ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ರಂಜಾನ್ ಹಬ್ಬದ ಆಚರಣೆಗಾಗಿ ಮುಸ್ಲಿಂ ಸಮುದಾಯದ ಸರ್ಕಾರಿ ನೌಕರರಿಗೆ ಕೆಲಸದ ಅವಧಿಯಲ್ಲಿ ಒಂದು ಗಂಟೆ ಕಡಿತಗೊಳಿಸಲು ಅಲ್ಲಿನ ಸರ್ಕಾರ ಆದೇಶ ನೀಡಿದ್ದು, ಕರ್ನಾಟಕದಲ್ಲೂ ಅದೇ ಮಾದರಿಯಲ್ಲಿ ಮುಸ್ಲಿಂ ಸಮುದಾಯದ ನೌಕರರಿಗೆ ಕೆಲಸದ ಅವಧಿಯಲ್ಲಿ ಸಡಿಲ ನೀಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮನವಿ ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಒಂದು ಗಂಟೆ ಕಾರ್ಯಾವಽಯನ್ನು ಸಡಿಲಗೊಳಿಸಿದ್ದರೆ, ಕರ್ನಾಟಕದಲ್ಲಿ ಮಾತ್ರ ೨ ತಾಸಿನ ಕಾರ್ಯಾವಧಿಯ ಕಡಿತಕ್ಕೆ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರವು ಈ ಬೇಡಿಕೆಗೆ ಸ್ಪಂದಿಸುವ ಸಾಧ್ಯತೆ ಹೆಚ್ಚಾಗಿದ್ದು, ಈ ಬೇಡಿಕೆ ಸರಿಯೋ ತಪ್ಪೋ ಎನ್ನುವುದು ಚರ್ಚಾಸ್ಪದ ವಿಷಯವಾಗಿದೆ. ಆದರೆ, ಒಮ್ಮೆ ಇಂತಹ ಬೇಡಿಕೆಗಳಿಗೆ ಸ್ಪಂದಿಸಿದರೆ ಇತರೆ ಸಮುದಾಯ ದವರಿಂದಲೂ ಇಂತಹ ಬೇಡಿಕೆಗಳು ಬರಬಹುದು. ಇದರಿಂದ ಸರ್ಕಾರ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗಬಹುದು. ಆದ್ದರಿಂದ ಸರ್ಕಾರ ಈ ಬೇಡಿಕೆಯ ಪೂರ್ವಾಪರ ಚಿಂತಿಸಿ ನಿರ್ಣಯ ಕೈಗೊಳ್ಳ ಬೇಕು. -ರಮಾನಂದ ಶರ್ಮಾ, ಜೆ. ಪಿ. ನಗರ, ಬೆಂಗಳೂರು





