ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಬಹಿರಂಗ ಪ್ರಚಾರದ ವೇಳೆ ‘ಮುಸ್ಲಿಂ ಸಮುದಾಯದವರು ಒಂದೊಂದು ರೂಪಾಯಿ ಸಂಗ್ರಹಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡ ಕುಟುಂಬವನ್ನು ಖರೀದಿ ಮಾಡುತ್ತೇವೆ’ ಎಂದು ವ್ಯಂಗ್ಯವಾಡಿದ್ದ ಸಚಿವ ಜಮೀರ್ ಅಹಮದ್ ಖಾನ್, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಯವರನ್ನು ‘ಕರಿಯ’ ಎಂದು ಕರೆಯುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ.
ಇದೊಂದು ಅಧಿಕಾರ ಅಮಲು ಮತ್ತು ದುರಹಂಕಾರದ ಪರಮಾವಧಿ ಎಂದೇ ಹೇಳಬಹುದು. ಜವಾಬ್ದಾರಿಯುತ ಸ್ಥಾನದಲ್ಲಿರುವ ಜಮೀರ್‌ಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ಮಾತನಾಡಬೇಕು ಎಂಬ ಸೌಜನ್ಯವೇ ಇಲ್ಲದಿರುವುದು ಬೇಸರದ ಸಂಗತಿ. ಕಳೆದ ವರ್ಷವೂ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಟ್ಟುಕೊಂಡು ಒಕ್ಕಲಿಗ ಸಮುದಾಯದ ಬಗ್ಗೆ ಲಘುವಾಗಿ ಮಾತನಾಡಿದ್ದರು. ಬಳಿಕ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದರು. ರಾಜ್ಯದಲ್ಲಿ ಎಲ್ಲ ಸಮುದಾಯದವರೂ ಸಹಬಾಳ್ವೆಯಿಂದ ಇರುವಾಗ ಜಮೀರ್‌ನಂತಹ ಕೆಲವು ನಾಯಕರು ಇಂತಹ ಅಸಂಬದ್ಧ ಹೇಳಿಕೆಗಳ ಮೂಲಕ ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿರುವುದು ಖಂಡನೀಯ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಚಿವ ಸಂಪುಟದ ಸದಸ್ಯರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳುವುದನ್ನು ಬಿಟ್ಟುಅವರಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದಿಷ್ಟೇ ಅಲ್ಲದೆ ಈಗ ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೂ ಕೆಲ ನಾಯಕರು ಹಗುರವಾಗಿ ನಾಲಿಗೆ ಹರಿಬಿಡುತ್ತಿದ್ದು, ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕಿದೆ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.





