ಮೈಸೂರಿನ ಚಾಮರಾಜ ಡಬ್ಬಲ್ ರಸ್ತೆ (ರಾಮಸ್ವಾಮಿ ಸರ್ಕಲ್) ಸಮೀಪದ ವೆಂಕಟಾಚಲ ಧಾಮ(ರಾಘವೇಂದ್ರ ಸ್ವಾಮಿಗಳ ಮಠ)ದ ಹಿಂದಿರುವ ಮನೆಗಳು ಹಾಗೂ ಡಿ. ಸುಬ್ಬಯ್ಯ ರಸ್ತೆಯ ಕೆಲವು ಮನೆಗಳಿಗೆ ಕಳೆದೊಂದು ವಾರದಿಂದ ಸಮರ್ಪಕವಾಗಿ ನೀರು ಸರಬರಾಜಾಗದೇ ಜನರು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ನೀರು ತರಲು ಸಮಯ ಮೀಸಲಿಡ ಬೇಕಾಗಿದೆ.
ವಾರ್ಡ್ ಕಾರ್ಪೊರೇಟರ್ ಅಧಿಕಾರಾವಧಿ ಮುಗಿದ್ದು ಅವರನ್ನು ಪ್ರಶ್ನಿಸುವಂತಿಲ್ಲ. ಶಾಸಕ ಹರೀಶ್‌ಗೌಡರು ಒಮ್ಮೆ ಪಾದಯಾತ್ರೆ ಮಾಡಿದ್ದನ್ನು ಬಿಟ್ಟರೆ ಇತ್ತಕಡೆ ಬಂದೇ ಇಲ್ಲ. ಇನ್ನು ವಾಣಿ ವಿಲಾಸ ನೀರು ಸರಬರಾಜು
ಕೇಂದ್ರದ ಅಧಿಕಾರಿಗಳನ್ನು ಕೇಳಿದರೆ ನಿಮ್ಮ ಭಾಗದ ನೀರು ಸರಬರಾಜು ಕೊಳವೆಯಲ್ಲಿ ಏನೋ ಸಮಸ್ಯೆಯಿದೆ, ಗಮನಿಸಿಕೊಳ್ಳಿ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ.
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ನಾಣ್ಣುಡಿಯಂತೆ ಜನಪ್ರತಿನಿಧಿಗಳು ಹಾಗೂ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ನೀರಿಲ್ಲದೇ ಪರಿತಪಿಸುವಂತಾಗಿದೆ. ನೀರಿನ ಕಂದಾಯ ವಸೂಲಿಯಷ್ಟೇ ನೀರು ಸರಬರಾಜೂ ಮುಖ್ಯ ಎಂಬುದನ್ನರಿತು ಸಂಬಂಧಪಟ್ಟವರು ಕೂಡಲೇ ನೀರಿನ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
-ವೇಣುಗೋಪಾಲ್, ಡಿ.ಸುಬ್ಬಯ್ಯ ರಸ್ತೆ, ಮೈಸೂರು.





