ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ಮುಖ್ಯಮಂತ್ರಿಯೋ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿಯೋ ಎಂಬ ಅನುಮಾನ ಈಗ ಕಾಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದಂತಿದೆ. ರಾಜ್ಯಕ್ಕೆ ಕೇಂದ್ರದಿಂದ ಪದೇ ಪದೇ ಅನ್ಯಾಯವಾಗುತ್ತಿದೆ ಎನ್ನುತ್ತಿರುವ ಸಿದ್ದರಾಮಯ್ಯನವರು ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಗೆ ಗೈರಾಗಿ ಬಳಿಕ ಬಜೆಟ್‌ನಲ್ಲಿ ರಾಜ್ಯಕ್ಕೆ ಮೋಸವಾಗಿದೆ ಎನ್ನುತ್ತಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ನೀತಿ ಆಯೋಗದ ಸಭೆಗಳಿಗೂ ಗೈರಾಗಿದ್ದರು. ಒಮ್ಮೆ ಮಾತ್ರ ಈ ಸಭೆಗೆ ಸರ್ಕಾರದ ಪರವಾಗಿ ಸಚಿವ ಕೃಷ್ಣ ಬೈರೇಗೌಡರನ್ನು ಕಳುಹಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ನೇತೃತ್ವದಲ್ಲಿ ನಡೆಯುವ ಸಭೆಗಳಿಗೆ ಹಾಜರಾಗಿ ರಾಜ್ಯದ ಅಗತ್ಯತೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಬದಲು ಸಭೆಗಳಿಗೆ ಗೈರಾಗುವ ಮೂಲಕ ಸಿಕ್ಕ ಅವಕಾಶಗಳನ್ನೆಲ್ಲ ಕೈಚೆಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸುವುದರಲ್ಲಿ ಯಾವುದೇ ಅರ್ಥವಿಲ್ಲ.
ಸಿದ್ದರಾಮಯ್ಯನವರ ಈ ನಡೆ ಅವರು ರಾಜ್ಯಕ್ಕೆ ಮುಖ್ಯ ಮಂತ್ರಿಯೋ? ಅಥವಾ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿಯೋ ಎಂಬ ಪ್ರಶ್ನೆ ಮೂಡಿಸಿದೆ. ನಲವತ್ತು ವರ್ಷಗಳ ರಾಜಕೀಯ ಅನುಭವದಲ್ಲಿ ಅವರು ಮೊದಲ ಬಾರಿಗೆ ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದವರಂತೆ ವರ್ತಿಸುತ್ತಿದ್ದಾರೇನೋ ಅನಿಸುತ್ತದೆ.
-ಶಿವಮೊಗ್ಗ ನಾ.ದಿನೇಶ್ ಅಡಿಗ, ಮೈಸೂರು.





