Mysore
24
mist

Social Media

ಭಾನುವಾರ, 10 ನವೆಂಬರ್ 2024
Light
Dark

ಓದುಗರ ಪತ್ರ| ಕನ್ನಡ ಚಿತ್ರರಂಗಕ್ಕೆ ಕೃತಜ್ಞತೆ ಇದೆಯೇ?

ಡಾ.ಪಿ.ವಿ.ನಾಗರಾಜುರವರು ತಮ್ಮ ಸಂಶೋಧನಾ ಪ್ರಬಂಧವನ್ನು ‘ಹಚ್ಚೇವು ಕನ್ನಡದ ದೀಪ’ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾ ರೆಂಬುದಾಗಿ ‘ಆಂದೋಲನ’ ದಿನಪತ್ರಿಕೆಯಲ್ಲಿ ಲೇಖನವೊಂದು ಪ್ರಕಟಗೊಂಡಿದ್ದು, ಪಿ.ವಿ.ನಾಗರಾಜುರವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

‘ಕರ್ನಾಟಕ ರಾಜ್ಯವು ರೂಪುಗೊಳ್ಳುವಲ್ಲಿ, ರೂಪುಗೊಂಡ ಬಳಿಕ ತನ್ನ ಚಹರೆಯನ್ನು
ರೂಪಿಸಿಕೊಳ್ಳುವಲ್ಲಿ ಚಲನಚಿತ್ರೋದ್ಯಮವು ಹೇಗೆ ಉಪಕರಣವಾಗಿ ದುಡಿದಿದೆ’ ಎಂಬ ಚರಿತ್ರೆಯನ್ನು ಹಿಡಿದಿಡಲು ಯತ್ನಿಸಿರುವುದು ಈ ಮಹಾಪ್ರಬಂಧದಲ್ಲಿ ದಾಖಲಾಗಿದೆ ಎಂಬುದಾಗಿ ಲೇಖಕ ಡಾ.ರಹಮತ್ ತರೀಕೆರೆ ತಿಳಿಸಿದ್ದಾರೆ. ಕರ್ನಾಟಕದ ಅಸ್ಥಿತೆಯನ್ನು ಕೇಂದ್ರವಾಗಿಟ್ಟುಕೊಂಡು ಹಾಡುಗಳನ್ನು ವಿಶ್ಲೇಷಿಸಿದ್ದಾರೆ ಎಂಬುದಾಗಿಯೂ ಅವರು ಉಲ್ಲೇಖಿಸಿರುವುದು ಕುತೂಹಲದಾಯಕವಾದ ವಿಷಯ.

ಕನ್ನಡ ಚಿತ್ರರಂಗವನ್ನು ಬೆಳೆಸಿದ್ದು ಕನ್ನಡ ಚಳವಳಿಗಳು ಎಂದರೆ ತಪ್ಪಾಗಲಾರದು. ವರ್ಷಕ್ಕೆ 6-7 ಕನ್ನಡ ಚಿತ್ರಗಳು ನಿರ್ಮಾಣವಾಗುತ್ತಿದ್ದ ದಯನೀಯ ಸ್ಥಿತಿಯಲ್ಲಿ ಆರಂಭವಾದ ಈ ಕನ್ನಡ ಚಳವಳಿಯ ಉದ್ದಕ್ಕೂ ಕನ್ನಡ ಚಿತ್ರಗಳನ್ನು ನೋಡಬೇಕು, ಪರಭಾಷೆಯ ಚಿತ್ರಗಳ ಡಬ್ಬಿಂಗ್ ನಿಲ್ಲಬೇಕು, ಚಿತ್ರೋದ್ಯಮ ಕರ್ನಾಟಕದಲ್ಲಿ (ಆಗ ಮೈಸೂರು ರಾಜ್ಯ) ನೆಲೆ ನಿಲ್ಲಬೇಕು, ಸರ್ಕಾರ ಚಿತ್ರೋದ್ಯಮಕ್ಕೆ ನೆರವು ನೀಡಬೇಕು ಎಂಬ ಬೇಡಿಕೆಗಳನ್ನು ಕನ್ನಡ ಪರ ಚಳವಳಿಗಾರರಾದ ಕೋಣಂದೂರು ಲಿಂಗಪ್ಪ, ಅನಕೃ, ನಾಡಿಗೇರ ಕೃಷ್ಣರಾಯ, ಮ.ರಾಮಮೂರ್ತಿ, ಎಂ.ಎಸ್.ನಟರಾಜನ್, ಅನಂತರದ ದಿವಸಗಳಲ್ಲಿ ವಾಟಾಳ್ ನಾಗರಾಜ್ ಬಲವಾಗಿ ಪ್ರತಿಪಾದಿಸಿದರು. ಇದರಿಂದಾಗಿ ಕನ್ನಡ ಚಿತ್ರಗಳ ನಿರ್ಮಾಣ ಹೆಚ್ಚಾದವು. ಕಾದಂಬರಿಗಳ ಆಧಾರದ ಮೇಲೆ ಚಲನಚಿತ್ರಗಳು ತಯಾರಾದವು. ಸಬ್ಸಿಡಿ ಯೋಜನೆ ಬಂತು. ಅನೇಕ ಲೇಖಕರು ಚಿತ್ರಗಳತ್ತ ಗಮನಹರಿಸಿದರು.

ಕನ್ನಡ ಚಲನಚಿತ್ರಗಳನ್ನು ಈ ಚಳವಳಿಗಳ ಹಿನ್ನೆಲೆಯಲ್ಲಿ ಹಲವು ಸಲ ನೋಡಿದವರನ್ನೂ ನಾನು ಬಲ್ಲೆ. ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ಯಾವ ಚಿತ್ರ ಮಂದಿರವೂ ಕನ್ನಡ ಚಿತ್ರ ಪ್ರದರ್ಶಿಸುತ್ತಿರಲಿಲ್ಲ. ಅದಕ್ಕೆ ಹೋರಾಟ ಮಾಡಿ, ಜಿ.ವಿ.ಅಯ್ಯರ್ ಅವರ ‘ಬಂಗಾರಿ’ (ಕೃಷ್ಣಮೂರ್ತಿ ಪುರಾಣಿಕರ ದೇವರಕೂಸು) ಮೊತ್ತ ಮೊದಲ ಬಾರಿಗೆ ಅಲಂಕಾ‌ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು.

ಈಗಿನ ಚೆನ್ನೈನಲ್ಲಿ ಚಿತ್ರೀಕರಣಕ್ಕೆ ಅನುಭವಿಸುತ್ತಿದ್ದ ಸಂಕಟ ನಿವಾರಣೆಗೆ ಬಾಲಕೃಷ್ಣ ‘ಅಭಿಮಾನ್’ ಸ್ಟುಡಿಯೋಗೆ ಪ್ರಯತ್ನ ಶುರುಮಾಡಿದರು. ಇದರಿಂದಾಗಿ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಆರು ಫೋರುಗಳಲ್ಲಿ ಚಿತ್ರೀಕರಣ ನಡೆಯುವಂತಾಯಿತು. ಭಾರತೀಯ ಚಲನಚಿತ್ರರಂಗ ಕನ್ನಡದತ್ತ ನೋಡುವಂತಾಯಿತು. ಆದರೆ ಕನ್ನಡ ಚಿತ್ರರಂಗಕ್ಕೆ ಆ ನೆನಪು ಮತ್ತು ಕೃತಜ್ಞತೆ ಇದೆಯೇ?

-ಕೆ.ವೆಂಕಟರಾಜು, ಚಾಮರಾಜನಗರ.

Tags: