ಹೊಸ ವರ್ಷ ಬಂತು ಎಂದರೆ ಸಾಕು ಯುವ ಸಮೂಹ ಮೋಜು- ಮಸ್ತಿಯ ಕೂಟಗಳಲ್ಲಿ ಮುಳುಗಿ ಬಿಡುತ್ತದೆ. ಈ ಮೋಜಿನ ಕೂಟಗಳು ರೆಸ್ಟೋರೆಂಟ್, ಹೊಟೇಲ್, ಪಬ್‌ಗಳಲ್ಲಿ ನಡೆದರೆ ಸರಿ. ಆದರೆ ಕೆಲವರು ಜಲಾಶಯಗಳ ಹಿನ್ನೀರಿನಲ್ಲಿ ಮದ್ಯದ ಕೂಟಗಳನ್ನು ಆಯೋಜಿಸಿಕೊಂಡು ಹಿನ್ನೀರಿನ ಪ್ರದೇಶಗಳನ್ನು ಅನೈರ್ಮಲ್ಯ ಮಾಡುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಬೇಕಿದೆ.
ಡಿ. ೩೧ರ ರಾತ್ರಿ ಬಹುತೇಕ ಮಂದಿ ಹೊಸ ವರ್ಷದ ಆಚರಣೆಗಳನ್ನು ಕಬಿನಿ, ತಾರಕ, ಕೆಆರ್‌ಎಸ್ ಹಿನ್ನೀರುಗಳಲ್ಲಿ ಮಾಡುತ್ತಿದ್ದು, ಮದ್ಯದ ಕೂಟಗಳನ್ನು ಆಯೋಜಿಸಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಈ ವೇಳೆ ಮದ್ಯಪಾನ ಮಾಡುವ ಜತೆಗೆ ಅಲ್ಲಿಯೇ ಅಡುಗೆ ಮಾಡಿ ಊಟ ಮಾಡುತ್ತಾರೆ. ಪಾರ್ಟಿ ಮಾಡುವುದರಿಂದ ಏನೂ ಸಮಸ್ಯೆ ಇಲ್ಲ. ಆದರೆ ಪಾರ್ಟಿ ಮುಗಿದ ಬಳಿಕ ಉಳಿದ ಆಹಾರ ಪದಾರ್ಥಗಳು, ಅದರ ಪ್ಲಾಸ್ಟಿಕ್ ಕವರ್‌ಗಳು ಹಾಗೂ ಬಾಟಲಿಗಳಂಥ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬೀಸಾಡಿ ಹೋಗುತ್ತಿದ್ದು, ಇದರಿಂದಾಗಿ ಹಿನ್ನೀರಿನಲ್ಲಿ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗುತ್ತಿದೆ. ಅಲ್ಲದೆ ಕೆಲವರು ಕುಡಿದ ಮತ್ತಿನಲ್ಲಿ ಗಲಾಟೆಗಳನ್ನು ಮಾಡಿಕೊಂಡು ಅನಾಹುತ ಸಂಭವಿಸುವ ಅಪಾಯವೂ ಇದೆ. ಆದ್ದರಿಂದ ಪೊಲೀಸ್ ಇಲಾಖೆಯು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸಿ, ಹಿನ್ನೀರಿನ ಪ್ರದೇಶಗಳಲ್ಲಿ ಹೊಸ ವರ್ಷದ ನೆಪದಲ್ಲಿ ನಡೆಯುವ ಮೋಜಿನ ಕೂಟಗಳಿಗೆ ಕಡಿವಾಣ ಹಾಕಬೇಕಿದೆ. -ಸಂಜಯ್, ಶ್ರೀರಾಂಪುರ, ಮೈಸೂರು.



