ಇತ್ತೀಚೆಗೆ ಕೇಂದ್ರ ಸರ್ಕಾರವು 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭವ ಯೋಜನೆಯನ್ನು ಜಾರಿಗೆ ತಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಆದರೆ, ಇತ್ತೀಚೆಗೆ ನನ್ನ ಆರೋಗ್ಯದಲ್ಲಿ ಏರುಪೇರಾದಾಗ ನನ್ನ ಮಗ ನನ್ನನ್ನು ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ದಾಖಲಿಸಿದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿಗೆ ನನ್ನ ಆಯುಷ್ಮಾನ್ ಕಾರ್ಡ್ ತೋರಿಸಿದಾಗ, ಆಸ್ಪತ್ರೆಯ ಸಿಬ್ಬಂದಿ ನಾವು ಈ ಕಾರ್ಡನ್ನು ಪರಿಗಣಿಸುವುದಿಲ್ಲ ಎಂದು ತಿರಸ್ಕರಿಸಿ ಹಣ ಕಟ್ಟಿಸಿಕೊಂಡಿದ್ದಾರೆ.
೮೬ ವರ್ಷ ವಯಸ್ಸಿನ ನನಗೆ ಈ ಕಾರ್ಡಿನ ಅನುಕೂಲ ಸಿಗದಿದ್ದ ಮೇಲೆ ಯಾವ ಪುರುಷಾರ್ಥಕ್ಕಾಗಿ ಸರ್ಕಾರ ಇಂತಹ ಯೋಜನೆಗಳನ್ನು ಜಾರಿಗೆ ತಂದಿದೆ? ಆರೋಗ್ಯ ಸಂಬಂಧ ಯೋಜನೆಗಳನ್ನು ಜಾರಿಗೆ ತಂದ ಮೇಲೆ ಫಲಾನುಭವಿಗಳಿಗೆ ಆ ಯೋಜನೆಯ ಲಾಭ ತಲುಪುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಯಾವುದಾದರೂ ಆಸ್ಪತ್ರೆ ಆ ಯೋಜನೆಯನ್ನು ತಿರಸ್ಕರ ಮಾಡಿದ್ದಲ್ಲಿ ಅಂತಹ ಆಸ್ಪತ್ರೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕಲ್ಲವೇ?
ಬಡ ಮತ್ತು ಮಧ್ಯಮ ವರ್ಗದ ಜನರು ಇಂತಹ ಯೋಜನೆಗಳನ್ನು ನಂಬಿಕೊಂಡಿರುತ್ತಾರೆ. ಅಂತಹವರಿಗೆ ಪೂರ್ಣವಾಗಿ ಈ ಯೋಜನೆಯ ಲಾಭ ಸಿಗುವಂತೆ ಮಾಡಬೇಕಾದದ್ದು ಸರ್ಕಾರದ ಕರ್ತವ್ಯ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಿ ಎಲ್ಲ ಆಸ್ಪತ್ರೆಗಳಲ್ಲಿಯೂ ಆಯುಷ್ಮಾನ್ ಕಾರ್ಡ್‌ನ ಯೋಜನೆಯ ಲಾಭ ಸಿಗುವಂತೆ ಮಾಡಬೇಕು.
-ಎ.ಎಸ್.ಗೋಪಾಲಕೃಷ್ಣ, ರಾಮಕೃಷ್ಣನಗರ, ಮೈಸೂರು.





