ಆರೋಗ್ಯ ಇಲಾಖೆಯೊಂದಿಗೆ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮೈಸೂರಿನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಆಧಾರಸ್ತಂಭದಂತೆ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಬಡಜನರ ಮನೆ ಮನೆಗೆ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ದೊಡ್ಡದು. ಕಳೆದ ೧೫ ವರ್ಷಗಳಿಂದ ತಾಯಿ ಹಾಗೂ ಶಿಶುಗಳ ಮರಣ ಪ್ರಮಾಣ ತಗ್ಗಿದೆ, ವಿವಿಧ ಸಾಂಕ್ರಾಮಿಕ ರೋಗಗಳು ದೂರಾಗಿವೆ ಎಂದರೆ ಅದಕ್ಕೆ ಮುಖ್ಯ ಕಾರಣ ಆಶಾ ಕಾರ್ಯಕರ್ತೆಯರ ಜಾಗೃತಿ ಎಂದರೆ ತಪ್ಪಾಗಲಾರದು.
ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಆರೋಗ್ಯ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಅತ್ಯುತ್ತಮ ಸೇವೆ ಸಲ್ಲಿಸಿದ ಕೀರ್ತಿ ಇವರದು. ಇವರ ಸೇವೆಯನ್ನು ಮೆಚ್ಚಿ ಕೇಂದ್ರ ಸರ್ಕಾರ ಪ್ರಶಂಸನಾ ಪತ್ರ ನೀಡಿದೆಯೇ ವಿನಾ ಇವರಿಗೆ ಬೇಕಾದ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದೆ. ಕನಿಷ್ಠ ಪಕ್ಷ ಅವರ ಸೇವೆಗೆ ತಕ್ಕಂತೆ ಪ್ರೋತ್ಸಾಹಧನವನ್ನು ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿರುವುದು ಶೋಚನೀಯ.
ಕರ್ನಾಟಕದಲ್ಲಿ ವಿಶೇಷ ಪೋರ್ಟಲ್ ಆಶಾ ನಿಧಿ ಮೂಲಕ ಆನ್‌ಲೈನ್ ಎಂಟ್ರಿ ಮಾಡಿಸಿದ್ದರೂ ಕಳೆದ ೮-೯ ವರ್ಷಗಳಿಂದ ಆಶಾ ಕಾರ್ಯಕರ್ತೆಯರು ಸರಿಯಾದ ಸಮಯಕ್ಕೆ ಪ್ರೋತ್ಸಾಹ ಧನ ಪಡೆದುಕೊಳ್ಳಲೂ ಪರದಾಡುವಂತಾಗಿದೆ. ಪರಿಣಾಮ ಇದೇ ಸಮಸ್ಯೆಯನ್ನು ಮುಂದಿಟ್ಟುಕೊಂಡು ನಿರಂತರವಾಗಿ ಹೋರಾಟ ಮಾಡುವ ಪರಿಸ್ಥಿತಿ ಇವರಿಗೆ ಎದುರಾಗಿದೆ. ಆದರೂ ಕೇಂದ್ರ, ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ಬೇಡಿಕಗಳ ಈಡೇರಿಕೆಯ ಕುರಿತು ಬೇಜವಾಬ್ದಾರಿ ತೋರುತ್ತಿರುವುದು ಅಮಾನವೀಯತೆಯೇ ಸರಿ. ಈಗಲಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಆಶಾ ಕಾರ್ಯಕರ್ತೆಯರ ನ್ಯಾಯಯುತವಾದ ಎಲ್ಲ ಬೇಡಿಕೆಗಳನ್ನು ಈಡೇರಿಸಲಿ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.