Mysore
16
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಜನಸ್ನೇಹಿ ಹೋಟೆಲ್‌ಗಳು; ಕೈಗೆಟುಕುವ ದರ-ರುಚಿಯಿಂದ ಜನಜನಿತ 

ಕೆಲಸಕಾರ್ಯ, ಪ್ರವಾಸ ನಿಮಿತ್ತ ದಿನಗಟ್ಟಲೆ ಮನೆಯಿಂದ ಹೊರಗೆ ಇರಬೇಕಾದ ಅನಿವಾರ್ಯತೆ ಇದ್ದರೆ ನಾವು ಮೊದಲು ಯೋಚಿಸುವುದು ನಾವು ಭೇಟಿ ನೀಡುವ ಸ್ಥಳದಲ್ಲಿ ಒಳ್ಳೆಯ ಹೋಟೆಲ್ ಯಾವುದಿದೆ? ಕೈಗೆಟುಕುವ ದರದಲ್ಲಿ ರುಚಿಯಾದ ಊಟ-ತಿಂಡಿ ಸಿಗುತ್ತದೆಯೆ ಎಂದು ಹುಡುಕುತ್ತಾ ಹೋದರೆ ಅಂತಹ ಹಲವಾರು ಹೋಟೆಲ್‌ಗಳು ನಮಗೆ ಕಾಣಸಿಗುತ್ತವೆ. ಅವುಗಳಲ್ಲಿ ಆಯ್ದ ಕೆಲವು ಹೋಟೆಲ್‌ಗಳ ಮಾಹಿತಿ ಇಲ್ಲಿದೆ.

ಶುಚಿ-ರುಚಿಗೆ ಹೆಸರುವಾಸಿ ಹೋಟೆಲ್ ‘ಉದ್ಯಮ್ ಭವನ್’: 

ಗುಂಡ್ಲುಪೇಟೆ ಪಟ್ಟಣದ ಹೃದಯ ಭಾಗದಲ್ಲಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಬದಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ, ಡಿಬಿಜೆಪಿ ಕಾಲೇಜಿನ ಎದುರು ಇರುವ ಶ್ರೀ ಮದ್ದಾನೇಶ್ವರ ಶಿಕ್ಷಣ ಸಂಸ್ಥೆಯ ಮಳಿಗೆಯಲ್ಲಿ ಇರುವ ಉದ್ಯಮ್ ಭವನ್ ಹೋಟೆಲ್ ತಾಲ್ಲೂಕಿನಾದ್ಯಂತ ಹೆಸರುವಾಸಿ.

ಹೋಟೆಲ್‌ನಲ್ಲಿ ಎಲ್ಲಾ ತರಹದ ಸಸ್ಯಾಹಾರದ ಖಾದ್ಯ ತಯಾರಿಸಲಾಗುತ್ತದೆ. ಅಲ್ಲದೆ, ಶುಚಿ ರುಚಿಗೆ ಹೆಸರಾದ ಕಾರಣ ಆಹಾರ ಪ್ರಿಯರು ಉದ್ಯಮ್ ಭವನ್‌ಗೆ ಮುಗಿಬೀಳುವುದು ಸಾಮಾನ್ಯವಾಗಿದೆ. ದಿವಂಗತ ಬಸವರಾಜಪ್ಪ ಅವರು ಗ್ರಾಮೀಣ ಭಾಗದ ಜನರಿಗೆ, ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವ ಉದ್ದೇಶದಿಂದ ಈ ಹೋಟೆಲ್ ಆರಂಭಿಸಿದರು. ಪ್ರಸ್ತುತ ಈ ಹೋಟೆಲ್‌ಅನ್ನು ತಂದೆಯ ಆಶಯದಂತೆ ಮಕ್ಕಳಾದ ಪ್ರದೀಪ್ ಮತ್ತುಮನು ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಹೋಟೆಲ್‌ನಲ್ಲಿ ಇಡ್ಲಿ ಸಾಂಬಾರ್, ಚೌಚೌ ಬಾತ್, ಪೊಂಗಲ್, ಬಿಸಿಬೇಳೆ ಬಾತ್, ದೋಸೆ ಹೆಸರುವಾಸಿ ತಿಂಡಿಗಳು. ಇನ್ನು ಮಧ್ಯಾಹ್ನದಿಂದ ಸಂಜೆಯವರೆಗೂ ರೋಟಿ ಕರಿ, ಚೈನೀಸ್, ನಾರ್ಥ್ ಇಂಡಿಯನ್, ಸೌತ್ ಇಂಡಿಯನ್ ಊಟ ಲಭ್ಯವಿದ್ದು, ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಆಹಾರ ಪ್ರಿಯರು ರುಚಿಕರ ಊಟ ತಿಂಡಿ ಸವಿಯುವುದರಿಂದ ಈ ಹೋಟೆಲ್ ಪ್ರಖ್ಯಾತಿ ಪಡೆದಿದೆ.

