ಮಹಾರಾಷ್ಟ್ರದಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿನ ಸಿಬ್ಬಂದಿ ಕಡ್ಡಾಯವಾಗಿ ಮರಾಠಿ ಭಾಷೆಯಲ್ಲಿ ಮಾತನಾಡಬೇಕು ಎಂದು ಅಲ್ಲಿನ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದ್ದು, ಅದು ಇನ್ನೂ ಚರ್ಚೆಯಾಗುತ್ತಿರುವಾಗಲೇ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ರಾಜ್ ಠಾಕ್ರೆಯವರು ಮಹಾರಾಷ್ಟ್ರದಲ್ಲಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಎಲ್ಲಾ ವ್ಯವಹಾರವನ್ನು ರಾಜ್ಯದ ಅಧಿಕೃತ ಆಡಳಿತ ಭಾಷೆಯಾದ ಮರಾಠಿ ಯಲ್ಲಿ ಮಾಡುವಂತೆ ಕಡ್ಡಾಯಗೊಳಿಸಲು ಆಗ್ರಹಿಸಿದ್ದಾರೆ.
ಅವರು ಹೇಳಿಕೆ ನೀಡಿದ ೨೪ ಗಂಟೆಯೊಳಗಾಗಿ ಮಹಾರಾಷ್ಟ್ರದ ಲೋನವಾಲಾದಲ್ಲಿ ಕೆಲವರು ಬ್ಯಾಂಕ್ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಬ್ಯಾಂಕಿನಲ್ಲಿ ಹಿಂದಿ ಭಾಷೆಯಲ್ಲಿ ವ್ಯವಹರಿಸುವುದನ್ನು ಸಮರ್ಥಿಸಿಕೊಂಡ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ. ಭಾಷೆ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯವಾಗಿದ್ದು, ಅದು ಸಮೂಹ ಸನ್ನಿಯಂತೆ ದೇಶಾದ್ಯಂತ ಹರಡಿ ಈಗಾಗಲೇ ಗೊಂದಲದಲ್ಲಿರುವ ಭಾಷಾ ವಿವಾದವನ್ನು ಹೆಚ್ಚು ಮಾಡುವ ಅಪಾಯವಿದೆ. ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ಕೊಡದೆ ಹಿಂದಿ ಭಾಷೆಯನ್ನು ರಾಷ್ಟ್ರೀಯತೆ ಹೆಸರಿನಲ್ಲಿ ಹೇರುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. –
ರಮಾನಂದ ಶರ್ಮಾ, ಬೆಂಗಳೂರು




