Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಚಿರತೆಗಳನ್ನೂ ವಿದೇಶದಿಂದ ತರಿಸಿಕೊಳ್ಳುವ ಪರಿಸ್ಥಿತಿ ಬಾರದಿರಲಿ…

ಲೋಕೇಶ್ ಕಾಯರ್ಗ

ನ್ಯಮೃಗವೊಂದನ್ನು ಗುಂಡಿಕ್ಕಿ ಕೊಲ್ಲಲು ಆದೇಶ ನೀಡುವುದು ತೀರಾ ಅಪರೂಪದ ಸನ್ನಿವೇಶದಲ್ಲಿ ಮಾತ್ರ. ಮೈಸೂರು ಜಿಲ್ಲೆಯಲ್ಲಿ ಈಗ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಿ.ನರಸೀಪುರ ತಾಲ್ಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ಮನೆಗೆ ಬೆಳಕಾಗಬೇಕಿದ್ದ ಯುವತಿ ಚಿರತೆ ದಾಳಿಗೆ ಬಲಿಯಾಗಿzಳೆ. ತಿಂಗಳ ಹಿಂದಷ್ಟೇ ಇದೇ ತಾಲ್ಲೂಕಿನ ಮದ್ಗಾರ್ ಲಿಂಗಯ್ಯನ ಹುಂಡಿ ಗ್ರಾಮದಲ್ಲಿ ಮೈಸೂರಿನ ಮಹಾರಾಜ ಕಾಲೇಜಿನ ಬಿಕಾಂ ವಿದ್ಯಾರ್ಥಿ ಚಿರತೆ ದಾಳಿ ಯಿಂದ ಪ್ರಾಣ ತೆತ್ತಿದ್ದ. ಎರಡೂ ದುರಂತಗಳನ್ನು ಕಣ್ಣಾರೆ ಕಂಡ ಜನರ ರೋಷ ಮಿತಿ ಮೀರಿದೆ. ಈ ಸಾವಿಗೆ ಪ್ರತಿಯಾಗಿ ಅವರು ಚಿರತೆಯ ಸಾವನ್ನು ಅಪೇಕ್ಷಿಸುತ್ತಿದ್ದಾರೆ. ಅರಣ್ಯ ಇಲಾಖೆ ಇದಕ್ಕೆ ಸೈ ಎಂದಿದೆ. ತಿ.ನರಸೀಪುರದ ನರಹಂತಕ ಚಿರತೆಯನ್ನು  ಕಂಡಲ್ಲಿ ಗುಂಡಿಕ್ಕಲು ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಎರಡು ವರ್ಷಗಳ ಹಿಂದೆ ತುಮಕೂರಿನಲ್ಲಿ ನಾಲ್ಕು ಜನರನ್ನು ಸಾಯಿಸಿದ್ದ ಚಿರತೆಯೊಂದನ್ನು ಕೊಲ್ಲಲು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಅದಾದ ಬಳಿಕ ಚಿರತೆಯನ್ನು ಕೊಲ್ಲಲು ಆದೇಶವಾಗಿರುವುದು ಇದೇ ಮೊದಲು.