ಕೋಟೆಯಲ್ಲೊಂದು ಜನ ಮೆಚ್ಚಿದ ಪೊಲೀಸ್ ಕ್ಯಾಂಟೀನ್: 

ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ಪೊಲೀಸ್ ಕ್ಯಾಂಟೀನ್‌ನಲ್ಲಿ ತಿಂಡಿ ಮತ್ತು ಊಟವನ್ನು ಸವಿಯಲು ಎಲ್ಲಾ ವರ್ಗದ ಜನರೂ ಮುಗಿಬೀಳುತ್ತಾರೆ. ಹಿಂದೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರವಿ ಡಿ.ಚನ್ನಣ್ಣನವರ್ ಅವಧಿಯಲ್ಲಿ ತಾಲ್ಲೂಕು ಕೇಂದ್ರದ ಪೊಲೀಸ್ ಠಾಣೆ ಪಕ್ಕದಲ್ಲಿ ಜನರಿಗೆ ಉಪಯೋಗವಾಗಲೆಂದು ಪೊಲೀಸ್ ಕ್ಯಾಂಟೀನ್ ತೆರೆಯಲಾಯಿತು. ಪ್ರಾರಂಭದಲ್ಲಿ ಉಸ್ತುವಾರಿ ವಹಿಸಿದ್ದವರು ಕೆಲ ತಿಂಗಳ ಕಾಲ ಉತ್ತಮವಾಗಿ ನಡೆಸಿದರೂ, ಆನಂತರ ಹಲವಾರು ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ಅರುಣ್ ಎಂಬವವರು ಪೊಲೀಸ್ ಕ್ಯಾಂಟೀನನ್ನು ಮತ್ತೆ ಪ್ರಾರಂಭಿಸಿ, ಕಡಿಮೆ ದರದಲ್ಲಿ ಗುಣಮಟ್ಟದ ರುಚಿಕರವಾದ ವಿವಿಧ ಬಗೆಯ ತಿಂಡಿ ಮತ್ತು ಊಟ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ನೌಕರರು, ಕೂಲಿ ಕಾರ್ಮಿಕರು ಸೇರಿದಂತೆ ಜನಸಾಮಾನ್ಯರು ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸುತ್ತಾರೆ.

ಅರುಣ್ ಹೋಟೆಲ್ ಉದ್ಯಮದಿಂದ ಹಣ ಸಂಪಾದಿಸುವುದಕ್ಕಿಂತ ಹೆಚ್ಚಾಗಿ ಸೇವೆಯ ಮನೋಭಾವನೆಯಿಂದ ಕ್ಯಾಂಟೀನ್ ನಡೆಸುತ್ತಿರುವುದರಿಂದ ಕಳೆದ ನಾಲ್ಕೈದು ವರ್ಷಗಳಿಂದ ತಾಲ್ಲೂಕಿನಲ್ಲಿ ಪೊಲೀಸ್ ಕ್ಯಾಂಟೀನ್ ಹೆಸರುಗಳಿಸಿದೆ.

