ನಾ. ದಿವಾಕರ
ಮುಸ್ಲಿಂ ಮಹಿಳೆಯರಿಗೆ ವಿವಾಹ ವಿಚ್ಛೇದನ ಪಡೆಯಲು ಪರಭಾರೆ ಮಾಡಲಾಗದಂತಹ ಹಕ್ಕು ನೀಡುವ ಖುಲಾ ಪದ್ಧತಿಯ ಬಗ್ಗೆ ಸಮತೂಕವಿಲ್ಲದ ತೀರ್ಪುಗಳನ್ನು ನೀಡುವ ಮೂಲಕ ಮುಸ್ಲಿಂ ಉಲೇಮಾಗಳು ಸಮುದಾಯವನ್ನು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.
ಪುರುಷ ಪ್ರಾಧಾನ್ಯತೆಯನ್ನು ಸಮರ್ಥಿಸು-ವಂತಹ ತಮ್ಮ ತೀರ್ಪುಗಳ ಮೂಲಕ ಉಲೇಮಾಗಳು, ಮುಸ್ಲಿಂ ಮಹಿಳೆಯು ಒಮ್ಮೆ ನಿಕಾಹ್ ಮೂಲಕ ವಿವಾಹ ಬಂಧನಕ್ಕೊಳಗಾದರೆ ಆಕೆಗೆ ವಿವಾಹದ ಒಪ್ಪಂದದಿಂದ ಹೊರಬರ ಬೇಕಾದಲ್ಲಿ, ಪತಿಯಿಂದ ವಿಚ್ಛೇದನ ಪಡೆಯಬೇಕು ಅಥವಾ ಆಕೆಯ ಖುಲಾ ಪ್ರಸ್ತಾವನೆಯನ್ನು ಪತಿ ಒಪ್ಪುವುದು ಕಡ್ಡಾಯವಾಗಿರುತ್ತದೆ ಎಂದು ಪ್ರತಿಪಾದಿಸುತ್ತಾರೆ.
ಮೂರನೆಯ ಮಾರ್ಗ ಎಂದರೆ ನ್ಯಾಯಿಕ ವಿಚ್ಛೇದನ ಪಡೆಯುವುದಾಗಿದೆ. ಪುರುಷನು ಪತ್ನಿಯ ಮೇಲೆ ದೌರ್ಜನ್ಯ ನಡೆಸಿದರೂ, ವರದಕ್ಷಿಣೆಗಾಗಿ ಕಿರುಕುಳ ನೀಡಿದರೂ, ಆಕೆಯ ಪೋಷಕರನ್ನು ಸಂಪರ್ಕಿಸಲು ಅನುಮತಿ ನೀಡದಿದ್ದರೂ ಅಥವಾ ಆಕೆಯ ವೃತ್ತಿಪರ ಕನಸುಗಳನ್ನು ಪೂರೈಸುವ ಅವಕಾಶ ನೀಡದಿದ್ದರೂ, ಆಕೆ ತನ್ನ ಪತಿ ಖುಲಾ ಪ್ರಸ್ತಾವನೆಗೆ ಸಮ್ಮತಿಸದೆ ಇದ್ದರೆ ವಿವಾಹ ಬಂಧವನ್ನು ಅಂತ್ಯಗೊಳಿಸುವುದು ಸಾಧ್ಯವಿಲ್ಲ.
