ವಿಧಾನಮಂಡಲದ ಅಧಿವೇಶನದ ವೇಳೆ ಅನೇಕ ಶಾಸಕರು ವಿಧಾನಸೌಧದೊಳಗೇ ನಿದ್ರೆಗೆ ಜಾರುತ್ತಿದ್ದು, ಶಾಸಕರಿಗೆ ಮಧ್ಯಾಹ್ನ ಊಟವಾದ ಮೇಲೆ ವಿಶ್ರಾಂತಿಗೆ ಸಮಯ ನೀಡ ಬೇಕು ಎಂಬ ಪ್ರಸ್ತಾವನೆ ಕೇಳಿ ಬಂದಿದೆಯಂತೆ.
ಇಂತಹದೊಂದು ಅರ್ಥಹೀನ ಪ್ರಸ್ತಾವನೆ ಅಽವೇಶನದಲ್ಲಿ ಕೇಳಿಬಂದಿರುವುದು ಶಾಸಕರ ಬೇಜವಾಬ್ದಾರಿತನವನ್ನು ತೋರುತ್ತದೆ. ಶಾಸಕರು ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸಿ ಸುಸ್ತಾಗಿರುತ್ತಾರೆ. ಅವರಿಗೆ ವಿಶ್ರಾಂತಿ ಪಡೆಯಲು ಸಮಯಬೇಕು ಎಂದು ಕೇಳಿರುವುದು ನಾಚಿಕೆಗೇಡಿನ ಸಂಗತಿ. ಶಾಸಕರಿಗೆ ಹೀಗೆ ಅನವಶ್ಯಕ ಅನುಕೂಲತೆಗಳನ್ನು ಸೃಷ್ಟಿಸುವುದು ಅಧಿವೇಶನದಲ್ಲಿಯೇ ನಿದ್ರೆಗೆ ಜಾರುವ ಅವರನ್ನು ಮತ್ತಷ್ಟು ಸೋಮಾರಿಗಳನ್ನಾಗಿ ಮಾಡುವ ಜತೆಗೆ ರಾಜ್ಯದ ಖಜಾನೆಯೂ ಖಾಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸರ್ಕಾರ ಇಂತಹ ಅಸಂಬದ್ಧ ವಿಚಾರಗಳಿಗೆ ಕಡಿವಾಣ ಹಾಕಬೇಕು. -ಎ. ಎಸ್. ಗೋಪಾಲಕೃಷ್ಣ, ರಾಮಕೃಷ್ಣನಗರ, ಮೈಸೂರು.