ನಂಜನಗೂಡು ಶಿವಲಿಂಗ ಕೆಫೆಯ ಚಪಾತಿ; ಗಾತ್ರಕ್ಕಿಲ್ಲ ಮಿತಿ: 

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ ಬರುವ ಬಹುತೇಕ ಮಂದಿ, ಇಲ್ಲಿನ ಶಿವಲಿಂಗ ಕೆಫೆಯ ಚಪಾತಿಯನ್ನು ನೋಡಿ, ಸವಿದು ಆನಂದಿಸುತ್ತಾರೆ. ಇತರೆ ಹೋಟೆಲ್‌ಗಳಿಗಿಂತ ಈ ಕೆಫೆಯಲ್ಲಿ ಚಪಾತಿ ಭಾರಿ ಗಾತ್ರದಲ್ಲಿರುತ್ತದೆ. ಅಗಲವಾಗಿ ಹಾಗೂ ಅತ್ಯಂತ ಮೃದುವಾದ ಈ ಹೋಟೆಲ್‌ನ ಚಪಾತಿ ದಕ್ಷಿಣ ಕಾಶಿಯಷ್ಟೆ ಹೆಸರುವಾಸಿಯಾಗಿದೆ ಎನ್ನಬಹುದು. ಇಲ್ಲಿ ಸಿದ್ಧಪಡಿಸುವ ಚಪಾತಿಯನ್ನು ಗ್ರಾಹಕರಿಗೆ  ದೊಡ್ಡದಾದ ಊಟದ ತಟ್ಟೆಯಲ್ಲಿ ಅಥವಾ ಬಾಳೆ ಎಲೆಯಲ್ಲೇ ನೀಡುತ್ತಾರೆ. ಏಕೆಂದರೆ ಇಲ್ಲಿ ತಯಾರಾಗುವ ಚಪಾತಿಯ ಗಾತ್ರ ಅಷ್ಟು ದೊಡ್ಡದಾಗಿರುತ್ತದೆ.

ಈ ಕೆಫೆಯನ್ನು ಈಗ ಐದನೇ ತಲೆ ಮಾರಿನವರು ಮುನ್ನಡೆಸುತ್ತಿದ್ದರೂ, ಚಪಾತಿಯ ಗಾತ್ರ ಮತ್ತು ರುಚಿ ಒಂದಿಷ್ಟೂ ವ್ಯತ್ಯಾಸವಾಗಿಲ್ಲ ಎನ್ನುತ್ತಾರೆ ನಂಜನಗೂಡಿನ ಹಿರಿಯರು. ಇಲ್ಲಿ ಚಟ್ನಿ ಮತ್ತು ಸಾಗು ಅನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತದೆ. ಬೇರೆ ಕಡೆಯಲ್ಲಿ ನಾಲ್ಕು ಚಪಾತಿ ತಯಾರಿಸುವಷ್ಟು ಹಿಟ್ಟನ್ನು, ನಾವು ಇಲ್ಲಿ ಒಂದೇ ಒಂದು ಚಪಾತಿಯನ್ನು ಸಿದ್ಧಪಡಿಸಲು ಬಳಸುತ್ತೇವೆ. ಅದಕ್ಕೆ ಶುದ್ಧ ಗೋಧಿ, ಗುಣಮಟ್ಟದ ತುಪ್ಪ, ಬೆಣ್ಣೆ ಹಾಗೂ ಎಣ್ಣೆಯನ್ನು ಉಪಯೋಗಿಸುತ್ತೇವೆ. ಹಾಗಾಗಿ ನಮ್ಮ ಹೊಟೇಲ್‌ನ ಹೆಸರನ್ನು ಇನ್ನೂ ಉಳಿಸಿಕೊಳ್ಳುವುದು ಸಾಧ್ಯವಾಗಿದೆ ಎನ್ನುತ್ತಾರೆ ಹೋಟೆಲ್ ಮಾಲೀಕ ಪ್ರವೀಣ.