ಇಸ್ಲಾಂ ಮೇಲೆ ಪುರುಷರ ಏಕಸ್ವಾಮ್ಯ ಮಹಿಳೆಯ ಹಕ್ಕುಗಳ ಬಗ್ಗೆ ಉಲೇಮಾಗಳ ವ್ಯಾಖ್ಯಾನವೇ ಪ್ರಶ್ನಾರ್ಹವಾಗಿದೆ. ಪ್ರಚೋದನಕಾರಿಯೂ ಆಗಿದೆ. ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸಿ ಕಲೀಫ್ ಉಮರ್ ಅವರ ನಿರ್ಧಾರಗಳಿಗಿಂತಲೂ ಕುರಾನ್‌ನ ವ್ಯಾಖ್ಯಾನಗಳೇ ಪ್ರಧಾನವಾದುದು ಎಂದು ತೀರ್ಪು ನೀಡುವ ಮುನ್ನ, ತ್ರಿವಳಿ ತಲಾಕ್ ಬಗ್ಗೆಯೂ ಉಲೇಮಾಗಳ ಅಭಿಪ್ರಾಯ ಇದೇ ರೀತಿಯದ್ದಾಗಿರುತ್ತಿತ್ತು.
ತಲಾಕ್ ಪ್ರಕರಣಗಳಲ್ಲೂ ಸಹ, ಪುರುಷರು ಒಮ್ಮೆಲೆ ಮೂರು ಬಾರಿ ತಲಾಕ್ ಎಂದು ಉಚ್ಚರಿಸುವ ಮೂಲಕ ವಿವಾಹ ಬಂಧವನ್ನು ಅಂತ್ಯಗೊಳಿಸುವ ಹಕ್ಕು ಇರುವುದನ್ನು ಮೌಲಾನಾಗಳು ಬಲವಾಗಿ ಸಮರ್ಥಿಸಿದ್ದರು. ಹತ್ತಾರು ಇಸ್ಲಾಮಿಕ್ ರಾಷ್ಟ್ರಗಳು ವಿಚ್ಛೇದನದ ಈ ಮಾದರಿಯನ್ನು ಅಂಗೀಕರಿಸುವುದಿಲ್ಲ ಎಂಬ ವಾಸ್ತವವೂ ಸಹ ಭಾರತದ ಉಲೇಮಾಗಳಿಗೆ ಅನಪೇಕ್ಷಿತವಾಗಿತ್ತು.
ವಿವಾಹ ವಿಚ್ಛೇದನದ ಆಯ್ಕೆಗಳನ್ನು ಕುರಿತಂತೆ ಕುರಾನ್‌ನಲ್ಲಿ ಕೆಲವು ಶ್ಲೋಕಗಳು ಉಲ್ಲೇಖವಾಗಿದ್ದು, ಸುರಾಹ್-ಅಲ್-ಬಕಾರಾಹ್ ಎಂದೂ, ಸುರಾಹ್-ಅಟ್-ತಲಾಕ್ ಎಂಬ ಈ ಶ್ಲೋಕಗಳಲ್ಲೂ ಒಮ್ಮೆಲೆ ಮೂರು ಬಾರಿ ತಲಾಕ್ ಹೇಳುವ ಪದ್ಧತಿಗೆ ಮಾನ್ಯತೆ ನೀಡಲಾಗಿಲ್ಲ. ಆದರೆ ಈ ವಿಚಾರದಲ್ಲೂ ಭಾರತದ ಉಲೇಮಾಗಳು, ಅದನ್ನು ಕೇವಲ ವ್ಯಾಖ್ಯಾನಗಳಿಗೆ ಸೀಮಿತವಾಗಿಸಿದ್ದರು. ಅಂತಿಮವಾಗಿ ನ್ಯಾಯಾಲಯವೇ ೨೦೧೭ರಲ್ಲಿ ತ್ರಿವಳಿ ತಲಾಕ್ ಪದ್ಧತಿಗೆ ಅಂತ್ಯ ಹಾಡಬೇಕಾಯಿತು.