ಹಳೇ ಮೈಸೂರು, ಕೊಡಗು ಸೇರಿದಂತೆ ದಕ್ಷಿಣ ಕರ್ನಾಟಕದ ಈ ಭಾಗ ಆನೆ, ಹುಲಿ, ಚಿರತೆಯಂತಹ ವನ್ಯಪ್ರಾಣಿಗಳಿಗೆ ಆವಾಸ ಸ್ಥಾನ ಎಂದು ಒಂದೆಡೆ ನಾವು ಹೆಮ್ಮೆಪಟ್ಟುಕೊಳ್ಳುತ್ತೇವೆ. ಇನ್ನೊಂದೆಡೆ ಇದೇ ಪ್ರಾಣಿಗಳ ದಾಳಿಯ ಕಾರಣಕ್ಕಾಗಿ ಸಾವು-ನೋವು, ಕಷ್ಟ-ನಷ್ಟ ಎದುರಿಸಬೇಕಾದ ಉಭಯ ಸಂಕಟ ನಮ್ಮದು. ವನ್ಯಮೃಗಗಳ ಹಾವಳಿ ಹೆಚ್ಚಾಗಲು ಕಾರಣ ವೇನು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಹತ್ತಾರು ಕಾರಣಗಳು ಸಿಗುತ್ತವೆ. ಆದರೆ ಅಂತಿಮವಾಗಿ ಅವು ಮನುಷ್ಯರ ಕಡೆಗೇ ಬೊಟ್ಟು ಮಾಡುತ್ತವೆ. ಒಂದು ಕಾಲದಲ್ಲಿ ಈ ಪ್ರಾಣಿಗಳು ಮುಕ್ತವಾಗಿ ಸಂಚರಿಸುತ್ತಿದ್ದ ಪ್ರದೇಶ ಈಗ ಮನುಷ್ಯರ ನೆಲೆಯಾಗಿದೆ. ಕಾಡಿನಿಂದ ಕಾಡಿಗೆ ನೂರಾರು ಮೈಲಿ ಸಂಚರಿಸುತ್ತಾ ತರಹೇವಾರಿ ಸೊಪ್ಪುಗಳನ್ನು ತಿನ್ನುತ್ತಿದ್ದ ಆನೆಗಳು ಈಗ ನಿರ್ದಿಷ್ಟ ಅರಣ್ಯದಲ್ಲಿಯೇ ಬಂದಿಗಳಾಗಿವೆ. ಆನೆ ಕಂದಕದಂತಹ ಮನುಷ್ಯ ಸೃಷ್ಟಿಸಿದ ಬೇಲಿಗಳನ್ನು ದಾಟಿದಾಗಲೆ ಸಮಸ್ಯೆಗಳು, ಸಂಘರ್ಷಗಳು ಎದುರಾಗುತ್ತಿವೆ.

ರಾಜ್ಯದ ವನ್ಯಸಂಕುಲಕ್ಕೆ ಪ್ರಮುಖ ಆಸರೆಯಾದ ಪಶ್ಚಿಮ ಘಟ್ಟ ಅರಣ್ಯದ ಆರು ರಾಜ್ಯಗಳಲ್ಲಿ ಹರಡಿಕೊಂಡಿದೆ. ಆದರೆ ಪಶ್ಚಿಮ ಘಟ್ಟದ ಶೇ. ೬೦ರಷ್ಟು ಪ್ರದೇಶ ನಮ್ಮ ರಾಜ್ಯದಲ್ಲಿದೆ. ಇನ್ನು ಕರ್ನಾಟಕ, ತಮಿಳುನಾಡು ಮತ್ತು ಕೇರಳವನ್ನೊಳಗೊಂಡ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ತಾಣಗಳ ಅರ್ಧದಷ್ಟು ಭಾಗ ಅಂದರೆ ಸುಮಾರು ೬,೨೦೦ ಚ.ಕಿ.ಮೀ.ಪ್ರದೇಶ ನಮ್ಮ ರಾಜ್ಯದಲ್ಲಿದೆ. ಇದಕ್ಕೆ ತಕ್ಕಂತೆ ನಮ್ಮಲ್ಲಿ ವನ್ಯ ಸಂಕುಲವೂ ಸಮೃದ್ಧವಾಗಿದೆ. ಆದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿಯೇ ಇವುಗಳ ಸಂತತಿ ಹೆಚ್ಚಾಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಕಾಡಿನ ವ್ಯಾಪ್ತಿ ಕಿರಿದಾಗುತ್ತಾ ಸಾಗಿದೆಯೇ ಹೊರತು ಹಿಗ್ಲಿಲ್ಲ. ಲಂಟಾನದಂತಹ ಪರದೇಶಿ ಬಳ್ಳಿ ಇಡೀ ಕಾಡನ್ನು ಅತಿಕ್ರಮಿಸುತ್ತಿದೆ. ಹೆಚ್ಚುತ್ತಿರುವ ವನ್ಯಸಂಕುಲದ ನಡುವೆ ಕಿರಿದಾಗುತ್ತಿರುವ ಕಾಡು ಸಮಸ್ಯೆಯ ಮೂಲವಾಗಿದೆ.