ಗೋಣಿಕೊಪ್ಪದಲ್ಲಿ ಗ್ರಾಹಕರಿಗೆ ‘ಕ್ಲಾಸಿಕ್’ ಆತಿಥ್ಯ: 

ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪ ನಗರದಲ್ಲಿ ಸುಮಾರು ೩೫ ವರ್ಷಗಳಿಂದಲೂ ತನ್ನ ಛಾಪನ್ನು ಉಳಿಸಿಕೊಂಡು ಬಂದಿರುವ ಏಕೈಕ ಹೋಟೆಲ್ ಎಂದರೆ ಅದು ಕ್ಲಾಸಿಕ್  ಹೋಟೆಲ್. ಹೌದು. ಪಟ್ಟಣದ ಬಸ್ನಿಲ್ದಾಣದ ಮುಂಭಾಗವೇ ಇರುವ ಈ ಹೋಟೆಲ್ ಹಿಂದಿನಿಂದಲೂ ಹೆಸರು ವಾಸಿ ಯಾಗಿದೆ. ಗೋಣಿಕೊಪ್ಪಕ್ಕೆ ಭೇಟಿ  ನೀಡುವವರು ಊಟ ಅಥವಾ ತಿಂಡಿ ತಿನ್ನಬೇಕೆಂದು ಕೊಳ್ಳುವಾಗ ಹೋಟೆಲ್ ಕ್ಲಾಸಿಕ್ ಹೆಸರು ಕಿವಿಗೆ ಬೀಳದಿದ್ದರೆ ಆಶ್ಚರ್ಯ. ಶುಚಿತ್ವಕ್ಕೆ ಆದ್ಯತೆ ನೀಡುವ ಈ ಹೋಟೆಲ್‌ನಲ್ಲಿ ಗ್ರಾಹಕರನ್ನು ಹೆಚ್ಚು ಹೊತ್ತು ಕಾಯಿಸದೆ ತ್ವರಿತವಾಗಿ ಆಹಾರವನ್ನು ಪೂರೈಸಲಾಗುತ್ತದೆ.

ತಿತೀರಮಾಡ ತಿಮ್ಮಯ್ಯ ಪ್ರಭುರವರ ಮಾಲೀಕತ್ವದಲ್ಲಿ ಪ್ರಾರಂಭಿಸಿದ ಹೋಟೆಲ್ ಇವತ್ತಿನವರೆಗೂ ಪ್ರವಾಸಿಗರನ್ನು, ಸ್ಥಳೀಯರನ್ನು ಸೆಳೆಯುತ್ತಿದೆ. ಪತ್ತಲ್ ಮೀನು ಕರಿ, ಬಿರಿಯಾನಿ, ಎಗ್ ಮಸಾಲ ಇಲ್ಲಿನ ಪ್ರಸಿದ್ಧ ತಿನಿಸುಗಳು. ಇದರೊಂದಿಗೆ ಊಟ, ಚಿಕನ್, ಮಟನ್ ಸೇರಿದಂತೆ ಎಲ್ಲಾ ರೀತಿಯ ಖಾದ್ಯ ಗಳು ಇಲ್ಲಿ ದೊರೆಯುತ್ತವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಶುಚಿ-ರುಚಿಯಾದ ಆಹಾರ ಒದಗಿಸಲಾಗುತ್ತಿದೆ. ಮುಂದೆಯೂ ಗ್ರಾಹಕರ ಹಸಿವು ನೀಗಿಸುವ ಕೆಲಸವನ್ನು ಕ್ಲಾಸಿಕ್ ಹೋಟೆಲ್ ಮಾಡಲಿದೆ ಎಂದು ತಿತೀರಮಾಡ ತಿಮ್ಮಯ್ಯ ಪ್ರಭು ಹೇಳುತ್ತಾರೆ.

ಕನ್ನಿಕಾ ಇಂಟರ್ ನ್ಯಾಷನಲ್‌ಗೆ ಪ್ರವಾಸಿಗರ ಮೆಚ್ಚುಗೆ: 