ಈ ತೀರ್ಪು ಉಲೇಮಾಗಳಲ್ಲಿ ಸಾಕಷ್ಟು ಕ್ಲೇಶ ಉಂಟುಮಾಡಿದರೂ ಕೊನೆಗೆ ಸಮ್ಮತಿಸಬೇಕಾಯಿತು. ಮುಸ್ಲಿಂ ವಿದ್ವಾಂಸರು ಧಾರ್ಮಿಕವಾಗಿ ತಮ್ಮ ಹಿಡಿತವನ್ನು ಸಾಽಸಲು ಖುಲಾ ಪದ್ಧತಿಯ ಬಗ್ಗೆ ತಮ್ಮದೇ ಆದ ನಿಲುವುಗಳನ್ನು ವ್ಯಕ್ತಪಡಿಸುವುದರಿಂದ, ನ್ಯಾಯಾಂಗವೇ ಮತ್ತೊಮ್ಮೆ ಕುರಾನ್ ಮತ್ತು ಹಡಿತ್‌ಗಳ ಕಡೆಗೆ ಉಲೇಮಾಗಳ ಗಮನವನ್ನು ಸೆಳೆಯಬೇಕಿದೆ. ಇಸ್ಲಾಂ ಧರ್ಮದ ಮೇಲೆ ಪುರುಷರ ಏಕಸ್ವಾಮ್ಯತೆಯನ್ನು ಹೇರುವ ದೃಷ್ಟಿಯಿಂದ ಮುಸ್ಲಿಂ ಮಹಿಳೆಯ ಎಲ್ಲ ಹಕ್ಕುಗಳನ್ನು, ಸವಲತ್ತುಗಳನ್ನು ಉಲೇಮಾಗಳೇ ಪರಾಮರ್ಶಿಸುತ್ತಾರೆ.
ಇತ್ತೀಚೆಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿಯು (ಎಐಎಮ್‌ಪಿಎಲ್‌ಬಿ) ಖುಲಾ ಬಗ್ಗೆ ಕೇರಳದ ಹೈಕೋರ್ಟ್ ತೀರ್ಪನ್ನು ವಿರೋಽಸಿದೆ. ಮರುಪರಿಷ್ಕರಣೆಯ ಅರ್ಜಿಗೆ ಪ್ರತಿಕ್ರಿಯಿಸಿರುವ ಕೇರಳ ಹೈಕೋರ್ಟ್ “ಯಾವುದೇ ಕಾರ್ಯ ವಿಧಾನಗಳು ಇಲ್ಲದಿದ್ದ ಪಕ್ಷದಲ್ಲಿ, ಪತ್ನಿಯ ವಿವಾಹ ವಿಚ್ಛೇದನದ ಇಚ್ಛೆಯನ್ನು ಪತಿಯು ಸಮ್ಮತಿಸದೆ ಹೋದರೆ, ಖುಲಾ ಪದ್ಧತಿಯನ್ನು ಪತಿಯ ಸಂಯೋಗ ಇಲ್ಲದೆಯೇ ಅನ್ವಯಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಡುತ್ತದೆ.
ಮುಸ್ಲಿಂ ಮಹಿಳೆಯರು ತಮ್ಮ ಪುರುಷ ಸಂಗಾತಿಗಳ ಇಚ್ಛೆಗಳಿಗೆ ಅಡಿಯಾಳಾಗಿರಬೇಕು ಎಂದು ಪ್ರತಿಪಾದಿಸುವ ವಿಶಿಷ್ಟ ಪರಿಷ್ಕರಣೆಯ ಅರ್ಜಿ ಇದಾಗಿದೆ, ಮುಸ್ಲಿಂ ಮಹಿಳೆಯರು ಏಕಪಕ್ಷೀಯವಾಗಿ ಖುಲಾ ಪದ್ಧತಿಯನ್ನು ಬಳಸುವ ಹಕ್ಕು ಹೊಂದಿರುತ್ತಾರೆ ಎನ್ನುವ ನಿಯಮವನ್ನು ಮುಸ್ಲಿಂ ಧರ್ಮಾಽಕಾರಿಗಳು ಮತ್ತು ಮುಸ್ಲಿಂ ಸಮುದಾಯದ ಪುರುಷಾದೀಪತ್ಯದ ಪ್ರತಿಪಾದಕರು ಅರಗಿಸಿಕೊಳ್ಳಲಾಗುತ್ತಿಲ್ಲ” ಎಂದು ಹೇಳಿದೆ.