ಹಿಂದೆ ಆಹಾರವನ್ನು ಅರಸಿ ನೂರಾರು ಕಿ.ಮೀ. ಓಡಾಟ ನಡೆಸುತ್ತಿದ್ದ  ವನ್ಯಮೃಗಗಳು ಈಗ ಮಾನವನ ಹಸ್ತಕ್ಷೇಪ ಮತ್ತು ಕೃತಕ ಗಡಿಗಳಿಂದಾಗಿ ನಿಂತ ನೆಲೆಯಲ್ಲಿಯೇ ಬಂದಿಗಳಾಗಿವೆ. ನಾಗರಹೊಳೆ, ಬಂಡಿಪುರ , ಕೇರಳ, ತಮಿಳುನಾಡು ಆನೆ ಕಾರಿಡಾರ್‌ಗಳು ಮುಕ್ತವಾಗಿzಗ ಕೊಡಗು ಮತ್ತು ಮಲೆನಾಡಿನಲ್ಲಿ ಕಾಡಾನೆ ಉಪಟಳ ಇಷ್ಟೊಂದು ಇರಲಿಲ್ಲ. ಹಿಂದೊಮ್ಮೆ ಈ ಆನೆಗಳು ಮೂರು ರಾಜ್ಯದ ಅರಣ್ಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದವು. ಮಲೆನಾಡಿನ ಆನೆಗಳು ಬೆಂಗಳೂರಿನ ಬನ್ನೇರುಘಟ್ಟದವರೆಗೂ ಸಂಚರಿಸುತ್ತಿದ್ದವು. ಈ ಭಾಗದಲ್ಲಿ ಹೆದ್ದಾರಿಗಳು, ರೈಲ್ವೆ ಮಾರ್ಗಗಳು ನಿರ್ಮಾಣವಾದಾಗ ಮನುಷ್ಯರ ಸಂಚಾರ ಸರಾಗವಾಯಿತು. ಆದರೆ ವನ್ಯಮೃಗಗಳ ಸಂಚಾರಕ್ಕೆ ಅಡಚಣೆಯಾಗಿದ್ದನ್ನು  ಯಾರೂ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಇದೀಗ ಎತ್ತಿನಹಳ್ಳ ಯೋಜನೆಯ ಕಾರಣದಿಂದ ಸಕಲೇಶಪುರ ಅರಣ್ಯ ಭಾಗದ ವನ್ಯಮೃಗಗಳು ಘಟ್ಟದ ಕೆಳ ಭಾಗಕ್ಕೆ ದಾಳಿಯಿಟ್ಟಿವೆ. ದಕ್ಷಿಣ ಕನ್ನಡದ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಆನೆ ಮತ್ತು ಚಿರತೆಗಳು ಆಗಾಗ ಕಾಣಿಸಿಕೊಳ್ಳುತ್ತಿವೆ.

ಕೆಆರ್‌ಎಸ್ ಕಾರಣದಿಂದ ಮಂಡ್ಯ ಜಿಯಲ್ಲಿ ನಾಲೆಗಳು ನಿರ್ಮಾಣವಾದಾಗಲೂ ಕಾಡಾನೆಗಳ ಸಹಜ ಮಾರ್ಗಕ್ಕೆ ಧಕ್ಕೆಯಾಯಿತು. ಇನ್ನೊಂದೆಡೆ ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ, ನಾಗರಹೊಳೆ, ಬಂಡೀಪುರ, ಮಹದೇಶ್ವರ ಬೆಟ್ಟ ಅಭಯಾರಣ್ಯದಲ್ಲಿ  ಆನೆ, ಹುಲಿ ಮತ್ತು ಚಿರತೆಯ ಸಂತತಿ ಸಮೃದ್ಧವಾಗಿ ಬೆಳೆಯಿತು. ಈ ಪ್ರಾಣಿಗಳ ಮಧ್ಯೆ ತಮ್ಮ ಪಾರಮ್ಯಕ್ಕಾಗಿ ಕದನ ನಡೆದಾಗ, ಸೋತ ಪ್ರಾಣಿ ಇನ್ನೊಂದು ನೆಲೆ ಅರಸಬೇಕಾಗುತ್ತದೆ. ಹೀಗೆ ನಾನಾ ಕಾರಣಗಳಿಗಾಗಿ ಕಾಡಿನಿಂದ ಹೊರ ಬಂದ ಪ್ರಾಣಿಗಳು ನಾಡಿನಲ್ಲಿಯೇ ಆಶ್ರಯ ಕಂಡುಕೊಳ್ಳುತ್ತಿವೆ. ಕೊಡಗಿನಲ್ಲಿ  ಕಾಫಿ ತೋಟ ಸೇರಿಕೊಂಡ ಆನೆಗಳು ಇಲ್ಲಿಯೇ ತಮ್ಮ ಸಂತತಿ ಮುಂದುವರಿಸಿರುವುದು ಈ ಬೆಳವಣಿಗೆಗೆ ಸಾಕ್ಷಿ.

ಕಾಡಂಚಿನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುವ ಚಿರತೆಗಳು ನಾಡು ಸೇರಿ ಬಹಳ ಸಮಯವಾಗಿದೆ. ಕಳೆದ ಒಂದು ದಶಕದಲ್ಲಿ  ಚಿರತೆಯ ಸಂತತಿ ಶೇ.೬೦ರಷ್ಟು ಹೆಚ್ಚಾಗಿರುವುದೂ ಇದಕ್ಕೆ ಕಾರಣವಿರಬಹುದು. ಮೈಸೂರಿನ ಚಾಮುಂಡಿ ಬೆಟ್ಟ, ಬೆಮೆಲ್ ಕಾರ್ಖಾನೆ, ಗೋಕುಲಂ, ಇಲವಾಲ, ಹೆಬ್ಬಾಳ ಪ್ರದೇಶದಲ್ಲಿ ಕಳೆದ ಐದಾರು ವರ್ಷಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ. ಮಂಡ್ಯದ ಬಹುತೇಕ ತಾಲ್ಲೂಕುಗಳಲ್ಲಿ ಚಿರತೆಗಳ ಹಾವಳಿ ಸಾಮಾನ್ಯವಾಗಿದೆ. ತುಮಕೂರು, ರಾಮನಗರ, ಚಾಮರಾಜನಗರ, ಚಿಕ್ಕಮಗಳೂರು, ಬಳ್ಳಾರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಉಡುಪಿ ಮತ್ತಿತರ ಜಿಗಳಲ್ಲೂ ಇತ್ತೀಚಿನ ದಿನಗಳಲ್ಲಿ ಚಿರತೆ ಹಾವಳಿ ನಡೆದಿದೆ. ಕಳೆದ ಎಂಟು ವರ್ಷಗಳಲ್ಲಿ ೨೫೦ಕ್ಕೂ ಹೆಚ್ಚು ಚಿರತೆಗಳು ಪ್ರಾಣ ಕಳೆದುಕೊಂಡಿರುವುದು ಹೆಚ್ಚುತ್ತಿರುವ ಸಂಘರ್ಷಕ್ಕೆ ಸಾಕ್ಷಿ. ದಶಪಥದಂತಹ ನಮ್ಮ ಯೋಜನೆಗಳು ಕಾರ‍್ಯರೂಪಕ್ಕೆ ಬಂದಾಗಲೂ ಮೊದಲು ಬಲಿಯಾಗಿದ್ದು ಚಿರತೆ.

ಕಬ್ಬಿನ ಗz, ಸಣ್ಣ ಪೊದೆ, ಚರಂಡಿಗಳಲ್ಲೂ  ನೆಲೆ ಕಂಡುಕೊಳ್ಳುವ ಚಿರತೆಗೆ ನಾಡಿನಲ್ಲಿಯೇ ಸುಲಭವಾಗಿ ಆಹಾರ ಲಭ್ಯವಾಗುತ್ತಿದೆ. ಸಾಮಾನ್ಯವಾಗಿ ಮನುಷ್ಯನ ಜತೆ ಸಂಘರ್ಷಕ್ಕಿಳಿಯದ ಚಿರತೆ ಈಗ ಹೊಂಚು ಹಾಕಿ ದಾಳಿ ಮಾಡುವ ಮಟ್ಟಕ್ಕೆ ಬಂದಿದೆ ಎಂದರೆ ಕಾಲಕ್ಕನುಗುಣವಾಗಿ ಅವುಗಳ ಸ್ವಭಾವದಲ್ಲೂ ಬದಲಾವಣೆಯಾಗಿರಬಹುದು ಎನ್ನುತ್ತಾರೆ ತಜ್ಞರು.

