ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿದ್ದು,ಜೀ ವನಾಧಾರಕ್ಕೆಂದು ಸಾಲ ಮಾಡಿದ ಜನರು ಮೈಕ್ರೋ ಫೈನಾನ್ಸ್‌ಗಳ ಸಾಲದ ಸುಳಿಗೆ ಸಿಲುಕಿ ಗ್ರಾಮಗಳನ್ನು ತೊರೆಯುತ್ತಿರುವ, ಆತ್ಮಹತ್ಯೆ ಹಿಡಿಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಮೈಕ್ರೋ ಫೈನಾನ್ಸ್ ಕಂಪೆನಿಗಳು ಗ್ರಾಮೀಣ ಭಾಗದ ಜನರಿಗೆ ಕೋಟ್ಯಂತರ ರೂ. ಸಾಲ ನೀಡಿದ್ದು, ಎಲ್ಲ ಕಂಪೆನಿಗಳೂ ತರಹೇವಾರಿ ಬಡ್ಡಿ ದರವನ್ನು ವಿಧಿಸಿವೆ. ಕೆಲ ಕಂಪೆನಿಗಳು ವಾರ್ಷಿಕ ಶೇ.19, ಶೇ.20, ಶೇ.25 ಹೀಗೆ ತಮ್ಮ ಮನಸೋಇಚ್ಛೆ ಬಡ್ಡಿದರಗಳನ್ನು ವಿಧಿಸಿವೆ. ಇನ್ನು ಕೆಲ ಕಂಪೆನಿಗಳು ಉದ್ಯಮಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿದ್ದು, ಬಡ ಜನರು, ರೈತರಿಂದ ಅಧಿಕ ಪ್ರಮಾಣದ ಬಡ್ಡಿ ವಸೂಲಿ ಮಾಡುತ್ತಿವೆ. ಹೀಗೆ ಒಂದೇ ಕಂಪೆನಿ ವಿವಿಧ ಬಡ್ಡಿದರಗಳಲ್ಲಿ ಸಾಲ ನೀಡುವುದು ಸರಿಯೇ? ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆಯೇ?
ಈ ಮೈಕ್ರೋ ಫೈನಾನ್ಸ್ ಕಂಪೆನಿಗಳು ಮನೆ, ಆಸ್ತಿಗಳನ್ನು ಅಡಮಾನವಾಗಿಟ್ಟುಕೊಂಡು, ಅವರ ದುಡಿಮೆಗಿಂತ ಹೆಚ್ಚಿನ ಹಣವನ್ನು ಸಾಲ ನೀಡುತ್ತಿವೆ. ಇದರಿಂದಾಗಿ ಕೂಲಿ ಕಾರ್ಮಿಕರು ಸಾಲ ತೀರಿಸಲಾಗದೆ ಮನೆ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ. ಆದ್ದರಿಂದ ಸರ್ಕಾರ ತುರ್ತಾಗಿ ಎಚ್ಚೆತ್ತುಕೊಂಡು ಫೈನಾನ್ಸ್ ಕಂಪೆನಿಗಳ ಹಾವಳಿಗೆ ಕಡಿವಾಣ ಹಾಕಲಿ.
-ಸುಮಂತ್, ಎಚ್.ಡಿ.ಕೋಟೆ ತಾ.





