ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳ ಓಡಾಡಲು ಪರದಾಡುವಂತಾಗಿದೆ.
ಅಂತರಸಂತೆ ಗ್ರಾಮದ ತಾರಕ ಸರ್ಕಲ್ ಬಳಿ ರಸ್ತೆಯ ಒಂದು ಬದಿಯಲ್ಲಿ ಚರಂಡಿ ಇಲ್ಲದೆ ಬಿದಂತಹ ಮಳೆನೀರು ಸಂಪೂರ್ಣವಾಗಿ ರಸ್ತೆಯಲ್ಲಿಯೇ ಹರಿಯುತ್ತಿದೆ. ಈ ಭಾಗದಲ್ಲಿ ಚರಂಡಿಗಳಿಂದ ಹರಿದು ಬರುವ ಮಳೆ ನೀರು
ನೇರವಾಗಿ ಕೆರೆ ಸೇರುವಂತೆ ಎರಡೂ ಬದಿಗಳಲ್ಲೂ ಚರಂಡಿ ನಿರ್ಮಿಸಲಾಗಿತ್ತು. ಆದರೆ, ಒಂದು ಬದಿಯ ಚರಂಡಿ ಸಂಪೂರ್ಣ ಮುಚ್ಚಿಹೋಗಿದ್ದು, ಚರಂಡಿ ನೀರೆಲ್ಲಾ ರಸ್ತೆಯಲ್ಲಿಯೇ ಹರಿಯುತ್ತಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಅಲ್ಲದೆ ನೀರು ಹೊತ್ತುತಂದ ಕಸ, ಕಡ್ಡಿ, ಮಣ್ಣೆಲ್ಲ ರಸ್ತೆಯನ್ನು ಆವರಿಸುತ್ತಿದೆ. ಈ ಭಾಗದಲ್ಲಿ ಚರಂಡಿಯನ್ನು ನಿರ್ಮಿಸಬೇಕು ಎಂದು ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಈ ಭಾಗದಲ್ಲಿ ಚರಂಡಿ ನಿರ್ಮಿಸಬೇಕಿದೆ.
-ಗುಣಪಾಲ್, ಅಂತರಸಂತೆ, ಎಚ್.ಡಿ.ಕೋಟೆ ತಾ.





