ಮೈಸೂರು ವಿಶ್ವವಿದ್ಯಾನಿಲಯದಿಂದ 2024-25ನೇ ಸಾಲಿನ ಸ್ನಾತಕೋತ್ತರ ಪದವಿ ವ್ಯಾಸಂಗದ ಪ್ರವೇಶಾತಿ ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆ ಕಾಡುತ್ತಿದೆ. ಜುಲೈ 10ರಿಂದ 25ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಆದರೆ ಈ ಅವಧಿಯಲ್ಲಿ ಹೆಚ್ಚುಸಮಯ ಸರ್ವ ಸಮಸ್ಯೆಯೇ ಕಾಡುತ್ತಿದ್ದು, ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲಾಗದೆ ಪರದಾಡುವಂತಾಗಿದೆ. ಇದರೊಂದಿಗೆ ಒಂದು ವಿಭಾಗಕ್ಕೆ ಅರ್ಜಿ ಶುಲ್ಕ 1,100 ರೂ., ಒಂದಕ್ಕಿಂತ ಹೆಚ್ಚು ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ 2,200 ರೂ. ನಿಗದಿ ಮಾಡಲಾಗಿದ್ದು, ಇದು ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಿದೆ. ಅಲ್ಲದೆ ವೆಬ್‌ಸೈಟ್‌ನಲ್ಲಿ ನೀಡಿರುವ ಪ್ರವೇಶ ಪರೀಕ್ಷೆಯ ಸಿಲಬಸ್ 2020ಕ್ಕಿಂತಲೂ ಹಳೆಯದಾಗಿದ್ದು, ಪದವಿ ವಿದ್ಯಾರ್ಥಿಗಳು ಯಾವ ಸಿಲಬಸ್ ಓದಬೇಕು ಎಂಬ ಗೊಂದಲಕ್ಕೊಳಗಾಗಿದ್ದಾರೆ. ಸರ್ವರ್ ಸಮಸ್ಯೆ, ದುಬಾರಿ ಶುಲ್ಕದ ನಡುವೆ ವಿದ್ಯಾರ್ಥಿಗಳಿಗೆ ಸಿಲಬಸ್ ಯಾವುದು ಎಂಬುದೇ ಗೊಂದಲವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸರ್ವರ್ ಸಮಸ್ಯೆ ಬಗೆಹರಿಸುವ ಜತೆಗೆ ವಿದ್ಯಾರ್ಥಿಗಳ ಗೊಂದಲಗಳನ್ನು ನಿವಾರಣೆ ಮಾಡಬೇಕಿದೆ.
– ಪಿ.ಮಲ್ಲಿಕಾರ್ಜುನಪ್ಪ, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು, ಮೈಸೂರು.