ಕೊಡಗು ಜಿಲ್ಲೆಯ ವಾಣಿಜ್ಯನಗರ ಎಂದೇ ಗುರುತಾಗಿರುವ ಕುಶಾಲನಗರದಲ್ಲಿ ಕನ್ನಿಕಾ ಇಂಟರ್‌ನ್ಯಾಷನಲ್ ಹೋಟೆಲ್ ಹೆಸರನ್ನು ಕೇಳದವರಿಲ್ಲ. ಅಷ್ಟರಮಟ್ಟಿಗೆ ಈ ಹೋಟೆಲ್ ಜನಜನಿತವಾಗಿದೆ. ಪ್ರವಾಸಿಗರಿಗೆಅನುಕೂಲವಾಗುವ ರೀತಿಯಲ್ಲಿ ಎಲ್ಲ ಸೌಕರ್ಯಗಳೊಂದಿಗೆ ಹೋಟೆಲ್ ಕನ್ನಿಕಾ ಇಂಟರ್‌ನ್ಯಾಷನಲ್ ಉದ್ಯಮವನ್ನು ೧೯೯೬ರಲ್ಲಿ ಪ್ರಾರಂಭ ಮಾಡಲಾಯಿತು. ಪ್ರವಾಸಿಗರಿಗೆ ವಸತಿ ಸೌಲಭ್ಯ ಕಲ್ಪಿಸುವುದರೊಂದಿಗೆ ಶುದ್ಧ ರುಚಿಯಾದ ತಿಂಡಿ ತಿನಿಸುಗಳು, ಭೋಜನದ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶದೊಂದಿಗೆ ಈ ಹೋಟೆಲ್ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರ ಸೇವೆಯೇ ನಮ್ಮ ಧ್ಯೇಯ, ಅತಿಥಿ ದೇವೋಭವ ಎನ್ನುವ ಧ್ಯೇಯದೊಂದಿಗೆ ಹೋಟೆಲ್ ಕಾರ್ಯನಿರ್ವಹಿಸುತ್ತಿದ್ದು, ಜನಮನ್ನಣೆಗಳಿಸಿದೆ.

ಸಭೆ ಸಮಾರಂಭ ನಡೆಸಲು ಅನುಕೂಲ ಆಗುವ ನಿಟ್ಟಿನಲ್ಲಿ ಸಭಾಂಗಣದ ವ್ಯವಸ್ಥೆಯೂ ಇದೆ. ಕುಶಾಲನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಬೈಲಕುಪ್ಪೆಯಲ್ಲಿರುವ ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಹಾರಂಗಿ ಡ್ಯಾಂ, ಹಾರಂಗಿ ಸಾಕಾನೆ ಶಿಬಿರ, ದುಬಾರೆ ಸಾಕಾನೆ ಶಿಬಿರ, ಹಾರಂಗಿ ವಾಟರ್ ಗೇಮ್ಸ್ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಹೋಟೆಲ್ ರುಚಿಗೂ ಮಾರುಹೋಗಿದ್ದಾರೆ.

ಗ್ರಾಹಕರಿಗೆ ಶುಚಿ-ರುಚಿಯಾದ ಆಹಾರ ಒದಗಿಸಲಾಗುತ್ತಿದೆ. ಆತಿಥ್ಯಕ್ಕೆ ಹೆಸರುವಾಸಿಯಾಗಿರುವ ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ಕಾರಣಕ್ಕೆ ಹೋಟೆಲ್ ಜನಪ್ರಿಯವಾಗಿದೆ ಎಂದು ಹೊಟೇಲ್ ಮಾಲೀಕ ನಾಗೇಂದ್ರಪ್ರಸಾದ್ ಹೆಮ್ಮೆಯಿಂದ ಹೇಳುತ್ತಾರೆ.

ಜನಮನ ಗೆದ್ದ ಕೇರಳ ಶೈಲಿಯ ಮಲಬಾರ್ ಹೋಟೆಲ್: 

