ಬೆಂಗಳೂರಿನ ಅರಮನೆ ಮೈದಾನದಲ್ಲಿ ಇತ್ತೀಚೆಗೆ ನಡೆದ ‘ಯೂತ್ ಕಾಂಗ್ರೆಸ್’ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೇದಿಕೆಯ ಮೇಲೆ ‘ಮಂಡ್ಯ ಜನರ ಛತ್ರಿಆಟ ನನಗೆ ಗೊತ್ತಿಲ್ಲವೇ?’ ಎಂದು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇದು ಅವರ ದುರಹಂಕಾರದ ಪರಮಾವಧಿ ಎನ್ನಬಹುದು. ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ
ಸಮಾಜದ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆಂದು ಭಾವಿಸಿ ಮಂಡ್ಯದ 7 ವಿಧಾನಸಭಾ ಸ್ಥಾನಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಡುವ ಮೂಲಕ ಬಹುತೇಕ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ಅನ್ನು ಬೆಂಬಲಿಸಿತು. ಅಧಿಕಾರಕ್ಕೆ ಬಂದ ಬಳಿಕ ಮಂಡ್ಯ ಜನರ ಬೆಂಬಲವನ್ನು ಮರೆತ ಡಿಕೆಶಿ ಮಂಡ್ಯ ಜನರನ್ನು ‘ಛತ್ರಿ’ಗಳು ಎಂದಿರುವುದು ಸರಿಯಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಡಿಕೆಶಿಯವರು ಈ ಮಾತನ್ನು ಆಡಿರಬಹುದು. ಆದರೆ ಮುಂದೆ ಅನೇಕ ಚುನಾವಣೆಗಳು ಬರಲಿವೆ. ಆಗ ಜನ ನಿಮಗೆ ಬುದ್ಧಿ ಕಲಿಸುತ್ತಾರೆ. ಆದ್ದರಿಂದ ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂಬುದನ್ನು ನೆನಪಿಟ್ಟುಕೊಂಡು ಮಂಡ್ಯ ಜನರ ಬಳಿ ಕ್ಷಮೆಯಾಚಿಸಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.





