ಬೇಸಿಗೆಯ ತಾಪ ಹೆಚ್ಚಾದಂತೆ ರಾಜ್ಯದ ಹಲವೆಡೆ ಜನರು ಒಂದು ಬಿಂದಿಗೆ ನೀರಿಗಾಗಿ ವಾರಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಹೀಗಿರುವಾಗ, ಮೈಸೂರು ನಗರದ ಹಲವೆಡೆ ಮನೆ ಮುಂದೆ ನಲ್ಲಿಗೆ ಪೈಪ್ ಜೋಡಿಸಿ, ವಾಹನ, ಪಾತ್ರೆ ತೊಳೆಯುತ್ತಾ ನೀರು ವ್ಯರ್ಥಮಾಡುತ್ತಾರೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ನೀರಿನ ಶುಲ್ಕ ಕಟ್ಟುವವರು ನಾವು, ನಿಮಗೇನು ತೊಂದರೆ ಎಂದು ಜಗಳಕ್ಕೆ ಬರುತ್ತಾರೆ. ನಗರದ ಬಹುತೇಕ ಕಡೆ ಸಾರ್ವಜನಿಕ ನಲ್ಲಿಗಳು ಹಾಳಾಗಿದ್ದು, ನಿರಂತರವಾಗಿ ನೀರು ಸೋರುತ್ತಿದ್ದರೂ ಸಂಬಂಧಪಟ್ಟವರು ದುರಸ್ತಿಗೆ ಕ್ರಮ ಕೈಗೊಳ್ಳುವುದಿಲ್ಲ.
ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರತಿ ವಾರ್ಡ್ ನೀಡಿ ನೀರು ಪೋಲಾಗುವುದನ್ನು ತಡೆಗಟ್ಟಬೇಕು ಹಾಗೂ ಮಿತವಾಗಿ ನೀರು ಬಳಸುವುದರ ಬಗ್ಗೆ ಅರಿವು ಮೂಡಿಸಬೇಕು. ನೀರು ಪೋಲು ಮಾಡುವವರಿಗೆ ದಂಡ ವಿಧಿಸುವುದರ ಜೊತೆಗೆ, ಸ್ಥಳೀಯ ನಿವಾಸಿಗಳನ್ನೊಳಗೊಂಡ ‘ಜಲರಕ್ಷಕ’ ಎಂಬ ಸ್ವಯಂಸೇವಕರ ತಂಡವನ್ನು ರಚಿಸಿ ಸೋರಿಕೆಗಳ ಮೇಲೆ ನಿಗಾವಹಿಸಬೇಕು.
– ಬಿ.ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು





