್ಯ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ,