ಒತ್ತುವರಿಯಾಗಿರುವ ಅರಣ್ಯ ಪ್ರದೇಶವನ್ನು ಸರ್ವೆ ಮಾಡಿ ವನ್ಯಪ್ರಾಣಿ ಗಳ ಕಾರಿಡಾರ್  ಮುಕ್ತಗೊಳಿಸಿದ್ದಲ್ಲಿ ವನ್ಯಮೃಗಗಳ ಓಡಾಟಕ್ಕೆ ಅನುಕೂಲವಾಗುತ್ತದೆ. ಇದರೊಂದಿಗೆ ಕೃಷಿಕರ ತೋಟಕ್ಕೆ ಅವು ನುಗ್ಗದಂತೆ ಮಾಡಬಹುದು ಎಂದು ಹೇಳುತ್ತಾರೆ ಭಾರತೀಯ ವನ್ಯಜೀವಿ ಪ್ರತಿಷ್ಠಾನದ ಮುಖ್ಯಸ್ಥ ಡಾ.ವಿವೇಕ್ ಮೆನನ್.

ಅರಣ್ಯದೊಳಗೆ ಒಳ್ಳೆಯ ಆಹಾರ ಸಿಕ್ಕಿಲ್ಲ ಎಂದರೆ ಪ್ರಾಣಿಗಳು ಹೊರಗೆ ಬರುವುದು ಸಹಜ. ಕಾಡಂಚಿನಲ್ಲಿ ಬದುಕುವ ಚಿರತೆಗಳಿಗೆ ಸಾಕು ಪ್ರಾಣಿಗಳ ರಕ್ತದ ರುಚಿ ಸಿಕ್ಕಿದರೆ ಮತ್ತೆ ಮತ್ತೆ ದಾಳಿ ಮಾಡುತ್ತವೆ. ನಾಡಿನೊಳಗೆ ದೊಡ್ಡ ಪೊದೆಗಳಿದ್ದರೂ ಇವುಗಳು ವಾಸ ಮಾಡುತ್ತವೆ. ಒಮ್ಮೆ ನಾಡಿನೊಳಗೆ ಬಂದ ಚಿರತೆಗಳನ್ನು ಮತ್ತೆ ಕಾಡಿಗಟ್ಟುವುದು ಕಷ್ಟದ ಕೆಲಸ ಎನ್ನುತ್ತಾರೆ ಅರಣ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ.

ನಮ್ಮ ಜೀವ ಸಂಕುಲದ ಪ್ರಮುಖ ಭಾಗವಾದ ವನ್ಯಮೃಗಗಳನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ. ಒಂದು ಕಾಲದಲ್ಲಿ ಕರ್ನಾಟಕ ಸೇರಿದಂತೆ ನಮ್ಮ ದೇಶದಲ್ಲಿ  ಸಾವಿರಾರು ಸಂಖ್ಯೆಯಲ್ಲಿ ಚೀತಾಗಳಿದ್ದವು. ರಾಜಮಹಾರಾಜರ ಆಸ್ಥಾನಗಳಲ್ಲಿ ಇವುಗಳನ್ನು ಸಾಕಲಾಗುತ್ತಿತ್ತು. ಆದರೆ ಬೇಟೆಯ ಹುಚ್ಚಿನಿಂದ ಚೀತಾ ಸಂತತಿ ಸಮೂಲ ನಾಶವಾಯಿತು. ಈಗ ವಿಮಾನದ ಮೂಲಕ ನಮೀಬಿಯಾದಿಂದ ಚೀತಾಗಳನ್ನು ತರಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಮುಂದೊಮ್ಮೆ ಚಿರತೆಗಳಿಗೂ ಈ ಗತಿ ಬರಬಹುದು; ಹಾಗಾಗದಿರಲಿ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