ಬ್ರಾಹ್ಮಣಶಾಹಿ ಸಂಸ್ಕತಿಯ ಮೇಲಾಧಿಪತ್ಯದ ವಿರುದ್ಧ ಈವರೆಗಿನ ಸಮ್ಮೇಳನಗಳ ಭಾಷಣಗಳು-ನಿರ್ಣಯಗಳು ತೋರಲಾಗದ ಪರಿಣಾಮಕಾರಿ ಪ್ರತಿರೋಧವನ್ನು ಸಾಂಕೇತಿಕವಾಗಿಯೇ ಆದರೂ ಮಂಡ್ಯದ ಬಾಡೂಟ ಬಳಗದ ಹೋರಾಟ ತೋರಿದೆ.
ಈ ಹೋರಾಟ ಸಮ್ಮೇಳನದ ರೂಢಿಗತ ನಡಾವಳಿಗಳಿಗೆ ಯಾವ ಅಡ್ಡಿಯನ್ನೂ ಉಂಟು ಮಾಡುತ್ತಿಲ್ಲ. ಬದಲಿಗೆ ಜಡವಾಗುತ್ತಿದ್ದ ಕನ್ನಡ ಜಾತ್ರೆಗೆ ಹೊಸ ಜನಪರ ಸವಾಲೊಡ್ಡಿ ಅರ್ಥಪೂರ್ಣವಾಗುವ ಅವಕಾಶ ನೀಡಿದೆ. ಆದ್ದರಿಂದ ನಾಡಿಗರಿಂದ ನಾಡೋಜರವರೆಗೆ ಈ ಹೋರಾಟವನ್ನು ಬೆಂಬಲಿಸಬೇಕು. ಅದರ ಜೊತೆಗೆ, ಬಾಡೂಟದ ಹೋರಾಟವು ಬಹುಜನ ಕನ್ನಡಿಗರ ಬದುಕು ಬವಣೆ ಮತ್ತು ಸಂಸ್ಕೃತಿಗಳ ಪರ್ಯಾಯ ವೇದಿಕೆಯಾಗಿ ವಿಸ್ತರಿಸಿ ಕೊಳ್ಳಬೇಕು. -ಶಿವಸುಂದರ್, ಬೆಂಗಳೂರು.





