ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನಿಲ್ ಬೋಸ್ ರವರು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿರುವ ಚಾಮರಾಜನಗರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಪಣತೊಟ್ಟಿದ್ದು, ಕೇಂದ್ರ ಸರ್ಕಾರದ ಮುಂದೆ ಅನುದಾಕ್ಕಾಗಿ ಬೇಡಿಕೆ ಇಟ್ಟಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಚಾ. ನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನಂಜನಗೂಡು, ಎಚ್. ಡಿ. ಕೋಟೆ, ತಿ. ನರಸೀಪುರ, ವರುಣ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ಹಳ್ಳಿಗಳು ಅಭಿವೃದ್ಧಿಯಲ್ಲಿ ಹಿಂದು ಳಿದಿವೆ. ಈ ಗ್ರಾಮಗಳ ಕೃಷಿ ಭೂಮಿಗೆ ನೀರುಣಿಸುವ ಕಾಲುವೆಗಳನ್ನು ಅಭಿವೃದ್ಧಿಪಡಿಸಿ ನೀರಾವರಿ ಸೌಲಭ್ಯ ಕಲ್ಪಿಸುವ ಜತೆಗೆ ಕೃಷಿಗೆ ಬೇಕಾದ ಸಾಮಗ್ರಿಗಳು, ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಕಾಲಕ್ಕೆ ಪೂರೈಕೆ ಮಾಡಲು ಹಾಗೂ ಕ್ಷೇತ್ರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ, ರೈಲು, ರಸ್ತೆ ಸಾರಿಗೆ ಅಭಿವೃದ್ಧಿ, ಶಿಕ್ಷಣ, ಮಹಿಳಾ ಸಬಲೀಕರಣ, ಉದ್ಯೋಗ ಸೃಷ್ಟಿ, ಸ್ವಯಂ ಉದ್ಯೋಗ, ಕೈಗಾರಿಕಾ ಅಭಿವೃದ್ಧಿ, ನಿರಾಶ್ರಿತರಿಗೆ ಮನೆಗಳನ್ನು ಕಲ್ಪಿಸುವ ಜತೆಗೆ ಅಂಗನವಾಡಿ, ಶಾಲಾ, ಕಾಲೇಜುಗಳನ್ನು ಅಭಿವೃದ್ಧಿಗೊಳಿಸಿ, ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ೩,೦೦೦ ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವುದು ಶ್ಲಾಘನೀಯ. ಅದೇ ರೀತಿ ಕೇಂದ್ರ ಸರ್ಕಾರದಿಂದ ಅನುದಾನ ತರಲು ನಿರಂತರವಾಗಿ ಹೋರಾಟ ನಡೆಸಿ ಚಾಮರಾಜನಗರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಅವರು ಶ್ರಮಿಸಬೇಕಿದೆ. -ನಾಗೇಶ್, ಮಾನಸಗಂಗೋತ್ರಿ, ಮೈಸೂರು.





