ರಾಷ್ಟ್ರೀಯ ತುರ್ತು ಸೇವಾ ಆಂಬ್ಯುಲೆನ್ಸ್ ಗ್ರಾಮಾಂತರ ಭಾಗಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು, ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗಳಿಗೆ ರವಾನಿಸಲು ಅನುಕೂಲಕರವಾಗಿದೆ.
ಈ ಆಂಬ್ಯುಲೆನ್ಸ್‌ಗಳು ರೋಗಿ ಗಳನ್ನು ಆದಷ್ಟೂ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲು ಮಾಡಬೇಕು ಎಂಬ ನಿಯಮವಿದೆ. ಆದರೆ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಎನ್‌ಎಎಸ್ ಆಂಬ್ಯುಲೆನ್ಸ್ ಚಾಲಕರು ಅನೇಕ ಸಂದರ್ಭಗಳಲ್ಲಿ ಇಲ್ಲಸಲ್ಲದ ಸಬೂಬು ಹೇಳಿ ತಮಗೆ ಬೇಕಾದ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ರವಾನಿಸುವ ಚಾಳಿಯನ್ನು ರೂಢಿಸಿಕೊಂಡಿದ್ದಾರೆ. ಇತ್ತೀಚೆಗೆ ಗುಂಡ್ಲುಪೇಟೆಯ ನಿಟ್ರೆ ಗ್ರಾಮದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಸರ್ಕಾರಿ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ ಎಂದು ಹೇಳಿ ಅವರನ್ನು ಒತ್ತಾಯಪೂರ್ವಕವಾಗಿಯೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಗುಂಡ್ಲುಪೇಟೆಯ ಬಾಚಹಳ್ಳಿ ಗ್ರಾಮದ ಅಭಿಷೇಕ್ ಎಂಬ ಗಾಯಾಳುವನ್ನೂ ಸರ್ಕಾರಿ ಆಸ್ಪತ್ರೆಯ ಬದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸ್ವತಃ ಕುಟುಂಬಸ್ಥರೇ ತಿಳಿಸಿದ್ದಾರೆ. ಇತ್ತೀಚೆಗೆ ಈ ಆಂಬ್ಯುಲೆನ್ಸ್‌ಗಳ ಚಾಲಕರು ಖಾಸಗಿ ಆಸ್ಪತ್ರೆಗಳು ನೀಡುವ ಕಮಿಷನ್ ಆಸೆಗಾಗಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಿರುವ ಅನೇಕ ಉದಾಹರಣೆಗಳಿವೆ. ತುರ್ತು ಸಂದರ್ಭವನ್ನೇ ಬಳಸಿಕೊಂಡು ಅವರನ್ನು ಖಾಸಗಿ ಆಸ್ಪತ್ರೆಗಳಿಗೆ ರವಾನಿಸುವುದು ಎಷ್ಟು ಸರಿ? ಬಡರೋಗಿಗಳು ಅಽಕ ಹಣ ಪಾವತಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಸಾಧ್ಯವೇ? ಮೈಸೂರು ಹಾಗೂ ಚಾಮರಾಜನಗರದ ಜಿಲ್ಲಾಧಿಗಳು ಈ ಬಗ್ಗೆ ತನಿಖೆ ನಡೆಸಿ ಕಮಿಷನ್ ಆಸೆಗಾಗಿ ರೋಗಿ ಗಳಿಗೆ ತೊಂದರೆ ನೀಡುತ್ತಿರುವ ಎನ್‌ಎಎಸ್ ಚಾಲಕರ ವಿರುದ್ಧ ಕ್ರಮ ಜರುಗಿಸಬೇಕಿದೆ. -ದಾಸನೂರು ಕೂಸಣ್ಣ, ಮೈಸೂರು