ಸ್ಥಳೀಯರು ಹಾಗೂ ಪ್ರವಾಸಿಗರು ಇಷ್ಟಪಡುವ ಹೋಟೆಲ್ ಅಂದರೆ ಅದು ಸೋಮವಾರಪೇಟೆಯ ಹೋಟೆಲ್ ಮಲಬಾರ್. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರು ಇರುವ ಈ ಹೋಟೆಲ್ ಬಹಳ ಪ್ರಸಿದ್ಧಿಯಾಗಿದೆ. ಪ್ರತಿದಿನ ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಆಗಮಿಸುವ ಜನರಿಗೆ, ಬಸ್, ಆಟೋ, ಕಾರು ಚಾಲಕರಿಗೆ ಹತ್ತಿರವಾಗಿರುವ ಹೋಟೆಲ್ ಇದಾಗಿದ್ದು, ನಿತ್ಯ ಜೀವನದ ಒಂದು ಭಾಗವಾಗಿ ಕೆಲಸ ಮಾಡುತ್ತಿದೆ. ಶುದ್ಧ ನೀರು, ಶೌಚಾಲಯದ ವ್ಯವಸ್ಥೆಯು ಇಲ್ಲಿದೆ. ಇಲ್ಲಿನ ಸಿಬ್ಬಂದಿ ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಾ ಜನರ ಪ್ರೀತಿ ಗಳಿಸಿದ್ದಾರೆ.

ಸ್ಥಳೀಯ ಹಾಗೂ ಕೇರಳ ಶೈಲಿಯ ತಿಂಡಿ-ತಿನಿಸು ಒದಗಿಸುವ ಈ ಹೋಟೆಲ್ನಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ – ರಾತ್ರಿ ಊಟ ದೊರೆಯುತ್ತದೆ. ಬೆಳಿಗ್ಗೆ ೬ ಗಂಟೆಯಿಂದ ಚಹ, ಕಾಫಿ, ಕೇರಳ ಶೈಲಿಯ ಪತ್ತಲ್, ಪುಟ್ಟು, ೮ ಗಂಟೆಯಿಂದ ಪರೋಟ, ದೋಸೆ, ಇಡ್ಲಿ, ಮಧ್ಯಾಹ್ನ ೧೨ ಗಂಟೆಯಿಂದ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಊಟ, ಬಿರಿಯಾನಿ, ಕುಶ್ಕ ಸೇರಿದಂತೆ ಹಲವು ರೀತಿಯ ಖಾದ್ಯ ಇಲ್ಲಿ ದೊರೆಯುತ್ತದೆ. ಸೋಮವಾರಪೇಟೆ ನಗರದಲ್ಲಿ ರಾತ್ರಿ ೧೦ಗಂಟೆಗೆ ಎಲ್ಲಾ ಹೋಟೆಲ್‌ಗಳು ಮುಚಲ್ಪಟ್ಟರೆ, ಮಲಬಾರ್ ಹೋಟೆಲ್ ಬೆಂಗಳೂರು, ಮೈಸೂರು, ಮಂಗಳೂರಿನಿಂದ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರಿಗೋಸ್ಕರ ರಾತ್ರಿ ೧೦.೩೦ರವರೆಗೆ ತೆರೆದಿರುತ್ತದೆ.

ನಾನು ಕೇರಳದಿಂದ ಸೋಮವಾರಪೇಟೆಗೆ ಬಂದು ೩೦ ವರ್ಷಗಳಾಗಿವೆ. ೧೦ ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದೇನೆ. ಸ್ಥಳೀಯರು ಹೆಚ್ಚಾಗಿ ನಮ್ಮ ಹೋಟೆಲ್‌ಗೆಆಗಮಿಸುವುದು ಖುಷಿ ತಂದಿದೆ. ಇಲ್ಲಿಯ ಸಿಬ್ಬಂದಿ ಸ್ಥಳೀಯರಾಗಿದ್ದು, ಇನ್ನು ಮುಂದೆಯೂ ಕೂಡ ಇದೆ ರೀತಿಯ ಸ್ವಚ್ಛತೆ ಕಾಪಾಡಿಕೊಂಡು ಜನರ ವಿಶ್ವಾಸ ಉಳಿಸಿಕೊಳ್ಳಲು ಆದ್ಯತೆ ನೀಡುತ್ತವೆ ಎಂದು ಮಲಬಾರ್ ಹೋಟೆಲ್ ಮಾಲೀಕ ವಿಜೇಶ್ ಹೇಳುತ್ತಾರೆ.

