ಮೈಸೂರಿನ ಕುವೆಂಪುನಗರದ ವಿಶ್ವ ಮಾನವ ಜೋಡಿ ರಸ್ತೆಯಲ್ಲಿರುವ ‘ರಿವರ್‘ ಶೋ ರೂಂ ಎದುರು ನೀರಿನ ಸಂಪರ್ಕ ಕಲ್ಪಿಸುವ ಸಲುವಾಗಿ ಮುಖ್ಯ ರಸ್ತೆಯನ್ನು ಅಗೆದು ಹಾಕಲಾಗಿದ್ದು, ಅದನ್ನು ಸರಿಯಾಗಿ ಮುಚ್ಚದಿರುವ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.
ಕೆಲ ದಿನಗಳ ಹಿಂದಷ್ಟೇ ನೀರಿನ ಸಂಪರ್ಕ ಕಲ್ಪಿಸುವ ಸಲುವಾಗಿ ಈ ರಸ್ತೆಯನ್ನು ಅಗೆದು ಹಾಕಲಾಗಿದೆ. ಆದರೆ ಪೈಪ್‌ಲೈನ್ ಅಳವಡಿಸಿದ ಬಳಿಕ ಸ್ಪಲ್ಪ ಪ್ರಮಾಣದಲ್ಲಿ ಮಣ್ಣು ಹಾಕಿ ಮುಚ್ಚಲಾಗಿದ್ದು, ಗುಂಡಿ ನಿರ್ಮಾಣವಾಗಿದೆ. ಇದರಿಂದಾಗಿ ನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೇ ಇವೆ.
ಈ ರಸ್ತೆ ಮೈಸೂರಿನ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವುದರಿಂದ ನಿತ್ಯ ವಾಹನದಟ್ಟಣೆ ಹೆಚ್ಚಾಗಿರುತ್ತದೆ. ಇಂತಹ ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿರುವ ಪರಿಣಾಮ ಅಪಘಾತಗಳಾಗುವ ಅಪಾಯ ಹೆಚ್ಚಿದೆ. ಒಂದೇ ದಿನ ನಾಲ್ಕು ಅಪಘಾತಗಳು ಸಂಭವಿಸಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನೀರಿನ ಸಂಪರ್ಕ ಪಡೆಯುವ ಸಲುವಾಗಿ ರಸ್ತೆ ಅಗೆಯಲು ಮೈಸೂರು ಮಹಾನಗರ ಪಾಲಿಕೆಗೆ ಸಾರ್ವಜನಿಕರು 3 -5 ಸಾವಿರ ರೂ. ಶುಲ್ಕ ಪಾವತಿಸುತ್ತಾರೆ. ಆದರೆ, ರಸ್ತೆಯನ್ನು ಅಗೆದು ಸಂಪರ್ಕ ಕಲ್ಪಿಸಿದ ಬಳಿಕ ಮಹಾನಗರ ಪಾಲಿಕೆಯವರು ಅದನ್ನು ಸರಿಯಾಗಿ ಮುಚ್ಚುವ ಗೋಜಿಗೇ ಹೋಗುವುದಿಲ್ಲ. ಮೈಸೂರಿನ ನಾನಾ ಭಾಗಗಳಲ್ಲಿ ಇಂಥ ಸಮಸ್ಯೆ ಇದ್ದು, ಮುಂದಾದರೂ ಪಾಲಿಕೆಯವರು ಎಚ್ಚೆತ್ತುಕೊಂಡು ಅಗೆದ ರಸ್ತೆಗಳನ್ನು ಡಾಂಬರ್‌ನಿಂದ ಮುಚ್ಚಬೇಕಿದೆ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.





