ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಸುಂದರ ಪ್ರವಾಸಿ ತಾಣ ನಂಜನಗೂಡಿನ ಪ್ರಮುಖ ರಸ್ತೆಗಳಲ್ಲಿಯೇ ಬೀದಿ ದೀಪಗಳಿಲ್ಲದ ಪರಿಣಾಮ ಕತ್ತಲಾಗುತ್ತಿದ್ದಂತೆ ಜನರು ಪರದಾಡುವಂತಾಗಿದೆ.
ನಂಜನಗೂಡಿನ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದ ಮುಂಭಾಗದಿಂದ ಚಾಮರಾಜನಗರಕ್ಕೆ ತೆರಳುವ ಹೆದ್ದಾರಿಯಲ್ಲಿ ಸುಮಾರು ಒಂದು ಕಿಲೋಮೀಟರ್‌ವರೆಗೂ ಬೀದಿ ದೀಪಗಳಿಲ್ಲದ ಪರಿಣಾಮ ವಾಹನ ಸವಾರರಿಗೆ ರಾತ್ರಿಯ ವೇಳೆ ವಾಹನ ಚಲಾಯಿಸುವುದು ಕಷ್ಟವಾಗುತ್ತಿದೆ. ಈ ರಸ್ತೆಯಲ್ಲಿ ಹೆಚ್ಚಿನ ತಿರುವುಗಳಿರುವುದರಿಂದ ವೇಗವಾಗಿ ಬರುವ ವಾಹನಗಳಿಗೆ ಪಾದಚಾರಿಗಳು ಕಾಣದೆ ಅಪಘಾತಗಳಾಗುವ ಅಪಾಯವಿದೆ. ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಈ ರಸ್ತೆಯ ಮೂಲಕವೇ ಹೆಚ್ಚಿನ ಜನರು ಆಗಮಿಸುತ್ತಾರೆ. ಅದರಲ್ಲಿಯೂ ರಾತ್ರಿಯ ವೇಳೆ ಹೆಚ್ಚು ಭಕ್ತಾದಿಗಳು ಬರುತ್ತಾರೆ. ವಾಹನ ದಟ್ಟಣೆ ಹೆಚ್ಚಾಗಿರುವ ಈ ರಸ್ತೆಗೆ ವಿದ್ಯುತ್ ದೀಪಗಳನ್ನು ಅಳವಡಿಸದಿರುವುದು ಅಪಘಾತಗಳಿಗೆ ಆಹ್ವಾನ ನೀಡಿದಂತಿದೆ. ಆದ್ದರಿಂದ ಸಂಬಂಧಪಟ್ಟ ಅಽಕಾರಿಗಳು ಈ ಬಗ್ಗೆ ಗಮನಹರಿಸಿ ರಸ್ತೆಗೆ ವಿದ್ಯುತ್ ದೀಪಗಳನ್ನು ಅಳವಡಿಸಬೇಕಿದೆ. -ನಾಗೇಶ್, ಮಾನಸಗಂಗೋತ್ರಿ, ಮೈಸೂರು.