ಗ್ರೀನ್‌ಲ್ಯಾಂಡ್ ಹೋಟೆಲ್‌ನ ಸ್ವಾದಿಷ್ಟ ಪತ್ತಲ್ ಮೀನು ಕರಿ: 

ಮಡಿಕೇರಿಗೆ ಭೇಟಿ ನೀಡಿರುವ ಬಹುತೇಕ ಪ್ರವಾಸಿಗರು ನೆನಪಿಸಿಕೊಳ್ಳುವ ಹಾಗೂ ಸ್ಥಳೀಯರ ಮನೆಮಾತಾಗಿರುವ ಗ್ರೀನ್‌ಲ್ಯಾಂಡ್ ಹೋಟೆಲ್‌ನಲ್ಲಿ ಪತ್ತಲ್ ಮೀನು ಕರಿ ವಿಶೇಷ ಆಹಾರವಾಗಿದೆ. ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ಮಾರ್ಗದಲ್ಲಿ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಇರುವ ಈ ಹೋಟೆಲ್ ಹಲವಾರು ವರ್ಷಗಳಿಂದ ಹೆಸರುವಾಸಿಯಾಗಿದೆ. ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ಒದಗಿಸುವುದು ಇಲ್ಲಿನ ವಿಶೇಷತೆ. ಗ್ರೀನ್‌ಲ್ಯಾಂಡ್‌ನ ಪತ್ತಲ್ ಅಂದರೆ ಬಾಯಲ್ಲಿ ನೀರೂರುತ್ತದೆ ಎಂಬ ಮಾತು ಇಲ್ಲಿ ಜನಜನಿತ. ಪತ್ತಲ್ ಮೀನು ಕರಿ ಇಲ್ಲಿನ ಪ್ರಮುಖ ತಿಂಡಿಗಳಲ್ಲಿ ಒಂದಾಗಿದೆ. ವಿಭಿನ್ನ ರುಚಿ ಹೊಂದಿರುವ ಬಿರಿಯಾನಿ, ಚಿಕನ್ ಚಿಲ್ಲಿಯ ಜೊತೆಗೆ ಗೀರೈಸ್, ಜೀರಾ ರೈಸ್, ಕರ್ಡ್ ರೈಸ್, ಫ್ರೈಡ್ ರೈಸ್, ನೂಡಲ್ಸ್, ಗೋಬಿ, ಪರೋಟ, ಬಟರ್ ನಾನ್ ಸೇರಿದಂತೆ  ಬಹಳಷ್ಟು ಆಹಾರ ಪದಾರ್ಥಗಳು ಇಲ್ಲಿ ಲಭ್ಯ. ಇದರೊಂದಿಗೆ ಶವರಮ, ಅಲ್ಛಾಮ್, ಸೂಪ್,  ವಿವಿಧ ಬಗೆಯ ಮೀನಿನ ಖಾದ್ಯಗಳು, ಜ್ಯೂಸ್, ಐಸ್‌ಕ್ರೀಂ ಎಲ್ಲವೂ ಒಂದೇ ಕಡೆ ದೊರೆಯುತ್ತವೆ.

ಹಿಂದೆ  ಸಣ್ಣದಾಗಿದ್ದ ಹೋಟೆಲ್ನ್ನು ಈಗ ಅಭಿವೃದ್ಧಿಗೊಳಿಸಲಾಗಿದೆ. ಸಾಕಷ್ಟು ಸ್ಥಳಾವಕಾಶದೊಂದಿಗೆ ಎಸಿ ರೂಂ ವ್ಯವಸ್ಥೆ ಕೂಡ ಇದೆ.ಒಟ್ಟಾಗಿ ಪ್ರವಾಸಕ್ಕೆ ಬರುವ ಕುಟುಂಬದ ಸದಸ್ಯರು, ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಒಟ್ಟಾಗಿ ಕುಳಿತು ಆಹಾರ ಸೇವಿಸುವಷ್ಟು ವಿಶಾಲವಾಗಿ ಈಗ ಹೋಟೆಲ್‌ಅನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಹೋಟೆಲ್ ಗ್ರೀನ್ ಲ್ಯಾಂಡ್ ಜನಮನ್ನಣೆ ಗಳಿಸಿದೆ.

Tags:
error: Content is protected !!